ಕಾರಾಗೃಹ ಅಧಿಕಾರಿಗಳಿಗೆ ಎಚ್ಚರಿಕೆ !

Kannada News

19-07-2017 479

ಬೆಂಗಳೂರು: ಜೈಲಿನ ಕೈಪಿಡಿ (ಮ್ಯಾನ್ಯುಯಲ್)ಯ ನಿಯಮಗಳಂತೆ ಕೆಲಸ ಮಾಡಬೇಕು, ನಿಯಮ ಬಾಹಿರವಾಗಿ ಯಾವುದೇ ಕ್ರಮಕೈಗೊಳ್ಳಬಾರದು, ಕೈದಿಗಳಿಗೆ ನ್ಯಾಯಾಲಯದ ಸೂಚನೆಯಂತೆಯೇ ಸೌಲಭ್ಯಗಳನ್ನು ಒದಗಿಸಬೇಕು, ಯಾವೊಬ್ಬ ಕೈದಿಗೂ ಜೈಲಿನ ನಿಯಮಗಳನ್ನು ಬದಿಗೊತ್ತಿ ಯಾವುದೇ ಸೌಲಭ್ಯ ನೀಡಬಾರದು ಎಂದು, ಅಗ್ರಹಾರ ಕಾರಾಗೃಹದ ಅಧಿಕಾರಿಗಳಿಗೆ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಎನ್.ಎಸ್.ಮೇಘರಿಕ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೈಲಿನಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡದೇ ಬಿಗಿ ಕ್ರಮಗಳನ್ನು ಕೈಗೊಂಡು ಕರ್ತವ್ಯ ನಿರ್ವಹಿಸಿ, ಜೈಲಿನ ಸುಧಾರಣೆಗೆ ಶ್ರಮಿಸಿ ಎಂದು  ಅವರು ಸೂಚನೆ ನೀಡಿದ್ದಾರೆ.

ಕಾರಾಗೃಹ ವಿಭಾಗದ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬುಧವಾರ ಬೆಳಿಗ್ಗೆ ಭೇಟಿ ನೀಡಿ, ಜೈಲಿನ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿದರು. ನಂತರ ಪ್ರಾಭಾರ ಅಧೀಕ್ಷಕಿ ಡಾ.ಅನಿತಾ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಜೈಲಿನ ಪರಿಸ್ಥಿತಿಯನ್ನು ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಕುಖ್ಯಾತ ಪಾತಕಿ ಸೈಕೊ ಶಂಕರ್ ಕಾರಾಗೃಹದಿಂದ ಪರಾರಿಯಾದ ನಂತರ `ಕಾರಾಗೃಹಗಳ ಸುಧಾರಣೆ' ಬಗ್ಗೆ ಅಧ್ಯಯನ ನಡೆಸಲು ರಚಿಸಿದ್ದ ಸಮಿತಿಯ ಸದಸ್ಯನಾಗಿದ್ದ ನನಗೆ ಜೈಲು ವ್ಯವಸ್ಥೆ ಹಾಗೂ ನಿರ್ವಹಣೆ ಬಗ್ಗೆ ನನಗೆ ಮಾಹಿತಿ ಇದೆ. ಐಪಿಎಸ್ ಅಧಿಕಾರಿಯಾಗಿ ಸುಧೀರ್ಘ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಯಾವುದೇ ವಿಷಯವನ್ನಾಗಲಿ ಅದನ್ನು ನನ್ನ ಜೊತೆ ಹಂಚಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಕೈದಿಗಳ ಭೇಟಿಗೆ ಬರುವವರು ತಂದುಕೊಂಡುವ ವಸ್ತುಗಳನ್ನು ಹೈಟೆಕ್ ತಂತ್ರಜ್ಞಾನ ಬಳಸಿಕೊಂಡು ಪರಿಶೀಲನೆ ನಡೆಸಬೇಕು. ವಸ್ತುಗಳು ಯಾವ ಕೈದಿಗೆ ಸೇರಲಿವೆ ಅದನ್ನು ಯಾವ ಉದ್ದೇಶಕ್ಕೆ ಬಳಸಲಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಎಐಡಿಎಂಕೆ ನಾಯಕಿ ಶಶಿಕಲಾ ಇರಲಿ ತೆಲಗಿಯಾಗಲಿ ಇತರ ಕೈದಿಗಳಂತೆ ನೋಡಿಕೊಳ್ಳಬೇಕು. ಅವರಿಗೆ ಯಾವುದೇ ರೀತಿಯ ವಿಶೇಷ ಸೌಲಭ್ಯಗಳಿರಬಾರದು ಜೈಲಿನಲ್ಲಿ ಕೈದಿಗಳಿಗೆ ನೀಡುವ ಯಾವುದೇ ರೀತಿಯ ಸೌಲಭ್ಯಗಳಾಗಲಿ ನೋಡಿಕೊಳ್ಳುವ ವ್ವವಸ್ಥೆಯನ್ನಾಗಲಿ ಚಿತ್ರೀಕರಣ ಮಾಡಿಕೊಳ್ಳುವುದಾಗಲಿ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದಾಗಲಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಸಮಸ್ಯೆಗಳ ಬಗ್ಗೆ ಕೈದಿಗಳಾಗಲಿ ಜೈಲಿನ ಯಾವುದೇ ಹಂತದ ಅಧಿಕಾರಿಗಳಾಗಲಿ ನನ್ನನ್ನು ಸಂಪರ್ಕಿಸಬೇಕು. ಅದನ್ನು ಬಿಟ್ಟು ಮಾದ್ಯಮಗಳಿಗೆ ಅದನ್ನು ಸೋರಿಕೆ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು, ಜೈಲಿನ ನಿಯಮಗಳನ್ನು ಅಳವಡಿಸಿಕೊಂಡು ನಾನು ಕೆಲಸ ಮಾಡುತ್ತೇನೆ' ನೀವು ಅದನ್ನೇ ಅನುಸರಿಸಿ ಎಂದು ಕಿವಿಮಾತು ಹೇಳಿದರು.

ಕಾರಾಗೃಹದ ಸಿಬ್ಬಂದಿಯಲ್ಲದೇ ಕೆಲ ಕೈದಿಗಳ ಜತೆ ಚರ್ಚೆ ನಡೆಸಿದ ಮೇಘರಿಕ್ ಅವರು ಎಲ್ಲೆಲ್ಲಿ ಸುಧಾರಣೆ ತರಬೇಕೋ, ಅವುಗಳನ್ನು ಪಟ್ಟಿ ಮಾಡಿಕೊಂಡಿದ್ದು ಅವುಗಳನ್ನು, ಶಿಸ್ತುಬದ್ಧವಾಗಿ ಬದಲಾವಣೆ ತರಲು ಯತ್ನಿಸುತ್ತೇನೆ' ನೀವು ನನ್ನನ್ನು ಅನುಸರಿಸಿ ಎಂದು ಸಲಹೆ ನೀಡಿದರು. ಪರಪ್ಪನ ಅಗ್ರಹಾರದಲ್ಲಿ 32 ಕೈದಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಹಾಗೂ 20ಕ್ಕೂ ಹೆಚ್ಚು ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಿರುವುದರ ತನಿಖೆ ನಡೆಸಲು ಮೇಘರಿಕ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಕೈದಿಗಳ ಮೇಲೆ ಹಲ್ಲೆ ನಡೆಸಿ ಬೇರೆ ಜೈಲಿಗೆ ಸ್ಥಳಾಂತರ ಮಾಡಿರುವ ಆರೋಪದ ಮೇಲೆ ಮಂಗಳವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕಾರಾಗೃಹ ಇಲಾಖೆ ಡಿಜಿಪಿಗೆ ವರದಿ ನೀಡುವಂತೆ ನೋಟಿಸ್ ಜಾರಿ ಮಾಡಿದ್ದು ಪ್ರಕರಣ ಕುರಿತು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ