ಧರ್ಮದ ಹೆಸರಲ್ಲಿ ಬೆಂಕಿಹಚ್ಚಬೇಡಿ.

Kannada News

28-07-2017

ಚಿತ್ರದುರ್ಗ: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಮಾಜಿ ಸಂಸದ ಎಚ್. ವಿಶ್ವನಾಥ್ ಕಾಂಗ್ರೆಸ್ ವಿರುದ್ಧ ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಚಿತ್ರದುರ್ಗದಲ್ಲಿಂದು ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದ ಸದಸ್ಯನಾಗಿ ಕಾರ್ಯಕರ್ತನಾಗಿದ್ದೇನೆ, ಕಾಂಗ್ರೆಸ್ ಬಿಟ್ಟಿದ್ದಕ್ಕೆ ಹಲವಾರು ಕಾರಣಗಳಿವೆ, ಇದೆಲ್ಲಾ ನಿಮಗೆ ತಿಳಿದೇ ಇದೆ. ಆದರೆ ನಾನು ಜೆಡಿಎಸ್ ಗೆ ಬರಲು ಬಲವಾದ ಕಾರಣ ಇದೆ, ಕಾಂಗ್ರೆಸ್ ಮತ್ತು ಬಿಜೆಪಿಯ ಆಡಳಿತವನ್ನು ನಾನು ಹತ್ತಿರದಿಂದ ನೋಡಿದ್ದೇನೆ, ಜೆಡಿಎಸ್ ಈಗ ಕ್ರಾಂತಿಕಾರಿ ವಿಚಾರಗಳನ್ನು ಕೈಗೆತ್ತಿಕೊಂಡಿದೆ, ಇಂದಿನ  ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ, ಸ್ವತಂತ್ರ ಬಂದಾಗಿನಿಂದಲೂ ಕಾಂಗ್ರೆಸ್ ಆಡಳಿತ ನಡೆಸಿದೆ, ಆದರೆ ಅವರಿಂದ ರಾಜ್ಯಕ್ಕೆ ಸಮರ್ಪಕವಾದ ನ್ಯಾಯ ಸಿಕ್ಕಿಲ್ಲ, ನನ್ನ ರಾಜಕೀಯ ಸಂಧ್ಯಾಕಾಲದಲ್ಲಿ ಪ್ರಾಂತೀಯ ಪಕ್ಷ ಸೇರುವ ಮೂಲಕ ಕನ್ನಡ ನಾಡಿನ ಸೇವೆ ಮಾಡುವ ಸಲುವಾಗಿ ಜೆಡಿಎಸ್ ಸೇರಿದ್ದೇನೆ ಎಂದರು.

ಯಾರನ್ನು ನಾನು ಮುಖ್ಯಮಂತ್ರಿ ಮಾಡಲು ಎಷ್ಟೆಲ್ಲಾ ಶ್ರಮ ಹಾಕಿದನೋ, ಅದೇ ವ್ಯಕ್ತಿ ನನ್ನನ್ನು ಕಾಂಗ್ರೆಸ್ ನಿಂದ ಹೊರಹಾಕಲು ಮುಂದಾದರು, ಹೀಗಾಗಿ ನನಗೆ ಕಾಂಗ್ರೆಸ್ ಬಿಟ್ಟದ್ದಕ್ಕೆ ಬೇಸರ ಇಲ್ಲ, ಪ್ರಾದೇಶಿಕ ಪಕ್ಷ ಜೆಡಿಎಸ್ ನಾಡಿನ ನೆಲ ಜಲದ ಬಗ್ಗೆ ಧ್ವನಿ ಎತ್ತುತ್ತಿದೆ, ಹೀಗಾಗಿ ನಾನು ರಾಜ್ಯಾದ್ಯಂತ ಜೆಡಿಎಸ್ ಪರ ಸಂಘಟನೆಗೆ ಮುಂದಾಗಿದ್ದೇನೆ, ಕಾಂಗ್ರೆಸ್ ಭಾಗ್ಯಗಳ ಅಲೆಯಲ್ಲಿ ತೇಲುತ್ತಿದೆ, ಬಿಜೆಪಿ ಇಲ್ಲದ ಕೊಲೆಗಳನ್ನ ಬಿಂಬಿಸುತ್ತಾ ಕಾಲಹರಣ ಮಾಡುತ್ತಿದೆ, ಹೀಗಾಗಿ ಜೆಡಿಎಸ್ ನ ಹೊಸ ಯೋಜನೆಗಳು ಭರವಸೆಗಳನ್ನ ಜನರ ಬಳಿ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದರು. ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಇದೆ, ಅವರು ಒಳ್ಳೇ ಆಡಳಿತ ಕೊಡುತ್ತಾರೆ ಎಂಬ ವಿಶ್ವಾಸ ಇದೆ, ಹೀಗಾಗಿ ನಾನು ನನ್ನ ಪಥವನ್ನು ಕುಮಾರಪಥದತ್ತ ಬದಲಿಸಿಕೊಂಡಿದ್ದೇನೆ, ಇದು ಯುವಕರ ನೆಚ್ಚಿನ ಕುಮಾರ ಪಥವಾಗಬೇಕಿದೆ. ನಾನು  ಕೆಲವು ಸಂದರ್ಭಗಳಲ್ಲಿ ಜೆಡಿಎಸ್ ಅನ್ನು ಟೀಕಿಸಿದ್ದು ಸತ್ಯ, ಹಾಗೆಯೇ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದೇನೆ, ಈಗ ಜೆಡಿಎಸ್ ನಡೆಯನ್ನು ಸಮರ್ಥಿಸಿಕೊಳ್ಳಲು ಒಳ್ಳೆಯ ಕಾರಣಗಳಿವೆ, ಆಗಸ್ಟ್ 18ರವರೆಗೆ ರಾಜ್ಯ ಪರ್ಯಟನೆ ಮಾಡುತ್ತೇನೆ, ಆನಂತರ ಪಕ್ಷದ ಹಿರಿಯರು, ಅನುಭವಿಗಳು ಆದ ವರಿಷ್ಠರ ಜೊತೆ ಚರ್ಚಿಸಿ ರಾಜ್ಯಕ್ಕೆ ಯಾವರೀತಿಯ ಕೊಡುಗೆ ನೀಡುತ್ತೇವೆ ಎಂಬುದನ್ನು ಪ್ರಕಟಿಸುತ್ತೇವೆ ಎಂದು ತಿಳಿಸಿದರು. ಇನ್ನೂ ಹಲವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರುವುದು ಖಚಿತ, ಭ್ರಷ್ಟಾಚಾರದ ವಿರುದ್ದ ಬಳ್ಳಾರಿ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಮಟ್ಟಹಾಕುವ ಸಲುವಾಗಿ ಒಂದು ಸಭೆಯನ್ನೂ ಮಾಡಲಿಲ್ಲ, ಬಳ್ಳಾರಿ ಗಣಿ ಧಣಿಗಳು ಜೈಲಿಗೆ ಹೋಗಿದ್ದು ಇವರ ಪಾದಯಾತ್ರೆಯಿಂದಲ್ಲ, ಲೋಕಾಯುಕ್ತರ ತನಿಖೆ ಮತ್ತು ಎಸ್.ಆರ್.ಹಿರೇಮಠ್ ಅವರ ಹೋರಾಟದಿಂದ ಎನ್ನುವುದನ್ನು ಸಿದ್ದರಾಮಯ್ಯ ಮರೆಯಬಾರದು ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರರು ಮರಳು ದಂಧೆ ಮಾಡ್ತಿರೋದು ಸತ್ಯ ಎಂದು ಹೇಳಿದ್ದೆ, ಹೀಗಾಗಿ ತಮ್ಮ ಮಕ್ಕಳ ವಿರುದ್ಧ ಆರೋಪ ಮಾಡಿದ್ದಕ್ಕೆ, ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನ ಟಾರ್ಗೆಟ್ ಮಾಡಿದರು. ನಾನು ಬೇಷರತ್ ಆಗಿ ಜೆಡಿಎಸ್ ಸೇರಿದೆ, ಆದರೆ ಪಕ್ಷದ ವರಿಷ್ಠರು ಮತ್ತು ಹೆಚ್.ಡಿ.ಕುಮಾರಸ್ವಾಮಿಯವರು ಹುಣಸೂರಿನಿಂದ ಸ್ಪರ್ಧೆಮಾಡುವಂತೆ ಹೇಳಿದರು, ಡಿ.ದೇವರಾಜ್ ಅರಸು ಅವರ ಕರ್ಮಭೂಮಿಯಾಗಿದ್ದ ಹುಣಸೂರಿನಿಂದ ಸ್ಪರ್ಧೆ ಮಾಡಿ ಎಂದಿದ್ದಕ್ಕೆ ನನಗೆ ತುಂಬಾ ಸಂತಸವಾಗಿದೆ, ಎಲ್ಲಾ ಮುಖಂಡರ ಜೊತೆ ನನಗೆ ಹೊಂದಾಣಿಕೆ ಇದೆ ಎಂದರು.

ಸಿದ್ದರಾಮಯ್ಯನವರು ನನಗೆ ಅಧಿಕಾರ ಕೊಡಿ ದೇವರಾಜ ಅರಸ್ ಗಿಂತ ಒಳ್ಳೇ ಅಧಿಕಾರ ಕೊಡ್ತೀನಿ ಅಂದಿದ್ರು, ಆದ್ರೆ ಅದು ಸುಳ್ಳಾಗಿದೆ, ನಮ್ಮ ರಾಜ್ಯದ ಸಂಪನ್ಮೂಲಗಳು ಈಗ ಗಡಿ ದಾಟುತ್ತಿವೆ. ನಾನು ಎಂದೂ ಕುರುಬರ ನಾಯಕ ಎಂದು ಗುರುತಿಸಿಕೊಂಡಿಲ್ಲ, ಆದರೆ ಜಾತಿಯ ಕಾರಣಕ್ಕೆ ರಾಜ್ಯಕ್ಕೆ ಅನ್ಯಾಯವಾದಾಗ ನಾನು ಸಹಿಸಿಕೊಳ್ಳುವುದಿಲ್ಲ ಎಂದರು.

ಸಿದ್ದರಾಮಯ್ಯನವರ ಬಳಿ ಲಿಂಗಾಯತರು ಪ್ರತ್ಯೇಕ ಧರ್ಮ ಎಂದು ಡಿಕ್ಲೇರ್ ಮಾಡಿ ಅಂತ ಕೇಳಿರಲಿಲ್ಲ, ಆದರೆ ತನ್ನ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮುಚ್ಚಿಕೊಳ್ಳುವ ಸಲುವಾಗಿ, ಲಿಂಗಾಯತ, ವೀರಶೈವ, ಕನ್ನಡ ಬಾವುಟ ಎಂಬ ವಿಷಯಗಳನ್ನ ಹುಟ್ಟುಹಾಕಿದ್ದಾರೆ, ಸರ್ಕಾರಗಳು ಧರ್ಮದ ಜೊತೆ ಆಟ ಆಡಬಾರದು,  ರಾಜಕೀಯ ಲಾಭಕ್ಕೆ ಧರ್ಮಗಳನ್ನು ಬಳಸಬಾರದು, ಒಂದು ಶತಮಾನದಿಂದ ಯಾವುದೇ ಧರ್ಮದ ಬಗ್ಗೆ ಯಾವ ಸರ್ಕಾರಗಳೂ ತೀರ್ಮಾನ ತೆಗೆದುಕೊಂಡಿರುವ ಇತಿಹಾಸ ಇಲ್ಲ, ಹೀಗಾಗಿ ಧರ್ಮದ ಹೆಸರಲ್ಲಿ ಬೆಂಕಿಹಚ್ಚಬೇಡಿ ಎಂದಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ