ರಾಜ್ಯವನ್ನು ಕಾಡಲಿದೆ ಮಳೆ ಅಭಾವ !

Kannada News

18-07-2017

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿದ್ದು ಮುಂದೆ ಇನ್ನಷ್ಟು ಮಳೆಯ ಸಮಸ್ಯೆ ರಾಜ್ಯವನ್ನು ಕಾಡಲಿದೆ. ಈಗಾಗಲೇ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದು, ಮುಂದಿನ ವಾರದಿಂದ ಮುಂಗಾರು ಮತ್ತಷ್ಟು ಕ್ಷೀಣವಾಗಲಿದೆ ಎನ್ನುವ ಆತಂಕಕಾರಿ ವಿಷಯವನ್ನು ಹವಾಮಾನ ಇಲಾಖೆಯು ಹೊರಹಾಕಿದೆ. ಮುಂಗಾರು ಮಳೆ ಕೊರತೆ ಎದುರಿಸುತ್ತಿರುವ ರಾಜ್ಯಕ್ಕೆ ಇದು ಮತ್ತೊಂದು ಆಘಾತಕಾರಿ ಸುದ್ದಿಯಾಗಿದೆ. ಕಳೆದೊಂದು ವಾರದಿಂದ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದು, ಮಳೆ ಕ್ಷೀಣವಾದರೆ ರೈತರು ಈ ವರ್ಷವೂ ಸಂಕಷ್ಟ ಎದುರಿಸಬೇಕಾಗುತ್ತದೆ. ಆದರೆ ಹವಾಮಾನ ಇಲಾಖೆ ಜು.20ರ ನಂತರ ಮುಂಗಾರು ಮತ್ತಷ್ಟು ಕ್ಷೀಣವಾಗುವ ಲಕ್ಷಣವಿದೆ ಎಂದು ಮುನ್ಸೂಚನೆ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಜೂ.1ರಿಂದ ಜು.17 ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ ಸರಾಸರಿ 348 ಮಿ.ಮೀ. ಮಳೆಯಾಗಬೇಕಾಗಿತ್ತು ಎಂದು ಹವಾಮಾನ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. ಆದರೆ ಕೇವಲ 268 ಮಿ.ಮೀ. ಮಳೆಯಾಗಿದ್ದು,ಶೇ.23 ಮಳೆ ಕೊರತೆಯಾಗಿದೆ. ಬೀದರ್, ವಿಜಯಪುರ, ಉತ್ತರ ಕನ್ನಡ, ಉಡುಪಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆಯಲ್ಲಿ ಮಾತ್ರ ವಾಡಿಕೆ ಪ್ರಮಾಣದ ಮಳೆ ದಾಖಲಾಗಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ದಾಖಲಾಗಿದೆ. ಜು.20ರವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಭಾರಿ ಮಳೆ ಮುಂದುವರಿಯುವ ಮುನ್ಸೂಚನೆಯಿದ್ದು, ಜು.21ರಿಂದ ಈ ಭಾಗದಲ್ಲಿ ಮುಂಗಾರು ಕ್ಷೀಣವಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೇವಲ ತುಂತುರು, ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ ಎಂದು ತಿಳಿಸಲಾಗಿದೆ. ಜು.18ರ ಸಮಯದಲ್ಲಿ ಮುಂಗಾರು ಚುರುಕಾಗುವ ಲಕ್ಷಣವಿತ್ತು. ಆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕೇವಲ ತುಂತುರು ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ