ಜಾಲಿ-ಜಾಲಿ ಕೋಚ್...

Kannada News

24-07-2017 662

ಈ ವ್ಯಕ್ತಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದೇ ಇಪ್ಪತ್ತೈದು ವರ್ಷಗಳಾದವು, ಹೀಗಿದ್ದರೂ ಈತ, ಕ್ರಿಕೆಟ್ ರಂಗದ ಚಿರಯುವಕ. ಒಂದಲ್ಲಾ ಒಂದು ರೀತಿಯಲ್ಲಿ ಸದಾಕಾಲ, ಭಾರತದ ಕ್ರಿಕೆಟ್ ಜೊತೆಗೆ ಸಂಬಂಧ ಹೊಂದಿರುವ ಈ ಮನುಷ್ಯನನ್ನು, ದಿಲ್ ದಾರ್ ಆದ್ಮಿ ಎಂದೇ ಕರೆಯಬಹುದು. ಕ್ರಿಕೆಟ್ ಆಟ ಮತ್ತು ಅದರ ಎಲ್ಲಾ ಆಯಾಮಗಳನ್ನು ಅರೆದು ಕುಡಿದಿರುವ ಈ ವ್ಯಕ್ತಿಗೆ, ಇವತ್ತಿಗೂ ಕ್ರಿಕೆಟ್ ಅನ್ನುವುದೇ ಬದುಕು. ಒಂದು ಕಾಲದಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಆಗಿ ಮಿಂಚಿದ್ದ ಇವರು, ಇದೀಗ ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹೌದು, ನಾವು ರವಿಶಾಸ್ತ್ರಿ ಬಗ್ಗೆ ಹೇಳುತ್ತಿದ್ದೇವೆ. ಭಾರತದ ಕ್ರಿಕೆಟ್‌ನ ವರ್ಣರಂಜಿತ ವ್ಯಕ್ತಿಯಾಗಿರುವ ರವಿಶಾಸ್ತ್ರಿ ಅವರ ಜೀವನ, ಸಾಧನೆ ಮತ್ತು ವಿವಾದಗಳ ಬಗ್ಗೆ ನಿಮಗಾಗಿ ಒಂದು ಸ್ಪೆಷಲ್ ರಿಪೋರ್ಟ್‌.

ರವಿಶಾಸ್ತ್ರಿ ಒಂದು ಲೆಕ್ಕದಲ್ಲಿ ಕನ್ನಡಿಗರು, ಏಕೆಂದರೆ, ಇವರ ಪೂರ್ವಜರು ಮಂಗಳೂರು ಬಳಿಯ ಕರ್ವಾಲು ಗ್ರಾಮದವರು. ರವಿಶಾಸ್ತ್ರಿ ಹುಟ್ಟಿದ್ದು ಮುಂಬೈನಲ್ಲಿ, 1962ರ ಮೇ 27 ಇವರ ಜನ್ಮದಿನ, ಪೂರ್ಣಹೆಸರು ರವಿಶಂಕರ್‌ ಶಾಸ್ತ್ರಿ. ತಂದೆ ಜಯದ್ರಥ್ ಶಾಸ್ತ್ರಿ, ತಾಯಿ ಲಕ್ಷ್ಮಿ, ಸೋದರಿ ದೀಪಿಕಾ. ವೃತ್ತಿಯಲ್ಲಿ ವೈದ್ಯರಾಗಿದ್ದ ಜಯದ್ರಥ್ ಶಾಸ್ತ್ರಿ ಮುಂಬೈನ ಮಾಹಿಮ್ ನಲ್ಲಿ ನೆಲೆಸಿದ್ದರು. ರವಿಶಾಸ್ತ್ರಿ ತಾತ ಎಂ.ಸಿ.ಶಾಸ್ತ್ರಿ ಮಂಗಳೂರಿನ ಪ್ರಖ್ಯಾತ ಆಯುರ್ವೇದ ವೈದ್ಯರು. ಮುಂಬೈನ ಮಾಟುಂಗಾದ ಡಾನ್ ಬಾಸ್ಕೊ ಹೈಸ್ಕೂಲ್‌ನಲ್ಲಿ ಓದಿದ ರವಿಶಾಸ್ತ್ರಿ, ರಾಮ್ ನಿರಂಜನ್ ಆನಂದೀ ಲಾಲ್ ಪೊದ್ದರ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಸರಿಯಾಗಿ ಆರುಅಡಿ ಮೂರುಇಂಚು ಎತ್ತರವಿರುವ ಶಾಸ್ತ್ರಿಯವರದ್ದು, ಕ್ರಿಕೆಟ್‌ಗೆ ಹೇಳಿ ಮಾಡಿಸಿದಂಥ ಶರೀರ. ಬಲಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಬೌಲರ್ ಆಗಿದ್ದ ರವಿಶಾಸ್ತ್ರಿ, ಕೇವಲ 17 ವರ್ಷ ಹತ್ತು ತಿಂಗಳ ಹುಡುಗನಾಗಿದ್ದಾಗಲೇ ಮುಂಬೈ ಪರ ರಣಜಿ ಪಂದ್ಯದಲ್ಲಿ ಆಡಿದ್ದರು. ಆ ಕಾಲಕ್ಕೆ ರಣಜಿ ಕ್ರಿಕೆಟ್ ಆಡಿದ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 19ರ ಹರೆಯದ ರವಿಶಾಸ್ತ್ರಿ ಇನ್ನೂ ಕಾಲೇಜಿನಲ್ಲಿದ್ದಾಗಲೇ ಟೀಮ್ ಇಂಡಿಯಾದಿಂದ ಕರೆ ಬಂದಿತ್ತು. ನ್ಯೂಜಿಲೆಂಡ್ ಪ್ರವಾಸದ ವೇಳೆ, ಭಾರತ ತಂಡದ ಸ್ಪಿನ್ನರ್ ದಿಲಿಪ್ ದೋಷಿ ಗಾಯಗೊಂಡಿದ್ದರಿಂದ ರವಿಶಾಸ್ತ್ರಿಯನ್ನು ಕರೆಸಿಕೊಳ್ಳಲಾಗಿತ್ತು. ವೆಲ್ಲಿಂಗ್‌ಟನ್ ಟೆಸ್ಟ್ ಆರಂಭಕ್ಕೆ ಒಂದು ದಿನ ಬಾಕಿಯಿದ್ದಂತೆ, ನ್ಯೂಜಿಲೆಂಡ್‌ಗೆ ಆಗಮಿಸಿದ ಶಾಸ್ತ್ರಿ, ತಂಡ ಸೇರಿಕೊಂಡಿದ್ದರು. 1981ರ ಫೆಬ್ರವರಿ 21ರಂದು ಆರಂಭಗೊಂಡ ತಮ್ಮ ವೃತ್ತಿ ಜೀವನದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್ ನಲ್ಲಿ ತಲಾ ಮೂರು ವಿಕೆಟ್ ಪಡೆದಿದ್ದರು.

ಅದೇ ವರ್ಷದ ನವೆಂಬರ್ 25ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವ ತೋರುವ ರವಿಶಾಸ್ತ್ರಿ, ಒಂದು ದಶಕಕ್ಕೂ ಹೆಚ್ಚುಕಾಲ ಭಾರತ ಕ್ರಿಕೆಟ್‌ನ ಆಧಾರ ಸ್ತಂಬಗಳಲ್ಲೊಬ್ಬರಾಗಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ದಿನಗಳಲ್ಲಿ ಹತ್ತನೇ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯುತ್ತಿದ್ದ ರವಿಶಾಸ್ತ್ರಿ, ಕೇವಲ ಒಂದೂವರೆ ವರ್ಷ ಕಳೆಯುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬಡ್ತಿ ಪಡೆದಿದ್ದರು. ಇಂಗ್ಲೆಂಡಿನಲ್ಲಿ ನಡೆದ 1983ರ ವಿಶ್ವಕಪ್‌ನ ಎರಡು ಪಂದ್ಯಗಳಲ್ಲಿ ಕೆ.ಶ್ರೀಕಾಂತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು.

ಒಂದು ಕಾಲದಲ್ಲಿ ಅತ್ಯಂತ ನಿಧಾನಗತಿಯಲ್ಲಿ ರನ್ ಪೇರಿಸುವ ಬ್ಯಾಟ್ಸ್ಮನ್ ಎಂಬ ಟೀಕೆಗೆ ಗುರಿಯಾಗಿದ್ದ ರವಿಶಾಸ್ತ್ರಿ ವಿರುದ್ಧ, ಅವರು ಸ್ವಾರ್ಥಿ, ತಂಡಕ್ಕಾಗಿ ಆಡುವುದಿಲ್ಲ, ತಮಗಾಗಿ ಆಡಿಕೊಳ್ಳುತ್ತಾರೆ ಅನ್ನುವ ಆರೋಪಗಳು ಕೇಳಿ ಬಂದಿದ್ದವು. ಆ ಸಂದರ್ಭದಲ್ಲಿ, ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿದ್ದ ಸುನಿಲ್ ಗವಾಸ್ಕರ್‌ ಒತ್ತಾಸೆಯ ಕಾರಣದಿಂದಲೇ ರವಿಶಾಸ್ತ್ರಿ ತಂಡದಲ್ಲಿ ಉಳಿದಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದ್ದವು. ಆದರೆ, ಯಾವುದೇ ಉದ್ವೇಗಕ್ಕೊಳಗಾಗದ ಶಾಸ್ತ್ರಿ, ಇವೆಲ್ಲ ಆರೋಪಗಳನ್ನೂ ಚೆನ್ನಾಗಿ ನಿಭಾಯಿಸಿದರು.

ತೀವ್ರತರವಾದ ಮೊಣಕಾಲು ನೋವಿನ ಸಮಸ್ಯೆಗೆ ಒಳಗಾದ ರವಿಶಾಸ್ತ್ರಿ, 1992ರ ಡಿಸೆಂಬರ್‌ನಲ್ಲಿ ತಮ್ಮ 30ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು. ಪ್ಯಾಡ್‌ಗಳಿಂದಾಚೆಗೆ ಫ್ಲಿಕ್ ಮಾಡುವ ‘ಚಪಾತಿ ಶಾಟ್’  ರವಿಶಾಸ್ತ್ರಿಯ ಫೇವರೆಟ್ ಹೊಡೆತ. 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ Benson & Hedges World Championship ನಲ್ಲಿ ಸುನಿಲ್ ಗವಾಸ್ಕರ್ ನೇತೃತ್ವದ ಭಾರತ ತಂಡ ಪ್ರಶಸ್ತಿ ಗೆದ್ದಿತ್ತು. ಆ ಟೂರ್ನಿಯಲ್ಲಿ 182 ರನ್ ಮತ್ತು 8 ವಿಕೆಟ್ ಗಳಿಸಿದ್ದ ರವಿಶಾಸ್ತ್ರಿ, ಸರಣಿ ಶ್ರೇಷ್ಠರಾಗಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪಟ್ಟ ಪಡೆದಿದ್ದರು. ಆಗಲೇ ಅವರಿಗೆ ಆಡಿ-100 ಕಾರು ಕಾರು ಬಹುಮಾನವಾಗಿ ಸಿಕ್ಕಿದ್ದು.

ತಂಡದ ಉಪನಾಯಕನಾಗಿ, ಹಲವಾರು ವರ್ಷ ಗವಾಸ್ಕರ್, ಕಪಿಲ್ ದೇವ್, ವೆಂಗ್‌ಸರ್ಕರ್ ಅವರಿಗೆ ನೆರವಾಗುತ್ತಿದ್ದ ಶಾಸ್ತ್ರಿಗೆ, ಕ್ಯಾಪ್ಟನ್ ಆಗುವ ಅವಕಾಶ ಸಿಗದೇ ಇದ್ದದ್ದೇ ದುರಾದೃಷ್ಟ. 1987-88ರಲ್ಲಿ ಕ್ಯಾಪ್ಟನ್ ಆಗಿದ್ದ ದಿಲಿಪ್ ವೆಂಗ್‌ಸರ್ಕಾರ್ ತಂಡದಿಂದ ಹೊರಗುಳಿದಿದ್ದರಿಂದ, ರವಿಶಾಸ್ತ್ರಿಗೆ ವೆಸ್ಟ್ ಇಂಡೀಸ್ ವಿರುದ್ಧ ಒಂದೇ ಒಂದು ಟೆಸ್ಟ್‌ನಲ್ಲಿ ನಾಯಕತ್ವ ವಹಿಸುವ ಅವಕಾಶ ಸಿಕ್ಕಿತ್ತು. ಅದು ನರೇಂದ್ರ ಹಿರ್ವಾನಿ ಅವರು, ತಮ್ಮ ಪದಾರ್ಪಣೆ ಪಂದ್ಯದಲ್ಲಿ 16 ವಿಕೆಟ್ ಗಳಿಸಿದ್ದ ಟೆಸ್ಟ್ ಪಂದ್ಯ.

ಸಚಿನ್ ತೆಂಡುಲ್ಕರ್‌, ವಿವಿಯನ್ ರಿಚರ್ಡ್ಸ್‌, ಶೇನ್ ವಾರ್ನ್ ,ಇಮ್ರಾನ್ ಖಾನ್ ಮತ್ತು ವಿರಾಟ್ ಕೊಹ್ಲಿ ರವಿಶಾಸ್ತ್ರಿಯ ಫೇವರೆಟ್ ಆಟಗಾರರು.  

ರವಿಶಾಸ್ತ್ರಿ, ವಿಶ್ವಸಂಸ್ಥೆಯ ಅಂಗಸಂಸ್ಥೆ ಯೂನಿಸೆಫ್‌ನ ನ್ಯಾಷನಲ್ ಗುಡ್ ವಿಲ್ ಅಂಬಾಸಡರ್ ಕೂಡ ಆಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ, ಟಾಟಾ ಸ್ಟೀಲ್‌ ನಲ್ಲಿನ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಶಾಸ್ತ್ರಿ, 1994ರಲ್ಲಿ ವೀಕ್ಷಕ ವಿವರಣೆಗಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಮೊದಲಿಗೆ ESPN-STARನ ವೀಕ್ಷಕ ವಿವರಣೆಕಾರರಾಗಿದ್ದ ಶಾಸ್ತ್ರಿ, 2008ರಿಂದ ಬಿಸಿಸಿಐ ನೇಮಕದ ವೀಕ್ಷಕ ವಿವರಣೆಕಾರರಾದರು. ಒಂದಿಷ್ಟು ಸಮಯ, ಪಾಕಿಸ್ತಾನದ ವಾಸಿಮ್ ಅಕ್ರಮ್ ಜೊತೆಗೆ ಇವರು ಟಿವಿಯಲ್ಲಿ ನಡೆಸಿಕೊಡುತ್ತಿದ್ದ Shaz & Waz show ಕೂಡ ಜನಪ್ರಿಯವಾಗಿತ್ತು.

2007ರಲ್ಲಿ ಗ್ರೆಗ್ ಚಾಪಲ್ ಟೀಮ್ ಇಂಡಿಯಾದ ಕೋಚ್ ಸ್ಥಾನ ತ್ಯಜಿಸಿದ ನಂತರ, ರವಿಶಾಸ್ತ್ರಿ ಅವರು ತಂಡದ ತಾತ್ಕಾಲಿಕ ಕೋಚ್ ಆಗಿ ಬಾಂಗ್ಲಾ ಪ್ರವಾಸ ಕೈಗೊಂಡಿದ್ದರು. ಐಪಿಎಲ್‌ನ ಆಡಳಿತ ಮಂಡಳಿ ಸದಸ್ಯರೂ ಆಗಿರುವ ರವಿಶಾಸ್ತ್ರಿ, 2014ರ ಆಗಸ್ಟ್‌ನಿಂದ 2016ರ ಜೂನ್ ವರೆಗೂ ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದರು. 2016ರಲ್ಲಿ ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಗಿ ನೇಮಕಗೊಳ್ಳುವ ಆಸೆ ಹೊಂದಿದ್ದ ರವಿಶಾಸ್ತ್ರಿಗೆ ಒಂದಿಷ್ಟು ನಿರಾಸೆ ಆಗಿತ್ತು. ಏಕೆಂದರೆ, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರಿದ್ದ ಕ್ರಿಕೆಟ್ ಸಲಹಾ ಮಂಡಳಿ, ಅನಿಲ್ ಕುಂಬ್ಳೆ ಅವರ ಹೆಸರು ಶಿಫಾರಸ್ಸು ಮಾಡಿತ್ತು. ಕುಂಬ್ಳೆ ಅವಧಿಯಲ್ಲಿ, ಭಾರತ ತಂಡ ಸಾಕಷ್ಟು ಉತ್ತಮ ಸಾಧನೆ ಮಾಡಿತ್ತು. ಆದರೆ, ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ವೇಳೆ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಮಧ್ಯೆ ಹೊಂದಾಣಿಕೆಯಿಲ್ಲ ಎಂಬ ವರದಿಗಳು ಬಹಿರಂಗವಾಗಿದ್ದವು. ಕುಂಬ್ಳೆ ಅವರು, ‘ಆಟಗಾರರನ್ನು ನಡೆಸಿಕೊಳ್ಳುವ ಶೈಲಿ ಭಯಹುಟ್ಟಿಸುತ್ತದೆ’ ಎಂಬುದಾಗಿ ಕೊಹ್ಲಿ ಅಭಿಪ್ರಾಯಪಟ್ಟಿದ್ದರೆಂದು ಹೇಳಲಾಗಿತ್ತು. ಇದೆಲ್ಲಾ ಆದ ನಂತರ, ತಾವು ಕೋಚ್ ಆಗಿ ಮುಂದುವರಿಯುವುದಿಲ್ಲವೆಂದು ಹೇಳಿದ ಅನಿಲ್ ಕುಂಬ್ಳೆ, ವೆಸ್ಟ್ ಇಂಡೀಸ್ ಪ್ರವಾಸ ಹೊರಟ ತಂಡದಿಂದ ದೂರವುಳಿದಿದ್ದರು. ಆನಂತರದ ದಿನಗಳಲ್ಲಿ, ಟೀಮ್ ಇಂಡಿಯಾದ ಹೊಸ ಕೋಚ್ ಆಯ್ಕೆ ಸಂಬಂಧ, ಹಲವಾರು ನಾಟಕೀಯ ಬೆಳವಣಿಗೆಗಳು ನಡೆದವು. 2016ರಲ್ಲಿ ಕೋಚ್ ಆಗಲು ವಿಫಲರಾಗಿದ್ದ ರವಿಶಾಸ್ತ್ರಿ ಈ ಬಾರಿ ನನ್ನ ಆಯ್ಕೆ ಖಚಿತವಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರೆಂದು ವರದಿಯಾಗಿತ್ತು. 

ಇಷ್ಟು ಮಾತ್ರವಲ್ಲದೆ, ಕ್ಯಾಪ್ಟನ್ ಕೊಹ್ಲಿಯೂ ಕೂಡ, ರವಿಶಾಸ್ತ್ರಿಯೇ ಕೋಚ್ ಆಗಬೇಕು ಎಂಬ ಸಂದೇಶವನ್ನು ಸಂಬಂಧಪಟ್ಟವರಿಗೆ ತಲುಪಿಸಿದ್ದರಂತೆ. ಅನಿಲ್ ಕುಂಬ್ಳೆ ಅವರ ಗಂಭೀರ ವ್ಯಕ್ತಿತ್ವ, ಟೀಮ್ ಇಂಡಿಯಾದ ಇವತ್ತಿನ ಆಟಗಾರರಿಗೆ ಅಷ್ಟೇನೂ ಇಷ್ಟವಾಗಲಿಲ್ಲವೇನೋ. ಹೀಗಾಗಿ, ಡ್ರೆಸ್ಸಿಂಗ್ ರೂಮ್‌ನಲ್ಲಾಗಿರಲಿ, ಮೈದಾನದಲ್ಲಿ ತರಬೇತಿ ನೀಡುವಾಗಲಿ ಜಾಲಿ ಜಾಲಿಯಾಗಿರುವ ರವಿಶಾಸ್ತ್ರಿ ಆಯ್ಕೆಗೆ ಹೆಚ್ಚಿನ ಬೆಂಬಲ ಇದ್ದಂತೆ ಕಂಡುಬಂದಿತ್ತು. ಆಟಗಾರನಾಗಿ, ವೀಕ್ಷಕ ವಿವರಣೆಗಾರನಾಗಿ ಮತ್ತು ಭಾರತ ತಂಡದ ನಿರ್ದೇಶಕನಾಗಿ ಅಪಾರ ಅನುಭವ ಹೊಂದಿರುವ ರವಿಶಾಸ್ತ್ರಿ ಅವರನ್ನು, ಇದೀಗ ಟೀಮ್ ಇಂಡಿಯಾದ ಕೋಚ್ ಆಗಿ ನೇಮಿಸಲಾಗಿದೆ. 2019ರ ಜೂನ್‌-ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ ವರೆಗೂ ರವಿಶಾಸ್ತ್ರಿ ಮತ್ತು ಕೊಹ್ಲಿ ಜೋಡಿ ಭಾರತ ಕ್ರಿಕೆಟ್ ಅನ್ನು ಯಾವ ರೀತಿ ಮುಂದುವರಿಸುತ್ತದೆ ಅನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಇದೆಲ್ಲವೂ ರವಿಶಾಸ್ತ್ರಿ ಅವರ ಕ್ರಿಕೆಟ್ ಬದುಕಿನ ಈವರೆಗಿನ ಸಾಧನೆಗಳ ವಿವರ. ಕ್ರಿಕೆಟ್ ಹೊರತಾಗಿ ಬಿಡುವಿನ ವೇಳೆಯಲ್ಲಿ ಗಾಲ್ಫ್ ಆಡುವ ರವಿಶಾಸ್ತ್ರಿಗೆ, ಸಂಗೀತ ಕೇಳುವುದು ಅತ್ಯಂತ ಇಷ್ಟದ ಹವ್ಯಾಸ.  

ಎತ್ತರದ ನಿಲುವಿನ ಸ್ಫುರದ್ರೂಪಿ ರವಿಶಾಸ್ತ್ರಿ, ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನ ಸೊಗಸುಗಾರ ಪುಟ್ಟಸ್ವಾಮಿಯಾಗಿದ್ದರು.  

ರವಿಶಾಸ್ತ್ರಿ ಮತ್ತು ಬಾಲಿವುಡ್ ನಟಿ ಅಮೃತಾ ಸಿಂಗ್ ಪ್ರೇಮಪ್ರಕರಣ ಭಾರಿ ಸುದ್ದಿ ಮಾಡಿತ್ತು. ಆದರೆ, ಆನಂತರದ ದಿನಗಳಲ್ಲಿ ಅಮೃತಾ ಸಿಂಗ್, ಸೈಫ್ ಅಲಿ ಖಾನ್ ಪಟೌಡಿಯನ್ನು ಮದುವೆಯಾಗಿದ್ದು, ಹದಿಮೂರು ವರ್ಷಗಳ ದಾಂಪತ್ಯದ ನಂತರ, ಸೈಫ್ ಅಲಿ ಖಾನ್, ಅಮೃತಾಗೆ ವಿಚ್ಛೇದನ ಕೊಟ್ಟು, ಅಲ್ಲಿಇಲ್ಲಿ ಸುಳಿದಾಡಿ, ಕರೀನಾ ಕಪೂರ್ ಜೊತೆ ನಿಖಾ ಮಾಡಿಕೊಂಡಿದ್ದು ಬೇರೆ ವಿಚಾರ.

ರವಿಶಾಸ್ತ್ರಿ ಅವರು 1990ರಲ್ಲಿ ಋುತು ಸಿಂಗ್ ಅವರನ್ನು ವಿವಾಹವಾಗಿದ್ದರು. ಆದರೆ, ಶಾಸ್ತ್ರಿ-ಋುತು ದಂಪತಿಗೆ ಹದಿನೆಂಟು ವರ್ಷಗಳ ಕಾಲ ಮಕ್ಕಳೇ ಇರಲಿಲ್ಲ. ಆನಂತರ 2006ರಲ್ಲಿ ಕೆಲವರ ಸಲಹೆಯಂತೆ, ತಮ್ಮ ಮನೆದೇವತೆ ಮಂಗಳೂರು ಬಳಿಯ ಕರ್ವಾಲು ಗ್ರಾಮದ ಮಹಾವಿಷ್ಣು ಮತ್ತು ನಾಗಬನದಲ್ಲಿ ಪೂಜೆ ಸಲ್ಲಿಸಿ, ಹರಕೆ ಹೊತ್ತಿದ್ದರು. ಆನಂತರ 2008ರಲ್ಲಿ ಅವರಿಗೆ ಹುಟ್ಟಿದ ಮಗಳೇ ಅಲೇಖಾ. ಪ್ರತಿ ವರ್ಷವೂ ಕರ್ವಾಲು ಗ್ರಾಮಕ್ಕೆ ಬಂದು ಹೋಗುವ ಶಾಸ್ತ್ರಿ ಮತ್ತು ಕುಟುಂಬದವರು ಅಲ್ಲಿಯ ದೇಗುಲಗಳ ಜೀರ್ಣೋದ್ಧಾರಕ್ಕೂ ನೆರವಾಗಿದ್ದಾರೆ.

ತಮ್ಮ ತಂದೆ-ತಾಯಿ ಕನ್ನಡದವರೇ ಆಗಿದ್ದರೂ ಕೂಡ, ರವಿಶಾಸ್ತ್ರಿಗೆ ಸುಲಲಿತವಾಗಿ ಕನ್ನಡ ಮಾತನಾಡಲು ಬರುವುದಿಲ್ಲ, ಆದರೆ ಅರ್ಥವಾಗುತ್ತದಂತೆ.  ಹದಿನೇಳು ವರ್ಷಗಳ ಹಿಂದೆ ದೇಶದ ಕ್ರಿಕೆಟ್ ರಂಗದಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣ ಭುಗಿಲೆದ್ದಿತ್ತು. ಆ ಸಂದರ್ಭದಲ್ಲಿ ತೆಹಲ್ಕಾ ಪತ್ರಿಕೆ ನಡೆಸಿದ್ದ ಕುಟುಕು ಕಾರ್ಯಾಚರಣೆ ವೇಳೆ, ರವಿಶಾಸ್ತ್ರಿ ಅವರು, ಅಜರುದ್ದೀನ್  ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ರವಿಶಾಸ್ತ್ರಿ, ಕ್ರಿಕೆಟ್ ಜಗತ್ತಿನ ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರೂ, ಸೌರವ್ ಗಂಗೂಲಿ ಮತ್ತು ಇವರ ಗೆಳೆತನ ಅಷ್ಟಕಷ್ಟೇ. ಕಾಕೋರಿ ಕಬಾಬ್ ಮತ್ತು ನವಾಬಿ ಫಿಷ್ ಟಿಕ್ಕಾ ತಿನ್ನಲು ಇಷ್ಟಪಡುವ ರವಿಶಾಸ್ತ್ರಿಯವರದ್ದು, ಲೈಫ್ ಇರುವುದೇ ಎಂಜಾಯ್ ಮಾಡುವುದಕ್ಕೆ ಅನ್ನುವ ಮನೋಭಾವ.

ಕಳೆದ ಸುಮಾರು 25 ವರ್ಷಗಳಿಂದಲೂ ಭಾರತ ಕ್ರಿಕೆಟ್‌ನ ಧ್ವನಿ ಎಂಬಂತೆ ಕಂಡುಬರುವ ರವಿಶಾಸ್ತ್ರಿ ಅವರು, ಭಾರತ ಕ್ರಿಕೆಟ್ ತಂಡವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಿ ಅನ್ನುವುದಷ್ಟೇ ಎಲ್ಲಾ ಕ್ರಿಕೆಟ್  ಪ್ರೇಮಿಗಳ ಆಶಯ.

 

 

 

 

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ