ಕೂಸು ಹುಟ್ಟುವ ಮೊದಲೇ ಕುಲಾವಿ ಕೇಳಿದರೆ ಹೇಗೆ ?

Kannada News

29-07-2017

ಮೈಸೂರು: ಮಂಗಳೂರು ಗಲಭೆ, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಗಳಿಗೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿಂದು ಮಾತನಾಡಿದ್ದಾರೆ. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ವರದಿ ಕೇಳಿಲ್ಲ. ವರದಿ ಕೇಳಲಾಗಿದೆ ಎಂಬುದು ಸುಳ್ಳು ಎಂದಿದ್ದಾರೆ.  ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಲ್ಲಿ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ, ಸಮಾಜ ಒಡೆಯುವ ಕೆಲಸ ಏನಿದ್ದರೂ ಬಿಜೆಪಿಯವರದ್ದು. ಸಮಾಜ ಜೋಡಿಸುವ, ಕಟ್ಟುವ ಕೆಲಸ ಮಾಡುವವರು ನಾವು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.  

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ನಾವು ಪ್ರತಿಪಾದನೆ ಮಾಡಿಲ್ಲ. ಆಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕ್ರಮದಲ್ಲಿ ಪ್ರತ್ಯೇಕ ಧರ್ಮ ಕುರಿತಾದ ಮನವಿ ಬಂತು. ಮಾತೆ ಮಹಾದೇವಿ ಅವರೂ ಮನವಿ ಸಲ್ಲಿಸಿದ್ದಾರೆ. ಎಲ್ಲರೂ ಒಂದಾಗಿ ಬಂದರೆ ಪರಿಗಣಿಸುವುದಾಗಿ ಹೇಳಿದ್ದೇನೆ ಅಷ್ಟೇ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಈ ಹಿಂದೆ ಯಡಿಯೂರಪ್ಪ ಅವರೇ ಪತ್ರ ಬರೆದಿದ್ದಾರೆ. ಈಶ್ವರಪ್ಪ ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಐದು ಮಂದಿ ಸಚಿವರು ನೀಡಿರುವ ಹೇಳಿಕೆಗೂ ತಮಗೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದಿದ್ದಾರೆ.

ಇಷ್ಟಕ್ಕೂ ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಂವಿಂಧಾನದಲ್ಲಿ ಅವಕಾಶ ಇದೆಯೋ ಇಲ್ಲವೇ ಎಂಬುದನ್ನು ಮೊದಲು ನೋಡಬೇಕು. ಎಲ್ಲರೂ ಒಂದಾಗಿ ಬಂದರಲ್ಲವೇ ಆ ವಿಚಾರ. ಸನಾತನ ಧರ್ಮದಿಂದ ಲಿಂಗಾಯತರು ಹೊರಗೆ ಹೋಗುತ್ತಾರೆ ಎಂಬ ಭಯದಿಂದ ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು. ಇನ್ನು ಗುಜರಾತ್ ನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ರಾಜ್ಯದಲ್ಲಿ ಹಿಂದಿ ಹೇರಿಕೆ ವಿಚಾರವಾಗಿ ಮಾತನಾಡಿದ ಅವರು ಮೆಟ್ರೋದಲ್ಲಿ ಹಿಂದಿ ಬಳಕೆ ಕುರಿತು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ.‌ ತಮಿಳುನಾಡಿನಲ್ಲಿ ಎರಡೇ ಭಾಷೆ ಇದೆ. ಇಲ್ಲೇಕೆ ಮೂರು ಭಾಷೆ ಎಂದು ಪತ್ರದಲ್ಲಿ ಪ್ರಶ್ನೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಕೆ. ಆರ್.ಎಸ್ ಜಲಾಶಯದಿಂದ ನಾಲೆಗಳಿಗೆ ನೂರು ಬಿಡಬೇಕೆಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ನಾನೂ ರೈತ. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ಕೆ. ಆರ್.ಎಸ್  ಜಲಾಶಯದಲ್ಲಿ ಕೇವಲ ೭-೮ ಟಿಎಂಸಿ ನೀರಿದೆ. ಕೊಟ್ಟ ಮೇಲೆ ನೀರು ಎಲ್ಲರಿಗೂ ಸಿಗಬೇಕಲ್ಲವೇ? ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳು ಶೇ.೫೦ರಷ್ಟೂ ಭರ್ತಿಯಾಗಿಲ್ಲ. ಈ ಬಾರಿಯೂ ಮಳೆ ಕೊರತೆ ತಲೆದೋರಿದೆ. ಹೀಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ, ಬಳಿಕ ವ್ಯವಸಾಯಕ್ಕೆ ‌ನಂತರ ಕೆರೆಗಳನ್ನು ತುಂಬಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಯ ಮಂಡಳಿ ಆದೇಶ ಪ್ರಕಾರ ತಮಿಳುನಾಡಿಗೆ ಸ್ವಲ್ಪ ನೀರು ಬಿಡಬೇಕಾಗುತ್ತದೆ. ಬಿಡದೇ ಹೋದಲ್ಲಿ ನ್ಯಾಯ ಮಂಡಳಿ ಜಲಾಶಯವನ್ನೇ ಖಾಲಿ ಮಾಡಿ ಎಂದರೆ ಏನು ಮಾಡುವುದು ಎಂದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವರು ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ನೀರು ಬಿಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ಅಥವಾ ನೀರು ಹಿಡಿದಿಟ್ಟುಕೊಂಡು ತಮಿಳುನಾಡಿಗೆ ಬಿಡುವ ಚಿಂತನೆಯೂ ಇಲ್ಲ. ಮಹದಾಯಿ, ಕಾವೇರಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಆಗಸ್ಟ್ ೫ ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಮಹಾದಾಯಿ ವಿಚಾರದಲ್ಲಿ ಪ್ರಧಾನಿಯವರಿಗೆ ಹಲವು ಬಾರಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದರೆ ಅಲ್ಲಿಯ ನೀರಾವರಿ ಸಚಿವರು ಕರ್ನಾಟಕ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಹೇಳುತ್ತಾರೆ.  ಒಂದು ರಾಜ್ಯದ ಮುಖ್ಯಮಂತ್ರಿ ಪತ್ರ ಬರೆದರೆ ಮುಖ್ಯಮಂತ್ರಿಯೇ ಉತ್ತರ ನೀಡುವುದು ಸೌಜನ್ಯ. ಕೊಳಕು ರಾಜಕೀಯ ಮಾಡುತ್ತಿರುವುದು ಗೋವಾದವರೇ ಹೊರತು ನಾವಲ್ಲ. ಏಕೆಂದರೆ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದಾಗಿ ಅವರ ವಕೀಲರೇ ನ್ಯಾಯ ಮಂಡಳಿ ಮುಂದೆ ಒಪ್ಪಿಕೊಂಡಿದ್ದಾರೆ. ಪತ್ರ ಬರೆದರೆ ಈ ರೀತಿ ಉತ್ತರ ನೀಡುತ್ತಾರೆ. ನನ್ನ ಪ್ರಕಾರ ಪ್ರಧಾನಿಯವರು ಮನಸ್ಸು ಮಾಡಿದರೆ ಮಾತ್ರವೇ ನ್ಯಾಯ ಮಂಡಳಿಯಿಂದ ಹೊರಗೆ ವಿವಾದ ಇತ್ಯರ್ಥವಾಗಲು ಸಾಧ್ಯ.‌ ಅವರು ಮಧ್ಯೆಪ್ರವೇಶ ಮಾಡಲೇಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.

ರಾಜ್ಯದ ಬಿಜೆಪಿ ಸಂಸದರು ಈ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬೇಕು.‌ ಜೊತೆಗೆ ಪ್ರಧಾನಿಯವರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ. ಈ ಹಿಂದೆ ಇಂದಿರಾಗಾಂಧಿಯವರು ಬೇರೆ ಬೇರೆ ರಾಜ್ಯಗಳವರನ್ನು ಕರೆದು ಮಾತನಾಡಿರಲಿಲ್ಲವೇ? ರಾಜ್ಯದ ಸಂಸದರು ಇರುವುದು ಕೇವಲ ಭಾಷಣ ಮಾಡುವುದಕ್ಕಾಗಿ ಮಾತ್ರವೇ. ಅವರಿಗೆ ಜವಾಬ್ದಾರಿ ಇಲ್ಲವೇ ? ರಾಜ್ಯದ ಹಿತ ಕಾಯಬೇಕು ಎಂಬುದು ಗೊತ್ತಿಲ್ಲವೇ ಅವರಿಗೆ ಎಂದರು.

ಕೇಂದ್ರ ಸರ್ಕಾರ ನಿಯಮಗಳನ್ನು ಬದಲಾವಣೆ ಮಾಡುವ ಮೂಲಕ ಪ್ರಕೃತಿ ವಿಕೋಪದಡಿ ಪರಿಹಾರವೇ ಸಿಗದಂತೆ ಮಾಡಿದೆ. ಶೇ.೫೦ರಷ್ಟು ಮಳೆ, ಬೆಳೆ ಕೊರತೆ ಇದ್ದರೆ ಮಾತ್ರ ಪರಿಹಾರ ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ನಮಗೆ ಎನ್.ಡಿ.ಆರ್.ಎಫ್ ನಲ್ಲಿ ಪರಿಹಾರವೇ ಸಿಗದು. ಕಳೆದ ಬಾರಿ ಹಿಂಗಾರಿನಲ್ಲಿ ೧೩೬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಹೊಸ ನಿಯಮ ಪ್ರಕಾರ ೨೦ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಣೆ  ಮಾಡಲಾಗದು. ಇದರಿಂದ ಕರ್ನಾಟಕದ ಜನರಿಗೆ ಭಾರಿ ಅನ್ಯಾಯವಾಗುತ್ತದೆ.  ಇದನ್ನು ವಿರೋಧಿಸಿ, ನಿಯಮ ಬದಲಿಸುವಂತೆ  ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರದ ಮೇಲೆ ಒತ್ತಡ ಹೇರುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.‌  

ಗೃಹ ಸಚಿವರು ಯಾರು ಎಂಬುದು ಸಂಪುಟ ವಿಸ್ತರಣೆ ಬಳಿಕ ಗೊತ್ತಾಗುತ್ತದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಕೇಳಿದರೆ ಹೇಗೆ ? ಸಂಪುಟ ವಿಸ್ತರಣೆ ಬೇಗ ಆಗಲಿದೆ ಎಂದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ