ನಕಲಿ ಅಂಕ ಪಟ್ಟಿ ಮಾರಾಟ ಜಾಲ ಪತ್ತೆ !

Kannada News

22-07-2017

ಮೈಸೂರು: ಮೈಸೂರಿನಲ್ಲಿ ನಕಲಿ ಅಂಕಪಟ್ಟಿಗಳ ಮಾರಾಟ ಜಾಲ ಬೆಳಕಿಗೆ ಬಂದಿದೆ. ಮೈಸೂರು ಸಿಸಿಬಿ ಪೊಲೀಸರಿಂದ ಖತರ್ನಾಕ್ ಮಹಿಳೆಯೋರ್ವರನ್ನು ಬಂಧಿಸಿದಾಗ ನಕಲಿ ಅಂಕಪಟ್ಟಿ ಮಾರಾಟ ಜಾಲ ಪತ್ತೆಯಾಗಿದೆ. ಮೈಸೂರಿನ ಗೋಕುಲಂ ಬಡಾವಣೆ ನಿವಾಸಿ ಯಶಸ್ವಿನಿ (45) ಬಂಧಿತ ಮಹಿಳೆ. ಮೈಸೂರಿನ ನಜರ್ ಬಾದ್ ನಲ್ಲಿರುವ ಮಿನಿ ವಿಧಾನಸೌಧದ ಸಮೀಪ ಕಾರಿನಲ್ಲಿ ಕುಳಿತಿದ್ದ ಯಶಸ್ವಿನಿ, ಪೊಲೀಸ್ ಗಸ್ತು ವಾಹನವನ್ನು ಕಂಡಾಕ್ಷಣ ವಿಚಲಿತಗೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು. ಆ ವೇಳೆ ಅನುಮಾನಗೊಂಡ ಸಿಸಿಬಿ ಇನ್ಸ್ ಪೆಕ್ಟರ್ ಚಂದ್ರಕಲಾ ಹಾಗೂ ಇತರ ಸಿಬ್ಬಂದಿ ಯಶಸ್ವಿನಿಯನ್ನು ಹಿಡಿದು ಆಕೆಯ ಬಳಿಯಿದ್ದ ಬ್ಯಾಗನ್ನು ಪರಿಶೀಲಿಸಿದಾಗ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ, ದೇಶದ ವಿವಿಧೆಡೆಗಳಲ್ಲಿರುವ ಮುಕ್ತ ವಿ.ವಿ ಗಳ ನೂರಾರು ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಬಳಿಕ ಯಶಸ್ವಿನಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು, ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ತನ್ನ ಬಳಿಯಿದ್ದ ಅಂಕಪಟ್ಟಿಗಳು ನಕಲಿ ಎಂದು ಒಪ್ಪಿಕೊಂಡಿರುವ ಯಶಸ್ವಿನಿ. ಬೆಳಗಾವಿಯ ಬಸವರಾಜು, ಅರಸೀಕೆರೆಯ ಕಿಶನ್ ಎಂಬುವರು ತನ್ನ ನೆರವಿನಿಂದ ನಕಲಿ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದರೆಂದು ತಿಳಿಸಿದ್ದಾರೆ. ವಿವಿಧ ಪದವಿಗಳ ನಕಲಿ ಅಂಕಪಟ್ಟಿ ಮಾತ್ರವಲ್ಲದೇ, ಎಸ್.ಎಸ್.ಎಲ್.ಸಿ, ಪಿಯುಸಿ ಯ ನಕಲಿ ಅಂಕಪಟ್ಟಿಗಳನ್ನು ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿರುವ ಸಂಗತಿ ಕೂಡ, ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ, ನಜರ್ ಬಾದ್ ಹಾಗೂ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ