ಪ್ರಧಾನಿ ಅವರದ್ದೂ ಬರೀ ಮಾತು ಸಾಧನೆ ಶೂನ್ಯ..?

Kannada News

25-07-2017 559

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರದ್ದು ಪ್ರತಿ ದಿನ ಬರೀ ಮಾತು, ಮಾತು, ಮಾತು,…ಬಾಯಿ ಬಡಾಯಿ, ಸಾಧನೆ ಮಾತ್ರ ಶೂನ್ಯ. ಏನೂ ಮಾಡದೆ ಮಾರ್ಕೆಟಿಂಗ್ ಮಾಡುವಲ್ಲಿ ನಿಸ್ಸೀಮರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ, ಬಡವರು ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಆದರೆ ಸೂಕ್ತ ಪ್ರಚಾರ ಸಿಗುವುದಿಲ್ಲ. ಮೋದಿ ಅವರು ಯಾವುದೇ ಅಭಿವೃದ್ಧಿ ಕಾರ್ಯಕ್ರಗಳನ್ನು ಕೈಗೆತ್ತಿಕೊಳ್ಳದಿದ್ದರೂ, ಭರ್ಜರಿ ಪ್ರಚಾರ ಪಡೆಯುತ್ತಾರೆ ಎಂದು ಆರೋಪಿಸಿದರು. ಸರ್ವಜ್ಞ ನಗರ, ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ವತಿಯಿಂದ ವಿವಿಧ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಕಾರ್ಯಕ್ರಮಗಳನ್ನು ಹೆಚ್ಚು-ಕಡಿಮೆ ಚುನಾವಣಾ ಭಾಷಣಕ್ಕಾಗಿ ಬಳಸಿಕೊಂಡಂತಿತ್ತು.

ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ವಿದೇಶಗಳಲ್ಲಿದ್ದ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಅಕೌಂಟ್‌ನಲ್ಲಿ 15 ಲಕ್ಷ ರೂ. ಇಡುತ್ತೇನೆ ಎಂದು ಘೋಷಿಸಿದ್ದರು. ಆದರೆ ಆದದ್ದೇನು, ಬಡವರ ಅಕೌಂಟ್‌ಗೆ ಕನಿಷ್ಟ 15 ರೂ. ಕೂಡ ಇಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು. ಅಚ್ಚೇ ದಿನ್ ಆಯೇಗಾ ಎಂದು ಬರೀ ಬಾಯಿ ಮಾತಿನಲ್ಲೇ ಹೇಳಿದರು. ಮೋದಿ ಅವರು ಆರಂಭದಲ್ಲಿ ತಂದ ಜನ್ ಧನ್‌ನಿಂದ ಏನು ಅನುಕೂಲವಾಯಿತು. ಬಡವರಿಗೆ ಸೂರು, ಬಟ್ಟೆ, ಊಟ ಸಿಕ್ಕಿತೇ ಎಂದು ಖಾರವಾಗಿ ಪ್ರಶ್ನಿಸಿದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇಂಡಿಯಾ ಈಸ್ ಶೈನಿಂಗ್ ಎಂದು ಬಡಾಯಿ ಕೊಚ್ಚಿಕೊಂಡರು. ಆದರೆ ದಲಿತರು, ಬಡವರು, ಅಲ್ಪಸಂಖ್ಯಾತರ ಬದುಕು ಶೈನಿಂಗ್ ಆಗಲಿಲ್ಲ. ಶ್ರೀಮಂತರು ಮಾತ್ರ ಇನ್ನಷ್ಟು ಶ್ರೀಮಂತರಾದರು ಎಂದು ಆಪಾದಿಸಿದರು.

ಬಿಜೆಪಿ ನಡಿಗೆ ದಲಿತರ ಕಡೆಗೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುತ್ತಾರೆ. ದಲಿತರ ಮನೆಯಲ್ಲಿ ಉಪಾಹಾರಕ್ಕೆಂದು ತೆರಳುವ ಅವರು, ಹೋಟೆಲ್‌ನಿಂದ ತಿಂಡಿ ತರಿಸಿ ತಿನ್ನುತ್ತಾರೆ. ಇದೆಲ್ಲಾ ರಾಜಕೀಯ ನಾಟಕ. ದಲಿತರ ಮನೆಯಿಂದ ಹೆಣ್ಣು ತನ್ನಿ ಎಂದು ಹೇಳುತ್ತಿದ್ದಂತೆ, ದಲಿತರ ಮನೆಗಳಿಗೆ ತಿಂಡಿ ತಿನ್ನಲು ಹೋಗುವುದನ್ನೇ ಬಿಟ್ಟುಬಿಟ್ಟರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ