ಮಾಲೀಕರಿಗೆ ಮೋಸ ಮಾಡಿ ಸಿಕ್ಕಿಬಿದ್ದ !

Kannada News

28-07-2017

ಬೆಂಗಳೂರು: ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಜ್ಯುವೆಲರ್ಸ್ ಅಂಗಡಿಯಲ್ಲಿ ಮಾಲೀಕರಿಗೆ ಗೊತ್ತಾಗದ ರೀತಿಯಲ್ಲಿ ಕಳೆದ 2 ವರ್ಷಗಳಿಂದ ಚಿನ್ನಾಭರಣಗಳನ್ನು ಕಳವು ಮಾಡಿ ಮೋಜು ಮಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬ  ಹೆಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ರಾಜಾಜಿನಗರದ ಬಜಾರ್ ಸ್ಟ್ರೀಟ್ ಗಣೇಶ್ (19) ಬಂಧಿತ ಆರೋಪಿಯಾಗಿದ್ದಾನೆ. ಸುಮಾರು 25 ಲಕ್ಷ ಮೌಲ್ಯದ 850 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ಅವರು ತಿಳಿಸಿದ್ದಾರೆ. ಹೆಚ್‍ಎಸ್‍ಆರ್ ಲೇಔಟ್‍ನ ಬಿಡಿಎ ಕಾಂಪ್ಲೆಕ್ಸ್ ಬಳಿ 2 ಚಿನ್ನದ ನೆಕ್ಲೆಸ್‍ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅನುಮಾನದ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾದ ಆರೋಪಿಯು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ರಾಜಸ್ತಾನದ, ಪಾಲಿ ಜಿಲ್ಲೆಯ ಸುರೈತ್ ಮೂಲದ ಆರೋಪಿ ಗಣೇಶ್, ರಾಜಾಜಿನಗರದ ಉತ್ತಮ್ಚಂದ್ ಜೈನ್ ಅವರ ಪ್ರವೀಣ್ ಜ್ಯೂವೆಲರ್ಸ್ ಅಂಗಡಿಯಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡಿಕೊಂಡಿದ್ದನು. ಆರೋಪಿಯು ತಮ್ಮದೇ ಊರಿನವನಾದ್ದರಿಂದ ಉತ್ತಮ್ಚಂದ್ ಜೈನ್ ಅವರು ತಮ್ಮ ಮನೆಯಲ್ಲೆ ವಾಸಿಸಲು ಅವಕಾಶ ನೀಡಿ, ಸ್ವಂತ ಮಗನಂತೆ ನೋಡಿಕೊಂಡು ಆತನಿಗೆ ಜ್ಯೂವೆಲರ್ಸ್ ಅಂಗಡಿಯ ದಾಸ್ತಾನು ಲೆಕ್ಕಗಳನ್ನು ನಿರ್ವಹಿಸಲು ಉಪಯೋಗಿಸುತ್ತಿದ್ದ ಕಂಪ್ಯೂಟರ್‍ ನ ಪಾಸ್‍ವರ್ಡ್‍ಗಳನ್ನು ಕೂಡ ಕೊಟ್ಟಿದ್ದರು. ಎಲ್ಲಾ ಲೆಕ್ಕಗಳನ್ನು ನೋಡಿಕೊಳ್ಳುತ್ತಿದ್ದ ಆರೋಪಿಯು, ಕಳೆದ 2 ವರ್ಷಗಳಿಂದ ಆಗಾಗ ಮಾಲೀಕರ ಗಮನಕ್ಕೆ ಬರದಂತೆ 10-15 ಗ್ರಾಂಗಳಂತೆ ಚಿನ್ನಾಭರಣಗಳನ್ನು ಕಳವು ಮಾಡಿ ಅವುಗಳನ್ನು ಪರಿಚಿತರು, ಸ್ನೇಹಿತರ ಮೂಲಕ ಮಾರಾಟ ಇಲ್ಲವೆ ಗಿರಿವಿಗಿರಿಸಿ ಹಣ ಪಡೆದು ವಿಲಾಸಿ ಜೀವನ ನಡೆಸುತ್ತಿದ್ದ. ಆದರೆ, ಇದು ಮಾಲೀಕರ ಗಮನಕ್ಕೆ ಬಂದಿರಲಿಲ್ಲ.

ಆರೋಪಿಯು ಅಂಗಡಿಯಲ್ಲಿ ಕಳವು ಮಾಡಿದ್ದ 2 ನೆಕ್ಲೆಸ್‍ಗಳನ್ನು ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದಿದ್ದು, ವಿಚಾರಣೆ ನಡೆಸಿದಾಗ ಆತನ ಬಳಿ 25 ಲಕ್ಷ ಮೌಲ್ಯದ 885 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಆರೋಪಿಯನ್ನು ಹೆಚ್‍ಎಸ್‍ಆರ್ ಲೇಔಟ್ ಇನ್ಸ್ ಪೆಕ್ಟರ್ ನಾಗರಾಜ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ