ಎರಡೇ ವರ್ಷದಲ್ಲಿ ಡಿಕೆಶಿ ಆಸ್ತಿ ದುಪ್ಪಟ್ಟು..?

Kannada News

03-08-2017

ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ಐಟಿ ರೇಡ್'ನಿಂದ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಇಂಧನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅವರ ಆಸ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್​ ಅವರು ಲೋಕಾಯುಕ್ತಕ್ಕೆ 2014-2015ರಲ್ಲಿ ಆಸ್ತಿ ವಿವರ ಸಲ್ಲಿಸಿದ್ದು, ಅದನ್ನು ಗಮನಿಸಿದಾಗ ಅವರು ಸಚಿವರಾದ 2 ವರ್ಷಗಳ ಬಳಿಕ ಅವರ ಕುಟುಂಬದ ಆಸ್ತಿಯಲ್ಲಿ ಏರಿಕೆಯಾಗಿದೆ. ವಿವಿಧ ಕಂಪನಿಗಳಲ್ಲಿ ಷೇರುಗಳ ಹೂಡಿಕೆ ಮತ್ತು ಷೇರುಗಳ ಮೌಲ್ಯ- ವಿವಿಧ ಬ್ಯಾಂಕ್​​ಗಳಲ್ಲಿ ಇಟ್ಟಿರುವ ಠೇವಣಿಯಲ್ಲಿಯೂ ಹೆಚ್ಚಳವಾಗಿದ್ದು, ಸಾಲ-ಮುಂಗಡ ರೂಪದಲ್ಲಿ ಪಡೆದಿರುವ ಮತ್ತು ನೀಡಿರುವ ಮೊತ್ತದಲ್ಲೂ ಏರಿಕೆಯಾಗಿರುವುದು ಕಂಡು ಬಂದಿದೆ. ಗಂಗಾನಗರದಲ್ಲಿರುವ ವಿಜಯ ಬ್ಯಾಂಕ್​ ಶಾಖೆಯಲ್ಲಿ ​ಹೊಂದಿರುವ ಚಾಲ್ತಿ ಖಾತೆಯಲ್ಲಿ ಏರಿಕೆಯಾಗಿದೆ.

ಗಂಗಾನಗರದಲ್ಲಿರುವ ವಿಜಯ ಬ್ಯಾಂಕ್​ ಶಾಖೆಯಲ್ಲಿ ​ಹೊಂದಿರುವ ಚಾಲ್ತಿ ಖಾತೆಯಲ್ಲಿ ಏರಿಕೆಯಾಗಿದ್ದು, 2013-15ರ ಮಧ್ಯೆ 4,20,00,000 ಹೆಚ್ಚಳವಾಗಿದೆ. 2013ರಲ್ಲಿ 22,12,600 ರೂ.ಗಳಿದ್ದು, 2014ರಲ್ಲಿ 25,20,673 ರೂ., 2015ರಲ್ಲಿ ಇದೇ ಖಾತೆಯಲ್ಲಿ 4,42,35,471 ರೂ.ಇದೆ. ಅಂದರೆ 2 ವರ್ಷದಲ್ಲಿ ಅಂದಾಜು 12 ಪಟ್ಟು ಏರಿಕೆಯಾಗಿದ್ದು, ಒಟ್ಟಾರೆ 4 ಕೋಟಿ 66 ಲಕ್ಷ ರೂ.ಗಳಷ್ಟು ಹೆಚ್ಚಳವಾದಂತಾಗಿದೆ.

ಪತ್ನಿ ಉಷಾ ಶಿವಕುಮಾರ್ ಅವರಿಂದ ಶಿವಕುಮಾರ್​ ಅವರು ಸಾಲ ಪಡೆದಿರುವ ಮೊತ್ತದಲ್ಲೂ ಏರಿಕೆಯಾಗಿದ್ದು, 2015ರಲ್ಲಿ 6 ಕೋಟಿ 36 ಲಕ್ಷ, ಸೋದರ ಡಿ.ಕೆ.ಸುರೇಶ್​ ಅವರಿಂದ 1 ಕೋಟಿ ರೂ.ಗಳನ್ನು ಸಾಲವಾಗಿ ಪಡೆದಿರುವುದಾಗಿ ಆಸ್ತಿದಾಯಿತ್ವ ಪಟ್ಟಿಯಲ್ಲಿ ಡಿ.ಕೆ. ಶಿವಕುಮಾರ್​ ಘೋಷಿಸಿದ್ದಾರೆ.

2013ರಲ್ಲಿ 41 ಕೋಟಿ ರೂ.ಸಾಲ ನೀಡಿದ್ದರೆ, 2014 ಮಾರ್ಚ್ ಅಂತ್ಯಕ್ಕೆ 44.71 ಕೋಟಿ ರೂ., ಮಾರ್ಚ್​ 2015 ಅಂತ್ಯಕ್ಕೆ 54.35 ಕೋಟಿ ರೂ.ಗಳಾಗಿವೆ. 2013-15ರಲ್ಲಿ ಸಾಲ-ಮುಂಗಡದ ಪ್ರಮಾಣದಲ್ಲಿ ಒಟ್ಟು 13 ಕೋಟಿ ರೂ.ಹೆಚ್ಚಳವಾಗಿದೆ. 2015 ಮಾರ್ಚ್ ಅಂತ್ಯಕ್ಕೆ ಪತ್ನಿ ಉಷಾ ಶಿವಕುಮಾರ್​ ಅವರಿಂದ 6,35,00,000 ರೂ. ಸಾಲ-ಮುಂಗಡ ರೂಪದಲ್ಲಿ ಪಡೆದಿದ್ದಾರೆ. ಹಾಗೆಯೇ, 2013ರಲ್ಲಿ ಸಲಾರ್​ ಪುರಿಯಾ ಪ್ರಾಪರ್ಟೀಸ್ ​​ನಿಂದ 6 ಕೋಟಿ ರೂ.ಮುಂಗಡವಾಗಿ ಪಡೆದಿದ್ದಾರೆ, 2014ರಲ್ಲಿ 1,50,00,000 ರೂ.ಪಡೆಯುವ ಮೂಲಕ ಈ ಮೊತ್ತ ಒಟ್ಟು 7,50,00,000 ರೂ.ಗಳಿಗೇರಿದೆ. 2015ರಲ್ಲೂ ಇದೇ ಮೊತ್ತ ಮುಂದುವರೆದಿದೆ.

ಇಷ್ಟೇ ಅಲ್ಲದೆ ಇನ್ನು ಹಲವು ವ್ಯಕ್ತಿಗಳಿಗೆ ಕೋಟಿಗಟ್ಟಲೇ ಹಣ ಸಾಲ ನೀಡಿರುವ ಸಚಿವ ಡಿ.ಕೆ.ಶಿವಕುಮಾರ್​, ಅನೇಕ ಡೆವಲಪರ್ಸ್ ಕಂಪನಿಗಳಲ್ಲೂ ಹಣ ಹೂಡಿಕೆಯಲ್ಲಿ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಎರಡೇ ವರ್ಷದಲ್ಲಿ ಇಷ್ಟೊಂದು ಮೊತ್ತದಲ್ಲಿ ಹಣ ಹೆಚ್ಚಳವಾಗಿರೋದೇ ಐಟಿ ರೇಡ್‌ ಗೆ ಕಾರಣ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ