ಗೋಡೆ ಕೊರೆದು ಕಳ್ಳತನ: ಮೂವರ ಸೆರೆ !

Kannada News

28-07-2017

ಬೆಂಗಳೂರು: ಬೇಗೂರು ಮುಖ್ಯರಸ್ತೆಯ ಹೊಂಗಸಂದ್ರದ ಪವನ್ ಜ್ಯುವೆಲರ್ಸ್ ಆಂಡ್ ಬ್ಯಾಂಕರ್ಸ್‍, ಎಂಬ ಚಿನ್ನಾಭರಣ ಅಂಗಡಿ ಗೋಡೆಗೆ, ಹೊಂದಿಕೊಂಡ ಬಾಡಿಗೆಗೆ ಮನೆ ಪಡೆದು ಅದರ ಗೋಡೆ ಕೊರೆದು ಅಂಗಡಿಗೆ ನುಗ್ಗಿ 2 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಮೂವರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದ, ಜುನಾ ಬುದವಾರ್ ಪೇಟ್‍ನ, ಪ್ರದೀಪ್ ದಿಲೀಪ್ ಮೋಲೆ ಅಲಿಯಾಸ್ ಪ್ರದೀಪ್ (27), ಸಾಂಗ್ಲಿ ಜಿಲ್ಲೆಯ ಪ್ರಫುಲ್ ಚಂದ್ರಕಾಂತ್ ಶಿಂದೆ ಆಲಿಯಾಸ್ ಪ್ರಶಾಂತ್ (35), ಜಾರ್ಖಂಡ್‍ನ ಸಾಹೇಬ್ ಗಂಜ್ ಜಿಲ್ಲೆಯ ಮೇಸ್ತ್ರೀ ಟೌಲಾದ ಗೌರಂಗ್ ಮಂಟಲ್ ಆಲಿಯಾಸ್ ಗೌರಂಗ್ (37) ಬಂಧಿತ ಆರೋಪಿಗಳಾಗಿದ್ದು ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ.

ಆರೋಪಿಗಳು ಕಳವು ಮಾಡಿ ಕೊಲ್ಲಾಪುರದ ಮನೆಯೊಂದರ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ಗುಂಡಿ ತೆಗೆದು ಬಚ್ಚಿಟ್ಟಿದ್ದ, 70 ಲಕ್ಷ ಮೌಲ್ಯದ 2 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದರು.

ಬಂಧಿತರು ಕಳವು ಮಾಡಿದ್ದ ಆಭರಣಗಳನ್ನು ಸಮನಾಗಿ ಹಂಚಿಕೊಳ್ಳಲು ಕೊಲ್ಲಾಪುರದ ದಿಲೀಪ್ ಮೋಲೆ ಮನೆಯ ದನದ ಕೊಟ್ಟಿಗೆಯಲ್ಲಿ ಗುಂಡಿ ತೆಗೆದು ಆಭರಣಗಳನ್ನು ಬಚ್ಚಿಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖ ಆರೋಪಿ ಪ್ರಫುಲ್ ಚಂದ್ರಕಾಂತ್ ಶಿಂದೆ ಮೂಲತಃ ಆಟೋ ಚಾಲಕನಾಗಿದ್ದು, ಮುಂಬೈನಲ್ಲಿ ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಗಾಯಕರು ಹಾಗೂ ಡ್ಯಾನ್ಸರ್‍ ಗಳನ್ನು ಒದಗಿಸುವ ಏಜೆಂಟಾಗಿ ಅಕ್ರಮ ದಂಧೆ ನಡೆಸುತ್ತಿದ್ದನು. ಅಲ್ಲಿ 2 ಪ್ಲಾಟ್‍ಗಳನ್ನು ಸ್ವಂತಕ್ಕೆ ಖರೀದಿಸಿ ಅವುಗಳ ಸಾಲ ತೀರಿಸಲಾಗದೆ 2 ತಿಂಗಳ ಹಿಂದೆ ನಗರಕ್ಕೆ ಬಂದು ಬಿಳೇಕಹಳ್ಳಿಯ ಸನಾ ಮಾರುಕಟ್ಟೆ ಬಳಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ. ಮುಂಬೈನಲ್ಲಿ ಪ್ಲಾಟ್‍ಗಳಿಗಾಗಿ ಮಾಡಿದ್ದ ಸಾಲ ತೀರಿಸಲು ಸುಲಭವಾಗಿ ಹಣ ಗಳಿಸುವ ಯೋಜನೆ ರೂಪಿಸಿದ ಶಿಂದೆ, ಕೊಲ್ಲಾಪುರದ ಮತ್ತೊಬ್ಬ ಆರೋಪಿ ದಿಲೀಪ್ ಹಾಗೂ ಪಶ್ಚಿಮ ಬಂಗಾಳದ ಮಾಲ್ಡಾದ ಮನ್ಸೂರ್ ಶೇಖ್ ಆಲಿಯಾಸ್ ಮನ್ಸೂರ್‍ ನನ್ನು ಪರಿಚಯ ಮಾಡಿಕೊಂಡು ತನ್ನ ಮನೆಗೆ ಕರೆದುಕೊಂಡು ಬಂದಿದ್ದ ಎಂದರು.

ಮೂವರು ಹೊಂಗಸಂದ್ರದ ಪವನ್ ಜ್ಯುವೆಲರ್ಸ್ ಹಿಂಭಾಗದ ಮನೆ ಖಾಲಿ ಇರುವುದನ್ನು ನೋಡಿ ಅದನ್ನು ಬಾಡಿಗೆ ಪಡೆದರೆ ಜ್ಯುವೆಲರ್ಸ್ ಅಂಗಡಿಗೆ ನುಗ್ಗಿ ಕನ್ನಗಳವು ಮಾಡುವ ಹೊಂಚು ಹಾಕಿದ್ದರು. ಅದರಂತೆ ಮನೆ ಮಾಲೀಕರಿಗೆ 25 ಸಾವಿರ ರೂ.ಗಳ ಮುಂಗಡ ನೀಡಿದ್ದ ದಿಲೀಪ್ ಮೋಲೆ ಬಾಡಿಗೆ ಪಡೆದಿದ್ದರು. ದಿಲೀಪ್ ಮೋಲೆ ಸೇರಿ ಅಲ್ಲಿ ಮೂವರು ವಾಸವಿದ್ದು, ಕಳವು ಮಾಡಲು ಜಾರ್ಖಂಡ್‍ನ ಮತ್ತೊಬ್ಬ ಆರೋಪಿ ಗೌರಂಗ್ ಅಲ್ಲದೆ, ಪಶ್ಚಿಮ ಬಂಗಾಳದ ಇನ್ನಿಬ್ಬರು ಆರೋಪಿಗಳನ್ನು ಗ್ಯಾಸ್ ಸಿಲಿಂಡರ್ ಜತೆ ಕರೆಸಿಕೊಂಡಿದ್ದರು. ಎಲ್ಲಾ 6 ಮಂದಿಯೂ 3-4 ದಿನಗಳ ಕಾಲ ಸಂಚು ರೂಪಿಸಿ ಜ್ಯುವೆಲರ್ಸ್ ಅಂಗಡಿ ಬಾಗಿಲು ಮುಚ್ಚಿದ ನಂತರ ರಾತ್ರಿ ಸಮಯದಲ್ಲಿ ಅದರ ಗೋಡೆಗೆ ಅಂಟಿಕೊಂಡಿದ್ದ ತಾವಿದ್ದ ಬಾಡಿಗೆ ಮನೆಯ ಗೋಡೆಯನ್ನು 3-4 ದಿನಗಳ ಕಾಲ ಕೊರೆದಿದ್ದಾರೆ.

ಅಂತಿಮವಾಗಿ ಜೂನ್ 29 ರಂದು ರಾತ್ರಿ ಕೊರೆದ ರಂದ್ರದಿಂದ ಒಳ ನುಗ್ಗಿ ಶೋಕೇಸ್ ಹಾಗೂ ಡ್ರಾನಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದಾರೆ. ನಂತರ ಕಬ್ಬಿಣದ ಸೇಫ್ ಲಾಕರ್‍ ಅನ್ನೂ ಗ್ಯಾಸ್ ಕಟರ್ ನಿಂದ, ಕಟ್ ಮಾಡಿ ಇಡೀ ಅಂಗಡಿಯಲ್ಲಿದ್ದ ಆಭರಣಗಳನ್ನು ಕಳವು ಮಾಡಿ ಮಹಾರಾಷ್ಟ್ರ, ಜಾರ್ಖಂಡ್ ಗೆ ಪರಾರಿಯಾಗಿದ್ದಾರೆ ಎಂದರು. ಕಳವು ಮಾಡಿದ್ದ ಆಭರಣಗಳನ್ನು ಪ್ರದೀಪ್ ಕೊಲ್ಲಾಪುರದ ಮನೆಯಲ್ಲಿಟ್ಟುಕೊಂಡು ನಂತರ ಸಮನಾಗಿ ಹಂಚಿಕೊಳ್ಳುವ ಯೋಜನೆ ರೂಪಿಸಿದ್ದರು. ಕಳವು ಪ್ರಕರಣ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಪಿ ಡಾ. ಬೋರಲಿಂಗಯ್ಯ ಅವರು ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.

ಬೊಮ್ಮನಹಳ್ಳಿ ಪೊಲೀಸ್ ಇನ್ಸ್‍ ಪೆಕ್ಟರ್ ರಾಜೇಶ್ ನೇತೃತ್ವದ ತಂಡವು ಸ್ಥಳದಲ್ಲಿ ದೊರೆತ ಸಿಸಿಟಿವಿ ದೃಶ್ಯಗಳ ಸಹಾಯ ಹಾಗೂ ಇನ್ನಿತರ ತಾಂತ್ರಿಕ ನೆರವಿನಿಂದ ಕೊಲ್ಲಾಪುರ, ಸಾಂಗ್ಲಿ, ಪಾಂಡವಪುರ ಅಲ್ಲದೆ, ಪಶ್ಚಿಮ ಬಂಗಾಳದ ಮಾಲ್ಡಾ, ಪರಕ, ಜಾರ್ಖಂಡ್‍ನ ರಾಧಾ ನಗರ, ಬೇಗಂ ಗಂಜ್, ಸಾಹೇಬ್ ಗಂಜ್ ಇನ್ನಿತರ ಕಡೆಗಳಲ್ಲಿ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಗೆ ಬಾಡಿಗೆ ಮನೆ ನೀಡಿದ್ದ ಮಾಲೀಕರು 25 ಸಾವಿರ ಮುಂಗಡ ಪಡೆದಿದ್ದು, ಇನ್ನೂ ಮನೆಯ ಒಪ್ಪಂದದ ಪತ್ರ ಮಾಡಿಕೊಂಡಿರಲಿಲ್ಲ ಎಂದು ಪ್ರವೀಣ್ ಸೂದ್ ತಿಳಿಸಿದರು.

ಬಂಧಿತ ಮೂವರು ಆರೋಪಿಗಳಲ್ಲಿ ಚಂದ್ರಕಾಂತ್ ಶಿಂದೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ಉಳಿದವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಂಬಂಧ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣವನ್ನು ಬೇಧಿಸಿದ ತಂಡಕ್ಕೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ