2500 ಡೆಂಘಿ ಪ್ರಕರಣಗಳು ಪತ್ತೆ !

Kannada News

24-07-2017 591

ಬೆಂಗಳೂರು: ಡೆಂಘಿ ಜ್ವರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದ್ದು, ರಾಜ್ಯಾದ್ಯಂತ ಕಳೆದ ಏಳು ತಿಂಗಳಲ್ಲಿ ಸರಿಸುಮಾರು ೨೫೦೦ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಸರ್ಕಾರವನ್ನು ನಿದ್ದೆಗೆಡಿಸುವಂತೆ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೆಂಘಿ ಪ್ರಕರಣ ತಡೆಗಟ್ಟಲು ಜನರಲ್ಲಿ ಅರಿವು ಮೂಡಿಸುವುದೂ ಸೇರಿದಂತೆ, ಇನ್ನಿತರೆ ಕೆಲಸಗಳಿಗೆ ಸರ್ಕಾರ ಮುಂದಾಗಿದೆ. ಆದರೂ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಅರಿವು ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದ್ದು, ಜಾಗೃತಿ ಮೂಡಿಸಲು ೮೪೩ ಮಂದಿ ನೇಮಕ ಮಾಡಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾದ ಪ್ರಕರಣಗಳೇ ಅಧಿಕವಾಗಿದ್ದು, ಖಾಸಗಿ ಆಸ್ಪತ್ರೆಗಳಿಂದ ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಬೇಕಾಗಿದೆ. ಡೆಂಘಿ ಪ್ರಕರಣಗಳಲ್ಲಿ ಮೈಸೂರು, ಮಂಡ್ಯ, ಉಡುಪಿ ದಾವಣಗೆರೆ, ಚಿತ್ರದುರ್ಗ,ಹಾವೇರಿ, ಗದಗ,ತುಮಕೂರು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ. ಇತ್ತ ಬೆಂಗಳೂರಿನ ಖಾಸಗೀ ಆಸ್ಪತ್ರೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿವೆ. ಆದರೆ ಮಹಾನಗರ ಪಾಲಿಕೆಯ ದಾಖಲೆಗಳ ಪ್ರಕಾರ ಡೆಂಘಿ ಪ್ರಕರಣ ದಾಖಲಾಗಿರುವುದು ತೀರಾ ಕಡಿಮೆ. ಪ್ರಮುಖ ಸರ್ಕಾರಿ ಆಸ್ಪತ್ರೆಗಳಾಗ ವಾಣಿ ವಿಲಾಸ, ಬೋರಿಂಗ್, ಕೆ.ಸಿನರಲ್, ವಿಕ್ಟೋರಿಯಾ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ಡೆಂಘಿ ಪ್ರಕರಣಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದವರಲ್ಲಿ ಬಹುತೇಕರು ಗುಣಮುಖರಾಗುತ್ತಿದ್ದಾರೆ. ಆದರೂ ಪ್ರತಿನಿತ್ಯ ೫೦ ರಿಂದ ೬೦ ಮಂದಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದು ಅದನ್ನು ನಿಯಂತ್ರಿಸುವುದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಡೆಂಘಿ, ಮಲೇರಿಯಾ ಸೇರಿದಂತೆ ಇನ್ನಿತರೆ ರೋಗಗಳಿಗೆ ಸ್ವಚ್ಚತೆ ಇಲ್ಲದಿರುವುದೇ ಕಾರಣವಾಗಿದ್ದು, ಡೆಂಘಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಮಾಡಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಿದದ್ದು, ಡೆಂಘಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದೆ. ಡೆಂಘಿ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಫಾಗಿಂಗ್ ಮಾಡಲು ಮತ್ತು ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಕೆ ಇರುವಂತೆ ಮಾಡಲು ಬೆಂಗಳೂರಿನಲ್ಲಿ ೨೫೦ ಮಂದಿ ಸೇರಿದಂತೆ ರಾಜ್ಯಾದ್ಯಂತ ೮೪೩ ಆರೋಗ್ಯ ಅಧಿಕಾರಿಗಳನ್ನು ಇಲಾಖೆ ನಿಯೋಜಿಸಿದೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ