ಮಟ್ರೋ ನಿಲ್ದಾಣಗಳಲ್ಲಿ ಪ್ರತಿಭಟನೆ

Kannada News

20-07-2017

ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಬಳಕೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ನಸುಕಿನಲ್ಲಿ ನಗರದ ಸುಮಾರು 40 ಮೆಟ್ರೋ ನಿಲ್ದಾಣಗಳಲ್ಲಿನ ನಾಮಫಲಕದಲ್ಲಿದ್ದ ಹಿಂದಿ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ಪ್ರತಿಭಟನೆ ನಡೆಸಿದರು. ನಗರದ ಯಶವಂತಪುರ, ರಾಜಾಜಿ ನಗರ, ಇಂದಿರಾನಗರ, ದೀಪಾಂಜಲಿ ನಗರ, ನ್ಯಾಷನಲ್ ಕಾಲೇಜು, ಮೈಸೂರು ರಸ್ತೆ ಸೇರಿದಂತೆ ನಗರದ ಎಲ್ಲಾ 40 ಮೆಟ್ರೋ ರೈಲು  ನಿಲ್ದಾಣಗಳಲ್ಲಿ ಮುಂಜಾನೆ 4ರಿಂದ 5ರವರೆಗೆ ವೇದಿಕೆಯ 40 ತಂಡಗಳು ಹಿಂದಿ ನಾಮಫಲಕಕ್ಕೆ ಮಸಿ ಬಳಿದು ಹಿಂದಿ ಹೇರಿಕೆಯನ್ನು ಹಿಂತೆದುಕೊಳ್ಳುವಂತೆ ಆಗ್ರಹಿಸಿದರು. ಚಿಕ್ಕಪೇಟೆಯ ಬಳಿಯ ಮೆಟ್ರೋ ನಿಲ್ದಾಣದಲ್ಲಿ  ಹಿಂದಿ ಅಕ್ಷರಗಳಿಗೆ ಕಾರ್ಯಕರ್ತರು ಮಸಿಬಳಿಯುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಹಿಂದಿ ಅಕ್ಷರಗಳಿಗೆ ಮಸಿ ಬಳಿದ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಿಂದಿ ನಾಮಫಲಕಗಳನ್ನು ಹಿಂದೆಗೆದುಕೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆದೇಶಿಸಿದ್ದರೂ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ರಾರಾಜಿಸುತ್ತಿದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮೆಟ್ರೋ ನಿಗಮದ ಅಧಿಕಾರಿಗಳು ಉದ್ದಟತನ ಮೆರೆದಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಆರೋಪಿಸಿದರು.

ಹಿಂದಿ ಅಕ್ಷರಗಳ ನಾಮಫಲಕ ತೆರವಿಗೆ ನೀಡಿದ್ದ ಗುಡುವು ಮುಗಿದ ಹಿನ್ನಲೆಯಲ್ಲಿ, ಮಸಿ ಬಳಿಯುವ ಹೋರಾಟ ನಡೆಸಲಾಗಿದ್ದು ಅದಕ್ಕೂ ಮೆಟ್ರೋ ಅಧಿಕಾರಿಗಳು ಬಗ್ಗದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಯಾಣಿಕರಿಗೆ ಸಮಸ್ಯೆ ಯಾಗಬಾರದೆಂಬ ಕಾರಣಕ್ಕೆ ಮುಂಜಾನೆ ಮಸಿಬಳಿಯುವ ಹೋರಾಟ ನಡೆಸಲಾಗಿದೆ ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ