ಆನ್ ಲೈನ್ ನಲ್ಲಿ ವಸ್ತು ಖರೀದಿಸುತ್ತಿದ್ದೀರಾ ಎಚ್ಚರ !

Kannada News

25-07-2017 510

ಬೆಂಗಳೂರು: ಅಗ್ಗದ ದರದಲ್ಲಿ ಟಿವಿ, ಫ್ರಿಡ್ಜ್ ಇನ್ನಿತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಾರಾಟ ಮಾಡುವ ಆಮಿಷ ತೋರಿಸಿ, 16 ಸಾವಿರ ಬ್ಯಾಂಕ್ ಖಾತೆಗಳ ವಿವರ ದಾಖಲಿಸಿ 40ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಸಿ ವಂಚನೆ ನಡೆಸಿದ್ದ ಬೃಹತ್ ಆನ್‍ಲೈನ್ ವಂಚನೆಯ ಜಾಲವನ್ನು ಸಿಐಡಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಂಚನೆಯ ಜಾಲದಲ್ಲಿ ಭಾಗಿಯಾಗಿದ್ದ ಜಾರ್ಖಂಡ್‍ನ ಬೊಕಾರೋ ನಗರದ, ಕಪಿಲ್‍ದೇವ್, ಸುಮನ್ ಮತ್ತು ಸೂರಜ್‍ಕುಮಾರ್‍ ನನ್ನು ನಗರದಲ್ಲಿ ಹಾಗೂ ಜಾರ್ಖಂಡ್‍ನಲ್ಲಿ ಸುಶೀಲ್‍ಕುಮಾರ್ ಸುಮಂತ್, ಬಿಪ್ಲವ್‍ ಕುಮಾರ್‍ ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಐಡಿಯ ಪೊಲೀಸ್ ಮಹಾನಿರ್ದೇಶಕ ಕಿಶೋರ್ ಚಂದ್ರ ಅವರು ತಿಳಿಸಿದರು.

ಆನ್‍ಲೈನ್ ಮೂಲಕ ಯಾವುದೇ ವಸ್ತುಗಳನ್ನು ಖರೀದಿಸಬೇಕಾದರೆ ಆ ವೆಬ್‍ಸೈಟ್‍ನ ಎಸ್‍ಎಸ್‍ಎಲ್ ದೃಢೀಕರಣವನ್ನು ಖಚಿತ ಪಡಿಸಿಕೊಳ್ಳದೇ ಇದ್ದರೆ ಸಾರ್ವಜನಿಕರು ವಂಚನೆಗೊಳಗಾಗುವ ಅಪಾಯವು ಈ ವಂಚನಾ ಜಾಲ ಪತ್ತೆಯಿಂದ ಬಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಜು.13ರಂದು ನಗರದಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ನಾಲ್ವರ ಖತರ್ನಾಕ್ ಗ್ಯಾಂಗ್ ಸಿಕ್ಕಿ ಬಿದ್ದಿದೆ. ಪ್ರಾಥಮಿಕ ಹಂತದಲ್ಲಿ ಈ ನಾಲ್ವರು ಸಿಕ್ಕಿಬಿದ್ದಿದ್ದು ವಂಚನಾ ಜಾಲದಲ್ಲಿ ಭಾಗಿಯಾಗಿರುವ ಆರೋಪಿಗಳ ಮಾಹಿತಿ ಪತ್ತೆಯಾಗಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ಆರೋಪಿಗಳು ಸುಮಾರು, 600ಕ್ಕೂ ಹೆಚ್ಚು ವಿವಿಧ  ಹೆಸರಿನ ವೆಬ್‍ಸೈಟ್ ಸೃಷ್ಟಿಸಿ 30ಸಾವಿರ ಬೆಲೆಯ ರೆಫ್ರಿಜಿರೇಟರ್‍ ಅನ್ನು 3ಸಾವಿರಕ್ಕೆ, ಒಂದು ಲಕ್ಷ ರೂ.ನ ಲ್ಯಾಪ್‍ಟಾಪ್‍ನನ್ನು 8ಸಾವಿರಕ್ಕೆ ಕೊಡುವುದಾಗಿ ಗೂಗಲ್ ಮತ್ತು ಫೇಸ್‍ಬುಕ್‍ನಲ್ಲಿ ಜಾಹೀರಾತು ನೀಡುತ್ತಿದ್ದರು ಎಂದು ವಿವರಿಸಿದರು.

ಇದನ್ನು ನಂಬಿದ ಗ್ರಾಹಕರು ಆನ್‍ಲೈನ್‍ನಲ್ಲಿ ವಸ್ತುಗಳನ್ನು ಖರೀದಿಸುವಾಗ ಬ್ಯಾಂಕ್ ವಿವರಗಳನ್ನು ಸಲ್ಲಿಸಬೇಕಿತ್ತು. ಈ ರೀತಿ ಸಲ್ಲಿಸಿದ ವಿವರಗಳನ್ನು ಕದಿಯುತ್ತಿದ್ದ ಆರೋಪಿಗಳು ನಿಧಾನವಾಗಿ ಗ್ರಾಹಕರ ಖಾತೆಗಳಿಂದ 1000, 2ಸಾವಿರ ಹಣವನ್ನು ದೋಚುತ್ತಿದ್ದರು.ಅತಿ ಕಡಿಮೆ ಪ್ರಮಾಣದ ಹಣ ಡ್ರಾ ಮಾಡುತ್ತಿದ್ದರಿಂದ ಇದು  ಬಹುತೇಕ ಗ್ರಾಹಕರ ಗಮನಕ್ಕೆ ಬರುತ್ತಿರಲಿಲ್ಲ. ಒಂದು ವೇಳೆ  ಬಂದರೂ ಸಣ್ಣಪ್ರಮಾಣದ ಹಣವಾಗಿದ್ದರಿಂದ ಗ್ರಾಹಕರು ನಿರ್ಲಕ್ಷಿಸುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ತಮಗೆ ಸಿಕ್ಕ ಬ್ಯಾಂಕ್ ವಿವರಗಳಿಂದ ಹಣ ಲಪಟಾಯಿಸುತ್ತಿದ್ದರು.

ಬಂಧಿತ ನಾಲ್ಕು ಮಂದಿ ಆರೋಪಿಗಳ ಬಳಿ ದೇಶಾದ್ಯಂತ  ಸುಮಾರು 16 ಸಾವಿರ ಬ್ಯಾಂಕ್ ಖಾತೆಗಳ ವಿವರ ಇರುವುದು ಪತ್ತೆಯಾಗಿದೆ. ಕಳೆದ ಜು.13ರಂದು  ಬೆಂಗಳೂರಿನ ನಿವಾಸಿಯೊಬ್ಬರು ಸಿಐಡಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ, ಮೇ 15ರಂದು ತಮ್ಮ ಬ್ಯಾಂಕ್ ಖಾತೆಯಿಂದ ಐದು ಸಾವಿರ ಮತ್ತು 2 ಸಾವಿರ ರೂ. ಹಣ ಕಡಿತಗೊಂಡಿದೆ. ನಾನು ಯಾವುದೇ ಹಣದ ವಹಿವಾಟು ಮಾಡಿಲ್ಲ ಎಂದು ದೂರು ನೀಡಿದ್ದರು. ಕೇಸು ದಾಖಲಿಸಿ ತನಿಖೆ ಆರಂಭಿಸಿದ ಸಿಐಡಿ ಪೊಲೀಸರಿಗೆ ಐಡಿಯಾ ಮನಿ ಮತ್ತು ಎಸ್‍ಬಿಐ ಬಡ್ಡಿ ಇಲ್ಲಿಗೆ ದೂರುದಾರರ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಖಾತೆ ಜೆ.ಪಿ.ನಗರದ ಎಸ್‍ಬಿಎಂನಲ್ಲಿದ್ದು, ಅಜಯ್‍ಸಿಂಗ್ ಎಂಬುವರಿಗೆ ಸೇರಿದ್ದಾಗಿತ್ತು.

ವಿಚಾರಣೆ ಮುಂದುವರೆಸಿದಾಗ ಕಪಿಲ್‍ದೇವ್ ಸುಮನ್ ಎಂಬುವರು ನಕಲಿ ದಾಖಲೆಗಳನ್ನು ನೀಡಿ ಅದೇ ಅಜಯ್‍ಸಿಂಗ್ ಹೆಸರಿನಲ್ಲಿ ಖಾತೆ ತೆರೆದಿರುವುದು ಬೆಳಕಿಗೆ ಬಂದಿತು. ಆರೋಪಿ ಬ್ಯಾಂಕ್‍ನಿಂದ ಹಣ ಪಡೆಯಲು ಬಂದಾಗ ಆತನನ್ನು ಬಂಧಿಸಿ ಕೂಲಕಂಷವಾಗಿ ವಿಚಾರಣೆ ನಡೆಸಿದಾಗ ಮತ್ತೊಬ್ಬ ಆರೋಪಿ ಸೂರಜ್‍ಕುಮಾರ್ ಇದರಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಈ ಇಬ್ಬರು ನೀಡಿದ ಮಾಹಿತಿ ಆಧರಿಸಿ ಸಿಐಡಿ ಮೂರು ತಂಡಗಳನ್ನು ರಚಿಸಿ  ಒಂದು ತಂಡವನ್ನು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲು, ಮತ್ತೊಂದು ತಂಡವನ್ನು ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲು ಮೂರನೇ ತಂಡವನ್ನು ಆರೋಪಿಗಳ ತವರೂರಾದ ಜಾರ್ಖಂಡ್‍ನ ಬೊಕಾರೋ ನಗರಕ್ಕೆ ಕಳುಹಿಸಲಾಗಿತ್ತು.

ಬಂಧಿತ ಆರೋಪಿಗಳು ನೀಡಿರುವ ಮಾಹಿತಿಯಂತೆ  ಬೊಕಾರೋ ನಗರದ ಸುಶೀಲ್‍ಕುಮಾರ್ ಸುಮನ್ ಮತ್ತು ಡಿಪ್ಲೌವ್ ಕುಮಾರ್ ಅವರು ಈ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಖಚಿತವಾಗಿತ್ತು. ಆದರೆ, ಈ ಇಬ್ಬರು ಆರೋಪಿಗಳು ಪೊಲೀಸರು ಬರುವ ಮಾಹಿತಿ ತಿಳಿದು ರಾಂಚಿ, ಬೋದ್‍ಗಯಾ, ಪಾಟ್ನಾಗೆ ಪರಾರಿಯಾಗಿದ್ದರು. ಅವರನ್ನು ಹಿಡಿದು ಬಂಧಿಸಿದಾಗ ಆರೋಪಿಗಳು 40 ಕ್ಕೂ ಹೆಚ್ಚು ಬ್ರ್ಯಾಂಚ್ ಖಾತೆಗಳನ್ನು ಬಳಸಿರುವುದು ಕಂಡು ಬಂತು. 460 ಮೊಬೈಲ್ ಸಿಮ್‍ಕಾರ್ಡ್‍ಗಳು, 15 ಮೊಬೈಲ್ ಹ್ಯಾಂಡ್ ಸೆಟ್, ಲ್ಯಾಪ್‍ಟಾಪ್, ಹಾರ್ಡ್‍ಡಿಸ್ಕ್, ಮೆಮೋರಿಕಾರ್ಡ್, ಡಾಟಾಕಾರ್ಡ್, ಅಸಲಿ ಹಾಗೂ ನಕಲಿ ಗುರುತಿನ ದಾಖಲೆಗಳು ಮತ್ತು 16ಸಾವಿರ  ವಿವಿಧ ಗ್ರಾಹಕರ ಬ್ಯಾಂಕ್ ಮಾಹಿತಿಗಳು ಪತ್ತೆಯಾಗಿವೆ.

ಆರೋಪಿ ಸುಶೀಲ್‍ಕುಮಾರ್ ಸುಮನ್ 600ಕ್ಕೂ ಹೆಚ್ಚು ವೆಬ್‍ಸೈಟ್‍ಗಳನ್ನು ಖರೀದಿಸಿ ವ್ಯವಹಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು 600ಕ್ಕೂ ಹೆಚ್ಚು ಡೊಮೈನ್‍ಗಳನ್ನು ಖರೀದಿಸಿದ್ದಾರೆ. ಇನ್ನು ವೆಬ್ ಸೈಟ್ ಗಳಲ್ಲಿ ಜಾಹೀರಾತು ನೀಡಿ ಸಾವಿರದಿಂದ 1.80 ಲಕ್ಷ  ಹೂಡಿಕೆ ಮಾಡುವ ಆಹ್ವಾನ ನೀಡಿ, ಪ್ರತಿ ಹೂಡಿಕೆಗೂ ಶೇ.2ರಷ್ಟು ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದಾನೆ. ಕಡಿಮೆ ಬೆಲೆಗೆ ವಸ್ತುಗಳನ್ನು ಮಾರುವ ಆನ್‍ಲೈನ್ ವ್ಯವಹಾರ ಮಾಡಲಾಗುತ್ತಿತ್ತು. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಇಲ್ಲದೆ ಮೋಸ ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.

ಈ ವಂಚನೆಯ ಜಾಲವನ್ನು ನಿನ್ನೆ ದಸ್ತಗಿರಿ ಮಾಡಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಆರೋಪಿಗಳು ಎಷ್ಟು ಜನರಿಗೆ ಮೋಸ ಮಾಡಿದ್ದಾರೆ, ಎಷ್ಟು ಹಣ ಲಪಟಾಯಿಸಿದ್ದಾರೆ. 600 ವೆಬ್‍ಸೈಟ್‍ಗಳನ್ನು ಈ ನಾಲ್ವರೇ ನಿಭಾಯಿಸುತ್ತಿದ್ದರೇ ಅಥವಾ ಬೇರೆಯವರ ಕೈವಾಡ ಇದೆಯೇ ಎಂಬೆಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸಿ.ಎಚ್.ಪ್ರತಾಪ್‍ರೆಡ್ಡಿ, ಐಜಿಪಿ ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ