ರಾಜಕೀಯ ಬಣ್ಣ ಪಡೆದುಕೊಂಡ ಐಟಿ ದಾಳಿ !

Kannada News

02-08-2017

ಬೆಂಗಳೂರು: ಕಾಂಗ್ರೆಸ್ ಯುವ ನಾಯಕ, ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿ ಸೇರಿದಂತೆ ಹಲವು ಕಡೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ನಗದು ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಗುಜರಾತ್‍ನಲ್ಲಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಾಟೀಲ್ ಗೆಲ್ಲಿಸಲು ಅಲ್ಲಿನ ಶಾಸಕರನ್ನು ಬೆಂಗಳೂರಿನ ಈಗಲ್‍ ಟನ್ ರೆಸಾರ್ಟ್‍ಗೆ ಕರೆತರುವಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.

ಈ ಬೆಳವಣಿಗೆಗಳ ನಡುವೆಯೇ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ರವಿ, ಆಪ್ತ ಸಹಾಯಕ ಆಂಜನೇಯ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿ ಐದು ಕೋಟಿ ನಗದು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಬಂಧಿಕರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಪ್ರಕರಣ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸ, ದೆಹಲಿಯ ಸಪ್ತರ್‍ಜಂಗ್‍ನಲ್ಲಿರುವ ಮನೆ, ಕನಕಪುರ ಸಮೀಪದ ಸಂತೆಕೋಡಿಹಳ್ಳಿ ಎಸ್ಟೇಟ್‍ನಲ್ಲಿರುವ ಬಂಗಲೆ, ಹುಟ್ಟೂರು ದೊಡ್ಡಹಾಲಹಳ್ಳಿಯ ಮನೆ, ಕನಕಪುರದ ಹಂಚಿನಕಾರ್ಖಾನೆ ಬಳಿ ಇರುವ ಎರಡು ಬಂಗಲೆಗಳು, ವಿಧಾನಪರಿಷತ್ ಸದಸ್ಯ, ಸೋದರ ಸಂಬಂಧಿ ರವಿ ಅವರ ಕನಕಪುರದಲ್ಲಿರುವ ಮೈಸೂರು ರಸ್ತೆಯಲ್ಲಿರುವ ಮನೆ, ಸಂಸದ ಡಿ.ಕೆ.ಸುರೇಶ್ ಒಡೆತನದ ಕಚೇರಿ, ಮನೆ ಹಾಗೂ ಆಪ್ತ ಸಹಾಯಕ ಆಂಜನೇಯ ಅವರ ಮನೆ ಮೇಲೂ ದಾಳಿ ನಡೆಸಿದ್ದಾರೆ.  ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಐದು ಕೋಟಿ ನಗದು ಹಾಗೂ ವ್ಯಾಪಾರ-ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಕಳೆದ ರಾತ್ರಿ ದೆಹಲಿಯಿಂದ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್ ನೇರವಾಗಿ ಬೆಂಗಳೂರು ಹೊರವಲಯದಲ್ಲಿರುವ ಬಿಡದಿಯ ಈಗಲ್‍ ಟನ್ ರೆಸಾರ್ಟ್‍ನಲ್ಲಿ ತಂಗಿದ್ದರು. ಇತ್ತ ಕೇಂದ್ರ ಮೀಸಲು ಪಡೆಯವರು ಪೊಲೀಸರ ಬಿಗಿ ಭದ್ರತೆಯೊಂದಿಗೆ ಸುಮಾರು ಐದು ಇನೋವಾ ಕಾರುಗಳಲ್ಲಿ ಬಂದ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

10 ಮಂದಿ ಐಟಿ ಅಧಿಕಾರಿಗಳು ಈಗಲ್‍ ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಗುಜರಾತ್ ಶಾಸಕರು ತಂಗಿರುವ ಹೋಟೆಲ್‍ನ ಪ್ರತಿ ಕೋಣೆಯನ್ನೂ ತಪಾಸಣೆ ನಡೆಸುತ್ತಿದ್ದಾರೆ.  ಉಳಿದ 10 ಮಂದಿ ಅಧಿಕಾರಿಗಳು ಮೂರು ತಂಡಗಳಾಗಿ ಬಿಗಿ ಭದ್ರತೆಯೊಂದಿಗೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ರವಿ ಅವರ ಮನೆಗಳ ಮೇಲೆ ದಾಳಿ ಮಾಡಿ ತೀವ್ರ ತಪಾಸಣೆ ಮಾಡಿದ್ದು, ಜತೆಗೆ ಸುಮಾರು 15 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.  ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಾಗಿರುವ ಹಾಗೂ ಹೈಕಮಾಂಡ್‍ಗೆ ಪರಮಾಪ್ತರಾಗಿರುವ ಡಿ.ಕೆ.ಶಿವಕುಮಾರ್ ಮೇಲೆ ಮೊದಲಿನಿಂದಲೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿತ್ತು.

ಕಳೆದ ಎರಡು ತಿಂಗಳಿನಿಂದೀಚೆಗೆ ಕರ್ನಾಟಕ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್‍ನಲ್ಲಿ ಅತ್ಯಂತ ಪ್ರಭಾವಿಗಳಾಗಿರವ ಮುಖಂಡರ ಹಿಟ್‍ಲಿಸ್ಟನ್ನು ಐಟಿ ಇಲಾಖೆ ತಯಾರು ಮಾಡಿದೆ. ಕೆಲವರ ಚಲನವಲನಗಳ ಮೇಲೆ ನಿಗಾ ಇಟ್ಟಿದೆ. ಫೋನ್ ಟ್ಯಾಪಿಂಗ್ ನಡೆಸಲಾಗುತ್ತಿದೆ ಎಂಬ ಮಾಹಿತಿಗಳು ಕೇಳಿ ಬಂದಿದ್ದವು. ರಾಜ್ಯದ ಪ್ರಭಾವಿ ಸಚಿವರು ಹಾಗೂ ಮುಖಂಡರ ಮನೆಗಳ ಮೇಲೆ ಐಟಿ ದಾಳಿಗಳು ನಡೆಯಲಿವೆ ಎಂಬ ಮುನ್ಸೂಚನೆ ಇತ್ತಾದರೂ ಗುಜರಾತ್‍ನ ಶಾಸಕರು ಕರ್ನಾಟಕಕ್ಕೆ ವಲಸೆ ಬಂದಿರುವ ವೇಳೆಯೇ ದಾಳಿ ನಡೆದಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕಾರ್ಯದರ್ಶಿಯಾಗಿರುವ ಅಹಮ್ಮದ್ ಪಟೇಲ್ ಗುಜರಾತ್‍ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೇಗಾದರೂ ಮಾಡಿ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಗುಜರಾತ್‍ ನಲ್ಲಿ ಆಪರೇಷನ್ ಕಮಲ ಆರಂಭಿಸಿ 6 ಮಂದಿ ಶಾಸಕರ ರಾಜೀನಾಮೆ ಕೊಡಿಸಿತ್ತು. ಉಳಿದ ಶಾಸಕರನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹೈಕಾಮಂಡ್ 44 ಮಂದಿ ಶಾಸಕರನ್ನು ಕರ್ನಾಟಕಕ್ಕೆ ರವಾನಿಸಿದೆ. ಗುಜರಾತ್‍ನಿಂದ ಆಗಮಿಸಿದ ಶಾಸಕರಿಗೆ ಆತಿಥ್ಯ ನೀಡಲು ರಾಜ್ಯ ಕಾಂಗ್ರೆಸ್ ಮುಖಂಡರು ಹಿಂದೇಟು ಹಾಕಿದಾಗ ಡಿ.ಕೆ.ಶಿವಕುಮಾರ್ ಧೈರ್ಯವಾಗಿ ಆ ಜವಾಬ್ದಾರಿಯನ್ನು ಹೊತ್ತುಕೊಂಡರು.

ಗುಜರಾತ್‍ ನಿಂದ ಆಗಮಿಸಿದ ಅಷ್ಟೂ ಶಾಸಕರಿಗೆ ಬಿಡದಿ ಬಳಿಯ ಈಗಲ್‍ ಟನ್ ರೆಸಾರ್ಟ್‍ನಲ್ಲಿ ತಂಗಲು ಅವಕಾಶ ಮಾಡಿಕೊಡಲಾಗಿದೆ. ಆತಿಥ್ಯದ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ನಿಭಾಯಿಸುತ್ತಿದ್ದಾರೆ. ಶತಾಯಗತಾಯ ಅಹಮ್ಮದ್ ಪಟೇಲ್ ಅವರನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ, ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇಂದು ಬೆಳಗ್ಗೆ ರೆಸಾರ್ಟ್ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ಪ್ರತಿಯೊಬ್ಬ ಶಾಸಕರನ್ನೂ ತಪಾಸಣೆಗೊಳಪಡಿಸಿದ್ದು, ಅವರ ಮೊಬೈಲ್, ಕಾಲ್ ರಿಜಿಸ್ಟ್ರಾರ್, ಮೆಸೇಜ್ ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ರೆಸಾರ್ಟ್ ಒಳ ಹಾಗೂ ಹೊರ ಹೋಗುವ ಪ್ರತಿಯೊಂದು ವಾಹನಗಳು ಮತ್ತು ಎಲ್ಲರನ್ನೂ ಐಟಿ ಅಧಿಕಾರಿಗಳು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ಸುರೇಶ್, ರವಿ ಅವರ ಮನೆ ಹಾಗೂ ಇತರೆ ಸ್ಥಳಗಳ ಮೇಲೂ ದಾಳಿ ಮಾಡಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಯಾರನ್ನೂ ಒಳಬಿಡದೆ ಹಾಗೂ ಹೊರ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಸಿ.ಆರ್.ಪಿ.ಎಫ್  ಭದ್ರತೆಯೊಂದಿಗೆ ಆಗಮಿಸಿ ದಾಳಿ ಮಾಡಿರುವುದು ಐಟಿ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಯ ಗಂಭೀರತೆಗೆ ಸಾಕ್ಷಿಯಾಗಿದೆ. ಇನ್ನು ಈ ದಾಳಿಯ ಕುರಿತಂತೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದೂ, ಅಲ್ಲದೇ ದಾಳಿಯನ್ನು ಖಂಡಿಸಿ ಇದು ರಾಜಕೀಯ ದ್ವೇಷದ ದಾಳಿ ಎಂದು ಆರೋಪಿಸಿದೆ. ಇನ್ನು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್  ಅವರು ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ