ರಾಜ್ಯದಲ್ಲಿ ಬರದ ಆತಂಕ !

Kannada News

18-07-2017

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಳೆ ಕೊರತೆ ಪ್ರಮಾಣ ಹೆಚ್ಚಾಗುತ್ತಿದ್ದು ಮತ್ತೆ ಬರ ಪರಿಸ್ಥಿತಿ ಆವರಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸತೊಡಗಿವೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ದೀರ್ಘಾವಧಿ ಬೆಳೆಗಳನ್ನು ಕೈ ಬಿಟ್ಟು ಅಲ್ಪವಾಧಿ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೀಗಾಗಿ ಸತತ ಬರದ ಛಾಯೆಗೆ ಸಿಲುಕಿದ್ದ ರಾಜ್ಯ ಮತ್ತೆ ಬರಗಾಲ ಪರಿಸ್ಥಿತಿಯನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗತೊಡಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಜೂ.1ರಿಂದ ಇದುವರೆಗೆ ಶೇ.23ರಷ್ಟು ಮಳೆ ಕೊರತೆ ಕಂಡು ಬಂದಿದ್ದರೆ, ಜುಲೈ ತಿಂಗಳಲ್ಲಿ ಶೇ.46ರಷ್ಟು ಮಳೆ ಕೊರತೆ ಉಂಟಾಗಿದೆ.

ಇದರಿಂದ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿಲ್ಲ. ಸಣ್ಣಪುಟ್ಟ ಕೆರೆಗಳು ಕೂಡ ಭರ್ತಿಯಾಗಿಲ್ಲ. ಕರಾವಳಿಯನ್ನು ಹೊರತುಪಡಿಸಿದರೆ. ಉಳಿದಂತೆ ರಾಜ್ಯದಲ್ಲಿ ಸಣ್ಣಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಜೂ.1ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 348 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 248 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.42ರಷ್ಟು, ಮಲೆನಾಡಿನಲ್ಲಿ ಶೇ.36ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ವಾಡಿಕೆ ಪ್ರಮಾಣದಲ್ಲಿ ಬಿತ್ತನೆ ಕೂಡ ಆಗುತ್ತಿಲ್ಲ. ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಜುಲೈ ತಿಂಗಳಲ್ಲಿ ಹೆಚ್ಚೂಕಡಿಮೆ ಶೇ.50ರಷ್ಟು ಮಳೆ ಕೊರತೆ ರಾಜ್ಯಾದ್ಯಂತ ಕಂಡು ಬಂದಿದೆ.ಇನ್ನೊಂದು ವಾರ ಕಾಲ ಇದೇ ಪರಿಸ್ಥಿತಿ ಮುಂದುವರೆದರೆ ಬರ ಘೋಷಣೆ ಮಾಡುವುದು ಅನಿವಾರ್ಯವಾಗಲಿದೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ರಾಜ್ಯದಲ್ಲಿ ಬರದ ಆತಂಕ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ