ಧ್ರುವ ಶರ್ಮಾ ಸಾವಿಗೆ ಟ್ವಿಸ್ಟ್ !

Kannada News

01-08-2017 215

ಬೆಂಗಳೂರು: ದಿವ್ಯಾಂಗ ಬಹುಮುಖ ಪ್ರತಿಭೆ, ಕನ್ನಡ ಚಿತ್ರನಟ ಮತ್ತು ಸಿಸಿಎಲ್ ಆಟಗಾರ ಧ್ರುವಾ ಶರ್ಮಾ ಅನಾರೋಗ್ಯದಿಂದ ಸಾವನ್ನಪ್ಪಿಲ್ಲ, ಬದಲಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಧ್ರುವ ಶರ್ಮಾ ಆನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದರು ಎಂದು ಮೊದಲು ವರದಿಯಾಗಿತ್ತು. ಆದರೆ ಧ್ರುವ ಶರ್ಮಾ ತಂದೆ ಸುರೇಶ್ ಶರ್ಮಾ ಅವರು ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಆತ್ಮಹತ್ಯೆ ಎಂಬುದನ್ನು ಪುಷ್ಟೀಕರಿಸುತ್ತಿವೆ.

ಕೌಟುಂಬಿಕ ಕಲಹ, ಕಂಪೆನಿಯಲ್ಲಿ ನಷ್ಟ ಮತ್ತು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ಮಾನಸಿಕವಾಗಿ ತೀವ್ರವಾಗಿ ನೊಂದ ಧ್ರುವ ಜುಲೈ 29 ರಂದು ಅಲುಮ್ಯೂನಿಯಂ ಪಾಸ್ಟೇಟ್ ಅಂಶ ಇರುವ ವಿಷದ ಇಂಜೆಕ್ಷನ್ ಚುಚ್ಚಿಕೊಂಡಿದ್ದರು. ಆ ಬಳಿಕ ಹೆಬ್ಬಾಳದಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಇಹಲೋಕ ತ್ಯಜಿಸಿರುವುದಾಗಿ ವರದಿಯಾಗಿದೆ. ಮೃತ ದೇಹ ಸಂಪೂರ್ಣವಾಗಿ ನೀಲಿ ಬಣ್ಣಕ್ಕೆ ತಿರುಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ವಾಕ್ ಮತ್ತು ಶ್ರವಣ ಸಾಮರ್ಥ್ಯ ಹೊಂದಿರದ ಧ್ರುವ ಶರ್ಮಾ ಬಾಲ್ಯದಿಂದ ಸವಾಲುಗಳನ್ನು ಮೆಟ್ಟಿ ನಿಂತು ಸಾಧಕನಾಗಿ ಗುರುತಿಸಿಕೊಂಡು ಅಮೋಘ ಅಭಿನಯ ಹಾಗೂ ಕ್ರಿಕೆಟ್ ನಿಂದ ಎಲ್ಲರ ಗಮನ ಸೆಳೆದಿದ್ದರು. 2005 ರಲ್ಲಿ ಕಿವುಡರ ವಿಶ್ವ ಕ್ರಿಕೆಟ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರ ಉತ್ತಮ ಆಟಗಾರರಾಗಿದ್ದ ಅವರು ಕಿಚ್ಚ ಸುದೀಪ್ ಅವರ ಮೆಚ್ಚಿನ ಆಟಗಾರರಾಗಿದ್ದರು. ಸುಮಾರು 35 ವರ್ಷದ  ಧ್ರುವ ಶರ್ಮಾ ಪತ್ನಿ ಮತ್ತು 7 ವರ್ಷದ ಮಗಳು, 4 ವರ್ಷದ ಮಗನನ್ನು ಅಗಲಿದ್ದಾರೆ.ಧ್ರುವ ಅವರ ತಂದೆ ಸುರೇಶ್ ಶರ್ಮಾ ಕೂಡ ನಟ, ನಿರ್ಮಾಪಕ, ಫೈನಾನ್ಶಿಯರ್ ಹಾಗೂ ನಿರ್ದೇಶಕರಾಗಿದ್ದು, ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

"ಸ್ನೇಹಾಂಜಲಿ", "ಬೆಂಗಳೂರು 560023" "ನೀನಂದ್ರೆ ಇಷ್ಟ ಕಣೋ", "ತಿಪ್ಪಜ್ಜಿ ಸರ್ಕಲ್",ಹಿಟ್ ಲಿಸ್ಟ್ ಚಿತ್ರಗಳಲ್ಲಿ ಧ್ರುವ ಅಭಿನಯಿಸಿದ್ದರು.ಇನ್ನು ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್)ಪಂದ್ಯಾವಳಿಯಲ್ಲಿ ಕಿಚ್ಚ ಸುದೀಪ್ ನಾಯಕತ್ವದ "ಕರ್ನಾಟಕ ಬುಲ್ಡೋಜರ್ಸ್" ತಂಡದಲ್ಲಿ ಅಕ್ರಮಣಕಾರಿ ಬ್ಯಾಟ್ಸ್‍ ಮನ್ ಆಗಿ ಧ್ರುವ ಮಿಂಚಿದ್ದರು. ಅಮೆರಿಕದಿಂದ ಧ್ರುವ ಅವರ ಸಹೋದರ ಆಗಮಿಸಬೇಕಿದ್ದು, ಅವರ ಆಗಮನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿದೆ. ಇದಕ್ಕೂ ರಾಜಾನುಕುಂಟೆ ಮುಖ್ಯರಸ್ತೆಯಲ್ಲಿರುವ ಪ್ರೆಸ್ಟೀಜ್ ವಿಲ್ಲಾದ ನಿವಾಸದಲ್ಲಿ ಧ್ರುವ ಅವರ ಪಾರ್ಥೀವ ಶರೀರರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ವಯಕ್ತಿಕವಾಗಿಯೂ ನಟ ಕಿಚ್ಚ ಸುದೀಪ್ ಅವರಿಗೆ ಧ್ರುವ ಶರ್ಮಾ ಆಪ್ತರಾಗಿದ್ದರು. ಇದೀಗ ಧ್ರುವ ಅವರನ್ನು ಕಾಣಲು ಸುದೀಪ್ ಅವರು ಆಸ್ಪತ್ರೆಗೆ ದೌಡಾಯಿಸಿ ಅಂತಿಮ ದರ್ಶನ ಪಡೆದರು ಚಿತ್ರರಂಗದ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ