ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು !

Kannada News

01-08-2017

ಬೆಂಗಳೂರು: ಶ್ರೀನಗರದ 16ನೇ ಮುಖ್ಯರಸ್ತೆಯಲ್ಲಿನ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದ್ದು, ಒಂದೂವರೆ ಕೆಜಿಗೂ ಹೆಚ್ಚಿನ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಚಿನ್ನಾಭರಣ ವ್ಯಾಪಾರಿ ಪ್ರಶಾಂತ್ ಅವರು ಸೋಮವಾರ ರಾತ್ರಿ 7ರ ವೇಳೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರಗೆ ಹೋಗಿ 10ರ ವೇಳೆ ವಾಪಸ್ಸಾಗಿ ಬರುವಷ್ಟರಲ್ಲಿ ಕಳ್ಳತನ ನಡೆದಿದೆ.

ಮೊದಲ ಮಹಡಿಯ ಗ್ರಿಲ್ ಗೇಟ್ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಮೊದಲು ಹಾಗೂ 2ನೇ ಮಹಡಿಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾ-ಪಿಲ್ಲಿ ಮಾಡಿ ಬೀರುವಿನ ಬಾಗಲನ್ನು ಒಡೆದಿರುವ ದುಷ್ಕರ್ಮಿಗಳು ಅದರಲ್ಲಿದ್ದ 1 ಕೆಜಿಗೂ ಹೆಚ್ಚಿನ ತೂಕದ ಆಭರಣಗಳನ್ನು ದೋಚಿ ಬೆಳ್ಳಿ ವಸ್ತುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಪ್ರಶಾಂತ್ ಅವರು ಇದೇ ತಿಂಗಳ 15 ರಂದು ನಡೆಯಲಿದ್ದ ಸಂಬಂಧಿಕರ ಮದುವೆಗಾಗಿ ಆಭರಣಗಳನ್ನು ತಂದಿಟ್ಟಿದ್ದರು. ಅಲ್ಲದೆ, ಪ್ರಶಾಂತ್ ಅವರ ಅಮೆರಿಕದಲ್ಲಿರುವ ಸಹೋದರಿ ಕೂಡ ಚಿನ್ನಾಭರಣಗಳನ್ನು ತಂದಿಟ್ಟಿದ್ದು, ಅವುಗಳೆಲ್ಲವನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.

ಕೇವಲ 3 ಗಂಟೆಯ ಒಳಗೆ ಕಳ್ಳತನ ನಡೆದಿದ್ದು, ಪರಿಚಯಸ್ಥರೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ