ವರ್ಬೆಟಲ್-2017

Kannada News

01-08-2017 323

ಸ್ಪೆಷಲ್ ರಿಪೋರ್ಟ್ ಓದುಗರೇ …ಪ್ರತಿವರ್ಷ ಆಯೋಜಿಸಲಾಗುವ ವರ್ಬೆಟಲ್ ಚರ್ಚಾ ಸ್ಪರ್ಧೆಗಳ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ.  2005ನೇ ಇಸವಿಯಿಂದಲೂ, ಕರ್ನಾಟಕದಲ್ಲಿ ರಾಜ್ಯಮಟ್ಟದ ವರ್ಬೆಟಲ್ ಚರ್ಚಾ ಸ್ಪರ್ಧೆಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಇದೀಗ, 13ನೇ ವರ್ಷದ ವರ್ಬೆಟಲ್ ವಾದವಿನಿಮಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ವರ್ಬೆಟಲ್, ಭಾರತದ ಅತ್ಯಂತ ದೊಡ್ಡ ಡಿಬೇಟ್ ತರಬೇತಿ ಮತ್ತು ಉತ್ತೇಜಕ ಸಂಸ್ಥೆ. ಕಳೆದ 13 ವರ್ಷಗಳ ಹಿಂದೆ ವರ್ಬೆಟಲ್ ಆರಂಭವಾದಾಗಿನಿಂದಲೂ ಕರ್ನಾಟಕ ರಾಜ್ಯ ಸೇರಿದಂತೆ, ದಕ್ಷಿಣ ಭಾರತದಲ್ಲಿ ಮತ್ತು ದೇಶದ ಇತರ ಹಲವು ಸ್ಥಳಗಳಲ್ಲಿ, ದೊಡ್ಡ ಮಟ್ಟದ ಚರ್ಚಾ ಕೂಟಗಳನ್ನು ಆಯೋಜಿಸುತ್ತಿದೆ. ವರ್ಬೆಟಲ್, ತನ್ನ ವಿಶಿಷ್ಟ ಚರ್ಚಾ ನಮೂನೆಗಳ ಮೂಲಕ ವಿಶ್ವಾದ್ಯಂತ ಇರುವ ಪ್ರಖ್ಯಾತ ಚರ್ಚಾ ಸಂಸ್ಥೆಗಳ ಗಮನ ಸೆಳೆದಿದೆ.

ವರ್ಬೆಟಲ್-2017ರ ಚರ್ಚಾ ಸ್ಪರ್ಧೆಗಳು, ಇದೇ ಆಗಸ್ಟ್ 1 ರಿಂದ ಸೆಪ್ಟಂಬರ್ 13ರ ವರೆಗೂ ನಡೆಯಲಿದೆ. ರಾಜ್ಯದ  ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು, ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವರ್ಬೆಟಲ್ ಇಂಗ್ಲಿಷ್ ವಿಭಾಗದಲ್ಲಿ 8 ರಿಂದ 12 ವರ್ಷ ವಯಸ್ಸಿನವರಿಗೆ ವರ್ಬೆಟಲ್ ಬಿಗಿನರ್‌, 12 ರಿಂದ 16 ವಯೋಮಿತಿಯವರಿಗೆ ವರ್ಬೆಟಲ್ ಜೂನಿಯರ್‌, 16 ರಿಂದ 24ರ ವಯೋಮಿತಿಯವರಿಗೆ ವರ್ಬೆಟಲ್ ಸೀನಿಯರ್‌ ಸ್ಪರ್ಧೆಗಳು ನಡೆಯಲಿವೆ.

2005ರಿಂದ ಇಲ್ಲಿಯವರೆಗೂ ಹತ್ತಾರು ಪ್ರಮುಖ ಇಂಗ್ಲಿಷ್ ಚರ್ಚಾ ಸ್ಪರ್ಧೆಗಳನ್ನು, ಚಿಂತನ ಕೂಟಗಳನ್ನು ಆಯೋಜಿಸುತ್ತಾ ಬಂದಿರುವ ವರ್ಬೆಟಲ್, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮದ ಶಾಲೆಗಳ ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು, ಅವರಿಗೂ ಕೂಡ ತರ್ಕಬದ್ಧ ಚಿಂತನೆಯ ಅನುಭವ ನೀಡುತ್ತಿದೆ. ಈ ನಿಟ್ಟಿನಲ್ಲಿ,  ಕಳೆದ ನಾಲ್ಕು ವರ್ಷಗಳಿಂದಲೂ ವರ್ಬೆಟಲ್ ಕನ್ನಡ ಚರ್ಚಾ ಸ್ಪರ್ಧೆ ಏರ್ಪಡಿಸುತ್ತಿದೆ. ಈ ಬಾರಿಯ ವರ್ಬೆಟಲ್ ಕನ್ನಡ ಸ್ಪರ್ಧೆಗಳಲ್ಲಿ 12 ರಿಂದ 16 ವರ್ಷ ವಯಸ್ಸಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

ವರ್ಬೆಟಲ್ ಬಿಗಿನರ್‌ ವಿಭಾಗದ ಸ್ಪರ್ಧೆಗಳು ಬೆಂಗಳೂರಿನಲ್ಲಿ ನಡೆಯಲಿವೆ. ಉಳಿದ ವಿಭಾಗಗಳ ಆರಂಭಿಕ ಸುತ್ತಿನ ಸ್ಪರ್ಧೆಗಳು ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು ನಗರಗಳಲ್ಲಿ ನಡೆಯಲಿವೆ. ವರ್ಬೆಟಲ್ ಫೈನಲ್‌ ಸ್ಪರ್ಧೆಗಳು  ಬೆಂಗಳೂರಿನಲ್ಲಿ ನಡೆಯಲಿವೆ.

ಈ ಬಾರಿ ರಾಷ್ಟ್ರೀಯ ಮಟ್ಟದಲ್ಲೂ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದ್ದು, ಒಟ್ಟು 6,000 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕ, ಪಶ್ಚಿಮ ಬಂಗಾಳ, ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಪ್ರಾದೇಶಿಕ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಅಲ್ಲಿ ಆಯ್ಕೆಯಾಗುವ ತಂಡಗಳು ಅಂತಿಮ ಸುತ್ತಿನಲ್ಲಿ ಭಾಗವಹಿಸಲಿವೆ. ಒಟ್ಟಾರೆ, 53 ದಿನಗಳ ಕಾಲ, ಭಾರತದ 11 ನಗರಗಳಲ್ಲಿ ವರ್ಬೆಟಲ್ ಚರ್ಚಾ ಸ್ಪರ್ಧೆಗಳು ನಡೆಯಲಿವೆ.

ಈ ಬಾರಿಯ ವರ್ಬೆಟಲ್ ಜೂನಿಯರ್ ವಿಭಾಗದ ವಿಜೇತ ತಂಡಕ್ಕೆ ವಿಭಾಗದಲ್ಲಿ 1 ಲಕ್ಷ ರೂಪಾಯಿಗಳ ನಗದು ಬಹುಮಾನ ದೊರೆಯಲಿದೆ. ಬಿಗಿನರ್‌ ವಿಭಾಗದ ವಿಜೇತ ತಂಡಕ್ಕೆ 30 ಸಾವಿರ ರೂಪಾಯಿಗಳು, ಸೀನಿಯರ್‌ ವಿಭಾಗದ ವಿಜೇತರಿಗೆ 50 ಸಾವಿರ ರೂಪಾಯಿಗಳ ಬಹುಮಾನ ಸಿಗಲಿದೆ. ವರ್ಬೆಟಲ್ ಕನ್ನಡ ವಿಭಾಗದಲ್ಲಿ ಚಾಂಪಿಯನ್ ಆಗುವ ತಂಡಕ್ಕೆ 20 ಸಾವಿರ ರೂಪಾಯಿಗಳ ನಗದು ಬಹುಮಾನ ದೊರೆಯಲಿದೆ. ಎಲ್ಲಾ  ವಿಭಾಗಗಳಲ್ಲಿ ಫೈನಲ್ ಹಂತಕ್ಕೆ ಬರುವ ತಂಡಗಳಿಗೆ ಮತ್ತು ಚಾಂಪಿಯನ್ ಶಿಪ್ ಗೆಲ್ಲುವ ತಂಡಗಳ ಮಾರ್ಗದರ್ಶಕರಿಗೂ ನಗದು ಬಹುಮಾನ ನೀಡಲಾಗುತ್ತದೆ.

ACT Fiber Net ಕಂಪನಿ ಸತತ ಎರಡನೇ ವರ್ಷ ವರ್ಬೆಟಲ್ ಚರ್ಚಾ ಸ್ಪರ್ಧೆಗಳ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡಿದೆ. ಪ್ರಸಿದ್ಧ Microlabs ಸಂಸ್ಥೆ ಮತ್ತು Vencobb ಕಂಪನಿಗಳು ವರ್ಬೆಟಲ್ ಚರ್ಚಾ ಸ್ಪರ್ಧೆಗಳ ಆಯೋಜನೆಗೆ ನೆರವಾಗಿವೆ. ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜು, ರಾಜ್ಯ ಮಟ್ಟದ ವರ್ಬೆಟಲ್ ಸ್ಪರ್ಧೆಗಳ ಆತಿಥ್ಯ ವಹಿಸಲಿದೆ. ಪ್ರಖ್ಯಾತ ಆರ್‌ವಿ ಶಿಕ್ಷಣ ಸಂಸ್ಥೆಯ ಎನ್ಎಂಕೆಆರ್‌ವಿ ಕಾಲೇಜಿನ ಶಾಶ್ವತಿ ಸಭಾಂಗಣದಲ್ಲಿ ಬೆಂಗಳೂರು ವಲಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ.

ಪ್ರಜಾತಂತ್ರದ ಮೌಲ್ಯಗಳು, ವಾಕ್ ಸ್ವಾತಂತ್ರ್ಯ, ಸಹನೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದೇ ವರ್ಬೆಟಲ್ ನ ಉದ್ದೇಶ. ವರ್ಬೆಟಲ್ ವಾದ ವಿನಿಮಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳ ಚಿಂತನಾ ಲಹರಿ ಮತ್ತು ಬೌದ್ಧಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಹೊಸ ರೀತಿಯ ಮಾತುಗಾರಿಕೆ, ಸೊಗಸಾದ  ವಾದ ಮಂಡನೆ ಶೈಲಿ ರೂಪಿಸಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲೇ ಪ್ರಬಲ, ವಿಚಾರಪೂರ್ಣ ತರ್ಕಬದ್ಧವಾದ ಮಾತುಗಾರಿಕೆ ಬೆಳೆಸಿಕೊಳ್ಳಲು ವರ್ಬೆಟಲ್ ನೆರವಾಗುತ್ತದೆ.

ವರ್ಬೆಟಲ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಯಾವುದೇ ಲಾಭದ ಉದ್ದೇಶವಿಲ್ಲದೆ ಸೇವೆ ಸಲ್ಲಿಸುತ್ತಿದೆ. ಪ್ರಖ್ಯಾತ ರಾಜಕೀಯ ವಿಶ್ಲೇಷಕ, ಪತ್ರಕರ್ತ ಮತ್ತು ಸಂವಹನ ತಜ್ಞ ದೀಪಕ್ ತಿಮ್ಮಯ ವರ್ಬೆಟಲ್ ಸಂಸ್ಥೆಯ ರೂವಾರಿ.

ವರ್ಬೆಟಲ್ ಸಂಸ್ಥೆ, ಪ್ರಾಥಮಿಕ ಶಾಲೆಯ ಮಕ್ಕಳಿಂದ ಆರಂಭಿಸಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಮಟ್ಟದ ವಿದ್ಯಾರ್ಥಿಗಳಿಗೆ ಸಂವಹನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ತರಬೇತಿ ನೀಡುತ್ತದೆ. ಇದರ ಜೊತೆಗೆ ಶಿಕ್ಷಕರು ಮತ್ತು ವೃತಿಪರ ವರ್ಗದವರಿಗೂ ತರಬೇತಿ ನೀಡುತ್ತದೆ. ವರ್ಬೆಟಲ್ ಸಂಸ್ಥೆ ನೀಡುವ ತರಬೇತಿಯಿಂದ ವಿದ್ಯಾರ್ಥಿಗಳು ಮತ್ತು ನಾಗರಿಕರು ಉದಾರತೆ, ಮುಕ್ತ ಚಿಂತನೆ ಬೆಳೆಸಿಕೊಳ್ಳಲು ಪ್ರೇರೇಪಣೆ ದೊರೆಯುತ್ತದೆ. ಇದರ ಜೊತೆಗೆ ಸಮಾಜದಲ್ಲಿ  ಸ್ವೀಕಾರಾರ್ಹವಾದ ಹಾಗೂ ಜವಾಬ್ದಾರಿಯುತ ನಡವಳಿಕೆಯ ರೀತಿ ನೀತಿಗಳನ್ನು ಬೆಳೆಸಿಕೊಳ್ಳುವಲ್ಲಿ  ನೆರವಾಗುತ್ತದೆ.

ವರ್ಬೆಟಲ್‌ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ತರ್ಕಜ್ಞಾನ ದೊರೆಯುತ್ತದೆ. ಅದು, ಸ್ಪರ್ಧಾತ್ಮಕ ಚಿಂತನೆ ಬೆಳೆಸಿಕೊಂಡು ಮುಂಚೂಣಿಗೆ ಹೋಗಲು ಮತ್ತು ನಾಯಕತ್ವ ಬೆಳೆಸಿಕೊಳ್ಳಲು ನೆರವಾಗುತ್ತದೆ. ವರ್ಬೆಟಲ್‌ನಲ್ಲಿ ಪ್ರಜಾತಾಂತ್ರಿಕ ನಡವಳಿಕೆಗಳನ್ನು ಕಲಿಯುವುದರಿಂದ ವಿದ್ಯಾರ್ಥಿಗಳು ಬದುಕನ್ನು ಕಲಿಯುತ್ತಾರೆ, ಉತ್ತಮ ನಾಗರಿಕರಾಗುತ್ತಾರೆ. ಆ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣರಾಗುತ್ತಾರೆ.

ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಚರ್ಚಾ ವೇದಿಕೆಯಾಗಿ ಬೆಳೆಯುವ ಗುರಿ ಹೊಂದಿರುವ ವರ್ಬೆಟಲ್ ಸಂಸ್ಥೆ,  ಪ್ರಜಾತಾಂತ್ರಿಕ ಆದರ್ಶ ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡುವ ಉದ್ದೇಶ ಹೊಂದಿದೆ. ಇವೆಲ್ಲಾ ಕಾರ್ಯಸಾಧನೆಗಳ ಮೂಲಕ ವರ್ಬೆಟಲ್,  ಜಗತ್ತಿನ ಅತಿ ದೊಡ್ಡ ಜ್ಞಾನ ಪ್ರಸರಣ ಸಂಸ್ಥೆಯಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇರಿಸಿಕೊಂಡು ಸೇವೆ ಸಲ್ಲಿಸುತ್ತಿದೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ