ಕಲ್ಲಿನಷ್ಟೇ ಗಟ್ಟಿಯಿರುವ ಕಲ್ಲಡ್ಕ…!

Kannada News

01-08-2017

ಕೆಲವರು ಇವರನ್ನು ಮಂಗಳೂರಿನ ಹುಲಿ ಅನ್ನುತ್ತಾರೆ, ಮತ್ತೆ ಕೆಲವರು ಲೋಕಲ್ ಬಾಳಾ ಠಾಕ್ರೆ ಎಂದೇ ಕರೆಯುತ್ತಾರೆ. ಕೆಲವರಿಗೆ ಇವರ ಬಗ್ಗೆ ತುಂಬಾ ಅಭಿಮಾನ, ಮತ್ತೆ ಕೆಲವರಿಗೆ ಇವರನ್ನು ಕಂಡರೆ ಮೈಯೆಲ್ಲಾ ಉರಿ. ಹೀಗಾಗಿ, ಇವರು ಪ್ರೀತಿ ಮತ್ತು ದ್ವೇಷಗಳೆರಡಕ್ಕೂ ಪಾತ್ರರಾಗಿರುವಂಥ ವ್ಯಕ್ತಿ. ಇತ್ತೀಚಿನ ವರ್ಷಗಳಲ್ಲಂತೂ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ವಿಚಾರ ಬಂದಾಗಲೂ ಇವರ ಹೆಸರು ಪ್ರಸ್ತಾಪಕ್ಕೆ ಬಂದೇ ಬರುತ್ತದೆ. ಹೌದು, ನಾವು ಹೇಳುತ್ತಿರುವುದು ಕಲ್ಲಡ್ಕ ಪ್ರಭಾಕರ ಭಟ್ಟರ ಬಗ್ಗೆ.

ಕೆಲವು ದಿನಗಳ ಹಿಂದೆ, ಮಂಗಳೂರಿನಲ್ಲಿ ಘರ್ಷಣೆ ಮತ್ತು ಕೊಲೆ ಪ್ರಕರಣಗಳು ನಡೆದಿದ್ದು, ಇವತ್ತಿಗೂ ಅಲ್ಲಿನ ಪರಿಸ್ಥಿತಿ ಸಂಪೂರ್ಣವಾಗಿ ಶಾಂತವಾಗಿದೆ ಎಂದು ಹೇಳುವುದು ಕಷ್ಟ. ಈ ಘರ್ಷಣೆಗಳಿಗೆ ಸಂಬಂಧಿಸಿದಂತೆ ಒಂದು ಪಕ್ಷದವರು ಮತ್ತೊಂದು ಪಕ್ಷದ ಮೇಲೆ, ಒಂದು ಸಂಘಟನೆಯವರು ಮತ್ತೊಂದು ಸಂಘಟನೆ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ಸಂಘ ಪರಿವಾರದ ಪ್ರಭಾವ ಸಾಕಷ್ಟಿರುವ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಪದೇ ಪದೇ ಕಲ್ಲಡ್ಕ ಪ್ರಭಾಕರ ಭಟ್ಟರ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷದವರು, ಅಲ್ಪಸಂಖ್ಯಾತರ ಸಂಘಟನೆಯವರು ಇವರ ವಿರುದ್ಧ ಆರೋಪಗಳನ್ನು ಮಾಡುತ್ತಾರೆ. ಈ ಪ್ರದೇಶದಲ್ಲಿನ ಘರ್ಷಣೆಗಳಿಗೆಲ್ಲಾ ಇವರೇ ಕಾರಣ ಅನ್ನುತ್ತಾರೆ. ಅದೇರೀತಿ, ಪ್ರಭಾಕರ ಭಟ್ಟರ ಪರ ಇರುವಂಥವರು, ಇವರನ್ನು ಮಾರ್ಗದರ್ಶಕ, ಸಮಾಜ ಸೇವಕ ಎಂದೆಲ್ಲಾ ಹಾಡಿ ಹೊಗಳುತ್ತಾರೆ.  ಈ ರೀತಿ ಹೊಗಳಿಕೆ ಮತ್ತು ಟೀಕೆಗಳೆರಡಕ್ಕೂ ಗುರಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್ಟರು ಮಧ್ಯಮ ವರ್ಗದ ಕೃಷಿ ಕುಟುಂಬವೊಂದರಲ್ಲಿ ಹುಟ್ಟಿದವರು. ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಕಲ್ಲಡ್ಕ ಪ್ರಭಾಕರ ಭಟ್ಟರು, ಆ ಸಂಘಟನೆಯಲ್ಲಿ ಸಕ್ರಿಯವಾಗಿ ಬೆಳೆದವರು.

ಮೈಸೂರು ಮೆಡಿಕಲ್ ಕಾಲೇಜು ಸೇರಿ ವೈದ್ಯಕೀಯ ಪದವಿ ಪಡೆದ ಪ್ರಭಾಕರ ಭಟ್ಟರು, ನಗರವಾಸಿಗಳಾಗಲು ಬಯಸದೆ ಸ್ವಗ್ರಾಮಕ್ಕೆ ಮರಳಿ ಅಲ್ಲಿಯೇ ಕ್ಲಿನಿಕ್ ಆರಂಭಿಸಿದರು. ಇದೇವೇಳೆ, ಆರೆಸ್ಸೆಸ್ ಚಟುವಟಿಕೆಗಳನ್ನೂ ಮುಂದುವರಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರೆಸ್ಸೆಸ್ ಕಾರ್ಯವಾಹರಾದರು, ವಿಭಾಗ ಕಾರ್ಯವಾಹರಾದರು, ಕರ್ನಾಟಕ ಸೇವಾ ಪ್ರಮುಖರಾದರು, ಬಳಿಕ 2008-2013ರ ವರೆಗೂ ಆರೆಸ್ಸೆಸ್‌ನ ದಕ್ಷಿಣ ಪ್ರಾಂತ ಕಾರ್ಯವಾಹರಾಗಿದ್ದರು, ಆನಂತರ, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಭಾಗದ ಬಿಜೆಪಿ ಮುಖಂಡರಿಗೆಲ್ಲಾ ಗುರು ಎಂದೇ ಹೆಸರಾಗಿರುವ ಮಾಜಿ ಶಾಸಕ ಉರಿಮಜಲು ರಾಮಭಟ್ಟರ ಸೋದರಿ ಕಮಲಾ, ಪ್ರಭಾಕರ ಭಟ್ಟರ ಪತ್ನಿ. ಕಮಲಾ ಅವರೂ ಕೂಡ ಆಯುರ್ವೇದ ವೈದ್ಯರು. 1981ರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರು ಆರಂಭಿಸಿದ ಶ್ರೀರಾಮ ವಿದ್ಯಾಕೇಂದ್ರ, ಇವತ್ತು ದೊಡ್ಡ ಸಂಸ್ಥೆಯಾಗಿ ಬೆಳೆದಿದ್ದು ಪ್ರಾಥಮಿಕ ಹಂತದಿಂದ ಪದವಿವರೆಗೂ ಸುಮಾರು ಎರಡೂವರೆ ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ದಿವಂಗತ ಸಚಿವ ಡಾ.ವಿ.ಎಸ್.ಆಚಾರ್ಯ ಅವರು, ಪ್ರಭಾಕರ ಭಟ್ಟರ ಒಡನಾಡಿ.

ಮಾಜಿ ಸಚಿವ ಸದಾನಂದ ಗೌಡರಿಂದ ಹಿಡಿದು ಈ ಭಾಗದಿಂದ ಬೆಳೆದು ಬಂದ ಅನೇಕ ಬಿಜೆಪಿ ಮುಖಂಡರಿಗೆ ಕಲ್ಲಡ್ಕರು ದೊಡ್ಡಣ್ಣನ ಸಮಾನ. ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಸಂಘದ ಸೇವೆ ಮಾಡುತ್ತಾ ಬಂದಿರುವ ಪ್ರಭಾಕರ ಭಟ್ಟರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಒದಗಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಹೀಗಾಗಿಯೇ ಇವರ ವಿರುದ್ಧ ಕಾಂಗ್ರೆಸ್ ನಾಯಕರಿಗೆ ಆಕ್ರೋಶ ಅನ್ನುವುದು ಕಲ್ಲಡ್ಕರ ಅಭಿಮಾನಿಗಳ ಹೇಳಿಕೆ.

ಕಲ್ಲಡ್ಕ ಪ್ರಭಾಕರ ಭಟ್ಟರು, ಹಿಂದೂ ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುತ್ತಾರೆ. ಹಿಂದೂಗಳಲ್ಲಿ ದ್ವೇಷ ಮತ್ತು ಕೋಮು ಭಾವನೆ ಪ್ರಚೋದಿಸುವಂಥ ಭಾಷಣಗಳನ್ನು ಮಾಡುತ್ತಾರೆ, ನೀವೆಲ್ಲಾ ಖಡ್ಗ ಹಿಡಿಯಬೇಕು ಎಂದು ಕರೆಕೊಡುತ್ತಾರೆ.  ಆ ಮೂಲಕ  ಸಮಾಜದ ಶಾಂತಿಗೆ ಭಂಗ ತರುತ್ತಾರೆ, ಅನ್ನುವುದು ಇವರ ವಿರುದ್ಧ ಇರುವ ಆರೋಪ. ಆದರೆ, ಮತಾಂತರಗಳು, ಲವ್ ಜಿಹಾದ್ ಇತ್ಯಾದಿಗಳ ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸಲು ಹೊರಡುವವರಿಗೆ ತಡೆಯೊಡ್ಡದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಹಿಂದೂ ಸಮಾಜದ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡು ಮತಾಂಧ ಶಕ್ತಿಗಳು ದಾಳಿ ನಡೆಸುತ್ತಿವೆ. ರಾಜ್ಯದಲ್ಲಿ ಗೋಹತ್ಯೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಜ್ಯಸರ್ಕಾರವೇ ಪುಷ್ಟಿ ನೀಡುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡುತ್ತೇವೆ ಅನ್ನುತ್ತಾರೆ ಪ್ರಭಾಕರ ಭಟ್ಟರು.

ಕಾಂಗ್ರೆಸ್ ಪಕ್ಷ, ಅಲ್ಪಸಂಖ್ಯಾತರ ಓಲೈಕೆ ಮಾಡಿ ಅವರನ್ನು ಮತಬ್ಯಾಂಕ್ ಆಗಿಸಿಕೊಂಡಿದೆ. ಕಾಂಗ್ರೆಸ್ ಮುಖಂಡರು ಪಾಪುಲರ್ ಫ್ರಂಟ್ ಆಫ್ ಇಂಡಿಯಾದಂಥ ಸಂಘಟನೆಗಳಿಗೆ ಕುಮ್ಮಕ್ಕುಕೊಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಕ್ಷೀಣವಾಗುತ್ತಿದ್ದು, ಆ ಕಾರಣಕ್ಕಾಗಿಯೇ ಆ ಪಕ್ಷದ ನಾಯಕರು, ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಗುರಿಯಾಗಿಸಿಕೊಂಡಿದ್ದಾರೆ.  ಅವರ ಮೇಲೆ ಆರೋಪ ಹೊರಿಸಿ, ಜೈಲಿಗೆ ಕಳಿಸಬೇಕು ಅನ್ನುವ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಹೀಗೆಲ್ಲಾ ಮಾಡಿ ಅಲ್ಪಸಂಖ್ಯಾತರ ಓಟುಗಳಿಸುವ ಕಾಂಗ್ರೆಸ್ ತಂತ್ರ ಫಲ ನೀಡುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚುವುದು ಖಚಿತ ಅನ್ನುವುದು ಬಿಜೆಪಿಯವರ ಅಭಿಪ್ರಾಯ.

ಕಾಸರಗೋಡು ಮತ್ತು ಮಂಗಳೂರು ನಡುವೆ ಉಗ್ರರ ಸಂಘಟನೆಯ ಸ್ಲೀಪರ್‌ ಸೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಡ್ರಗ್ಸ್ ಮಾಫಿಯ ಮತ್ತು ಮರಳು ಮಾಫಿಯಾಗಳೂ ಕೂಡ ಇವರ ಜೊತೆಗೆ ಸೇರಿರುವುದು ಜಿಲ್ಲೆಯಲ್ಲಿನ ಅಶಾಂತಿಗೆ ಕಾರಣವೇ ಹೊರತು, ಇದರಲ್ಲಿ ಹಿಂದೂ ಸಂಘಟನೆಗಳ ಪಾತ್ರವೇನೂ ಇಲ್ಲ. ಆದರೆ, ಉಸ್ತುವಾರಿ ಸಚಿವ ರಮಾನಾಥ್ ರೈ, ಸತ್ಯವನ್ನು ಮುಚ್ಚಿಟ್ಟು ಅನಗತ್ಯವಾಗಿ ಪ್ರಭಾಕರ ಭಟ್ಟರ ಹೆಸರನ್ನು ಎಳೆದು ತರುತ್ತಿದ್ದಾರೆ, ಅನ್ನುವುದು  ಬಿಜೆಪಿ  ಆರೋಪ.

ಬಂಟ್ವಾಳದಲ್ಲಿ ಮಾತ್ರ ಘರ್ಷಣೆ ಆಗಿದೆ. ಹೀಗಿದ್ದರೂ ಕೂಡ ಇಡೀ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ 144ನೇ ಸೆಕ್ಷನ್ ಜಾರಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸುವಂತೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಅನ್ನುವುದಕ್ಕೆ ಇದೇ ಸಾಕ್ಷಿ ಅನ್ನುತ್ತಾರೆ ಕಲ್ಲಡ್ಕ ಪ್ರಭಾಕರ ಭಟ್ಟರು.

ಮಂಗಳೂರಿನಲ್ಲಿ ಹಿಂದಿನಿಂದಲೂ ಹಿಂದು, ಮುಸ್ಲಿಮ್‌ ಮತ್ತು ಕ್ರೈಸ್ತರಲ್ಲಿ ಸಾಮರಸ್ಯ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಧೃವೀಕರಣ ಆಗಿದೆ. ಇದಕ್ಕೆ ಕಲ್ಲಡ್ಕ ಪ್ರಭಾಕರ ಭಟ್ಟರಂಥವರು ಮತ್ತು ಕೆಲವು ಮುಸ್ಲಿಮ್ ಮುಖಂಡರೂ ಕಾರಣವಿರಬಹುದು. ಲವ್ ಜಿಹಾದ್, ಮತಾಂತರ ಇತ್ಯಾದಿ ಆರೋಪಗಳು ಕೇವಲ ಕಾಲ್ಪನಿಕವೂ ಇರಬಹುದು, ಆದರೆ ಮುಖಂಡರ ಮಾತುಗಳನ್ನು ಕೇಳಿ ಪ್ರಚೋದಿತರಾದ ಕೆಲವರು ಸಮಾಜದ ಶಾಂತಿ ಕದಡುವ ಕೆಲಸದಲ್ಲಿ ತೊಡಗಬಹುದು. ಅಂಥವರು ತಮ್ಮ ತಪ್ಪಿಗೆ ಶಿಕ್ಷೆಯನ್ನೂ ಅನುಭವಿಸುತ್ತಿರಬಹುದು, ಆದರೆ ಅದಕ್ಕೆ ಕಾರಣರಾದವರು ಯಾವುದೇ ರೀತಿಯಲ್ಲೂ ಸಿಕ್ಕಿಹಾಕಿಕೊಳ್ಳುವುದಿಲ್ಲ.

ಹಿಂದೂ ಧರ್ಮದ ರಕ್ಷಣೆಗಾಗಿ ನಾವು ಜಾಗೃತರಾಗುವುದರಲ್ಲಿ ಏನು ತಪ್ಪು ಎಂದು ಕೇಳುವ ಪ್ರಭಾಕರ ಭಟ್ಟರು, ಜಾತಿ, ಪಂಗಡಗಳನ್ನು ಮೀರಿ, ಅಸ್ಪೃಶ್ಯತೆಯಂಥ ಕೆಟ್ಟ ಆಚರಣೆಗಳನ್ನು ದೂರ ಮಾಡಿ ಸಂಘಟಿತರಾಗಬೇಕು ಅನ್ನುವುದಷ್ಟೇ ನಾನು ಆಡುವ ಮಾತು, ಇದರಲ್ಲಿ ದ್ವೇಷ ಎಲ್ಲಿದೆ ಅನ್ನುತ್ತಾರೆ.  ಸಚಿವ ರಮಾನಾಥ್ ರೈ ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ನನ್ನ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ ಮತ್ತು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ.

ರಾಜ್ಯಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ, ಹಿಂದೂಗಳ ವಿರುದ್ಧ ದೌರ್ಜನ್ಯಗಳು ನಡೆದಾಗ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ, ಹೀಗಾಗಿ ನಾವು ಸಂಘಟಿತರಾಗದೆ ಅನ್ಯಮಾರ್ಗವಿಲ್ಲ ಅನ್ನುವುದು ಕಲ್ಲಡ್ಕ ಪ್ರಭಾಕರ ಭಟ್ಟರ ಹೇಳಿಕೆ. ಕೆಲವು ರಾಜಕೀಯ ಪಕ್ಷಗಳು ಜಾತ್ಯತೀತತೆ ಹೆಸರಿನಲ್ಲಿ ಹಿಂದೂ ವಿರೋಧಿ ನಿಲುವು ತಳೆಯುವುದು ಸರಿಯಲ್ಲ ಎಂದು ಖಂಡಿಸುವ ಪ್ರಭಾಕರ ಭಟ್ಟರು, ಕೆಲವು ಸಮಯದ ಹಿಂದೆ, ದೇಶಾದ್ಯಂತ ಭಾರಿ ಸುದ್ದಿ ಮಾಡಿದ್ದ ಘರ್‌ವಾಪಸಿ ಅಥವ ಮರುಮತಾಂತರವನ್ನು ಸಮರ್ಥಿಸಿಕೊಳ್ಳುತ್ತಾರೆ. ನಿಜಕ್ಕೂ ಇದು ಆಗಬೇಕು, ಇದರಿಂದ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗಲು ಸಾಧ್ಯ ಎಂದು ಹೇಳುತ್ತಾರೆ.

ಆದರೆ, ಬಿಜೆಪಿಯ ಒಳಗೂ ಕಲ್ಲಡ್ಕರ ವಿರುದ್ಧ ಕೆಲವು ಆರೋಪಗಳು ಕೇಳಿ ಬರುತ್ತವೆ. ಕೆಲ ವರ್ಷಗಳ ಹಿಂದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಕುಂದಾಪುರದ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಮಂತ್ರಿಯಾಗುವುದನ್ನು ತಪ್ಪಿಸುವುದಕ್ಕೆ ಕಲ್ಲಡ್ಕರೇ ಕಾರಣ ಎಂಬ ಆರೋಪಗಳಿವೆ. ಒಂದು ಸಮುದಾಯದವರ ಪ್ರಬಲ ವಿರೋಧ ಕಟ್ಟಿಕೊಂಡಿರುವ ಪ್ರಭಾಕರ ಭಟ್ಟರಿಗೆ ದುಬೈನಿಂದಲೂ ಪ್ರಾಣ ಬೆದರಿಕೆ ಕರೆಗಳು ಬರುತ್ತಿರುತ್ತವಂತೆ. ಕಳೆದ ಸುಮಾರು ಮೂವತ್ತು ವರ್ಷಗಳಿಂದಲೂ ಇವರ ಮನೆ ಎದುರಿಗೆ ಸದಾಕಾಲ ಪೊಲೀಸ್ ಜೀಪ್ ನಿಂತಿರುತ್ತದಂತೆ. ಒಟ್ಟಿನಲ್ಲಿ, ಕಲ್ಲಡ್ಕ ಪ್ರಭಾಕರ ಭಟ್ಟರಾಗಲಿ ಅಥವ ಬೇರೆ ಯಾರೇ ಆಗಲಿ ಜನರಲ್ಲಿ ಕೋಮುಭಾವನೆ ಪ್ರಚೋದಿಸಿ ಸಮಾಜದ ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು.

ಒಂದು ಸಮುದಾಯದವರಿಗೆ ಮತ್ತೊಂದು ಸಮುದಾಯದವರ ಬಗ್ಗೆ ಅಸಹನೆ ಇರಬಹುದು, ಅನುಮಾನಗಳಿರಬಹುದು ಅದಕ್ಕೆ ಕಾರಣಗಳೂ ಅವರಲ್ಲಿ ಇರಬಹುದು. ಆದರೆ, ಇಂಥದ್ದೆಲ್ಲಾ ದ್ವೇಷವಾಗಿ ಪರಿವರ್ತನೆಯಾಗುವ ಮೊದಲು, ಸಾಮರಸ್ಯದ ವಾತಾವರಣದಲ್ಲಿ, ಸಂವಾದದ ಮೂಲಕ ಪರಿಹಾರ ಮಾಡಬೇಕು. ಸ್ವತಃ ವೈದ್ಯರಾಗಿ ಕಾಯಿಲೆಗಳಿಗೆ ಚಿಕಿತ್ಸೆ ಕೊಡುವ ಕಲ್ಲಡ್ಕ ಪ್ರಭಾಕರ ಭಟ್ಟರು, ಅದೇ ರೀತಿಯಲ್ಲಿ ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳನ್ನೂ ವಾಸಿ ಮಾಡುವ ವೈದ್ಯರಾಗಬೇಕು ಅನ್ನುವುದು, ಶಾಂತಿ ಮತ್ತು ಸೌಹಾರ್ದತೆ ಬಯಸುವ ಎಲ್ಲರ ಅಪೇಕ್ಷೆ.  

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ