ವೀರಶೈವ ಮಹಾಸಭಾಗೆ ಎಂ.ಬಿ ಪಾಟಿಲ ಪತ್ರ !

Kannada News

31-07-2017

ಬೆಂಗಳೂರು: ‘ವೀರಶೈವ ಲಿಂಗಾಯತ’ ಧರ್ಮಕ್ಕೆ ಮಾನ್ಯತೆ ಸಿಗುವುದಿಲ್ಲ. ಈ ಕಟು ಸತ್ಯ ಅರ್ಥ ಮಾಡಿಕೊಂಡು ಸ್ವತಂತ್ರ ‘ಲಿಂಗಾಯತ ಧರ್ಮ’ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಪ್ರತಿಪಾದಿಸಿದ್ದು, ಈ ಸಂಬಂಧ ಅವರು ವೀರಶೈವ ಮಹಾಸಭಾಕ್ಕೆ ಪತ್ರ ಬರೆದಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಎಂ.ಬಿ. ಪಾಟೀಲ ಅವರು ಪತ್ರ ಬರೆದಿದ್ದು, ‘ವೀರಶೈವ ಲಿಂಗಾಯ ಸ್ವತಂತ್ರ ಧರ್ಮ, ರಾಷ್ಟ್ರೀಯ ಅಲ್ಪಸಂಖ್ಯಾತರ ಸ್ಥಾನ ಮಾನ ಮತ್ತು ಜನಗಣತಿಯಲ್ಲಿ ಪ್ರತ್ಯೇಕ ಕೋಡ್‌/ಕಾಲಂ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ್ದ ಪತ್ರಕ್ಕೆ(2013ರ ಜುಲೈ 31) ನಾನು ಹಾಗೂ ನನ್ನಂತೆ ಹಲವಾರು ಜನಪ್ರತಿನಿಧಿಗಳು ಸಹಿ ಮಾಡಿದ್ದು, ಆದರೆ ನನಗೀಗ ಸಹಿ ಮಾಡಿರುವುದು ತಪ್ಪು ಎಂದು ಮನವರಿಕೆಯಾಗಿದೆ’ ಎಂದು ಹೇಳಿದ್ದಾರೆ. ‘ನಂತರದ ದಿನಮಾನಗಳಲ್ಲಿ ನಾನು ಕಂಡುಕೊಂಡಿರುವ ಸತ್ಯ ಏನೆಂದರೆ ಬಸವಾದಿ ಶರಣರ ಷಟ್‌ ಸ್ಥಲ ವಚನಗಳನ್ನು ಅಮೂಲಾಗ್ರವಾಗಿ ಗಮನಿಸಿದಾಗ, ವೀರಶೈವ ಮತ್ತು ಲಿಂಗಾಯತದಲ್ಲಿ ಪ್ರತ್ಯೇಕತೆಯನ್ನು ಕಾಣಬಹುದು. ಹಾಗೆಯೇ ಡಾ.ಹಿರೇಮಲ್ಲೂರು ಈಶ್ವರನ್‌ ಅವರು ಪ್ರಕಟಿಸಿರುವ ಎರಡು ಗ್ರಂಥಗಳಲ್ಲಿ ಲಿಂಗಾಯತವು ಒಂದು ಸ್ವತಂತ್ರ ಅಸ್ಥಿತ್ವವುಳ್ಳ ಧರ್ಮ ಎಂಬುದು ಖಚಿತವಾಗುತ್ತದೆ. ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಮಾರ್ಗ ಸಂಪುಟಗಳಲ್ಲಿ ಪ್ರಕಟವಾದ ಹಲವಾರು ಲೇಖನಗಳಿಂದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂದು ಮನವರಿಕೆಯಾಗುತ್ತದೆ‘ ಎಂದಿದ್ದಾರೆ.

‘ಭಾರತ ಸಂವಿಧಾನ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ 800 ವರ್ಷಗಳ ಹಿಂದೆಯೇ ಸ್ಥಾಪಿತವಾಗಿರುವ ಲಿಂಗಾಯತ ಧರ್ಮದ ಕುರಿತು ಬ್ರಿಟಿಷ್ ಗೆಜೆಟಿಯರ್‌ಗಳಲ್ಲಿ, ಕಿಟಲ್‌ ನಿಘಂಟಿನಲ್ಲಿ ಉಲ್ಲೇಖವಾಗಿದ್ದು, ಬಸವಣ್ಣ ಈ ಧರ್ಮದ ಸ್ಥಾಪಕ ಎಂದು ಹೇಳಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ವೀರಶೈವ ಮಹಾಸಭೆಯವರು ಹಿಂದಿನ ಪ್ರಮಾದಗಳನ್ನು ಸರಿಪಡಿಸಿ, ವೀರಶೈವ–ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಎಂದು ಮಾನ್ಯತೆ ಸಿಗುವುದಿಲ್ಲ ಎಂಬ ಕಟು ಸತ್ಯವನ್ನು ಅರಿತುಕೊಂಡು ಇನ್ನು ಮುಂದಾದರೂ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಅಥವಾ ವಿವಿಧ ವೇದಿಕೆಗಳಿಗೆ ಲಿಂಗಾಯತ ಸ್ವತಂತ್ರ ಧರ್ಮ ಎಂದು ಪರಿಗಣಿಸಲು ಒತ್ತಾಸೆಯನ್ನು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಾಡಿನ ಹಿರಿಯ ಮಠಾಧೀಶರಾದ ಇಳಕಲ್ಲಿನ ಡಾ.ಮಹಾಂತಪ್ಪ ಅವರು, ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ, ಬಾಲ್ಕಿಯ ಡಾ.ಬಸವಲಿಂಗ ಪಟ್ಟದೇವರು, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಚಿತ್ರದುರ್ಗದ ಮುರುಘಾ ಶರಣರು, ನಾಗನೂರು ಸಿದ್ಧರಾಮ ಸ್ವಾಮೀಜಿ, ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಸೇರಿದಂತೆ ಡಾ.ಮಹಾದೇವಪ್ಪ, ಡಾ.ಶಿವಾನಂದ ಜಾಮದಾರ, ಡಾ.ವೀರಣ್ಣ ರಾಜೂರ, ರಂಜಾನ್‌ ದರ್ಗಾ ಮತ್ತಿತರ ವಿದ್ವಾಂಸರನ್ನೊಳಗೊಂಡ ಹಾಗೂ ವೀರಶೈವ ಮತದ ಪ್ರತಿಪಾದಕರನ್ನು, ಪಂಚಪೀಠಾಧೀಶ್ವರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆಯನ್ನು ಜರುಗಿಸಿ, ಚರ್ಚೆ ನಡೆಸಿ ಅದರ ಆಧಾರದ ಮೇಳೆ ಲಿಂಗಾಯತರು, ವೀರಶೈವರು ಒಗ್ಗೂಡಿ ಒಟ್ಟಾಭಿಪ್ರಾಯ ಮೂಡಿಸಿ, ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯನ್ನು ಆಗ್ರಹಿಸುವ ಅಗತ್ಯತೆ ಇದೆ’ ಎಂದು ಎಂ.ಬಿ. ಪಾಟೀಲ ಅವರು ಪತ್ರದಲ್ಲಿ ವೀರಶೈವ ಮಹಾಸಭೆಗೆ ಒತ್ತಾಯಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ