ಕಾರಾಗೃಹಗಳ ಡಿಜಿಪಿ ನಿವೃತ್ತಿ !

Kannada News

31-07-2017

ಬೆಂಗಳೂರು: ಬಂಧೀಖಾನೆ ಮತ್ತು ಕಾರಾಗೃಹಗಳ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ)ರಾಗಿದ್ದ ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಎಸ್‍.ಪಿ ಸೇರಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಎಚ್.ಎನ್. ಸತ್ಯನಾರಾಯಣ ರಾವ್ ಅವರು ಸೋಮವಾರ ಸೇವೆಯಿಂದ ನಿವೃತ್ತರಾದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾಗೆ ವಿಶೇಷ ಸವಲತ್ತು ಒದಗಿಸಿದ ಆರೋಪದ ಹಿನ್ನೆಲೆಯಲ್ಲಿ 2 ವಾರಗಳ ಹಿಂದೆ ಕಡ್ಡಾಯ ರಜೆಯ ಮೇಲೆ ತೆರಳಿದ್ದ ರಾವ್ ಅವರು ಸೇವೆಯಿಂದ ನಿವೃತ್ತರಾಗಿದ್ದು, ಅವರು ಇನ್ನೂ ಡಿಐಜಿ ರೂಪಾ ಅವರ ವಿರುದ್ದ ಕಾನೂನು ಸಮರ ಸಾಧಿಸಲು ಸ್ವತಂತ್ರರಾಗಿದ್ದಾರೆ, ಏಕೆಂದರೆ ನಿವೃತ್ತರದ ನಂತರ ನ್ಯಾಯಾಲಯಕ್ಕೆ ಹೋಗಲು ಸಕಾರದ ಅನುಮತಿ ಬೇಕಾಗಿಲ್ಲ. ತುಮಕೂರು ಜಿಲ್ಲೆ ಪಾವಗಡದಲ್ಲಿ 1957ರ ಜುಲೈ 22 ರಂದು ಜನಿಸಿದ್ದ ಸತ್ಯನಾರಾಯಣ ರಾವ್ ಅವರು, ಪಾವಗಡದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಎಂಎಫ್‍ಎಸ್‍ಇಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ 1985ರ ಡಿಸೆಂಬರ್ 23 ರಂದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಕರ್ನಾಟಕ ಕೇಡರ್‍ ನ ಅಧಿಕಾರಿಯಾಗಿ ಹರಪನ ಹಳ್ಳಿಯಲ್ಲಿ ಎ.ಎಸ್.ಪಿ ಯಾಗಿ ವೃತ್ತಿ ಪ್ರಾರಂಭಿಸಿದ ರಾವ್, ಗುಲ್ಬರ್ಗ, ಬೀದರ್ ನಲ್ಲಿ ಎಸ್.ಪಿ ಯಾಗಿ, ಬೆಂಗಳೂರು ಕಮೀಷನರೇಟ್ ನ ಕೇಂದ್ರ ಸ್ಥಾನ, ಗುಪ್ತದಳ, ಉತ್ತರ ಹಾಗೂ ದಕ್ಷಿಣ ವಿಭಾಗದ ಡಿಸಿಪಿಯಾಗಿ, ಸಿಬಿಐನಲ್ಲಿ ಎಸ್.ಪಿ ಆಗಿ ಸೇವೆ ಸಲ್ಲಿಸಿದ್ದರು. ಡಿಐಜಿ ಹುದ್ದೆಗೆ ಬಡ್ತಿ ಪಡೆದು ಪಶ್ಚಿಮ ವಲಯದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಐಜಿಯಾಗಿ ಬಡ್ತಿ ಪಡೆದು, ಪೂರ್ವ ಲವಲಯದಲ್ಲಿ ಕರ್ತವ್ಯ ನಿರ್ವಹಿಸಿದ ನಂತರ ಲೋಕಾಯುಕ್ತ ಎಡಿಜಿಪಿಯಾಗಿ ಸುಮಾರು 4 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ನಂತರ ಅಗ್ನಿಶಾಮಕ ದಳಕ್ಕೆ ವರ್ಗಾವಣೆಗೊಂಡಿದ್ದ ಅವರು, ಡಿಜಿ ಹುದ್ದೆಗೆ ಬಡ್ತಿ ಪಡೆದು ಸುಮಾರು 1.5 ವರ್ಷಗಳ ಕಾಲ ಕಾರಾಗೃಹದ ಡಿಜಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ರಾವ್ ಅವರಿಗೆ ಇಲಾಖೆಯಲ್ಲಿನ ಗಣನೀಯ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ ರಾಷ್ಟ್ರಪದಕ ದೊರೆತಿದೆ.

ಇನ್ನೊಂದೆಡೆ ಹುಬ್ಬಳ್ಳಿ ಕಮೀಷನರ್ ನಿವೃತ್ತಿಯಾಗಿದ್ದಾರೆ.  ಹುಬ್ಬಳ್ಳಿ, ಧಾರವಾಡ ನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರು ಇಂದು ಸೇವೆಯಿಂದ ನಿವೃತ್ತರಾದರು. ಸುಮಾರು ಎರಡು ವರ್ಷಗಳ ಕಾಲ ಕಮೀಷನರ್ ಆಗಿದ್ದ ಅವರು ಇಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ರಾಣೆ ಅವರು ಇಲಾಖೆಯಲ್ಲಿ ಸಲ್ಲಿಸಿದ್ದ ಗಣನೀಯ ಸೇವೆಗಾಗಿ ಮುಖ್ಯಮಂತ್ರಿಗಳ ಪದಕ ಹಾಗೂ ರಾಷ್ಟ್ರಪತಿಗಳ ಪದಕ ದೊರೆತಿದೆ. ಕಾರವಾರ ಜಿಲ್ಲೆಯ ಸಿದ್ದಾರದಲ್ಲಿ 1957ರ ಜುಲೈ 6 ರಂದು ಜನಿಸಿದ ರಾಣೆ ಅವರು 1984 ರಲ್ಲಿ ಕೆಎಸ್ಪಿಎಸ್ ಪಡೆದು ಮೈಸೂರಿನಲ್ಲಿ ಡಿವೈಎಸ್ಪಿಯಾಗಿ ಅಧಿಕಾರ ವಹಿಸಿಕೊಂಡರು. ಮೈಸೂರು, ಬೆಳಗಾವಿಯಲ್ಲಿ ಎಎಸ್ಪಿಯಾಗಿ 2003ರಲ್ಲಿ ಐಪಿಎಸ್‍ಗೆ ಬಡ್ತಿ ಪಡೆದರು. ಹಾಸನದಲ್ಲಿ ಎಸ್ಪಿಯಾಗಿ, ಬೆಂಗಳೂರಿನ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಡಿಐಜಿ ಹುದ್ದೆಗೆ ಬಡ್ತಿ ಪಡೆದ ನಂತರ ಗುಪ್ತ ದಳದಲ್ಲಿ, ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸಿ, ಐಜಿಯಾಗಿ ಬಡ್ತಿ ಪಡೆದು ಲೋಕಾಯುಕ್ತದಲ್ಲಿದ್ದ ಅವರು 2015ರ ಅಕ್ಟೋಬರ್ 30 ರಂದು ಹುಬ್ಬಳ್ಳಿ, ಧಾರವಾಡ ಕಮೀಷನರ್ ಆಗಿ ವರ್ಗಾವಣೆಗೊಂಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ