ಟಾಲಿವುಡ್ ಡ್ರಗ್ಸ್ ಪ್ರಕರಣ: ನಟ ಆನಂದ್ ಕೃಷ್ಣ ವಿಚಾರಣೆ !

Kannada News

01-08-2017

ಹೈದರಾಬಾದ್: ಈ ತಿಂಗಳ ಆರಂಭದಲ್ಲಿ ಬೆಳಕಿಗೆ ಬಂದ ಟಾಲಿವುಡ್ ಡ್ರಗ್ಸ್ ಹಗರಣ ಸಂಬಂಧ ತೆಲಂಗಾಣ ಅಬಕಾರಿ ಇಲಾಖೆ ಎಸ್.ಐ.ಟಿ ಅಧಿಕಾರಿಗಳ ಮುಂದೆ ನಟ ಆನಂದ್ ಕೃಷ್ಣ ನಂದು ಹಾಜರಾಗಿದ್ದಾರೆ. ಹೆಸರಂತ ಗಾಯಕಿ ಗೀತ ಮಾಧುರಿಯ ಪತಿ ಯಾಗಿರುವ ನಂದು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.  ಡ್ರಗ್ಸ್ ಪ್ರಕರಣ ಸಂಬಂಧ ಇದುವರೆಗೂ ಎಸ್.ಐ.ಟಿ ಅಧಿಕಾರಿಗಳು ತೆಲುಗು ಸಿನಿಮಾ ರಂಗದ ನಟರು ಹಾಗೂ ನಿರ್ದೇಶಕರು ಸೇರಿದಂತೆ ಒಟ್ಟು 13 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ತೆಲುಗು ಸಿನಿಮಾ ರಂಗದ ಘಟಾನುಘಟಿ ಕಲಾವಿದರ ಹೆಸರುಗಳು ಕೇಸ್ ಜೊತೆ ಥಳುಕು ಹಾಕಿಕೊಂಡಿದೆ. ಕಲಾವಿದರಿಗೆ ಡ್ರಗ್ ಕೇಸ್ ಸಂಬಂಧ ಲಿಂಕ್ ಇರುವ ಶಂಕೆಯಲ್ಲಿ ಎಸ್.ಐ.ಟಿ ವಿಚಾರಣೆ ನಡೆಸುತ್ತಿದೆ.

ಎಸ್. ಐ.ಟಿ ಅಧಿಕಾರಿಗಳು ಈ ಹಿಂದೆ ನಿರ್ದೇಶಕ ಪುರಿ ಜಗನ್ನಾಥ್, ಛಾಯಾಗ್ರಾಹಕ ಶ್ಯಾಮ್ ಕೆ. ನಾಯ್ಡು, ನಟರಾದ ಪಿ. ಸುಬ್ಬರಾಜು, ಕರುಣ್ ಕುಮಾರ್, ನವದೀಪ್ ಮತ್ತು ರವಿತೇಜಾ, ನಟಿಯರಾದ ಚಾರ್ಮಿ ಕೌರ್ ಮತ್ತು ಮುಮೈತ್ ಖಾನ್ ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸಿತ್ತು. ಎಸ್.ಐ.ಟಿ ನಡೆಸುತ್ತಿರುವ ಎಲ್ಲಾ ವಿಚಾರಣೆಗಳನ್ನು ವಿಡಿಯೋ ಮಾಡುತ್ತಿದ್ದು, ವಿಚಾರಣೆಗೊಳಪಟ್ಟವರ, ದೇಹದ ರಕ್ತ, ಕೂದಲು ಮತ್ತು ಉಗುರುಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಹೈದರಾಬಾದ್ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕಾ ,ಡಚ್ ಪ್ರಜೆಗಳು ಸೇರಿದಂತೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ