‘ಅಂತಿಂಥವನಲ್ಲ ಅಮರನಾಥ’

Kannada News

15-07-2017

ಮೂರುದಿನಗಳ ಹಿಂದೆ, ಕಾಶ್ಮೀರದಲ್ಲಿ ಅಮರನಾಥನ ದರ್ಶನಕ್ಕೆ ಹೋಗಿದ್ದ ಯಾತ್ರಿಗಳ ಬಸ್ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ, ಗುಜರಾತಿನ ಏಳು ಯಾತ್ರಿಗಳು ಸಾವಿಗೀಡಾದರು ಮತ್ತು ಮುವತ್ತಕ್ಕೂ ಹೆಚ್ಚು ಜನ ಗಾಯಗೊಂಡರು.

ಉಗ್ರರು ನಡೆಸಿದ ಈ ದುಷ್ಕೃತ್ಯಕ್ಕೆ ಎಲ್ಲೆಡೆಯಿಂದ ತೀರ್ವ ಖಂಡನೆ ಕೇಳಿಬಂತು. ಆದರೆ, ಯಾತ್ರೆ ಸಂದರ್ಭದಲ್ಲಿ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಬಗ್ಗೆ ಗುಪ್ತದಳದ ವರದಿ ಇದ್ದಾಗಲೂ, ಇಂಥ ಘಟನೆಗೆ ಆಸ್ಪದ ಕೊಟ್ಟಿದ್ದು ಭದ್ರತಾ ವೈಫಲ್ಯ ಅಥವ ನಿರ್ಲಕ್ಷ್ಯ ಅಲ್ಲದೆ ಬೇರೆ ಏನೂ ಅಲ್ಲ, ಅನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇದೇ ವೇಳೆ, ಮೆಹಬೂಬಾ ಮುಫ್ತಿ ನೇತೃತ್ವದ ಜಮ್ಮು-ಕಾಶ್ಮೀರ ಸರ್ಕಾರವನ್ನು ವಜಾಗೊಳಿಸಬೇಕೆಂಬ ಆಗ್ರಹಗಳೂ ಕೇಳಿ ಬಂದಿವೆ. ಆದರೆ, ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. 1994ರಲ್ಲಿ ಮೊದಲ ಬಾರಿ ಪಾಕ್ ಮೂಲದ ಹರ್ಕಟ್-ಉಲ್-ಅನ್ಸರ್ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯಾತ್ರಿಗಳು ಮೃತಪಟ್ಟಿದ್ದರು. ಆನಂತರ 95 ಮತ್ತು 96ರಲ್ಲೂ ದಾಳಿ ನಡೆಯಿತಾದರೂ ಯಾರಿಗೂ ಏನೂ ಆಗಲಿಲ್ಲ. ಆದರೆ, 2000ದ ನೇ ಇಸವಿಯಲ್ಲಿ, ಪಹಲ್ಗಾಮ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 21 ಜನ ಯಾತ್ರಿಗಳು ಅಮರರಾದರು. ಬಳಿಕ 2001ರಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದರು. ಗುಹೆಯ ಹತ್ತಿರದಲ್ಲೇ ನಡೆದ ಈ ದಾಳಿಯಲ್ಲಿ ಇಬ್ಬರು ಪೊಲೀಸರೂ ಸೇರಿದಂತೆ 13 ಜನರು ಮೃತಪಟ್ಟಿದ್ದರು. ಅದರ ಮುಂದಿನ ವರ್ಷ 2002ರ ಜುಲೈ 30ರಂದು ನಡೆದ ದಾಳಿಯಲ್ಲಿ ಇಬ್ಬರು ಯಾತ್ರಿಗಳು ಸಾವನ್ನಪ್ಪಿದ್ದರು. ಇದಾದ ಒಂದು ವಾರದ ನಂತರ ನಡೆದ ಮತ್ತೊಂದು ದಾಳಿಯಲ್ಲಿ  ಎಂಟು ಜನ ಯಾತ್ರಿಗಳು ಮೃತಪಟ್ಟಿದ್ದರು.

ಇದೀಗ ಅನಂತನಾಗ್‌ ಜಿಲ್ಲೆಯ ಖನ್‌ಪಾಲ್‌ ನಲ್ಲಿ ನಡೆದಿರುವ ಈ ದಾಳಿ ನಂತರ ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಮತ್ತೊಮ್ಮೆ ಆತಂಕ ವ್ಯಕ್ತವಾಗಿದೆ. ಎಲ್ಲೆಡೆಯೂ ಕಾಶ್ಮೀರದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಪವಿತ್ರ ಅಮರ ನಾಥ ಗುಹೆಯನ್ನು ಮೊದಲು ಕಂಡವರು ಯಾರು? ಈ ಯಾತ್ರೆಯ ಮಹತ್ವವೇನು? ಯಾತ್ರೆ ವೇಳೆ ಕಾಶ್ಮೀರದ ಮುಸ್ಲಿಮರು ವಹಿಸುವ ಪಾತ್ರವೇನು?

ಈ ಯಾತ್ರೆಯಿಂದ ಸ್ಥಳೀಯರಿಗೆ ಆಗುತ್ತಿರುವ ಲಾಭಗಳೇನು? ಎಂಬೆಲ್ಲಾ ವಿಚಾರಗಳ ಬಗ್ಗೆ ಸ್ಪೆಷಲ್ ರಿಪೋರ್ಟರ್‌ನಿಂದ ಒಂದು ವಿಶೇಷ ವರದಿ. ತೀರ್ಥಯಾತ್ರೆ ಅನ್ನುವುದು ಹಿಂದೂ ಜೀವನ ಪದ್ಧತಿಯ ಅವಿಭಾಜ್ಯ ಅಂಗ. ಪ್ರತಿಯೊಬ್ಬ ಹಿಂದುವೂ ಕಾಶಿ ಯಾತ್ರೆ ಕೈಗೊಂಡರೆ ಅವನ ಜನ್ಮ ಸಾರ್ಥಕ ಅನ್ನುವ ಪ್ರತೀತಿಯಿದೆ. ಅದೇ ರೀತಿ, ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಅಮರನಾಥನ ದರ್ಶನ ಮಾಡಿದರೆ, ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂಬುದು ಒಂದು ನಂಬಿಕೆ. ಹೀಗಾಗಿ, ಪ್ರತಿ ವರ್ಷವೂ ದೇಶದ ಎಲ್ಲಾ ಕಡೆಗಳಿಂದ ಲಕ್ಷಾಂತರ ಜನ ಅಮರನಾಥ ಯಾತ್ರೆಗೆ ತೆರಳುತ್ತಾರೆ.

ಒಮ್ಮೆ ಪಾರ್ವತೀ ದೇವಿ ತನಗೆ ಅಮರತ್ವದ ರಹಸ್ಯ ತಿಳಿಸಬೇಕೆಂದು ಶಿವನನ್ನು ಬೇಡಿಕೊಳ್ಳುತ್ತಾಳಂತೆ, ಅದಕ್ಕೆ ಒಪ್ಪಿದ ಪರಮೇಶ್ವರ ಈ ರಹಸ್ಯವನ್ನು ಯಾರೂ ಕೇಳಿಸಿಕೊಳ್ಳಬಾರದೆಂಬ ಉದ್ದೇಶದಿಂದ ಈ ಗುಹೆಗೆ ಕರೆತಂದು ಇಲ್ಲಿ ಉಪದೇಶಿಸುತ್ತಾನೆ ಎಂದು ಹೇಳಲಾಗಿದೆ. ಆದರೆ, ತನ್ನ ವಾಹನ ನಂದಿಯಿಂದ ಹಿಡಿದು, ತನ್ನ ಕೊರಳಲ್ಲಿನ ನಾಗ, ತಲೆಯ ಮೇಲಿನ ಚಂದ್ರ ಎಲ್ಲರನ್ನೂ ಬಿಟ್ಟುಬಂದು, ಯಾರಿಗೂ ಗೊತ್ತಾಗದಂತೆ ಅಮರತ್ವ ಬೋಧಿಸುತ್ತಿದ್ದ ಶಿವನ ಮಾತುಗಳನ್ನು, ಆ ಗುಹೆಯಲ್ಲಿದ್ದ ಎರಡು ಪಾರಿವಾಳಗಳು ಕೇಳಿಸಿಕೊಂಡು ಅಮರತ್ವ ಪಡೆದುಕೊಂಡವಂತೆ. ಈಗಲೂ ಗುಹೆಗೆ ಭೇಟಿ ನೀಡುವ ಯಾತ್ರಿಗಳಿಗೆ ಎರಡು ಪಾರಿವಾಳಗಳು ಅಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿರುವುದು ಕಂಡುಬರುತ್ತದಂತೆ. ಅಂಥ ಚಳಿಯಿರುವ ಎತ್ತರದ ಪ್ರದೇಶದಲ್ಲಿ ಪಾರಿವಾಳಗಳು ಹೇಗೆ ಬದುಕಿವೆ ಅನ್ನುವುದೇ ಆಶ್ಚರ್ಯದ ಸಂಗತಿ.

ಅಮರನಾಥದ ಬಗ್ಗೆ ಋುಗ್ವೇದದ ಮಂತ್ರಗಳಲ್ಲಿ ಮತ್ತು ಪುರಾಣಗಳಲ್ಲೂ ಉಲ್ಲೇಖವಿದೆಯೆಂದು ಹೇಳುತ್ತಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಸ್ಥಳ, 12ನೇ ಶತಮಾನದ ಬಳಿಕ ನಿಧಾನವಾಗಿ ಜನಮಾನಸದಿಂದ ಕಳೆದುಹೋಗಿತ್ತು ಎನ್ನಲಾಗಿದೆ. ಆನಂತರ, ಹದಿನೈದನೇ ಶತಮಾನದಲ್ಲಿ, ಈ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಬಂದ ಬೂಟಾ ಮಲಿಕ್ ಎಂಬ ಮುಸ್ಲಿಮ್ ವ್ಯಕ್ತಿಯೊಬ್ಬನಿಗೆ ಸಂತನೊಬ್ಬನ ಭೇಟಿ ಆಗುತ್ತದೆ. ಆ ಸಂತ, ಬೂಟಾ ಮಲಿಕ್‌ಗೆ ಒಂದು ಚೀಲ ಇದ್ದಿಲನ್ನು ಕೊಟ್ಟನಂತೆ. ಆತ ಮನೆಗೆ ಹೋಗಿ ಆ ಮೂಟೆಯನ್ನು ಸುರಿದಾಗ ಅದೆಲ್ಲವೂ ಚಿನ್ನದ ನಾಣ್ಯಗಳಾಗಿ ಬದಲಾಗಿದ್ದವಂತೆ. ಇದರಿಂದ ಸಂತೋಷಗೊಂಡ ಅವನು, ಆ ಸಂತನಿಗೆ ಧನ್ಯವಾದ ಹೇಳಲು ಮತ್ತೆ ಆ ಸ್ಥಳಕ್ಕೆ ಹೋದಾಗ, ಗುಹೆ ಮತ್ತು ಅಮರನಾಥನ ಹಿಮಲಿಂಗದ ದರ್ಶನ ಆಯಿತಂತೆ. ಹೀಗೆ, ಆಕಸ್ಮಿಕವಾಗಿ ಪತ್ತೆಯಾದ ಈ ಪವಿತ್ರ ಗುಹೆ, ಆನಂತರದ ದಿನಗಳಲ್ಲಿ ಮತ್ತೆ ವಿಶೇಷತೆ ಪಡೆದುಕೊಂಡಿತು.

1980ನೇ ಇಸವಿವರೆಗೂ ಪ್ರತಿವರ್ಷ ಅಮರನಾಥ ಗುಹೆಗೆ ಭೇಟಿ ನೀಡುತ್ತಿದ್ದ ಯಾತ್ರಿಗಳ ಸಂಖ್ಯೆ ಕೇವಲ ಎರಡು ಮೂರು ಸಾವಿರದಷ್ಟಿತ್ತು. ಆನಂತರ 1985ರ ವೇಳೆಗೆ, ಸುಮಾರು ನಲವತ್ತು ಸಾವಿರಕ್ಕೇರಿತ್ತು. ಆನಂತರದ ವರ್ಷಗಳಲ್ಲಿ ಒಂದೇ ಸಮನೆ ಏರುತ್ತಾ ಹೋದ ದರ್ಶನಾರ್ಥಿಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಲಕ್ಷಗಳ ಮಟ್ಟಕ್ಕೆ ಬಂದು ತಲುಪಿದೆ. 2012ರಲ್ಲಿ ಆರು ಲಕ್ಷ ಇಪ್ಪತ್ತೊಂದು ಸಾವಿರ ಯಾತ್ರಿಗಳು ಅಮರ ನಾಥನ ದರ್ಶನ ಪಡೆದಿದ್ದರು. ದಕ್ಷಿಣಕ್ಕೆ ಮುಖಮಾಡಿ ನಿಂತಿರುವ ಅಮರನಾಥನ ಗುಹೆ ಸುಮಾರು 131 ಅಡಿಗಳಷ್ಟು ಎತ್ತರವಿದೆ. ಈ ಗುಹೆಯ ಮೇಲ್ಭಾಗ ಮತ್ತು ಕೆಳಭಾಗ ನೀರಿನ ಸೆಲೆ ಇದ್ದು, ಗುಹೆಯ ನೆತ್ತಿಯ ಮೇಲಿನಿಂದ ತೊಟ್ಟಿಕ್ಕುವ ನೀರು ಘನಾಕಾರ ತಳೆದು ಶಿವವಲಿಂಗದ ಆಕೃತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ. ಆ ರೀತಿ ರಚನೆಯಾಗುವ ಹಿಮಲಿಂಗ ಸುಮಾರು 15 ಅಡಿ ಎತ್ತರ ಬೆಳೆಯುತ್ತದೆ. ಚಂದ್ರನ ಗತಿಗೆ ಅನುಸಾರವಾಗಿ, ಮೇ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಬೆಳೆಯುತ್ತಾ ಹೋಗಿ, ಆನಂತರ  ಕರಗುವುದು ಹಿಮಲಿಂಗದ ವಿಶೇಷ. ಶ್ರಾವಣದ ಹುಣ್ಣಿಮೆಯ ದಿನ ಈ ಹಿಮಲಿಂಗ ತನ್ನ ಪೂರ್ಣ ಎತ್ತರ ತಲುಪುತ್ತದೆ.

ಈ ಹಿಮಲಿಂಗವನ್ನು ಅಮರೇಶ್ವರ, ರಾಸ ಲಿಂಗಂ, ಶುದ್ಧಿ ಲಿಂಗಂ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಅಮರನಾಥ ಗುಹೆಯಲ್ಲಿ ಶಿವನನ್ನು ಪ್ರತಿನಿಧಿಸುವ ಹಿಮಲಿಂಗದೊಂದಿಗೆ. ಇತರೆ ಎರಡು ಸಣ್ಣ ಹಿಮಲಿಂಗಗಳೂ ಇದ್ದು, ಅದು ಪಾರ್ವತಿ ಮತ್ತು ಗಣೇಶ ಎಂದು ಹೇಳಲಾಗುತ್ತದೆ. ಅಮರನಾಥ ಗುಹೆ ಕಾಶ್ಮೀರದ ಶ್ರೀನಗರದಿಂದ 141 ಕಿ.ಮೀ ದೂರದಲ್ಲಿದೆ. ಆದರೆ ಗುಹೆಯಿಂದ 45 ಕಿ,ಮೀ ದೂರದಲ್ಲಿರುವ ಪಹಲ್ಗಾಮ್ ನಿಂದ ಯಾತ್ರೆ ಆರಂಭವಾಗುತ್ತದೆ.  ಈ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 1300 ಅಡಿಗಳ ಎತ್ತರದಲ್ಲಿದೆ. ಅಮರನಾಥ ಯಾತ್ರೆ ಪ್ರತಿ ವರ್ಷ ಜೂನ್‌ ತಿಂಗಳಿನಿಂದ ಹಾಗೂ ಅಗಸ್ಟ್ ತಿಂಗಳವರೆಗೂ ನಡೆಯುತ್ತದೆ. ರೈಲಿನಲ್ಲಿ ಬರುವವರು ಜಮ್ಮುವಿನಲ್ಲಿರುವ ಭಗವತಿನಗರ ಮೂಲ ಶಿಬಿರಕ್ಕೆ ಹೋಗಿ, ಅಲ್ಲಿಂದ ಸೇನೆಯ ರಕ್ಷಣೆಯಲ್ಲಿ ಪಹಲ್ಗಾಂ ಅಥವಾ ಬಾಲ್ತಾಳ್ ಶಿಬಿರ ತಲುಪಬಹುದು. ಈ ಎರಡೂ ಶಿಬಿರಗಳಿಂದಲೂ ಅಮರನಾಥಕ್ಕೆ ಕುದುರೆ ಹಾಗೂ ಹೆಲಿಕಾಪ್ಟರ್ ವ್ಯವಸ್ಥೆ ಇದೆ. ಬಾಲ್ತಾಳ್ ನಿಂದ ಅಮರನಾಥ ಗುಹೆಗೆ 16 ಕಿ.ಮೀ ನಡೆಯಬೇಕಾಗುತ್ತದೆ. ಒಂದೇ ದಿನದಲ್ಲಿ ಚಾರಣದ ಮೂಲಕ ದರ್ಶನ ಮಾಡಿ ಮತ್ತೆ ಬಾಲ್ತಾಳ್‌ಗೆ ವಾಪಸ್ ಬರಬಹುದು.

ಆದರೆ, ದೈಹಿಕವಾಗಿ ಫಿಟ್ ಅಂಡ್ ಫೈನ್ ಆಗಿದ್ದು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳ ಬಯಸುವವರು ಪಹಲ್ಗಾಂ ಮೂಲಕ ಅಮರನಾಥ ಗುಹೆಗೆ ಚಾರಣ ಮಾಡುವುದು ಒಳ್ಳೆಯದು. ಪಹಲ್ಗಾಮ್ ಮೂಲಕ ದರ್ಶನಕ್ಕೆ ತೆರಳುವವರು 45ಕಿ.ಮೀ ಕಡಿದಾದ ದಾರಿಯಲ್ಲಿ ಚಾರಣ ಮಾಡಬೇಕು. ಇಲ್ಲೂ ಕೂಡ ನಡೆಯಲು ಸಾಧ್ಯವಿಲ್ಲದವರಿಗೆ ಕುದುರೆ ವ್ಯವಸ್ಥೆ ಇರುತ್ತದೆ.ಪಹಲ್ಗಾಮ್ ನಲ್ಲಿ ಅಮರನಾಥ ಯಾತ್ರಾ ಸಮಿತಿಯ ಶಿಬಿರವಿದ್ದು ಅಲ್ಲಿಂದ ಚಂದನವಾಡಿಗೆ ವಾಹನದಲ್ಲಿ ಹೋಗಬಹುದು. ಚಂದನವಾಡಿಯಲ್ಲಿ ನಿಮ್ಮ ದಾಖಲೆ ಪರಿಶೀಲನೆ ನಂತರ ಚಾರಣ ಆರಂಭವಾಗುತ್ತದೆ. ಗುಹೆಯ ದಾರಿಯುದ್ದಕ್ಕೂ ಉಚಿತ ಊಟ-ತಿಂಡಿ ನೀಡುವ ಲಂಗರುಗಳ ವ್ಯವಸ್ಥೆ ಇದೆ.

ಯಾತ್ರಿಗಳು ಕಲ್ಲು ಬಂಡೆಗಳಿಂದ ಕೂಡಿದ ಹಾದಿಯಲ್ಲಿ ನಡೆದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ನಿಧಾನವಾಗಿ ಮೇಲೇರಬೇಕು. ಪಹಲ್ಗಾಮ್  ನಿಂದ 14 ಕಿ.ಮೀ ನಡೆದ ಬಳಿಕ ಶೇಷನಾಗ್ ಎಂಬ ಸ್ಥಳದಲ್ಲಿ ಯಾತ್ರಾ ಸಮಿತಿಯ ಶಿಬಿರವಿದೆ. ಅಲ್ಲಿಂದ ಮುಂದಿನ ಹಾದಿ ಕಠಿಣವಾಗಿರುತ್ತದೆ. ಹೀಗಾಗಿ ಯಾತ್ರಿಗಳು, ಶೇಷನಾಗ್ ನಲ್ಲಿನ ಶಿಬಿರಗಳಲ್ಲಿ ಒಂದು ರಾತ್ರಿ ಇದ್ದು ವಿಶ್ರಾಂತಿ ಪಡೆದು ಮುಂದುವರಿಯುತ್ತಾರೆ. ಶೇಷನಾಗ್‌ನಲ್ಲಿನ ಉಷ್ಣಾಂಶ  ಸೊನ್ನೆ ಡಿಗ್ರಿ ಸೆಂಟಿಗ್ರೇಡ್‌ ನಿಂದ 5 ಡಿಗ್ರಿ ಸೆಲ್ಷಿಯಸ್ ನಡುವೆ ಇರುತ್ತದೆ.

ಶೇಷನಾಗ್ ನಂತರದ ಹಾದಿ ಪೂರ್ತಿ ಮಂಜಿನಿಂದ ಕೂಡಿದ್ದು, ಆ ಹಾದಿಯಲ್ಲಿ ಚಾರಣ ಮಾಡುವುದೇ ಒಂದು ಅದ್ಭುತ ಅನುಭವ ಎಂದು ಹೋಗಿ ಬಂದವರು ಹೇಳುತ್ತಾರೆ. ಆದರೆ, ಆ ಪರಿಸರದಲ್ಲಿ ಒಂದಿಷ್ಟು ಆಮ್ಲಜನಕದ ಕೊರತೆ ಎದುರಾಗುವುದರಿಂದ ಕೆಲವರಿಗೆ ಸಮಸ್ಯೆ ಆಗಬಹುದು.

ಸಂಗಮ ಎಂಬ ಸ್ಥಳದಲ್ಲಿ ಪಹಲ್ಗಾಮ್  ಮತ್ತು ಬಾಲ್ತಾಳ್‌ನಿಂದ ಬರುವ ಹಾದಿಗಳು ಸೇರುತ್ತವೆ. ಅಲ್ಲಿಂದ ಮುಂದಕ್ಕೆ 3 ಕಿ.ಮೀ ದೂರದಲ್ಲಿ ಅಮರನಾಥ ಗುಹೆ ಇದೆ. ಬೃಹತ್ ಆಕಾರದ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗದ ದರ್ಶನ ಮಾಡುವಾಗ, ಅಲ್ಲಿಯವರೆಗಿನ ಶ್ರಮವೆಲ್ಲಾ ದೂರವಾದಂತಾಗಿ, ಸಾರ್ಥಕ ಭಾವನೆ ಮೂಡುತ್ತದೆ ಅನ್ನುತ್ತಾರೆ ದರ್ಶನ ಮಾಡಿ ಬಂದವರು.  ಅಮರನಾಥ ಗುಹೆಗೆ ಸಾಗುವ ದಾರಿಯುದ್ದಕ್ಕೂ ನಮ್ಮ ಸೈನಿಕರು ರಕ್ಷಣೆ  ನೀಡುತ್ತಾರೆ. ಅಮರನಾಥ ಯಾತ್ರೆ ಮಾಡಲು ಇಷ್ಟಪಡುವವರು ಸಾಕಷ್ಟು ಮೊದಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಅಮರನಾಥ್ ಯಾತ್ರಾ ಶ್ರೈನ್ ಬೋರ್ಡ್‌ನಿಂದ ವಿವರಗಳನ್ನು ಪಡೆದು ಜಮ್ಮು-ಕಾಶ್ಮೀರ ಬ್ಯಾಂಕಿನ ಶಾಖೆ ಅಥವಾ ಇಂಟರ್ ನೆಟ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಕಾಶ್ಮೀರದಲ್ಲಿ ಮೈಕೊರೆವ ಚಳಿ ಇರುತ್ತದೆ, ಹಾಗಾಗಿ ಬೆಚ್ಚಗಿನ ಉಡುಪು ತೊಡುವುದು ಅನಿವಾರ್ಯ. ಅಮರನಾಥ ಗುಹೆ ಎತ್ತರದ ಪ್ರದೇಶದಲ್ಲಿರುವುದರಿಂದ ಅಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಹೀಗಾಗಿ, ಯಾತ್ರೆ ಕೈಗೊಳ್ಳುವವರು ಸಾಕಷ್ಟು ಮೊದಲಿನಿಂದಲೇ ಯೋಗ, ವ್ಯಾಯಾಮ ಮತ್ತು ಪ್ರತಿ ದಿನ ಐದಾರು ಕಿ.ಮೀ ನಡಿಗೆ ಅಭ್ಯಾಸ ಮಾಡುವುದು ಉತ್ತಮ.

ಇತ್ತೀಚಿನ ವರ್ಷಗಳಲ್ಲಿ ಲಕ್ಷಗಟ್ಟಲೆ ಯಾತ್ರಿಗಳು, ಈ ಪರಿಸರಕ್ಕೆ ಭೇಟಿ ನೀಡುವುದರಿಂದ ಮತ್ತು ಇಲ್ಲಿನ ಚಟುವಟಿಕೆಗಳಿಂದ ಪರಿಸರದ ಉಷ್ಣಾಂಶದಲ್ಲಿ ವ್ಯತ್ಯಾಸವಾಗಿ ಹಿಮಲಿಂಗ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆಯಂತೆ. ಈ ವರ್ಷ ಈಗಾಗಲೇ ದರ್ಶನ ಪಡೆದವರ ಸಂಖ್ಯೆ ಸುಮಾರು ಒಂದೂವರೆ ಲಕ್ಷ ದಾಟಿದ್ದು, ಉಗ್ರಗಾಮಿಗಳ ದಾಳಿಯಲ್ಲಿ 7 ಯಾತ್ರಾರ್ಥಿಗಳು ಮೃತಪಟ್ಟ ಬಳಿಕವೂ ಯಾತ್ರಿಗಳ ಉತ್ಸಾಹದಲ್ಲಿ ಎಳ್ಳಷ್ಟೂ ಕಮ್ಮಿಯಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.

ಆದರೆ, ಅಮರನಾಥ ಯಾತ್ರೆ ಅನ್ನುವುದು ಸ್ಥಳೀಯರ ನೆರವಿಲ್ಲದೆ  ಸಾಧ್ಯವಾಗದ ಮಾತು. ಏಕೆಂದರೆ, ಅಮರನಾಥನ ದರ್ಶನಕ್ಕೆ ಬರುವ ಯಾತ್ರಿಕರಿಗೆ ಬೇಕಾದ ಸೌಕರ್ಯಗಳನ್ನು ಸ್ಥಳೀಯರೇ ಒದಗಿಸಿಕೊಡುತ್ತಾರೆ. ಬಾಲ್ತಾಳ್ ಮತ್ತು ಪಹಲ್‌ಗಾಮ್ ಶಿಬಿರಗಳ ಬಳಿ ಅಂಗಡಿಗಳನ್ನು ತೆರೆದು ಸ್ವೆಟರ್‌, ಮಫ್ಲರ್‌, ಶೂಗಳು, ರೈನ್ ಕೋಟ್ ಇತ್ಯಾದಿ ಎಲ್ಲವನ್ನೂ ಮಾರುತ್ತಾರೆ. ಇದರ ಜೊತೆಗೆ, ಕುದುರೆಗಳು ಮತ್ತು ಪಲ್ಲಕ್ಕಿಗಳಲ್ಲಿ ವಯಸ್ಸಾದವರನ್ನು, ಅಶಕ್ತರನ್ನು ಹೊತ್ತೊಯ್ಯುವವರೂ ಕೂಡ ಸ್ಥಳೀಯ ಮುಸ್ಲಿಮರೇ ಆಗಿದ್ದಾರೆ.

1996ರಲ್ಲಿ ಯಾತ್ರಿಗಳು ಹಿಮಪಾತಕ್ಕೆ ಸಿಲುಕಿ ನಲುಗಿದಾಗ ಅವರ ನೆರವಿಗೆ ಧಾವಿಸಿದ್ದೂ ಸ್ಥಳೀಯ ಮುಸ್ಲಿಮರೇ. ಹಾಗೆ ನೋಡಿದರೆ, ಅಮರನಾಥ ಯಾತ್ರೆಯನ್ನು ನಿರ್ವಹಿಸುವುದು, ಕಾಶ್ಮೀರಿ ಮುಸ್ಲಿಮರ ಒಂದು ವಾರ್ಷಿಕ ಸಂಪ್ರದಾಯವೇ ಆಗಿಹೋಗಿದೆ. ಅಮರನಾಥ ಯಾತ್ರೆ ಅನ್ನುವುದು, ಯಾತ್ರಿಗಳು ಮತ್ತು ಕಾಶ್ಮೀರಿ ಮುಸ್ಲಿಮರ ಬಾಂಧವ್ಯ ಬೆಸೆಯುತ್ತದೆ. ಇದರ ಜೊತೆಗೆ ಈ ಯಾತ್ರೆ, ಸ್ಥಳೀಯರಿಗೆ ದೊಡ್ಡ ಆದಾಯ ತಂದುಕೊಡುವ ಮಾರ್ಗವೂ ಆಗಿದೆ. ಹೀಗಾಗಿ, ಯಾತ್ರಿಗಳ ಮೇಲಿನ ದಾಳಿ ಕಾಶ್ಮೀರದ ಆರ್ಥಿಕತೆಯ ಮೇಲಿನ ದಾಳಿಯೂ ಆಗಿದೆ.

ಅಮರನಾಥ ಯಾತ್ರಿಗಳ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಎಲ್ಲಾ ಕಾಶ್ಮೀರಿಗಳೂ ಖಂಡಿಸಿದ್ದಾರೆ. ಇದು, ಮಾನವೀಯತೆ ಮತ್ತು ಕಾಶ್ಮೀರೀತನದ ಮೇಲೆ ನಡೆದ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಫಿ ಸಂತರ ನಾಡು ಕಾಶ್ಮೀರದಲ್ಲಿ ಎಲ್ಲಾ ರೀತಿಯಿಂದಲೂ ಮತ್ತೆ  ಶಾಂತಿ ನೆಲೆಸಲಿ. ಕಾಶ್ಮೀರ ಕಣಿವೆ ಭೂಮಿ ಮೇಲಿನ ಸ್ವರ್ಗ ಅನ್ನುವಂಥ ಮಾತುಗಳನ್ನು ವಾಸ್ತವರೂಪದಲ್ಲಿ ಕಾಣುವಂಥ ದಿನಗಳು ಮತ್ತೊಮ್ಮೆ ಬರಲಿ ಅನ್ನುವುದೇ ಎಲ್ಲಾ ಭಾರತೀಯರ ಆಶಯ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ