ಮಾಜಿ ಕೈದಿಗಳ ಬೆಚ್ಚಿಬೀಳಿಸುವ ಮಾಹಿತಿ..?

Kannada News

20-07-2017

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲೂ ಅವ್ಯವಹಾರ ಅಕ್ರಮಗಳು ಮೊದಲಿನಿಂದಲೂ ನಡೆಯುತ್ತಿರುವುದು ಮಾಮೂಲಾಗಿದ್ದು, ಅದನ್ನು ಸುಧಾರಣೆ ಮಾಡುವುದು ಕಷ್ಟ. ಅಲ್ಲಿನ ಅಕ್ರಮಗಳು ಯಾವ ಯಾವ ರೂಪದಲ್ಲಿ ನಡೆಯುತ್ತವೆ ಎನ್ನುವುದನ್ನು ಜೈಲಿಗೆ ಹೋಗಿ ಬಂದ ಕೆಲ ಮಾಜಿ ಕೈದಿಗಳು ಬಹಿರಂಗಪಡಿಸಿದ್ದಾರೆ. ಮೊದಲ ಬಾರಿಗೆ ಜೈಲಿಗೆ ಹೋದ ವಿಚಾರಣಾಧೀನ ಕೈದಿಗಳಿಗೆ ವಿಶೇಷವಾದ ಬ್ಯಾರಕ್ ಕೊಡಿಸಲು ಬ್ರೋಕರ್ ಗಳಿರುತ್ತಾರೆ. ಇದಕ್ಕಾಗಿ ಕೈದಿಗಳು 350 ರಿಂದ 500 ರೂ ತೆರಬೇಕಾಗುತ್ತದೆ. ಈ ಹಣ ಜೈಲು ಅಧಿಕಾರಿಗಳು ಹಾಗೂ ಹಿರಿಯ ಅಪರಾಧಿಗಳ ನಡುವೆ ಹಂಚಿಕೆಯಾಗುತ್ತದೆ.

ಮೊದಲ ಸಲ ಜೈಲಿಗೆ ಬಂದ ಕೈದಿಗಳಿಗೆ ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕೊಡಲಾಗುತ್ತದೆ, ಅದು ಬೇಡ ಎಂದರೆ ಹಣ ನೀಡಿ ಬೇರೆ ಕೆಲಸಕ್ಕೆ ವರ್ಗಾವಣೆಯಾಗಬಹುದು. ಅದೂ ಯಾರು ಮೊದಲು ಹಣ ಕೊಡುತ್ತಾರೆ ಅವರಿಗೆ ಮೊದಲ ಆದ್ಯತೆಯಾಗಿರುತ್ತದೆ. ಇನ್ನು ಮಲಗಲೂ ಹಣ ಕೇಳುತ್ತಾರೆ. ಅಂಗಾತ ಮಲಗಿದರೆ ಅದಕ್ಕೂ ದುಡ್ದು ನೀಡಬೇಕು. ಕಾರಣ ಜೈಲಿನಲ್ಲಿ ಯಾರೂ ಅಂಗಾತ ಮಲಗುವಂತಿಲ್ಲ. ಮಗ್ಗುಲಲ್ಲಿ ಮಲಗಬೇಕು. ಒಂದು ವೇಳೆ ಯಾರಾದರೂ ಅಂಗಾತ ಮಲಗಿದರೆ ಅವರು ಲಾಠಿ ರುಚಿ ಅನುಭವಿಸಬೇಕಾಗುತ್ತದೆ. ಹಾಗೊಂದು ವೇಳೆ ಅಂಗಾತ ಮಲಗಬೇಕೆಂದರೆ 100 ರೂ ಕೊಟ್ಟರೆ, ಅಂದು ಅಂಗಾತ ಮಲಗಲು ಅವಕಾಶ. ರಾತ್ರಿ ಪಾಳಿಯಲ್ಲಿರುವ ವಾಚ್‍ಮನ್ ಗಳ ಕೈಬಿಸಿ ಮಾಡಿದರೆ ಅವರ ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಳಬಹುದು.

ಮೊದಲಸಲ ಜೈಲಿಗೆ ಹೋದವರಿಗೆ ಹಿಗ್ಗಾಮುಗ್ಗಾ ಥಳಿತ ಗ್ಯಾರಂಟಿ ಎಂದು ಅಪರಾಧಿಯೊಬ್ಬರು ತಮ್ಮ ಸ್ಥಿತಿ ಬಿಚ್ಚಿಟ್ಟಿದ್ದಾರೆ. ಮೊದಲ ಸಲ ಕೈದಿಯಾಗಿ ಬಂದಾಗ ಥಳಿತ, ಭಯ ಬೀಳಿಸುವುದು ಮಾಡಿದ ಬಳಿಕ, ಹಿರಿಯ ಅಪರಾಧಿಯೊಬ್ಬ ಬಂದು ಕೈಗೆ ಫೋನ್ ಕೊಟ್ಟ. ಆಕಡೆಯಿಂದ ಬಂದ ಧ್ವನಿ ರೂ.15,000 ಕೆನರಾ ಬ್ಯಾಂಕ್ ಖಾತೆಗೆ ಡಿಪಾಸಿಟ್ ಮಾಡು. ಇನ್ನುಮುಂದೆ ಈ ರೀತಿ ಕಿರುಕುಳ ಇರಲ್ಲ ಎಂದ. ಹಣ ತಲುಪಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಒಂದು ಪ್ಲೇಟ್ ತರಕಾರಿ ಪಲಾವ್ ಕೊಟ್ಟು ಇನ್ನು ಮುಂದೆ ಈ ರೀತಿ ಆಗಲ್ಲ. ಆರಾಮವಾಗಿರಬಹುದು ಎಂಬ ಭರವಸೆ ನೀಡುತ್ತಾನೆ ಎಂದು ತಿಳಿಸಿದ್ದಾರೆ.

ಸಣ್ಣಪುಟ್ಟ ಅಪರಾಧಿಗಳಿಗಿಂತ ರೌಡಿಗಳು, ಕೊಲೆಗಡುಕರು, ಮಾಫಿಯಾ ಹಿನ್ನಲೆಯುಳ್ಳವರಿಗೆ ಜೈಲಲ್ಲಿ ವಿಶೇಷ ಮರ್ಯಾದೆ. ಅವರೇ ಗ್ಯಾಂಗ್ ಕಟ್ಟಿಕೊಂಡು ಜೈಲಿನಲ್ಲಿಯೂ ದಂಧೆ ನಡೆಸುತ್ತಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಎರಡು ಟಾರ್ಚರ್ ಕೊಠಡಿಗಳಿವೆ. ಒಂದು ಅಡುಗೆ ಮನೆ ಬಳಿ. ಇನ್ನೊಂದು ಬ್ಯಾರಕ್ 7. ಮೊದಲ ಸಲ ಬಂದ ಕೈದಿಗಳಿಗೆ ಪಾಠ ಕಲಿಸುವುದು ಇದೇ ಸ್ಥಳಗಳಲ್ಲಿ. ಅದರೆ ಬಹುತೇಕರು ಅಧಿಕಾರಿಗಳ ಕೈಬೆಚ್ಚಗೆ ಮಾಡುವುದರಿಂದ ಇಲ್ಲಿಗೆ ಬರುವುದೇ ಇಲ್ಲ.

ಇನ್ನು ಜೈಲಿನಲ್ಲಿ ಮಾದಕದ್ರ್ರವ್ಯಗಳಿಗಂತೂ ಬರವೇ ಇಲ್ಲ. 100 ಕೊಟ್ಟರೆ ಗಾಂಜಾ ಸೇರಿದಂತೆ ಹಲವಾರು ರೀತಿಯ ಮಾದಕದ್ರವ್ಯಗಳು ಸಿಗುತ್ತವೆ. ಅಲ್ಲದೇ ಕೈದಿಗಳಿಗೆ ತಂದುಕೊಡುವ ಊಟದಲ್ಲೂ ಸೇರಿಸಿ ಗಾಂಜಾ ಸರಬರಾಜಾಗುತ್ತದೆ. ವಿಚಿತ್ರವೆಂದರೆ ಬೆಳಿಗ್ಗೆ 6ರಿಂದ 7:30ರಲ್ಲಿ ಕಾಂಪೌಂಡ್ ಒಳಕ್ಕೆ ಪ್ಯಾಕೆಟ್ ಗಳನ್ನು ಎಸೆಯಲಾಗುತ್ತದೆ. ಅದರಲ್ಲಿ ಸಿಗರೇಟು, ಬೀಡಿ, ಚೂಯಿಂಗ್ ಟೊಬ್ಯಾಕೋ ಮುಂತಾದವುಗಳು ಇರುತ್ತವೆ. ಅಪರಾಧಿಗಳಿಗೆ ಜೈಲಿನಲ್ಲಿದ್ದರೂ ಹೊರಜಗತ್ತಿನ ಸಂಪರ್ಕ ಕಷ್ಟವಲ್ಲ. ಹಿರಿಯ ಅಪರಾಧಿಗಳು ಇದಕ್ಕಾಗಿ ಫೋನ್ ಗಳನ್ನು ಸಹ ಇಟ್ಟಿರುತಾರೆ. ಒಂದು ಕರೆಗೆ 50 ರೂ ನೀಡಬೇಕು. ಇನ್ನು ಸಿಮ್ ಕಾರ್ಡ್‍ಗಳು ವಿಸಿಟರ್ ಗಳ ಮೂಲಕ ಅವರ ಚಪ್ಪಲಿಗಳಲ್ಲಿ ಅಕ್ರಮವಾಗಿ ಸರಬರಾಜಾಗುತ್ತೆ. ಇದು ಜೈಲಿನಲ್ಲಿನ ಅವ್ಯವಹಾರಗಳ ಉದಾಹರಣೆ ಮಾತ್ರ ಎಂದು ಜೈಲಿನಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಮಾಜಿ ಕೈದಿಗಳು ಮಾಹಿತಿ ನೀಡಿದ್ದಾರೆ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ