ತುರ್ತುಪರಿಸ್ಥಿತಿಯ ತಳಮಳಗಳು !

Kannada News

15-07-2017

ಪ್ರತಿವರ್ಷ ಜೂನ್ ತಿಂಗಳ 25ನೇ ತಾರೀಖು ಬಂದರೆ, ದೇಶದ ಬಹುತೇಕ ಹಿರಿಯ ರಾಜಕೀಯ ಮುಖಂಡರಿಗೆ, ಪತ್ರಕರ್ತರಿಗೆ ಮತ್ತು ದೇಶದ ಆಗುಹೋಗುಗಳನ್ನು ಗಮನಿಸುತ್ತಾ ಬಂದಿರುವ ಹಿರಿಯರಿಗೆ ತುರ್ತುಪರಿಸ್ಥಿತಿ ಎಂಬ ಕರಾಳ ಅಧ್ಯಾಯ ನೆನಪಾಗುತ್ತದೆ. ನಲವತ್ತಕ್ಕೂ ಹೆಚ್ಚು ವರ್ಷಗಳ ಹಿಂದಿನ ಈ ಘಟನೆ, ಪ್ರಜಾತಂತ್ರ ಭಾರತದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈ ತುರ್ತುಪರಿಸ್ಥಿತಿಯ ದಿನಗಳ ಬಗ್ಗೆ ಹಿರಿಯ ಪತ್ರಕರ್ತ ಮತ್ತು ಪ್ರಸಾರ ಭಾರತಿಯ ಮುಖ್ಯಸ್ಥ ಎ.ಸೂರ್ಯಪ್ರಕಾಶ್ ಅವರು The Emergency, Indian Democracy’s Darkest Hour ಎಂಬ ಪುಸ್ತಕ ಪ್ರಕಟಿಸಿದ್ದಾರೆ.

ಒಬ್ಬ ಲೇಖಕ ಮತ್ತು ಅಂಕಣಕಾರರೂ ಆಗಿರುವ ಎ. ಸೂರ್ಯ ಪ್ರಕಾಶ್, ಭಾರತದ ಸಂವಿಧಾನ ಮತ್ತು ಸಂಸದೀಯ ವಿಚಾರಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವ್ಯಕ್ತಿ. ದೇಶದ ರಾಜಕಾರಣದ ಬಗ್ಗೆ ಆಳವಾದ ಅರಿವನ್ನು ಹೊಂದಿರುವ ಸೂರ್ಯಪ್ರಕಾಶ್, ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ, ಮುದ್ರಣ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿರುವ ಅನುಭವಿ.

ಮೀಡಿಯಾ ಲಾ ಮತ್ತು ಎಥಿಕ್ಸ್ ಬಗ್ಗೆ ಅತ್ಯುತ್ತಮವಾಗಿ ಪಾಠ ಮಾಡುವ ಹಿರಿಯ ಶಿಕ್ಷಕರೂ ಆಗಿರುವ ಸೂರ್ಯಪ್ರಕಾಶ್, ನವದೆಹಲಿಯ Film and Media Schoolನ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ. ನವದೆಹಲಿಯ ವಿವೇಕಾನಂದ ಪ್ರತಿಷ್ಠಾನ ಮತ್ತು ಇಂಡಿಯಾ ಫೌಂಡೇಷನ್ ಜೊತೆಗೂ ಸಹಯೋಗ ಹೊಂದಿರುವ ಸೂರ್ಯಪ್ರಕಾಶ್, ಕನ್ನಡದ ಸಂಯುಕ್ತ ಕರ್ನಾಟಕ ಪತ್ರಿಕೆಯೂ ಸೇರಿದಂತೆ Pioneer, Dainik Jagran, Eenadu ಮತ್ತು The Indian Republic ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ.

ಪತ್ರಕರ್ತರಾಗಿ, ಬರಹಗಾರರಾಗಿ ಮತ್ತು ಚಿಂತಕರಾಗಿ ಹೆಸರುವಾಸಿಯಾದ ಸೂರ್ಯಪ್ರಕಾಶ್ ಅವರನ್ನು, ಅಕ್ಟೋಬರ್ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸಾರ ಭಾರತಿ ಅಧ್ಯಕ್ಷರಾಗಿ ನೇಮಕ ಮಾಡಿತು. ಯಾವುದೇ ಸ್ಥಾನದಲ್ಲಿರಲಿ ತಮ್ಮ ಲೇಖನಿಗೆ ಸದಾ ಕೆಲಸ ಕೊಡುತ್ತಲೇ ಇರುವ ಸೂರ್ಯಪ್ರಕಾಶ್ ಅವರು, ಕೆಲವು ದಿನಗಳ ಹಿಂದೆ ತಮ್ಮ ಹೊಸ ಪುಸ್ತಕ The Emergency, Indian Democracy’s Darkest Hour ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ಕಳೆದ ಜೂನ್ 24ರಂದು ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ ಬಿಡುಗಡೆಗೊಳಿಸಲಾಯಿತು.

 1975ರಲ್ಲಿ ಭಾರತ ದೇಶದ ಮೇಲೆ ಹೇರಲಾದ ತುರ್ತುಪರಿಸ್ಥಿತಿಯ ಕರಾಳತೆಯ ವಿವಿಧ ಮುಖಗಳನ್ನು ಸೂರ್ಯ ಪ್ರಕಾಶ್ ಅವರು, ತಮ್ಮ ಈ ಹೊಸ ಪುಸ್ತಕದಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ವಿಧಿಸಿದ ತುರ್ತುಪರಿಸ್ಥಿತಿಯಿಂದ ದೇಶದ ಜನತೆ ಅನುಭವಿಸಿದ ದೌರ್ಜನ್ಯಗಳು, ರಾಜಕೀಯ ಮುಖಂಡರು ಅನುಭವಿಸಿದ ಚಿತ್ರಹಿಂಸೆಗಳು, ಪತ್ರಕರ್ತರು ಅನುಭವಿಸಿದ ಕಿರಿಕಿರಿಗಳು, ಸರ್ಕಾರಿ ನೌಕರರು ಎದುರಿಸಿದ ಸಂಕಷ್ಟಗಳ ಬಗ್ಗೆ ತಮ್ಮ ಪುಸ್ತಕದಲ್ಲಿ ಹಲವು ದೃಷ್ಟಾಂತಗಳನ್ನು ಉಲ್ಲೇಖಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಇನ್ನು ಮುಂದೆ ಎಂದೂ ಕೂಡ ತುರ್ತುಪರಿಸ್ಥಿತಿಯಂಥ ದಿನಗಳು ಬರಬಾರದು, ಅದಕ್ಕಾಗಿಯೇ ಆ ತುರ್ತುಪರಿಸ್ಥಿತಿಯ ಆ ದಿನಗಳ ಬಗ್ಗೆ ಹೊಸ ಪೀಳಿಗೆಯ ಎಲ್ಲರೂ ತಿಳಿದುಕೊಳ್ಳಬೇಕು ಅನ್ನುತ್ತಾರೆ ಸೂರ್ಯಪ್ರಕಾಶ್ ಅವರು.

ಅಂದು ಪ್ರಧಾನಿಯಾಗಿದ್ದವರು ತಮ್ಮ ಸಚಿವ ಸಂಪುಟದ ಗಮನಕ್ಕೂ ತರದೆ, ಮಧ್ಯರಾತ್ರಿಯಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು. ತಮ್ಮ ವಿರೋಧಿಗಳಾಗಿದ್ದ ಎಲ್ಲಾ ರಾಜಕೀಯ ಮುಖಂಡರನ್ನು ರಾತ್ರೋರಾತ್ರಿ ಬಂಧಿಸಲಾಯಿತು. ತುರ್ತುಪರಿಸ್ಥಿತಿ ವಿರುದ್ಧ ದನಿಯೆತ್ತಿದವರೆಲ್ಲರನ್ನೂ MISA ಅಂದರೆ, ಆಂತರಿಕ ಭದ್ರತೆ ರಕ್ಷಣಾ ಕಾಯ್ದೆ ಅಡಿ ಜೈಲಿಗೆ ತಳ್ಳಲಾಯಿತು. ದೆಹಲಿಯ ತಿಹಾರ್ ಜೈಲೂ ಸೇರಿದಂತೆ ಹಲವು ಜೈಲುಗಳಲ್ಲಿ, ಕಾಲಿಡುವಷ್ಟು ಜಾಗ ಇಲ್ಲದಿದ್ದರೂ ಬಂಧಿತರನ್ನು ಪ್ರಾಣಿಗಳಂತೆ ತುಂಬಲಾಯಿತು ಎಂದು ವರ್ಣಿಸುತ್ತಾರೆ. 21 ತಿಂಗಳ ಅವಧಿಯ ತುರ್ತುಪರಿಸ್ಥಿತಿಯಲ್ಲಿ ನಡೆದ ಘಟನಾವಳಿಗಳನ್ನು ಕಣ್ಣಾರೆ ಕಂಡು, ಅನುಭವಿಸಿರುವ ಸೂರ್ಯಪ್ರಕಾಶ್ ಅವರು, ಆ ಸಮಯದಲ್ಲಿ ನಡೆದ ದೌರ್ಜನ್ಯಗಳ ಬಗ್ಗೆ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚಿನ ಮೂರು ವರ್ಷಗಳಲ್ಲಿ ದೇಶದಲ್ಲಿ ಒಂದು ರೀತಿಯ ಸರ್ವಾಧಿಕಾರಿ ಧೋರಣೆಯ ಆಡಳಿತ ನಡೆಯುತ್ತಿದೆ ಅನ್ನುವುದನ್ನು ಸೂರ್ಯಪ್ರಕಾಶ್ ಅವರು ಒಪ್ಪುವುದಿಲ್ಲ. ಇವತ್ತು ಅಧಿಕಾರದಲ್ಲಿರುವವರನ್ನು, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಲೇವಡಿ ಮಾಡಲಾಗುತ್ತಿದೆ, ಹೀಗಿದ್ದರೂ ಟೀಕೆ ಮಾಡುವ ಅವರ ಹಕ್ಕನ್ನು ಯಾರೂ ಕಸಿದುಕೊಂಡಿಲ್ಲ. ಹೀಗಾಗಿ, ಆ ಹೊತ್ತಿನ ತುರ್ತುಪರಿಸ್ಥಿತಿಯ ಕರಾಳತೆಯೇ ಬೇರೆ, ಇವತ್ತಿನ ಪರಿಸ್ಥಿತಿಯೇ ಬೇರೆ ಅನ್ನುವುದು ಸೂರ್ಯಪ್ರಕಾಶ್ ಅವರ ಅಭಿಮತ. 

ನಾನು ಎಡಪಂಥೀಯನೂ ಅಲ್ಲ ಬಲಪಂಥೀಯನೂ ಅಲ್ಲ ಎನ್ನುವ ಸೂರ್ಯಪ್ರಕಾಶ್ ಅವರು, ಕೆಲಮಟ್ಟಿಗೆ ಎರಡೂ ರೀತಿಯ ಚಿಂತನೆಗಳು ಎಲ್ಲರಿಗೂ ಅಗತ್ಯ ಅನ್ನುತ್ತಾರೆ.  ತುರ್ತುಪರಿಸ್ಥಿತಿ ಬಗ್ಗೆ ತಾವು ಬರೆದಿರುವ The Emergency, Indian Democracy’s Darkest Hour ಅನ್ನುವ ಪುಸ್ತಕ, ಸದ್ಯದಲ್ಲೇ ಕನ್ನಡ, ಹಿಂದಿ ಮತ್ತು ಗುಜರಾತ್ ಭಾಷೆಗಳಲ್ಲೂ ಪ್ರಕಟಗೊಳ್ಳಲಿದೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ