ಜಲವಿವಾದಗಳಲ್ಲಿ ರಾಜಕೀಯದ ಕೆಟ್ಟ ಪಾತ್ರ !

28-07-2017 576
ನವದೆಹಲಿ: ಜಲ ವಿವಾದಗಳನ್ನು ರಾಷ್ಟ್ರೀಯ ಹಿತಾಸಕ್ತಿಯಡಿ ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭರತಿ ತಿಳಿಸಿದ್ದಾರೆ. ದೆಹಲಿಯಲ್ಲಿಂದು ಜಲ ಮಂಥನದ 4ನೇ ಆವೃತ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಜಲ ವಿವಾದಗಳಲ್ಲಿ ರಾಜಕೀಯ ಕೆಟ್ಟ ಪಾತ್ರ ವಹಿಸುತ್ತಿದೆ, ಜಲ ವಿವಾದ ಪರಿಹಾರ ವಿಷಯದಲ್ಲಿ ಮೊದಲು ರಾಷ್ಟ್ರದ ಹಿತಾಸಕ್ತಿಗೆ ಆದ್ಯತೆ ನೀಡಬೇಕು, ಎಂದು ಹೇಳಿದರು. ದೇಶದಲ್ಲಿ 99 ಪ್ರಧಾನಮಂತ್ರಿ ಸಿಂಚಾಯಿ ಯೋಜನೆಗಳು ಪ್ರಗತಿಯಲ್ಲಿದ್ದು, ಇವುಗಳನ್ನು ಕಾಲಮಿತಿಯಲ್ಲಿ ಪೂರೈಸಲಾಗುವುದು, ಕೆನ್-ಬೆಟ್ವಾ, ದಮನ್-ಗಂಗಾ-ಪಿಂಜಾಲ್ ಮತ್ತು ಪಾರ್-ತಪಿ-ನರ್ಮದಾ ಸಂಪರ್ಕ ಹಾಗೂ ಇತರ ಯೋಜನೆಗಳು ನೀರಿನ ಕೊರತೆ ಮತ್ತು ನೀರಾವರಿ ಸಮಸ್ಯೆಗಳನ್ನು ಪರಿಹರಿಸಲಿವೆ ಎಂದು ಉಮಾಭಾರತಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಾ|| ಅಮರ್ಜಿತ್ ಸಿಂಗ್, ಅಣೆಕಟ್ಟು ಸುರಕ್ಷತಾ ಮಸೂದೆ ಮತ್ತು ಅಂತರ ರಾಜ್ಯ ನದಿ ವಿವಾದ ಪರಿಹಾರ ಕುರಿತು ಶಾಸನ ತರುವ ಚಿಂತನೆ ನಡೆದಿದೆ ಎಂದು ಹೇಳಿದರು. ಜಲ ಮಂಥನ ಸಮಾವೇಶವು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ, ಧ್ಯೇಯ ವಾಕ್ಯ, ಹರ್ ಕೇತ್ಕೊ ಪಾನಿ, ಪರ್ ಡ್ರಾಪ್ ಮೋರ್ ಕ್ರಾಪ್ ಕಲ್ಪನೆಗೆ ಹೆಚ್ಚು ಒತ್ತು ನೀಡಿದೆ ಎಂದು ಅವರು ತಿಳಿಸಿದರು.
ಒಂದು ಕಮೆಂಟನ್ನು ಹಾಕಿ