ಟೋಯಿಂಗ್: 10 ಕೋಟಿ ದಂಡ ವಸೂಲಿ !

Kannada News

19-07-2017

ಬೆಂಗಳೂರು: ನಗರದಲ್ಲಿ ಕಳೆದ ಆರು ತಿಂಗಳಲ್ಲಿ ವಾಹನ ನಿಲುಗಡೆ ನಿಷೇಧದ ಸ್ಥಳಗಳು ಸೇರಿದಂತೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ವಾಹನಗಳ ಮೇಲೆ ಕ್ರಮ ಕೈಗೊಂಡಿರುವ ಸಂಚಾರ ಪೊಲೀಸರು ಟೋಯಿಂಗ್ ಮಾಡುವ ಮೂಲಕ 10 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ವಿಧಿಸಿದ ಅತ್ಯಂತ ಹೆಚ್ಚಿನ ದಂಡ ಸಂಗ್ರಹ ಇದಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ನಿಲ್ಲಿಸಿದ್ದ 2 ಲಕ್ಷ ವಾಹನಗಳನ್ನು ಟೋಯಿಂಗ್ ಮಾಡಲಾಗಿದೆ. ಇದರಿಂದ ಕಳೆದ ಆರು ತಿಂಗಳಲ್ಲಿ 9.98 ಕೋಟಿ ರೂ. ಸಂಗ್ರಹವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಒಟ್ಟು 70 ಟೋಯಿಂಗ್ ವಾಹನ ಕಾರ್ಯಾಚರಿಸುತ್ತಿವೆ. ಇದರಲ್ಲಿ ಕೇವಲ 2 ಮಾತ್ರ ಇಲಾಖೆಯದ್ದು ಉಳಿದವು ಖಾಸಗಿಯವರದ್ದು. ಖಾಸಗಿ ಟೋಯಿಂಗ್ ವಾಹನಕ್ಕೆ 500 ರೂ. ನೀಡಬೇಕಾಗುತ್ತದೆ.  ಪ್ರತಿ ದಿನ ಸರಾಸರಿ 720 ವಾಹನ ಟೋಯಿಂಗ್ ಮಾಡಲಾಗುತ್ತದೆ. ಖಾಸಗಿ ಟೋಯಿಂಗ್ ವಾಹನ ಪಡೆಯಲು ನಾವು ಹರಸಾಹಸ ಪಡುತ್ತಿದ್ದೇವೆ. ಸರ್ಕಾರ ದಂಡದ ಪ್ರಮಾಣದ ಹೆಚ್ಚಿಸಿದರೆ ಖಾಸಗಿಯವರು ಮುಂದೆ ಬರುತ್ತಾರೆ, ಇಲಾಖೆಯಲ್ಲಿ ಕೇವಲ ಎರಡು ಟೋಯಿಂಗ್ ವಾಹನವಿದೆ. ಇದರಿಂದ ಖಾಸಗಿಯವರನ್ನು ಅವಲಂಬಿಸಬೇಕಾಗಿದೆ. ಇದರಿಂದ ಹೆಚ್ಚು ಅನಾನುಕೂಲವಾಗುತ್ತಿದೆ ಎಂದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

ನಗರದ ಕೇಂದ್ರ ಭಾಗದಲ್ಲಿ ಹೆಚ್ಚು ಟೋಯಿಂಗ್ ಬೇಕಾಗುತ್ತದೆ. ಕಾರು ಟೋಯಿಂಗ್ ಮಾಡುವುದಕ್ಕಿಂತ ಖಾಸಗಿ ಟೋಯಿಂಗ್‍ ನವರು ದ್ವಿಚಕ್ರ ವಾಹನ ಟೋಯಿಂಗ್‍ ಗೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ. ಟೋಯಿಂಗ್ ಮಾಡುವಾಗ ವಾಹನಕ್ಕೆ ಹಾನಿಯಾಗುವುದರ ಬಗ್ಗೆ ಹೆಚ್ಚು ದೂರುಗಳು ಬಂದಿವೆ. ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಾರೆ.

2017ರ ಜೂನ್‍ ವರೆಗೆ ಒಟ್ಟು ಸಂಚಾರ ನಿಯಮ ಉಲ್ಲಂಗಿಸಿದ್ದಕ್ಕೆ 57.06 ಲಕ್ಷ, ಪಾರ್ಕಿಂಗ್ ನಿಯಮ ಉಲ್ಲಂಘನೆಗೆ 13.8 ಲಕ್ಷ, ದಂಡ ಸಂಗ್ರಹಿಸಲಾಗಿದೆ. ಜನವರಿಯಿಂದ ಜೂನ್‍ ವರೆಗೆ ಟೋಯಿಂಗ್‍ನಿಂದ 9.98 ಕೋಟಿ ರೂ. ಸಂಗ್ರಹಿಸಲಾಗಿದೆ.  2012-2016ರಲ್ಲಿ 9.45 ಕೋಟಿ ರೂ. ಸಂಗ್ರಹಿಸಲಾಗಿತ್ತು. 2016ರಲ್ಲಿ ನಾಲ್ಕು ಚಕ್ರ ವಾಹನಕ್ಕೆ 500 ರೂ.ದಂಡ ಇತ್ತು. ಈಗ ಅದು 1000 ರೂ.ಗೆ ಏರಿಕೆಯಾಗಿದೆ. ದ್ವಿಚಕ್ರ ವಾಹನಕ್ಕೆ ಹಿಂದೆ 200 ರೂ. ಇತ್ತು. ಅದನ್ನು ಈಗ 650ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ