ಕೌತುಕಮಯ ಯಹೂದಿ ಲೋಕ…!

Kannada News

26-07-2017 1433

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ಇಸ್ರೇಲ್‌ ದೇಶಕ್ಕೆ ಭೇಟಿ ಕೊಟ್ಟಿದ್ದರು. ಮೋದಿಯವರ ಇಸ್ರೇಲ್ ಭೇಟಿ, ಇಡೀ ಜಗತ್ತಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೇ ವೇಳೆ, ಇಸ್ರೇಲ್ ದೇಶದಲ್ಲಿ ಪ್ರಮುಖವಾಗಿರುವ ಯಹೂದಿ ಧರ್ಮ ಮತ್ತು ಅದರ ಅನುಯಾಯಿಗಳ ಬಗ್ಗೆ ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರಿಗೆ ಇರುವ ಕೋಪ ಏತಕ್ಕಾಗಿ ಅನ್ನುವ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಜನಸಾಮಾನ್ಯರಲ್ಲಿ ಹುಟ್ಟಿಕೊಂಡಿದ್ದವು. ಹೀಗಾಗಿ, ಈ ಯಹೂದಿ ಧರ್ಮ ಅಂದರೇನು? ಅದರ ಸಿದ್ಧಾಂತಗಳೇನು? ಆ ಧರ್ಮದ ಬಗ್ಗೆ ಇತರ ಧರ್ಮೀಯರಿಗೆ ಇರುವ ಭಾವನೆಗಳೇನು? ಇತ್ಯಾದಿ ವಿಚಾರಗಳ ಬಗ್ಗೆ ಸ್ಪೆಷಲ್ ರಿಪೋರ್ಟರ್‌ನಿಂದ ಒಂದು ವಿಶೇಷ ವರದಿ.

ಜುದಾಯಿಸಮ್ ಅಥವ ಯಹೂದಿ ಧರ್ಮ ಅನ್ನುವುದು, ಜಗತ್ತಿನ ಅತ್ಯಂತ ಹಳೆಯ ಏಕದೇವತಾವಾದಿ ಧರ್ಮ. ಇದು, ಸುಮಾರು 3,500 ವರ್ಷಗಳ ಹಿಂದೆ ಮಧ್ಯ ಏಷ್ಯಾದಲ್ಲಿ ಹುಟ್ಟಿಕೊಂಡ ಧರ್ಮ. ಈ ಜಗತ್ತಿನಲ್ಲಿ ‘ನೈತಿಕತೆ ಮತ್ತು ಪಾವಿತ್ರತೆಯ ಮಟ್ಟ ಹೇಗಿರಬೇಕು‘ ಅನ್ನುವ ಮಾದರಿ ನಿರ್ಮಿಸುವ ಸಲುವಾಗಿಯೇ ದೇವರು ನಮ್ಮನ್ನು ಸೃಷ್ಟಿ ಮಾಡಿದ ಅನ್ನುವುದು, ಯಹೂದಿಗಳ ನಂಬಿಕೆ. 

ಯಹೂದಿ ಧರ್ಮ ಅಬ್ರಹಾಮಿಕ್ ನಂಬಿಕೆಗಳನ್ನು ಹೊಂದಿರುವ ಮೂರು ಧರ್ಮಗಳಲ್ಲಿ ಮೂಲ ಧರ್ಮ. ಇನ್ನಿತರ ಧರ್ಮಗಳೆಂದರೆ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳು.  ಇಸ್ರೇಲ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಕೆನಡ, ಅರ್ಜೆಂಟಿನ, ರಷ್ಯಾ. ಜರ್ಮನಿ, ಆಸ್ಟ್ರೇಲಿಯ ಸೇರಿದಂತೆ  ಜಗತ್ತಿನಲ್ಲಿ ವಿವಿಧ ದೇಶಗಳಲ್ಲಿ, ಒಟ್ಟಾರೆ ಸುಮಾರು ಒಂದೂವರೆ ಕೋಟಿ ಯಹೂದಿಗಳಿದ್ದಾರೆ. ಇವರಲ್ಲಿ ಹೆಚ್ಚಿನವರು, ಇಸ್ರೇಲ್ ಮತ್ತು ಅಮೆರಿಕದಲ್ಲಿ ನೆಲೆಸಿದ್ದಾರೆ. ಇಸ್ರೇಲ್ ದೇಶದಲ್ಲಿರುವ ಯಹೂದಿಗಳ ಸಂಖ್ಯೆ ಸುಮಾರು 63 ಲಕ್ಷ, ಅಮೆರಿಕದಲ್ಲಿರುವ ಯಹೂದಿಗಳ ಸಂಖ್ಯೆ ಸುಮಾರು 57 ಲಕ್ಷ. ಇಂಗ್ಲೆಂಡ್‌ನಲ್ಲಿ ಸುಮಾರು 3 ಲಕ್ಷ ಜನ ಯಹೂದಿಗಳಿದ್ದಾರೆ.

ಯಹೂದಿಗಳು ತಮ್ಮ ಮೂಲವನ್ನು ಅಬ್ರಹಾಂ ನ ಜೊತೆಗೆ ಸಮೀಕರಿಸುತ್ತಾರಾದರೂ ಕೂಡ, ಪ್ರವಾದಿ ಮೋಸಸ್ ಅನ್ನು ಯಹೂದಿ ಧರ್ಮದ ಪ್ರಮುಖ ಸಂಸ್ಥಾಪಕನೆಂದು ಹೇಳಲಾಗುತ್ತದೆ. ಇಡೀ ಜಗತ್ತಿಗೆ ಒಬ್ಬನೇ ದೇವನಿದ್ದು, ಅವನ ಜೊತೆ ತಮಗೆ ಒಪ್ಪಂದ ಏರ್ಪಟ್ಟಿದೆಯೆಂದು ಯಹೂದಿಗಳು ಹೇಳುತ್ತಾರೆ. ಆ ದೇವರು ಕೊಟ್ಟಿರುವ ಎಲ್ಲಾ ಕೊಡುಗೆಗಳಿಗೆ ಪ್ರತಿಯಾಗಿ, ಅವನು ಮಾಡಿರುವ ಕಾನೂನುಗಳು ಮತ್ತು ಪಾವಿತ್ರತೆಯ ನಿಯಮಗಳಂತೆ ನಮ್ಮ ಬದುಕು ನಡೆಸಬೇಕು ಅನ್ನುವುದು ಯಹೂದಿ ಸಿದ್ಧಾಂತ.

ಯಹೂದಿ ಧರ್ಮದ ಬಗ್ಗೆ ಸಾಕಷ್ಟು ಉಲ್ಲೇಖಗಳಿದ್ದರೂ ಕೂಡ ಟೊರ (Torah) ಅನ್ನುವುದು ಆ ಧರ್ಮದ ಅತ್ಯಂತ ಪ್ರಮುಖ ಧಾರ್ಮಿಕ ಗ್ರಂಥ. ಟೊರ್ಹಾ ದಲ್ಲಿರುವ ರೀತಿ ನೀತಿಗಳನ್ನು ಹಲಾಕ್ಕ(Halakhah) ಎಂಬ ಯಹೂದಿ ಮೌಖಿಕ ಕಟ್ಟಳೆಗಳು ವಿವರಿಸುತ್ತವೆ. ಯಹೂದಿ ಧರ್ಮದಲ್ಲಿ, ದೇವರ ಪಾತ್ರ, ಯಹೂದಿಗಳ ನಡವಳಿಕೆಗಳು ಮತ್ತು ದೇವರ ಜೊತೆಗಿನ ಒಡಂಬಡಿಕೆ ಅನುಸಾರ ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನು ತಿಳಿಸುವುದೇ torah. ಇದರ ಗ್ರಾಂಥಿಕ ರೂಪವೇ ಟಲ್ಮುಡ್ (Talmud).  ಯಹೂದಿ ಧಾರ್ಮಿಕ ವಿದ್ವಾಂಸರನ್ನು ರಬೈ (Rabbis) ಎಂದು ಕರೆಯುತ್ತಾರೆ. ಯಹೂದಿಗಳು Synagogues ಎಂದು ಕರೆಯಲಾಗುವ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಇಡೀ ಯಹೂದಿ ಜನಾಂಗವನ್ನೇ ಸರ್ವನಾಶ ಮಾಡಬೇಕೆಂಬ ಹುಚ್ಚು ಹಂಬಲ ಹೊಂದಿದ್ದ. ಸುಮಾರು 1933ರಿಂದ 1945ರ ನಡುವೆ ಸುಮಾರು 60 ಲಕ್ಷ ಯಹೂದಿಗಳ ಮಾರಣಹೋಮ ನಡೆಸಿದ್ದ. ಇವರಲ್ಲಿ ಹದಿನೈದು ಲಕ್ಷ ಮಕ್ಕಳೂ ಸೇರಿದ್ದರು.

ಯಹೂದಿಗಳು ಬಹುತೇಕ ಮಟ್ಟಿಗೆ ಒಂದು ಸಮುದಾಯವಾಗಿ ಬದುಕುತ್ತಾರೆ. ಸಮುದಾಯವಾಗಿಯೇ ನಡೆಸಬೇಕಾದ ಹಲವಾರು ಚಟುವಟಿಕೆಗಳು ಅವರಲ್ಲಿವೆ. ಯಹೂದಿ ಪ್ರಾರ್ಥನೆಯಲ್ಲಿ ಯಾವಾಗಲೂ ನಾವು ಮತ್ತು ನಮ್ಮ ಎಂಬ ಪದಗಳನ್ನೇ ಬಳಸಲಾಗುತ್ತದೆ. ಇಡೀ ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವ ಎಲ್ಲಾ ಯಹೂದಿಗಳೂ ಕೂಡ, ನಾವು ಒಂದೇ ಜಾಗತಿಕ ಸಮುದಾಯಕ್ಕೆ ಸೇರಿದ್ದೇವೆ ಎಂದು ತಿಳಿಯುತ್ತಾರೆ.  ಯಹೂದಿ ಧರ್ಮ ಒಂದು ಕೌಟುಂಬಿಕ ಆಚರಣೆಗಳ ಧರ್ಮ. ಯಹೂದಿ ಬಾಲಕರಿಗೆ ಎಂಟು ವರ್ಷ ವಯಸ್ಸಿನಲ್ಲಿ ಸುನ್ನತಿ ಮಾಡಲಾಗುತ್ತದೆ. ಈ ಬಗ್ಗೆ ದೇವರು, ಅಬ್ರಹಾಮನಿಗೆ ನಾಲ್ಕು ಸಾವಿರ ವರ್ಷಗಳ ಹಿಂದೆ ಸೂಚನೆಗಳನ್ನು ನೀಡಿದ್ದನಂತೆ. ಯಹೂದಿಗಳ ಬಹುತೇಕ ಧಾರ್ಮಿಕ ಚಟುವಟಿಕೆಗಳು ಮನೆಯಲ್ಲೇ ನಡೆಯುತ್ತವೆ. ವಿಶೇಷ ದಿನಗಳನ್ನು ಸ್ವಾಗತಿಸುವ ಸಲುವಾಗಿ, ಹಲವು ಯಹೂದಿ ಕುಟುಂಬಗಳು ಒಟ್ಟಿಗೆ ಸೇರಿ ಸಬ್ಬತ್ (Sabbath) ಔತಣ ಕೂಟ ಏರ್ಪಡಿಸುತ್ತವೆ.

ಸಾಮಾನ್ಯವಾಗಿ, ಯಹೂದಿ ತಾಯಿಯ ಮಕ್ಕಳಾಗಿ ಹುಟ್ಟಿದವರೆಲ್ಲರೂ ಯಹೂದಿಗಳು ಅನ್ನುವುದು, ಆ ಧರ್ಮ ಪಾಲಿಸುವವರ ನಂಬಿಕೆ. ಆದರೆ ಕೆಲವು ಪಂಗಡದವರು, ಯಹೂದಿ ತಂದೆಗೆ ಹುಟ್ಟಿದವರನ್ನೂ ಯಹೂದಿಗಳೆಂದೇ ಪರಿಗಣಿಸುತ್ತಾರೆ. ಯಹೂದಿ ಜನಾಂಗಕ್ಕೆ ಸೇರಿದ ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದು ಚಟುವಟಿಕೆಯೂ ದೇವರ ಪೂಜೆ ಆಗಬಹುದು. ಏಕೆಂದರೆ ಯಹೂದಿಗಳು, ತಾವು ಮಾಡುವ ಪ್ರತಿಯೊಂದು ಕೆಲಸವೂ ‘ನಿನ್ನ ಸಂತೋಷಕ್ಕಾಗಿಯೇ’, ಅನ್ನುವ ರೀತಿಯಲ್ಲಿ, ತಮ್ಮ ದೇವರ ಜೊತೆಗೆ ಒಪ್ಪಂದಕ್ಕೆ ಬಂದಿರುತ್ತಾರಂತೆ. ಹೀಗಾಗಿ, ಯಹೂದಿಗಳನ್ನು ‘ತಮ್ಮ ಜೀವನವೇ ಪರಮಾತ್ಮನ ಆರಾಧನೆ’ ಎನ್ನುವಂತೆ ಬದುಕುವವರ ಒಂದು ಸಮುದಾಯ ಅನ್ನಬಹುದು.

ಯಹೂದಿ ಧರ್ಮದ torah ಮತ್ತು Talmud ಗಳ ಬಗ್ಗೆ ಬೋಧನೆ ಮಾಡುವ ಸಂಸ್ಥೆಗಳೇ ಯೆಶಿವಾ(Yeshiva)ಗಳು. ಇಂಥ Yeshivaಗಳಲ್ಲಿ ಕಲಿಯುವ ಹರೆಡಿ (haredi) ಗಳು, ತಮ್ಮ ವಿವಾಹದ ನಂತರ ಕೊಲೆಲ್(kollel) ಎಂಬ ಕಲಿಕೆಯ ಬೀಡುಗಳನ್ನು ಸೇರುತ್ತಾರೆ. ಅಲ್ಲಿ ಇವರಿಗೆ, ಸರ್ಕಾರದ ಸವಲತ್ತುಗಳು ಸಿಗುತ್ತವೆ. ದೇವರ ಇರುವಿಕೆಯನ್ನು ಸಮಾಜದಲ್ಲಿ ಪ್ರಸಾರ ಮಾಡುತ್ತಾ ಹೋಗುವ ಇಂಥವರನ್ನು Haredi ಗಳು ಎಂದು ಕರೆಯಲಾಗುತ್ತದೆ. ಇಸ್ರೇಲಿನಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ, ಆದರೆ Haredi ಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಆದರೆ ಇತ್ತೀಚೆಗೆ, ಈ Haredi ಗಳು ಮತ್ತು ಅವರಿಗೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಇಸ್ರೇಲಿನಲ್ಲಿ ಅಪಸ್ವರ ಹೆಚ್ಚಾಗುತ್ತಿದೆ. Haredi ಗಳು ಕಷ್ಟಪಟ್ಟು ಕೆಲಸ ಮಾಡುವ ಮನಸ್ಸಿಲ್ಲದವರು ಮತ್ತು ಹೆಚ್ಚು ಮಕ್ಕಳನ್ನು ಹೆರುವವರು ಎಂಬ ಟೀಕೆಗಳು ಕೇಳಿ ಬರುತ್ತಿದ್ದು, ದೇಶಕ್ಕೆ ಹೊರೆಯಾಗುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಯಹೂದಿ ಧರ್ಮ ಒಂದು ಕ್ರಿಯಾ ಧರ್ಮ. ಯಹೂದಿಗಳು ತಮ್ಮನ್ನು, ದೇವರೇ ಆಯ್ಕೆ ಮಾಡಿದ ಜನ ಎಂದು ಹೇಳಿಕೊಳ್ಳುತ್ತಾರೆ. ಯಹೂದಿಗಳು, ಜನರನ್ನು ಅವರ ಬೌದ್ಧಿಕ ಶಕ್ತಿ ಸಾಮರ್ಥ್ಯಗಳಿಂದ ಅಳೆಯುವುದಿಲ್ಲ, ಬದಲಿಗೆ ಅವರು ತಮ್ಮ ಧರ್ಮವನ್ನು ಹೇಗೆ ಆಚರಿಸುತ್ತಾರೆ ಅನ್ನುವುದರ ಮೇಲೆ ಅಳೆಯುತ್ತಾರೆ.

ಯಹೂದಿಗಳ ಪ್ರಕಾರ ಈ ಜಗತ್ತಿನಲ್ಲಿ ಒಬ್ಬನೇ ಒಬ್ಬ ದೇವರಿದ್ದಾನೆ. ಅವನನ್ನು ಬಿಟ್ಟರೆ, ಬೇರೆ ಯಾವುದೇ ದೈವ ಇಲ್ಲ, ದೇವರದ್ದು ನಿರಾಕಾರ ಸ್ವರೂಪ, ದೇವರು ತರ್ಕಕ್ಕೆ ಸಿಗುವವನಲ್ಲ, ದೇವರು ಯಾರದೇ ನೆರವಿಲ್ಲದೆ ಈ ಜಗತ್ತನ್ನು ಸೃಷ್ಟಿಮಾಡಿದ್ದಾನೆ. ದೇವರು ಸರ್ವಾಂತರ್ಯಾಮಿ, ಸರ್ವಶಕ್ತ, ದೇವರು ಕಾಲಾತೀತ. ಇತ್ಯಾದಿ ವಿಚಾರಗಳೆಲ್ಲವೂ ಯಹೂದಿಗಳ ಪರಿಕಲ್ಪನೆ. ಹೀಗೆ ಯಹೂದಿ ಧರ್ಮ, ಒಂದು ಅನಿರೀಕ್ಷಿತ ರೀತಿಯಲ್ಲಿ, ದೇವರ ಬಗ್ಗೆ ಹೊಸ ಕಲ್ಪನೆಗಳನ್ನು  ಕಟ್ಟಿಕೊಟ್ಟಿತ್ತು. ಯಹೂದಿ ಧರ್ಮ ಪ್ರಚಲಿತಕ್ಕೆ ಬರುವ ಮುನ್ನ, ಜನರು ಹತ್ತಾರು ದೇವರುಗಳನ್ನು ನಂಬುತ್ತಿದ್ದರು. ಆದರೆ, ಯಹೂದಿ ಧರ್ಮ ಏಕದೇವೋಪಾಸನೆಯನ್ನು ಆಚರಣೆಗೆ ತಂದಿತ್ತು.  

ಆದರೆ, ದೇವರ ಬಗ್ಗೆ ಯಹೂದಿಗಳಿಗೆ ಇಷ್ಟೆಲ್ಲಾ ಗೊತ್ತಾಗಿದ್ದು ಹೇಗೆ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಯಹೂದಿಗಳು, ತಮ್ಮ ದೇವರು ಹೀಗೆಲ್ಲಾ ಇದ್ದಾನೆ, ಇಂತೆಲ್ಲಾ ಗುಣಗಳನ್ನು ಹೊಂದಿದ್ದಾನೆ ಎಂದು ನಂಬುತ್ತಾರೆ ಎಂದು ಹೇಳಬಹುದು ಅಷ್ಟೇ.  ಈ ಎಲ್ಲಾ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳೂ ಇವೆ. ಆದರೆ, ತಾವು ಯಹೂದಿಗಳು ಎಂದು ಕರೆಸಿಕೊಳ್ಳುವ ಅನೇಕರಿಗೆ, ತಮ್ಮ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇಲ್ಲ. ಇಸ್ರೇಲ್‌ ದೇಶದ ಯಹೂದಿಗಳಲ್ಲಿ ಅರ್ಧದಷ್ಟು ಜನ, ತಾವು ಜಾತ್ಯತೀತ ಎಂದು ಕರೆದುಕೊಳ್ಳುತ್ತಾರಂತೆ.

ಆದರೆ, 1980ರ ದಶಕದಲ್ಲಿ ಅಮೆರಿಕದ ಸುಪ್ರೀಂಕೋರ್ಟು ಯಹೂದಿಗಳನ್ನು ಒಂದು ಜನಾಂಗ ಎಂದು ತೀರ್ಪು ನೀಡಿತ್ತು. ಆದರೆ, ಈ ತೀರ್ಪಿನಿಂದ ಯಹೂದಿಗಳು ಆಘಾತಕ್ಕೊಳಗಾಗಿದ್ದರು. ಏಕೆಂದರೆ, ಯಹೂದಿಗಳನ್ನು ಒಂದು ಜನಾಂಗ ಎಂದು ಕರೆದಿದ್ದು, ಅವರಿಗೆ ಹಿಟ್ಲರ್‌ ಆಳ್ವಿಕೆಯ ಜರ್ಮನಿಯನ್ನು ನೆನಪು ಮಾಡಿಸಿತ್ತು. ಏಕೆಂದರೆ, ಅಡಾಲ್ಫ್‌ ಹಿಟ್ಲರ್ ಪ್ರಕಾರ ಯಹೂದಿಗಳು ಕೇವಲ ಒಂದು ಜನಾಂಗ ಮಾತ್ರವಲ್ಲ ಒಂದು ಕೀಳು ಜನಾಂಗವಾಗಿದ್ದರು.

ಯಹೂದಿ ಧರ್ಮ, ಇಸ್ಲಾಮ್ ಧರ್ಮ ಮತ್ತು ಕ್ರೈಸ್ತ ಧರ್ಮ ಇವು ಮೂರಕ್ಕೂ ಕೂಡ ಅಬ್ರಹಾಮನೇ ಮೂಲ. ಯಹೂದಿಗಳು, ಮಹಮದ್  ಓರ್ವ ಪ್ರವಾದಿ ಅನ್ನುವುದನ್ನೇ ಒಪ್ಪಿರಲಿಲ್ಲ, ಅವರಿಗೆ ತೊಂದರೆ ಕೊಟ್ಟಿದ್ದರು, ಅನ್ನುವ ನಂಬಿಕೆಗಳ ಕಾರಣಕ್ಕಾಗಿ ಮುಸ್ಲಿಮರು ಯಹೂದಿಗಳ ಮೇಲೆ ದ್ವೇಷ ಬೆಳೆಸಿಕೊಂಡಿದ್ದರಂತೆ. ಅದೇ ರೀತಿ, ಬೈಬಲ್‌ನ ಹೊಸ ಒಡಂಬಡಿಕೆಯಲ್ಲಿ ಹೇಳಿರುವಂತೆ, ಜೆರೂಸಲೇಮಿನ ಯಹೂದಿಗಳು, ಏಸುಕ್ರಿಸ್ತನ ಮೇಲೆ ಧರ್ಮನಿಂದನೆ ಆರೋಪ ಹೊರಿಸಿ ಶಿಲುಬೆಗೇರಿಸುತ್ತಾರೆ. ಹೀಗಾಗಿ, ಆ ಹೊತ್ತಿನಿಂದಲೂ ಸುಮಾರು 2 ಸಾವಿರ ವರ್ಷಗಳವರೆಗೆ ಯಹೂದಿಗಳು ‘God killers’ ಎಂಬ ಆರೋಪ ಹೊತ್ತಿದ್ದಾರೆ. ಈ ಕಾರಣಕ್ಕಾಗಿಯೇ ಯಹೂದಿಗಳು, ಇಡೀ ಯೂರೋಪ್‌ ಖಂಡದಲ್ಲಿ ಬೇರೆ ಇನ್ಯಾರೂ ಅನುಭವಿಸದಷ್ಟು ಹಿಂಸೆ ಅನುಭವಿಸಬೇಕಾಯಿತು.

ಆದರೆ, 1965ರಲ್ಲಿ Vatican ಪರಿಷತ್ತು Nostra Aetate ಎಂಬ ಒಂದು ಘೋಷಣಾ ಪತ್ರ ಪ್ರಕಟಿಸಿತ್ತು. ಅದರಲ್ಲಿ, ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದರ ಪ್ರಶ್ನೆ ಬಗ್ಗೆ ಹೊಸರೀತಿಯ ವಿವರಣೆ ನೀಡಲಾಗಿತ್ತು.  ಕ್ರಿಸ್ತನಿಗೆ ಆದ ಅನ್ಯಾಯಕ್ಕೆ, ಇವತ್ತಿನ ಯಹೂದಿಗಳನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ ಮತ್ತು ಅದೇ ರೀತಿಯಲ್ಲಿ, ಏಸುವನ್ನು ಶಿಲುಬೆಗೇರಿಸಿದ ಸಮಯದಲ್ಲಿ ಜೀವಿಸಿದ್ದ ಎಲ್ಲಾ ಯಹೂದಿಗಳನ್ನೂ ಕೂಡ ತಪ್ಪಿತಸ್ಥರು ಎಂದು ಹೇಳಲು ಸಾಧ್ಯವಿಲ್ಲ ಎಂದು ಘೋಷಿಸಲಾಗಿತ್ತು.

ಇದು, ಯಹೂದಿಗಳ ಬಗ್ಗೆ ಕ್ರಿಶ್ಚಿಯನ್ನರಿಗೆ ಇದ್ದ ಧೋರಣೆಗಳಲ್ಲಿ ಒಂದಿಷ್ಟು ಬದಲಾವಣೆಗೆ ಕಾರಣವಾಗಿತ್ತು. ‘ಕ್ರಿಸ್ತನ ಹತ್ಯೆಗೆ ಯಹೂದಿಗಳಿಗಿಂತಲೂ ರೋಮನ್ನರೇ ಕಾರಣವಿದ್ದಿರಬಹುದು’, ಎಂದೂ ಕೂಡ ಕೆಲವು ಇತಿಹಾಸಕಾರರು ಹೇಳುತ್ತಾರೆ. ಆದರೆ, ಇವತ್ತಿನ ದಿನಗಳಲ್ಲಿ ಇಸ್ರೇಲ್ ಬಗ್ಗೆ ಮುಸ್ಲಿಮರಿಗೆ ಇರುವ ಆಕ್ರೋಶಕ್ಕೆ ಕಾರಣ, ಅವರು ಪ್ಯಾಲಸ್ತೀನ್ ದೇಶದ ಭೂ ಭಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ ಅನ್ನುವುದು. ಒಟ್ಟಿನಲ್ಲಿ, ಜಗತ್ತಿನ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿರುವ ಯಹೂದಿ ಧರ್ಮದ ಇತಿಹಾಸ ರೋಚಕ ಎಂದೇ ಹೇಳಬೇಕು.ಸಂಬಂಧಿತ ಟ್ಯಾಗ್ಗಳು

ಕೌತುಕಮಯ ಯಹೂದಿ ಲೋಕ…! ಲೋಕ…!


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ