ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ನಿಧನ...!

Kannada News

31-07-2017 449

ಬೆಂಗಳೂರು: ಹಿರಿಯ ಮುಖಂಡ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಶಿವಪ್ಪ ವಿಧಿ ವಶರಾಗಿದ್ದಾರೆ. ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 89 ವರ್ಷ ವಯಸ್ಸಾಗಿತ್ತು. ನಗರದ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಅಪಾರ ಬೆಂಬಲಿಗರನ್ನು ಅಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಶಿವಪ್ಪ, ಪಕ್ಷದ ಪ್ರಮುಖ ನಿರ್ಮಾತೃಗಳಲ್ಲಿ ಪ್ರಮುಖರಾಗಿದ್ದಾರೆ. ಸಕಲೇಶಪುರ ತಾಲೂಕಿನ ಕುಂಬರಹಳ್ಳಿಯವರಾದ ಶಿವಪ್ಪ, ಮೂರು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು. ಎರಡು ಬಾರಿ ವಿಧಾನಸಭೆ ಮತ್ತು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅವರು ಕಳೆದ ಐದು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದರು. ಇವರು ಪತ್ನಿ, ಮೂವರು ಮಕ್ಕಳು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. 1929ರ ಸೆಪ್ಟೆಂಬರ್ 27ರಂದು ಸೋಮವಾರ ಪೇಟೆಯ ಬೇಳೂರು ಗ್ರಾಮದಲ್ಲಿ ಜನಿಸಿದ ಶಿವಪ್ಪನ ಕಾಫಿ ಬೆಳೆಗಾರರ ಕುಟುಂಬದವರಾಗಿದ್ದರು. ಹಾಸನದ ಪ್ಲಾಂಟರ್ಸ್ ಕಾಫಿ ಕ್ಯೂರಿಂಗ್ ವರ್ಕರ್ಸ್ ನ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರೂ ಮತ್ತು ಮಲೆನಾಡು ಇಂಜನಿಯರಿಂಗ್ ಕಾಲೇಜಿನ (ಎಮ್‍ಸಿಇ) ಸಂಸ್ಥಾಪಕ ಸದಸ್ಯರೂ ಆಗಿದ್ದರು.

ಶಿವಪ್ಪನವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಬುನಾದಿ ಹಾಕಿದವರಲ್ಲಿ ಒಬ್ಬರಾದ ಶಿವಪ್ಪ ನೇರ ಮಾತಿಗೆ ಹೆಸರಾಗಿದ್ದರು. ಎಲ್ಲ ಪಕ್ಷಗಳ ಪ್ರಮುಖರೊಂದಿಗೆ ಉತ್ತಮ ಸ್ನೇಹ ಹಾಗೂ ಒಡನಾಟ ಹೊಂದಿದ್ದರು. ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದ್ದಾರೆ.

ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ಸಂತಾಪ ಸಂದೇಶದಲ್ಲಿ ಪಕ್ಷವನ್ನು ಪರಿಣಾಮಕಾರಿಯಾಗಿ ಕಟ್ಟಿ ಬೆಳೆಸಿದ ಬಿ.ಬಿ. ಶಿವಪ್ಪ, ಹಲವಾರು ಮಂದಿಗೆ ಮಾರ್ಗದರ್ಶಕರಾಗಿದ್ದರು. ಅವರ ಪಕ್ಷ ಸೇವೆಯನ್ನು ನಾವೆಲ್ಲಾ ಸದಾ ಸ್ಮರಿಸುತ್ತೇವೆ. ಶಾಸಕರಾಗಿಯೂ ಅವರು ಆದರ್ಶ ಪ್ರಾಯರಾಗಿದ್ದರು. ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾಗಿ ಹೇಳಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತ ಕುಮಾರ್, ರಮೇಶ್ ಜಿಗಜಿಣಗಿ ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಿವಪ್ಪನವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕುಂಬರಹಳ್ಳಿಯ ಅವರ ಕಾಫಿ ಎಸ್ಟೇಟ್‍ನಲ್ಲಿ ನಾಳೆ ಅಪರಾಹ್ನ ನಡೆಯಲಿದೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ