ಇನ್ನೇನು ಬಂತು ಇಂದಿರಾ ಕ್ಯಾಂಟೀನ್…

Kannada News

01-08-2017

ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸಬೇಕು ಎಂಬ ಆಶಯ ಹೊಂದಿದ್ದ ಸಿದ್ದರಾಮಯ್ಯನವರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ, ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಬಡತನ ರೇಖೆಯ ಕೆಳಗಿರುವ ಎಲ್ಲ ಕುಟುಂಬಗಳ ಪ್ರತಿ ವ್ಯಕ್ತಿಗೆ, ಪ್ರತಿ ತಿಂಗಳಿಗೆ ಉಚಿತವಾಗಿ 7 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ, ಸಿದ್ದರಾಮಯ್ಯ ಸರ್ಕಾರಕ್ಕೆ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಹೆಸರು ತಂದುಕೊಟ್ಟ ಯೋಜನೆ. 

ಅದೇ ರೀತಿ ಜನಸಾಮಾನ್ಯರು, ದಿನಗೂಲಿ ಕಾರ್ಮಿಕರು ಸೇರಿದಂತೆ, ಬೆಂಗಳೂರು ನಗರಕ್ಕೆ ಬರುವ ಹೋಗುವ ಮತ್ತು ಇಲ್ಲೇ ನೆಲೆಸಿರುವ ಬಡವರ್ಗದವರನ್ನು ದೃಷ್ಟಿಯಲ್ಲಿ ಇರಿಸಿಕೊಂಡು, ಅವರಿಗೆಲ್ಲಾ ಕಡಿಮೆ ದರದಲ್ಲಿ ಊಟ ತಿಂಡಿ ಒದಗಿಸಬೇಕು ಅನ್ನುವ ಚಿಂತನೆಯೂ ಸಿದ್ದರಾಮಯ್ಯನವರಿಗಿತ್ತು. ಈ ಚಿಂತನೆಗೆ, ಪಕ್ಕದ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ಅವರು ಜಾರಿಗೆ ತಂದಿದ್ದ ಅಮ್ಮ ಕ್ಯಾಂಟೀನ್‌ಗಳು ಪ್ರೇರಣೆ ಆಗಿದ್ದವು ಅನ್ನುವುದೂ ಕೂಡ ಸತ್ಯ. ಹೀಗಾಗಿ ಇದೇ ಮಾರ್ಚ್‌ನಲ್ಲಿ ಆಯವ್ಯಯ ಮಂಡನೆ ವೇಳೆ, ಬೆಂಗಳೂರಿನ ಎಲ್ಲಾ 198 ವಾರ್ಡ್‌ಗಳಲ್ಲಿ ನಮ್ಮ ಮೆಟ್ರೊ ಹೆಸರಿನಂತೆ  ‘ನಮ್ಮ ಕ್ಯಾಂಟೀನ್’ ಸ್ಥಾಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಈ ಕ್ಯಾಂಟೀನ್‌ಗಳಲ್ಲಿ ಐದು ರುಪಾಯಿಗೆ ತಿಂಡಿ ಹಾಗೂ ಹತ್ತು ರೂಪಾಯಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ನೀಡಲಾಗುವುದು ಎಂದು ಸಿದ್ದರಾಮಯ್ಯನವರು ಪ್ರಕಟಿಸಿದ್ದರು.

ಇದಾದ ಕೆಲವೇ ದಿನಗಳಲ್ಲಿ ಈ ಯೋಜನೆಗೆ ‘ನಮ್ಮ ಕ್ಯಾಂಟೀನ್’ ಬದಲು ‘ಇಂದಿರಾ ಕ್ಯಾಂಟೀನ್’ ಎಂದು ಮರು ನಾಮಕರಣ ಮಾಡಲಾಯಿತು. ಆನಂತರ, ಇಂದಿರಾ ಕ್ಯಾಂಟೀನ್ ಯೋಜನೆ ಅನುಷ್ಠಾನಕ್ಕೆ ತರಲು ಸಮಿತಿಗಳನ್ನು ರಚಿಸಿ, ಎಲ್ಲಾ ವಾರ್ಡ್‌ಗಳಲ್ಲಿ ಜಾಗಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಯಿತು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಅಡುಗೆ ಮನೆ ನಿರ್ಮಿಸಿ ಅಲ್ಲಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು ನಿರ್ಧರಿಸಲಾಯಿತು. ಆರಂಭದಲ್ಲಿ, ಇಸ್ಕಾನ್ ನವರಿಗೆ ಆಹಾರ ಪೂರೈಕೆ ಹೊಣೆಗಾರಿಕೆ ವಹಿಸಲು ಯೋಚಿಸಲಾಯಿತು. ಆದರೆ, ಇಸ್ಕಾನ್ ನವರು ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ ಎಂದು ಹೇಳಿದ ಮೇಲೆ ಅವರನ್ನು ಕೈ ಬಿಡಲಾಯಿತು.

ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್  ಘಟಕಗಳನ್ನು ನಿರ್ಮಿಸಲು ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಕೆಇಎಫ್‍ ಇನ್‌ಫ್ರಾ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಈ ಕಂಪನಿಯವರು ಪ್ರೀ ಕ್ಯಾಸ್ಟ್ ತಂತ್ರಜ್ಞಾನ ಬಳಸಿಕೊಂಡು, ಕಟ್ಟಡಕ್ಕೆ ಬೇಕಾದ ಕಂಬಗಳು, ಗೋಡೆಗಳು, ಕಿಟಕಿಗಳು ಇತ್ಯಾದಿ ಎಲ್ಲವನ್ನೂ ತಮ್ಮ ಕಂಪನಿಯ ಸ್ಥಳದಲ್ಲೇ ತಯಾರಿಸುತ್ತಾರೆ. ಆನಂತರ, ನಿಗದಿತ ಸ್ಥಳಕ್ಕೆ ಅವನ್ನು ಲಾರಿಗಳ ಮೂಲಕ ಸಾಗಿಸಿ, ಕ್ರೇನ್ ಬಳಸಿ ಕಟ್ಟಡವನ್ನು ಜೋಡಿಸಲಾಗುತ್ತದೆ, ಇದಕ್ಕೆ ಕೇವಲ 7 ದಿನಗಳು ಸಾಕಾಗುತ್ತವಂತೆ. ಈ ರೀತಿ ನಿರ್ಮಿಸುವ ಪ್ರತಿಯೊಂದು ಇಂದಿರಾ ಕ್ಯಾಂಟೀನ್ ಘಟಕಕ್ಕೆ ತಲಾ 28 ಲಕ್ಷ ರೂಪಾಯಿಗಳ ವೆಚ್ಚ ನಿಗದಿಪಡಿಸಲಾಗಿದೆ. ಈ ರೀತಿ ನಿರ್ಮಾಣವಾದ ಕಟ್ಟಡಗಳು ಸದೃಢವಾಗಿದ್ದು, ಮಾಮೂಲಿ ಕಟ್ಟಡಗಳಂತೆಯೇ 75 ರಿಂದ 100 ವರ್ಷ ಬಾಳಿಕೆ ಬರುತ್ತವೆ ಎಂದು ಬಿಬಿಎಂಪಿ ಹೇಳಿಕೆ ನೀಡಿದೆ.

ಎಂಟು ಪ್ರವೇಶ ದ್ವಾರಗಳಿರುವ ಈ ಕ್ಯಾಂಟೀನ್‍ಗಳಲ್ಲಿ ಒಂದು ಬಾರಿಗೆ 80 ಮಂದಿ ಊಟ ಮಾಡಬಹುದಾಗಿದೆ. ಇಲ್ಲಿ ಹಿರಿಯ ನಾಗರಿಕರಿಗೆ ಎಂಟು ಆಸನಗಳನ್ನು ಮೀಸಲಿರಿಸಲಾಗುತ್ತದಂತೆ. ಆದರೆ, ಇಂದಿರಾ ಕ್ಯಾಂಟೀನ್ ಆರಂಭ ಒಂದಲ್ಲಾ ಒಂದು ಕಾರಣಕ್ಕಾಗಿ ವಿಳಂಬವಾಗುತ್ತಾ ಬಂದಿದೆ. ಅಂತಿಮವಾಗಿ ಇದೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಮಹಾನಗರಪಾಲಿಕೆಯ 125 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದೆ ಎಂದು ರಾಜ್ಯಸರ್ಕಾರ ತಿಳಿಸಿದೆ.  ಕ್ಯಾಂಟೀನ್ ಸ್ಥಾಪನೆಗೆ ಜಾಗದ ಸಮಸ್ಯೆ ಇರುವ ಉಳಿದ 73 ವಾರ್ಡ್‌ಗಳಲ್ಲಿ, ಅಕ್ಟೋಬರ್‌ 2ರಂದು ಕ್ಯಾಂಟೀನ್‌ಗಳು ಆರಂಭವಾಗಲಿವೆ ಎಂದು ಸರ್ಕಾರ ಹೇಳಿದೆ.

ಒಂದು ಇಂದಿರಾ ಕ್ಯಾಂಟೀನ್‌ಗೆ 900 ಚದರ ಅಡಿಗಳಷ್ಟು ಜಾಗ ಸಾಕೆಂದು ಅಂದಾಜಿಸಲಾಗಿತ್ತು ಆದರೆ, 1,500 ಚದರ ಅಡಿಗಳ ಜಾಗ ಅಗತ್ಯವಿರುವುದು ಕಂಡುಬಂತು. ಇದರ ಜೊತೆಗೆ, ಕೆಲವು ಕಡೆ ಕಿರಿದಾದ ರಸ್ತೆಗಳಿರುವ ಕಾರಣ ಲಾರಿ ಮತ್ತು ಕ್ರೇನ್‌ಗಳು ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ, ಹೀಗಾಗಿ ಇಂದಿರಾ ಕ್ಯಾಂಟೀನ್ ಅಡುಗೆ ಮನೆಗಳ ಸ್ಥಾಪನೆ ವಿಳಂಬವಾಯಿತು ಅನ್ನುವುದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಸಮರ್ಥನೆ. ಇಂದಿರಾ ಕ್ಯಾಂಟೀನ್‌ಗಳ ಕೇಂದ್ರೀಕೃತ ಅಡುಗೆ ಮನೆಗೆ ಬೇಕಾದ 52 ಪರಿಕರಗಳನ್ನು ಕೊಳ್ಳಲು 9 ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಅಡುಗೆ ತಯಾರಿಕೆಯ ಹಬೆ ಯಂತ್ರಗಳು, ಪಾತ್ರೆಗಳು, ತಟ್ಟೆ, ಲೋಟಗಳ ಸರಬರಾಜಿಗೂ ವ್ಯವಸ್ಥೆ ಮಾಡಲಾಗಿದೆ.

ಇದರ ಜೊತೆಗೆ, ಅಡುಗೆ ಮಾಡಿ, ಕ್ಯಾಂಟೀನ್‌ಗಳಿಗೆ ಪೂರೈಸುವವರ ಸೇವೆ ಪಡೆಯಲು ಟೆಂಡರ್‌ ಕರೆದು ಅಂತಿಮಗೊಳಿಸಲಾಗುತ್ತಿದೆ. ಹೀಗಾಗಿ, ಈ ಎಲ್ಲಾ ಪ್ರಕ್ರಿಯೆಗಳು ಸದ್ಯದಲ್ಲೇ ಮುಗಿಯಲಿವೆ ಅನ್ನುವ ವಿಶ್ವಾಸ ಬಿಬಿಎಂಪಿಯವರದ್ದು. ಇಂದಿರಾ ಕ್ಯಾಂಟೀನ್‌ ಗಳಲ್ಲಿ ವಿತರಿಸುವ ತಿಂಡಿಗಳು ಹೀಗಿವೆ. ಇಡ್ಲಿ, ತೆಂಗಿನ ಕಾಯಿ ಚಟ್ನಿ, ಪುಳಿಯೋಗರೆ, ಖಾರಾಬಾತ್, ಕೇಸರಿಬಾತ್, ಟೊಮೋಟೊ ಬಾತ್, ವಾಂಗೀಬಾತ್, ಪೊಂಗಲ್, ಚಿತ್ರಾನ್ನ ಇರುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ ಸಾಂಬಾರ್, ಮೊಸರು ಅನ್ನ,  ಚಟ್ನಿ ಇರುತ್ತದೆ. ಇದರ ಜೊತೆಗೆ, ಒಂದೊಂದುದಿನ ರವೆ ಖಿಚಡಿ, ಮೆಂತ್ಯದ ಸೊಪ್ಪಿನ ಪಲಾವ್, ಟೊಮೊಟೊ ಗೊಜ್ಜು, ಕೊತ್ತಂಬರಿ ಮತ್ತು ಪುದೀನಾ ಚಟ್ನಿಯೂ ಇರುತ್ತದಂತೆ.

ಪ್ರತಿದಿನವೂ ಬೇರೆ ಬೇರೆ ರೀತಿಯ ಸಾಂಬಾರ್ ಮಾಡಲಾಗುತ್ತದೆ. ಸೋಮವಾರದಿಂದ ಭಾನುವಾರದವರೆಗೂ ಇಂಥ ದಿನ ಇಂಥದ್ದೇ ತಿಂಡಿ, ಇಂಥದ್ದೇ ಸಾಂಬಾರ್ ಇರಬೇಕು ಎಂದು ಸೂಚನೆ ನೀಡಲಾಗಿದೆ. ಇದಕ್ಕೆ ತಪ್ಪಿದರೆ ದಿನಕ್ಕೆ ಐದುನೂರು ರೂಪಾಯಿ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ ಏಳೂವರೆಯಿಂದ ಹತ್ತುಗಂಟೆಯವರೆಗೆ ತಿಂಡಿ ಸಮಯ. ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಮತ್ತು  ರಾತ್ರಿ 7.30ರಿಂದ 9ರ ವರೆಗೆ ಊಟದ ಸಮಯ. ಪ್ರತಿಹೊತ್ತಿಗೆ ಕನಿಷ್ಟ ಮುನ್ನೂರು ಜನರಿಗೆ ತಿಂಡಿ ಮತ್ತು ಊಟ ದೊರೆಯಲಿದೆ. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಗುವ ತಿಂಡಿಗೆ ಕೇವಲ ಐದು ರೂಪಾಯಿ, ಊಟಕ್ಕೆ ಬರೀ ಹತ್ತು ರೂಪಾಯಿ.

ತಾಜ್ ಹೋಟೆಲ್  ಸಮೂಹದ ಮಾಜಿ ಬಾಣಸಿಗ ಅಂದರೆ ಅಡುಗೆ ಭಟ್ಟ ಸಂಜಯ್ ಬಾನ್ ಅವರು, ಇಂದಿರಾ ಕ್ಯಾಂಟೀನ್  ಮೆನ್ಯು ಅಂದರೆ ತಿಂಡಿಯ ಪಟ್ಟಿಯನ್ನು ತಯಾರಿಸಿಕೊಟ್ಟಿದ್ದಾರಂತೆ.  ಆದರೆ, ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಿಸುವುದಕ್ಕಾಗಿ ನಗರದ ಹಲವು ಬಡಾವಣೆಗಳ ಉದ್ಯಾನವನ, ಆಟದ ಮೈದಾನ, ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟಿರುವ ನಿವೇಶನಗಳು, ದೇವಸ್ಥಾನದ ಜಾಗಗಳು, ಸ್ಮಶಾನ ಇತ್ಯಾದಿ ಜಾಗಗಳನ್ನು ಸರ್ಕಾರ ಬಳಸಿಕೊಳ್ಳುತ್ತಿದೆ. ಸರ್ಕಾರದ ಈ ಕ್ರಮದಿಂದ ನಾಗರಿಕರಿಗೆ ಅನಾನುಕೂಲವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಮಲ್ಲೇಶ್ವರಂ 18ನೇ ಕ್ರಾಸ್ ಆಟದ ಮೈದಾನದ ಒಂದು ಭಾಗ ಬಳಸಲಾಗಿದೆ, ಮರ್ಫಿಟೌನ್‌ನಲ್ಲಿ ನೂರು ವರ್ಷಗಳ ಪಾರಂಪರಿಕ ಕಟ್ಟಡ ಕೆಡವಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ಮಾಡಿಕೊಡಲಾಗಿದೆ.

ಆದರೆ, ಈ ಕಟ್ಟಡ ಶಿಥಿಲವಾಗಿತ್ತು, ಹಾಗಾಗಿ ಅದನ್ನು ನೆಲಸಮಮಾಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳುತ್ತಾರೆ. ಇದೇ ರೀತಿ ಬನಶಂಕರಿ ದೇವಾಲಯದ ಪಕ್ಕದಲ್ಲಿಯೇ ಇಂದಿರಾ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಿರುವುದರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ದೇಗುಲಕ್ಕೆ ಸೇರಿದ ಜಾಗ ಎಂದು ಸ್ಥಳೀಯರು ಹೇಳಿದರೆ, ಇದು ನಮಗೆ ಸೇರಿದ ಜಾಗ ಎಂದು ಬಿಬಿಎಂಪಿ ಹೇಳುತ್ತಿದೆ.

 ಬಿಜೆಪಿಯ ಮಾಜಿ ಕಾರ್ಪೊರೇಟರ್ ಎನ್.ಆರ್.ರಮೇಶ್ ಅವರು, ಇದೆಲ್ಲದಕ್ಕಿಂತಲೂ ದೊಡ್ಡ ಆರೋಪ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 27 ಅಡುಗೆ ಮನೆಗಳು ಮತ್ತು 198 ಕ್ಯಾಂಟೀನ್‍ಗಳ ನಿರ್ಮಾಣದ ಹೆಸರಿನಲ್ಲಿ ಕೋಟ್ಯಂತರ ರೂ. ಪ್ರಮಾಣದ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯನವರು ಈ ಆರೋಪವನ್ನು ಆಧಾರ ರಹಿತ ಎಂದು ತಳ್ಳಿಹಾಕಿದ್ದಾರೆ.  ಬಡವರಿಗೆ ರಿಯಾಯಿತಿ ದರದಲ್ಲಿ ಊಟ, ತಿಂಡಿ ಒದಗಿಸಲು ಇಂದಿರಾ ಕ್ಯಾಂಟೀನ್‌ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ, ಇದಕ್ಕೂ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

‘ಇಂದಿರಾ ಕ್ಯಾಂಟೀನ್‌ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನಮ್ಮ ವೆಬ್‌ಸೈಟ್‌ನಲ್ಲಿ ಲಭ್ಯವಿದೆ, ಇದರಲ್ಲಿ ಅವ್ಯವಹಾರ ನಡೆದಿದೆ ಅನ್ನುವುದು ಸುಳ್ಳು ಆರೋಪ’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಆದರೆ, ಜನಪರ ಯೋಜನೆಗಳನ್ನು ಕೈಗೊಳ್ಳುವಾಗ ಈ ರೀತಿಯ ಆರೋಪಗಳು ಕೇಳಿ ಬರುವುದು ಸರ್ವೇ ಸಾಮಾನ್ಯ. ಈ ಹಿಂದೆ, ಬಿಜೆಪಿಯವರೇ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ್ದಾಗಲೂ ಕೋಟ್ಯಂತರ ರೂಪಾಯಿ ಅಕ್ರಮ ಮತ್ತು ಅವ್ಯವಹಾರಗಳು ನಡೆದಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು.  ಇವೆಲ್ಲಾ ರಾಜಕೀಯ ಮೇಲಾಟಗಳು ಏನೇ ಇದ್ದರೂ ಕೂಡ, ನಗರದ ಎಲ್ಲಾ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿ, ಬಡಜನರಿಗೆ ಶುಚಿ, ರುಚಿ ಮತ್ತು ಪುಷ್ಟಿದಾಯಕವಾದ ಆಹಾರ ಕೊಟ್ಟರೆ, ಅದರಿಂದ ಸಮಾಜಕ್ಕೆ ಲಾಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇತ್ತೀಚೆಗೆ ಜಿಎಸ್‌ಟಿ ಜಾರಿಗೆ ಬಂದ ನಂತರ, ಜನಸಾಮಾನ್ಯರು ಮೂರೂ ಹೊತ್ತೂ ಹೋಗಿ ತಿಂಡಿ, ಕಾಫಿ, ಊಟ ಮಾಡುವ ದರ್ಶಿನಿಗಳಲ್ಲೂ, ಹಳೆಯ ದರಕ್ಕಿಂತ ಕನಿಷ್ಟ ಹತ್ತು ರೂಪಾಯಿ ಏರಿಸಲಾಗಿದೆ. ಆದರೆ, ಏರಿಕೆ ಮಾಡಿರುವ ಮೊತ್ತವೆಲ್ಲವೂ ಜಿಎಸ್‌ಟಿ ತೆರಿಗೆಗೇ ಹೋಗುತ್ತದೆ ಎಂದೇನೂ ಹೇಳುವಂತಿಲ್ಲ. ಜಿಎಸ್‌ಟಿ ನೆಪದಲ್ಲಿ ತಾವೂ ಹೆಚ್ಚುವರಿಯಾಗಿ ಒಂದಿಷ್ಟು ಲಾಭ ಮಾಡಿಕೊಳ್ಳುವ ಬುದ್ಧಿ ಹೋಟೆಲ್ ಮಾಲೀಕರಿಗಿರಬಹುದು. ಹೀಗಾಗಿ, ಕೇವಲ ಐದು ರೂಪಾಯಿಗೆ ತಿಂಡಿ ಹತ್ತು ರೂಪಾಯಿಗೆ ಊಟ ಹಾಕುವ ಇಂದಿರಾ ಕ್ಯಾಂಟೀನ್ ಆರಂಭವಾಗುವುದನ್ನೇ ಬಡಬಗ್ಗರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇದೇ ಆಗಸ್ಟ್ 15ರಿಂದ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್‌ಗಳು, ಎಷ್ಟರ ಮಟ್ಟಿಗೆ ಬಡಜನರ ಹೊಟ್ಟೆಪಾಡು ನೀಗಿಸುತ್ತವೆ ಅನ್ನುವುದನ್ನು ತಿಳಿಯಲು, ಕೆಲವೇ ದಿನಗಳು ಬಾಕಿ ಅಷ್ಟೇ..

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ