ಚಾಲಕ ರಹಿತ ಕಾರು ಬೇಡ..!

25-07-2017 494
ನವದೆಹಲಿ: ತಂತ್ರಜ್ಞಾನ ಜಗತ್ತಿನೆಲ್ಲೆಡೆ ಆವರಿಸಿ, ಹಲವಾರು ಹೊಸ ಹೊಸ ಆವಿಷ್ಕಾರಗಳನ್ನು ಹೊರತರುತ್ತಿದೆ. ಒಂದೆಡೆ ಮುಂದುವರೆದ ತಂತ್ರಜ್ಞಾನ ಅಭಿವೃದ್ಧಿಗೆ ಅನಿವಾರ್ಯವಾಗಿದೆ. ಇದೇ ಸಂದರ್ಭದಲ್ಲಿ ಹೊಸ ತಂತ್ರಜ್ಞಾದ ಸೈಡ್ ಎಫೆಕ್ಟ್ ನಿಂದ ಉದ್ಯೋಗ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಹಾಗೆಂದ ಮಾತ್ರಕ್ಕೆ ತಂತ್ರಜ್ಞಾನ ವಿರುದ್ಧವೇನು ನಮ್ಮ ವಾದವಲ್ಲ, ಮುಂದುವರೆದ ರಾಷ್ಟ್ರಗಳಲ್ಲಿ ತಂತ್ರಜ್ಞಾನ ತೀರಾ ಹೆಚ್ಚಿನಮಟ್ಟಕ್ಕೆ ಹೋಗುತ್ತಿದ್ದೂ, ಪ್ರತಿಯೊಂದು ಕೆಲಸಕ್ಕೂ ರೋಬೋಟ್ ಗಳು ಮುಂತಾದ, ಮುಂದುವರಿದ ತಂತ್ರಜ್ಞಾನ ಭರಿತ ಆವಿಷ್ಕಾರಗಳ ಬಳಕೆ ಹೆಚ್ಚಾಗುತ್ತಲೇ ಇವೆ. ಮತ್ತು ಜನರು ಇದರಿಂದ ಹೆಚ್ಚಿನ ಆಕರ್ಷಣೆಗೊಳಗಾಗುತ್ತಿರುವುದು ನಿಜ ಸಂಗತಿಯಾಗಿದೆ. ಇನ್ನು ಪ್ರಮುಖವಾಗಿ ವಿದೇಶಗಳಲ್ಲಿ ಉದ್ದೇಶಿತ ಚಾಲಕ ರಹಿತ ಕಾರಿನ ವಿಚಾರ ಚಾಲ್ತಿಯಲ್ಲಿದ್ದೂ, ಈ ತಂತ್ರಜ್ಞಾನ ಭಾರತದಲ್ಲಿ ಪರಿಚಯಿಸಲು ದೊಡ್ಡ ಮಟ್ಟದಲ್ಲಿ ಮಾತುಕತೆಯಾಗದಿದ್ದರೂ, ಅಲ್ಲಲ್ಲಿ ಈ ಕುರಿತು ಕೇಳಿಬರುತ್ತಿದ್ದ ಬೆನ್ನಲ್ಲೇ, ಇದಕ್ಕೆ ಇಲ್ಲಿನ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಾಲಕ ರಹಿತ ಕಾರಿನಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಭಾರತದಲ್ಲಿ ಚಾಲಕ ರಹಿತ ಕಾರುಗಳ ತಂತ್ರಜ್ಞಾನವನ್ನು ಬರಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತದೇ ಹೊರತು, ದೇಶಕ್ಕೆ ಆದಾಯವಾಗುವ ಲಕ್ಷಣಗಳು ಕಡಿಮೆ ಎಂದಿದ್ದಾರೆ. ಇದರ ಬದಲು ಸರ್ಕಾರ ಸುಮಾರು 50 ಲಕ್ಷ ಚಾಲಕರಿಗೆ ಸೂಕ್ತ ತರಬೇತಿ ನೀಡಿ, ಕೌಶಲ್ಯಗಳನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತದೆ ಎಂದಿದ್ದಾರೆ. ಮತ್ತು ದೇಶದಲ್ಲಿ ಉದ್ಯೋಗ ಕಡಿತಗೊಳಿಸುವ ಯಾವುದೇ ತಂತ್ರಜ್ಞಾನಕ್ಕೂ ಪ್ರೋತ್ಸಾಹ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ