ರೆಸಾರ್ಟ್ ರಾಜಕಾರಣ ಮಡಿಕೇರಿಗೆ ಶಿಫ್ಟ್..?

Kannada News

31-07-2017 522

ಬೆಂಗಳೂರು: ಗುಜರಾತ್‌ನ ರಾಜ್ಯಸಭಾ ಚುನಾವಣೆಯಲ್ಲಿ ಕೈ ಶಾಸಕರ ಒಗ್ಗಟ್ಟು ಮುರಿಯಲು ಗುಜರಾತಿನಿಂದ ಬಿಜೆಪಿಯ ಮುಖಂಡರ ತಂಡವೊಂದು ಬೆಂಗಳೂರಿಗೆ ಬಂದಿಳಿದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಮನಗರದ ರೆಸಾರ್ಟ್‌ನಿಂದ ಕಾಂಗ್ರೆಸ್‌ ಶಾಸಕರ ವಾಸ್ತವ್ಯವನ್ನು ಬದಲಿಸಲು ರಾಜ್ಯ ಕಾಂಗ್ರೆಸ್ ಮುಖಂಡರು ಮುಂದಾಗಿದೆ. ಶಾಸಕರು ಬಿಜೆಪಿಯ ಕೈಗೆ ಸಿಗದಂತೆ ನೋಡಿಕೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ಹರಸಾಹಸ ನಡೆಸಿದ್ದು, ಶಾಸಕರ ವಾಸ್ತವ್ಯವನ್ನು ರಾಮನಗರದಿಂದ ಬೇರೆಡೆಗೆ ಬದಲಿಸುವ ಚಿಂತನೆ ನಡೆದಿದ್ದು, ಇಂದು ರಾತ್ರಿಯೊಳಗೆ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಮಡಿಕೇರಿಗೆ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು  ಹೇಳಲಾಗುತ್ತಿದೆ.  

ರಾಜ್ಯಸಭಾ ಚುನಾವಣೆಯಲ್ಲಿ ಶತಾಯ-ಗತಾಯ ಕಾಂಗ್ರೆಸ್‌ನ ಅಹಮದ್ ಪಟೇಲ್‌ ರವರನ್ನು ಸೋಲಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಬಿಜೆಪಿ ವರಿಷ್ಠರು, ಅದಕ್ಕಾಗಿ ತಮ್ಮದೇ ಆದ ವ್ಯೂಹ ರಚನೆ ಮಾಡಿ ಅದರಂತೆ ರಾಮನಗರದ ರೆಸಾರ್ಟ್‌ನಲ್ಲಿರುವ ಕೈ ಶಾಸಕರನ್ನು ಸೆಳೆಯಲು, ಗುಜರಾತ್‌ನಿಂದ ಬಿಜೆಪಿ ನಾಯಕರ ತಂಡವೊಂದನ್ನು ಬೆಂಗಳೂರಿಗೆ ಕಳುಹಿಸಿದೆ ಎಂಬ ಖಚಿತ ಮಾಹಿತಿಗಳು ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗಿದ್ದು, ಇದು ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ. ಗುಜರಾತ್‌ನಿಂದ ಬಂದಿರುವ ಬಿಜೆಪಿ ಮುಖಂಡರಿಗೆ ಶಾಸಕರ ಸಂಪರ್ಕ ಸಾಧ್ಯವಾಗದ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು ಪ್ರತಿ ತಂತ್ರ ರೂಪಿಸಿದ್ದು, ರಾಮನಗರದಿಂದ ಶಾಸಕರ ವಾಸ್ತವ್ಯವನ್ನು ಮಡಿಕೇರಿಗೆ ಸ್ಥಳಾಂತರಿಸಿ ತಿರುಗೇಟು ನೀಡಲು ಕಾಂಗ್ರೆಸ್ ಮುಂದಾಗಿದೆ.

ಈಗ ಗುಜರಾತ್‌ನ ಕೈ ಶಾಸಕರು ತಂಗಿರುವ ರಾಮನಗರದ ಈಗಲ್ ಟನ್ ರೆಸಾರ್ಟ್ ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಗುಜರಾತ್‌ನಿಂದ ಬಂದಿರುವ ಬಿಜೆಪಿ ನಾಯಕರು ಈ ಶಾಸಕರನ್ನು ಸಂಪರ್ಕಿಸುವುದು ಸುಲಭ. ಹಾಗಾಗಿ ದೂರದ ಮಡಿಕೇರಿಗೆ ಈ ಶಾಸಕರನ್ನು ಸ್ಥಳಾಂತರಿಸಿದರೆ ಬಿಜೆಪಿ ಸಂಪರ್ಕಕ್ಕೆ ಶಾಸಕರು ಸಿಗುವುದು ಕಷ್ಟವಾಗುತ್ತದೆ ಎಂಬ ಸಲಹೆಗಳ ಹಿನ್ನೆಲೆಯಲ್ಲಿ ಕೈ ಶಾಸಕರ ವಾಸ್ತವ್ಯ ಬದಲಿ ಕಾರ್ಯಾಚರಣೆಗೆ ತೀರ್ಮಾನಗಳು ಆಗಿವೆ. ಗುಜರಾತ್‌ನಿಂದ ಬಂದಿರುವ ಶಾಸಕರುಗಳ ಒಗ್ಗಟ್ಟು ಕಾಪಾಡಿ ಅವರ ಯೋಗಕ್ಷೇಮದ ಜವಾಬ್ದಾರಿ ಹೊತ್ತಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಈಗಾಗಲೇ ಮಡಿಕೇರಿಯ ಐಷಾರಾಮಿ ರೆಸಾರ್ಟ್‌ನಲ್ಲಿ ಶಾಸಕರಿಗೆ ಕೊಠಡಿಗಳನ್ನು ಕಾಯ್ದಿರಿಸುವ ಕೆಲಸ ನಡೆಸಿದ್ದು, ಇಂದು ರಾತ್ರಿಯೊಳಗೆ ಮಡಿಕೇರಿಗೆ ತೆರಳುವ ಸಾಧ್ಯತೆಗಳು ಇದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ.

ರಾಮನಗರದ ರೆಸಾರ್ಟ್‌ನಲ್ಲೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಹ ತಂಗಿದ್ದು, ಗುಜರಾತ್‌ ಶಾಸಕರ ಚಲನವಲನಗಳ ಮೇಲೆ ನಿಗಾ ವಹಿಸಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಶಾಸಕರು ಬಿಜೆಪಿ ಸಂಪರ್ಕಕ್ಕೆ ಸಿಗದಂತೆ ಅವರು ಶತ ಪ್ರಯತ್ನ ನಡೆಸಿರುವುದು ಗುಟ್ಟೇನೂ ಅಲ್ಲ. ಕಾಂಗ್ರೆಸ್ ಶಾಸಕರ ಒಗ್ಗಟ್ಟು ಕಾಪಾಡಲು ಎಲ್ಲಾ ಶಾಸಕರನ್ನು ರೆಸಾರ್ಟ್‌ಗೆ ಕರೆ ತಂದಿದ್ದರೂ ಗುಜರಾತ್‌ನ ಬಿಜೆಪಿ ನಾಯಕರು, ಶಾಸಕರನ್ನು ಸೆಳೆಯುವ ಪ್ರಯತ್ನಗಳನ್ನು ಕೈಬಿಟ್ಟಿಲ್ಲ. ರೆಸಾರ್ಟ್‌ನಲ್ಲಿರುವ ಶಾಸಕರ ಸಂಪರ್ಕಕ್ಕೆ ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸಿದ್ದಾರೆ. ಅದರ ಭಾಗವಾಗಿಯೇ ಕೆಲ ಮುಖಂಡರು ಗುಟ್ಟಾಗಿ ಬೆಂಗಳೂರಿಗೆ ಬಂದಿಳಿದಿದ್ದು, ಆಪರೇಷನ್ ಕಮಲದ ಕಾರ್ಯಾಚರಣೆಯನ್ನು ಸದ್ದಿಲ್ಲದೆ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ