ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ವಿಧಿವಶ !

Kannada News

24-07-2017

ಬೆಂಗಳೂರು: ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷರು ಮತ್ತು ಹಿರಿಯ ವಿಜ್ಞಾನಿ ಪ್ರೊ.ಯು.ಆರ್.ರಾವ್ (85) ಅವರು ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ಇಂದಿರಾನಗರ ನಿವಾಸದಲ್ಲಿ ತಡರಾತ್ರಿ 2.55 ಕ್ಕೆ ನಿಧನರಾಗಿದ್ದಾರೆ. ಇವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. 1932ರ ಮಾರ್ಚ್ 10ರಂದು ಉಡುಪಿ ಜಿಲ್ಲೆಯ ಆದಮಾರುನಲ್ಲಿ ಲಕ್ಷ್ಮಿನಾರಾಯಣ ಆಚಾರ್ಯ ಹಾಗೂ ಕೃಷ್ಣವೇಣಿಯಮ್ಮ ಪುತ್ರರಾಗಿ, ಕೃಷಿಕ ಕುಟುಂಬದಲ್ಲಿ ಉಡುಪಿ ರಾಮಚಂದ್ರರಾವ್ (ಯು.ಆರ್. ರಾವ್) ಜನಿಸಿದ್ದರು. ಪತ್ನಿ ಯಶೋಧಾ, ಮಕ್ಕಳಾದ ಡಾ. ಮದನ್‌ ರಾವ್ ಮತ್ತು ಮಾಲಾ ರಾವ್‌ ರನ್ನು ಅಗಲಿದ್ದಾರೆ. ಹೃದಯ ಸಂಬಂಧಿ ಖಾಯಿಲೆ ಯಿಂದ ಬಳಲುತ್ತಿದ್ದ ರಾವ್ ಅವರಿಗೆ ಇತ್ತೀಚಿಗೆ ಜಾಂಡೀಸ್ ಕೂಡ ಭಾದಿಸಿತ್ತು. ಇನ್ನು ತೀವ್ರ ಅನಾರೋಗ್ಯ ಹಿನ್ನೆಲೆ ಇಂದು ಮೃತಪಟ್ಟಿದ್ದಾರೆ. ಇಸ್ರೋ ನ ಜಂಟಿ ನಿರ್ದೇಶಕರಾದ ವೆಂಕಟೇಶ ಶರ್ಮಾ ಅವರು ಯು.ಆರ್.ರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ  ನಮ್ಮ ದೇಶ ಇಂದು ಮೇರು ವಿಜ್ಞಾನಿ ಯನ್ನು ಕಳೆದುಕೊಂಡು ಬರಡಾಗಿದೆ ಎಂದರು. ಯು.ಆರ್.ರಾವ್ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ, ಅವರೊಂದಿಗೆ, 35 ವರ್ಷಗಳ ಕೆಲಸ ಮಾಡಿರುವುದು ನನ್ನ ಪುಣ್ಯ ಎಂದು ಭಾವುಕರಾಗಿ ನುಡಿದರು, ಯು. ಆರ್. ರಾವ್ ಅವರು ತಮ್ಮ ಜೀವನವನ್ನ ದೇಶಕ್ಕಾಗಿ ಮುಡಿಪಟ್ಟವರು, ಇಂಥವರನ್ನು ಕಳೆದುಕೊಂಡಿರುವುದು ದು:ಖದ ಸಂಗತಿ ಎಂದರು. ಇಸ್ರೋ ಸಂಸ್ಥೆ ಬಾಹ್ಯಾಕಾಶ ವಿಜ್ಞಾನದಲ್ಲಿ ಇಷ್ಟರ ಮಟ್ಟಿಗೆ ಪ್ರಖ್ಯಾತಿ ಪಡೆದಿರುವುದು ಯು.ಆರ್.ರಾವ್ ಅವರ ಕಾಣಿಕೆಯಾಗಿದೆ. ಅಂತಹ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಯು.ಆರ್.ರಾವ್ ಒಂದೊಂದು ಕ್ಷಣವನ್ನೂ ದೇಶಕ್ಕಾಗಿ ವ್ಯಯಿಸುತ್ತಿದ್ದರು ಎಂದರು.

ಇನ್ನು ಅಂತಿಮ ವಿಧಿವಿಧಾನಗಳ ಬಗ್ಗೆ ತಿಳಿದ ಅವರು, ಸಂಜೆ ೫ ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದೂ, ೧ ರಿಂದ ೨ ರವರೆಗೆ ಇಸ್ರೋ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ೨.೩೦ಕ್ಕೆ ಅಲ್ಲಿಂದ ಹೆಬ್ಬಾಳ ಚಿತಗಾರಕ್ಕೆ ತೆಗೆದುಕೊಂಡು ಹೋಗಲಾಗುತ್ತೆ, ಇಸ್ರೋ ಸಂಸ್ಥೆಯ ಸಿಬ್ಬಂದಿಗಳಿಗೆ ಮಾತ್ರ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ಕಲ್ಪಿಸಿಲಾಗಿದೆ ಎಂದೂ ತಿಳಿಸಿದರು. ವೈಜ್ಞಾನಿಕ ಕಾರ್ಯದರ್ಶಿ, ಪಿ.ಜಿ.ದಿವಾಕರ್, ಯು.ಆರ್.ರಾವ್ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಇಸ್ರೋ ಮಾಜಿ ಅಧ್ಯಕ್ಷರಾದ ರಾಧಕೃಷ್ಣನ್ ಯು.ಆರ್.ರಾವ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇನ್ನು ಸುಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಪ್ರೊ ಯು.ಆರ್.ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ನಾಲ್ಕು ದಶಕಗಳ ಹಿಂದೆಯೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ  ಸೇವೆ ಸಲ್ಲಿಸಿದ ಅವಧಿಯಲ್ಲಿ, ಭಾರತದ ಪ್ರಪ್ರಥಮ ಉಪಗ್ರಹ ಆರ್ಯಭಟ, ಭಾಸ್ಕರ, ಆಪಲ್, ರೋಹಿಣಿ ಹಾಗೂ ಬಹು-ಉದ್ದೇಶಿತ ಇನ್ ಸ್ಯಾಟ್ ಸರಣಿಯ ಉಪಗ್ರಹಗಳನ್ನು ಒಳಗೊಂಡಂತೆ 18 ಉಪಗ್ರಹಗಳ  ಉಡಾವಣೆಯ ರೂವಾರಿಯಾಗಿ ಭಾರತೀಯ ಸಂವಹನ, ದೂರ ಸಂವೇದಿ ಹಾಗೂ ಹವಾಮಾನ ಸೇವೆಗಳಲ್ಲಿ, ಕ್ರಾಂತಿಕಾರಕ ಬದಲಾಣೆ ತಂದ ಕೀರ್ತಿ ಡಾ. ಉಡುಪಿ ರಾಮಚಂದ್ರ ರಾವ್ ಅವರದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲಿರುವ ವ್ಯಕ್ತಿಯೊಡನೆ ಮೂರು ನಿಮಿಷಗಳ ಸಂಭಾಷಣೆ ನಡೆಸಲು ಟ್ರಂಕ್ ಕಾಲ್ ಬುಕ್ ಮಾಡಿ ಮೂರು ತಾಸುಗಳು ಕಾಯಬೇಕಾಗಿದ್ದ ಕಾಲವಿತ್ತು. ಅಂತಹ ಸಂದರ್ಭದಲ್ಲಿ ಒಮ್ಮೆಲೆ ದೇಶಾದ್ಯಂತ ನೇರ ದೂರ ಸಂಪರ್ಕ ಕಲ್ಪಿಸುವ ( ಸ್ಟ್ರೇಟ್ ಟ್ರಂಕ್ ಡಯಲಿಂಗ್ ) ಜಾಲದ ವಿಸ್ತರಣೆಯಾದದ್ದು ಸಂವಹನ ಉಪಗ್ರಹದ ಉಡಾವಣೆಯಿಂದ. ರಾಷ್ಟ್ರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಎಲ್ಲೆಡೆ ಹಾಗೂ ಎಲ್ಲೆಲ್ಲೂ ಆವರಿಸಲು ಪ್ರೊ.ಯು.ಆರ್.ರಾವ್ ಅವರ, ದೂರದೃಷ್ಠಿ ಕಾರಣ ಎಂಬುದನ್ನು ನಾವಿಂದು ಸ್ಮರಿಸಬೇಕು. ಪ್ರೊ.ಯು.ಆರ್ ರಾವ್ ಅವರಿಗೆ ಲಭಿಸಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿ-ಪುರಸ್ಕಾರಗಳು, ಗೌರವ ಡಾಕ್ಟರೇಟ್‍ಗಳು ಹಾಗೂ ಪ್ರತಿಷ್ಠಿತ ಪದಕಗಳು ಆಗಸದೆತ್ತರದ ಅವರ ಅಪಾರ ಸಾಧನೆಯನ್ನು ಬಿಂಬಿಸುತ್ತವೆ ಎಂದರು.

ನಾನು ಅವರೊಡನೆ ಹಲವು ಬಾರಿ ವೇದಿಕೆಯನ್ನು ಹಂಚಿಕೊಂಡಾಗ, ಅವರಲ್ಲಿನ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಗಮನಿಸಿದ್ದೇನೆ. ಭಾರತದ ಬಾಹ್ಯಾಕಾಶ ಲೋಕದಲ್ಲಿ  ಬಹು ದೊಡ್ಡ ಶಕ್ತಿಯಾಗಿ ಬೆಳೆದಿದ್ದ ಇಂತಹ ಮೇರು ವ್ಯಕ್ತಿ ಇದೀಗ ನಮ್ಮೊಡನೆ ಇಲ್ಲ ಎಂಬುದನ್ನು  ನಂಬಲು ಸಾಧ್ಯವಿಲ್ಲ. ಭಾರತದ ಸುಪುತ್ರ ಹಾಗೂ ಹೆಮ್ಮೆಯ ಕನ್ನಡಿಗ ಪ್ರೊ.ಯು.ಆರ್ ರಾವ್ ಅವರ ಗಮನಾರ್ಹ ಸಾಧನೆಗಳು ಸದಾ ನಮ್ಮೊಡನೆ ಇರುವಾಗ ನಾವು ಅವರನ್ನು ಮರೆಯಲು ಹೇಗೆ ಸಾಧ್ಯ ? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರೊ.ರಾವ್. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನಮ್ಮೆಲ್ಲರಿಗೂ ಕರುಣಿಸಲಿ ಎಂದು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ