ಅಂತರ್ಜಲ ಮಟ್ಟ ಕುಸಿತ ಹಿನ್ನೆಲೆ ನೀಲಗಿರಿ ನೆಡುತೋಪು ಬೆಳೆಸುವುದಕ್ಕೆ ರಾಜ್ಯ ಸರ್ಕಾರದಿಂದ ನಿಷೇಧ

Kannada News

08-03-2017 279

ಬೆಂಗಳೂರು - ರಾಜ್ಯದಲ್ಲಿ ನಿರಂತರವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನೀಲಗಿರಿ ನೆಡುತೋಪು ಬೆಳೆಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ನೀಲಗಿರಿ ಬೆಳೆಯಲು ರೈತರಿಗಾಗಲೀ, ಸಾರ್ವಜನಿಕರಿಗಾಗಲೀ , ಖಾಸಗಿ ಸಂಸ್ಥೆಗಳಿಗಾಗಲೀ ಯಾವುದೇ ರೀತಿಯ ಪ್ರೋತ್ಸಾಹ ಹಾಗೂ ತಾಂತ್ರಿಕತೆಯನ್ನು ಒದಗಿಸಬಾರದು ಎಂದು ಅರಣ್ಯ ಇಲಾಖೆಗೆ ಆದೇಶದಲ್ಲಿ ಸೂಚಿಸಲಾಗಿದೆ. ನೀಲಗಿರಿ ಮರಗಳನ್ನು ಬೆಳೆಸುವುದರಿಂದ ಉಂಟಾಗುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ 2011ರಲ್ಲೇ ಕೆಲವೊಂದು ಮಾರ್ಗಸೂಚಿ ಮತ್ತು ನಿರ್ಬಂಧಗಳನ್ನು ವಿಧಿಸಲಾಗಿತ್ತು. ರಾಜ್ಯದಲ್ಲಿ ಹೆಚ್ಚಾಗಿ ಬೆಳೆದಿರುವ ನೀಲಗಿರಿ ನೆಡುತೋಪುಗಳಿಂದ ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ ಎಂಬುದನ್ನು ಮನಗಾಣಲಾಗಿದೆ.

ಇದರಿಂದ ರಾಜ್ಯದ ಅರಣ್ಯ ಪ್ರದೇಶಗಳಲ್ಲಾಗಲೀ, ಸರ್ಕಾರಿ ಭೂಮಿಗಳಲ್ಲಾಗಲೀ ಬೆಳೆದಿರುವ ನೀಲಗಿರಿ ತೋಪುಗಳನ್ನು ಕಟಾವು ಮಾಡಿ ಆ ಸ್ಥಳಗಳಲ್ಲಿ ಬೇರೆ ಉಪಯುಕ್ತ ಸ್ಥಳೀಯ ಜಾತಿಯ ನೆಡುತೋಪುಗಳನ್ನು ಬೆಳೆಸಲು ನಿರ್ದೇಶನ ನೀಡಲಾಗಿದೆ. ಅರಣ್ಯ ಇಲಾಖೆ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮಗಳಿಂದ ನೀಲಗಿರಿ ಸಸಿಗಳನ್ನು ಬೆಳೆಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನೀಲಗಿರಿ ಸಸಿಗಳನ್ನು ಸರ್ಕಾರಿ ಸಸ್ಯ ಕ್ಷೇತ್ರಗಳಲ್ಲಿ ಬೆಳೆಸಿದ್ದೇ ಆಗಿದ್ದಲ್ಲಿ ತಕ್ಷಣ ಅಂತಹ ಸಸಿಗಳನ್ನು ನಾಶಪಡಿಸಲು ಸೂಚಿಸಲಾಗಿದೆ.

ನೀಲಗಿರಿ ತೋಪುಗಳನ್ನು ಕಟಾವು ಮಾಡಿ ಅಂತಹ ಕಡೆಗಳಲ್ಲಿ ಸ್ಥಳೀಯ ಉಪಯುಕ್ತ ಜಾತಿಯ ನೆಡುತೋಪುಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಸೂಚಿಸಲಾಗಿದೆ.  ಒಂದು ವೇಳೆ ನೀಲಗಿರಿ ಬೆಳೆಸಲು ಅರಣ್ಯ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ ಮಾಡಲು ಅಭಿವೃದ್ಧಿಪಡಿಸಿದ್ದರೆ ಅದನ್ನು ಕೈ ಬಿಟ್ಟು ಪರ್ಯಾಯ ಸಸಿಗಳನ್ನು ನೆಡುವಂತೆ ಸ್ಪಷ್ಟವಾಗಿ ಸೂಚಿಸಲಾಗಿದೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ