ಸೆಂಟ್ರಲ್ ಹಾಲ್ ಸ್ಪೆಷಲ್…

Kannada News

15-07-2017

ದೇಶದಲ್ಲಿ ಜಿಎಸ್‌ಟಿ ಅಂದರೆ, ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರುವ ಸಂದರ್ಭದಲ್ಲಿ, ಇದೇ ಜೂನ್ ಮೂವತ್ತು ಮತ್ತು ಜುಲೈ ಒಂದರ ಮಧ್ಯರಾತ್ರಿ ಭಾರತದ ಸಂಸತ್ತಿನ ವಿಶೇಷ ಮಧ್ಯರಾತ್ರಿ ಅಧಿವೇಶನ ಆಯೋಜಿಸಲಾಗಿತ್ತು. ಸಂಸತ್ ಭವನದ ಅಶೋಕ ಹಾಲ್‌ನಲ್ಲಿ ನಡೆದ ಈ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರೂ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.

ಭಾರತದ ಸಂಸತ್ತು ಅನ್ನುವುದು, ದೇಶದ ಒಟ್ಟಾರೆ ಪ್ರಜಾಸತ್ತಾತ್ಮಕ ಮೌಲ್ಯಗಳ ಒಂದು ಮೂರ್ತ ರೂಪ. ಸಂವಿಧಾನಾತ್ಮಕ ಅಧಿಕಾರಗಳನ್ನು ಹೊಂದಿರುವ ಸಂಸತ್ತು, ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಕೇಂದ್ರ ಬಿಂದು.  ಪ್ರಜಾಪ್ರಭುತ್ವದ ದೇಗುಲವೆಂದೇ ಹೆಸರಾಗಿರುವ ಸಂಸತ್ ಭವನ ನಿರ್ಮಾಣವಾಗಿದ್ದು ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ.

ಪಾರ್ಲಿಮೆಂಟ್ ಹೌಸ್ ಎಂದು ಕರೆಯಲ್ಪಡುವ ಈ ಸಂಸತ್ ಭವನವನ್ನು ವಿನ್ಯಾಸಗೊಳಿಸಿದವರು, ಪ್ರಖ್ಯಾತ ಬ್ರಿಟಿಷ್ ಶಿಲ್ಪಿಗಳಾದ ಎಡ್ವಿನ್ ಲುಟೇನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್. ಸುಮಾರು ಏಳು ವರ್ಷಗಳ ನಿರ್ಮಾಣ ಕಾರ್ಯದ ಬಳಿಕ, 1927ರ ಜನವರಿ 18ರಂದು ಅಂದಿನ ಗವರ್ನರ್ ಜನರಲ್ ಲಾರ್ಡ್ ಇರ್ವಿನ್ ಅವಧಿಯಲ್ಲಿ ಪಾರ್ಲಿಮೆಂಟ್ ಹೌಸ್ ಉದ್ಘಾಟನೆ ಆಯಿತು. ಇಡೀ ಸಂಸತ್ ಭವನದಲ್ಲಿ ಅಶೋಕ ಹಾಲ್ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದ್ದು, ಭಾರತದ ಹಲವು ಅತ್ಯಂತ ಪ್ರಮುಖ ಘಳಿಗೆಗಳಿಗೆ ಸಾಕ್ಷಿಯಾಗಿದೆ.

ಒಂದು ಕಾಲದಲ್ಲಿ ಕಾನ್ಸ್ಟಿಟ್ಯೂಷನ್ ಹಾಲ್ ಎಂದೂ ಕರೆಯಲ್ಪಡುತ್ತಿದ್ದ ಈ ಅಶೋಕ ಹಾಲ್ ಅಥವ ಸೆಂಟ್ರಲ್ ಹಾಲ್ ಅನ್ನುವುದು, ವೃತ್ತಾಕಾರದಲ್ಲಿದ್ದು, ಸಂಸತ್ ಭವನದ ಕೇಂದ್ರ ಭಾಗದಲ್ಲಿದೆ. ಹಲವಾರು ಐತಿಹಾಸಿಕ ಸಂದರ್ಭಗಳಿಗೆ ಸಾಕ್ಷಿಯಾಗಿರುವ ಸೆಂಟ್ರಲ್ ಹಾಲ್ ಮೇಲಿನ ಗುಮ್ಮಟದ ಅಡ್ಡಗಲ ಸುಮಾರು 98 ಅಡಿಗಳಷ್ಟಿದೆ.

ಇದು ಇಡೀ ಜಗತ್ತಿನ ಅತ್ಯಂತ ಮೋಹಕವಾದ ಗುಮ್ಮಟಗಳಲ್ಲಿ ಒಂದು ಎಂದು ಹೆಸರಾಗಿದೆ. ಸೆಂಟ್ರಲ್ ಹಾಲ್ ಸುತ್ತಲೂ ಹಸಿರಿನಿಂದ ಕೂಡಿದ ಆವರಣಗಳು ಮತ್ತು ಕಾರಂಜಿಗಳಿವೆ. ಸೆಂಟ್ರಲ್ ಹಾಲ್ ಕಟ್ಟಡದಿಂದ ಲೋಕಸಭಾ ಭವನ ಮತ್ತು ರಾಜ್ಯಸಭಾ ಭವನಕ್ಕೆ ಸಂಪರ್ಕವಿದೆ.

ಮಹಾನ್ ವ್ಯಕ್ತಿಗಳು ಮತ್ತು ದೇಶದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಪಟಗಳು ಸೆಂಟ್ರಲ್ ಹಾಲ್‌ನ ಗೋಡೆಗಳನ್ನು ಅಲಂಕರಿಸಿವೆ. ಅಧಿವೇಶನಗಳು ನಡೆಯುವ ಸಂದರ್ಭದಲ್ಲಿ ಸಿಗುವ ಬಿಡುವಿನ ವೇಳೆಯಲ್ಲಿ ಸೆಂಟ್ರಲ್ ಹಾಲಿಗೆ ಧಾವಿಸಿ ಬರುವ ನಮ್ಮ ಸಂಸದರು, ಅಲ್ಲೇ ಕುಳಿತು ಸಮಾಲೋಚನೆ ನಡೆಸುತ್ತಾರೆ. ನಮ್ಮ ಸಂವಿಧಾನವನ್ನು ರೂಪಿಸಿದ ಸಾಂವಿಧಾನಿಕ ಸಭೆಯ ಮೀಟಿಂಗ್ ಕೂಡ ಇದೇ ಹಾಲ್‌ನಲ್ಲಿ ನಡೆಯುತ್ತಿತ್ತು. ಸಾಮಾನ್ಯ ವಾಡಿಕೆಯಂತೆ ಸೆಂಟ್ರಲ್ ಹಾಲ್‌ನಲ್ಲಿ ನೂತನ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಪ್ರಮಾಣ ವಚನ ಸಮಾರಂಭ ಏರ್ಪಾಡಾಗುತ್ತದೆ. ಪ್ರತಿವರ್ಷವೂ ರಾಷ್ಟ್ರಪತಿಯವರು, ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾರೆ, ಅದನ್ನು ಸೆಂಟ್ರಲ್ ಹಾಲ್‌ನಲ್ಲೇ ಆಯೋಜಿಸಲಾಗುತ್ತದೆ. ಇತರೆ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ನಮ್ಮ ದೇಶದ ಸಂಸದರನ್ನು ಉದ್ದೇಶಿಸಿ ಭಾಷಣ ಮಾಡುವಾಗಲೂ ಸೆಂಟ್ರಲ್‌ ಹಾಲ್‌ನಲ್ಲೇ ಅಧಿವೇಶನ ನಡೆಯುತ್ತದೆ.

ಕಳೆದವಾರ ಜಿಎಸ್‌ಟಿ ಜಾರಿ ಘೋಷಣೆ ಸಂದರ್ಭದಲ್ಲಿ ನಡೆದ ಮಧ್ಯರಾತ್ರಿ ಅಧಿವೇಶನವೂ ಸೇರಿದಂತೆ ಈವರೆಗೆ, ಕೇವಲ ಐದು ಬಾರಿ ಮಾತ್ರ ಮಧ್ಯರಾತ್ರಿ ಅಧಿವೇಶನಗಳು ನಡೆದಿವೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಈವರೆಗೆ ನಡೆದಿರುವ ಮಧ್ಯರಾತ್ರಿ ಅಧಿವೇಶನಗಳ ವಿಶೇಷತೆ ಏನು ಎಂಬ ಬಗ್ಗೆ ನಿಮಗಾಗಿ ಒಂದು ಸ್ಪೆಷಲ್ ರಿಪೋರ್ಟರ್‌ ಇಲ್ಲಿದೆ.

ಸಂಸತ್ ಭವನದ ಅಶೋಕ ಹಾಲ್‌ನಲ್ಲಿ ಮೊದಲ ಬಾರಿಗೆ ನಡೆದ ಮಧ್ಯರಾತ್ರಿ ಅಧಿವೇಶನ, ಭಾರತದ ಮಟ್ಟಿಗೆ ಅತ್ಯಂತ ದೊಡ್ಡ ಮಹತ್ವ ಪಡೆದಿದೆ. 1947ರ ಆಗಸ್ಟ್ ಹದಿನಾಲ್ಕು ಮತ್ತು ಹದಿನೈದರ ಮಧ್ಯರಾತ್ರಿ ನಡೆದ ಸಮಾರಂಭದಲ್ಲಿ ಭಾರತ ದೇಶ, ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸ್ವತಂತ್ರ ದೇಶವಾಯಿತು.

ಆ ಹೊತ್ತಿನಲ್ಲಿ, ಸಂಸತ್ ಭವನದ ಮೇಲೆ ಹಾರುತ್ತಿದ್ದ ಬ್ರಿಟಿಷರ ಯೂನಿಯನ್ ಜಾಕ್ ಬಾವುಟವನ್ನು ಕೆಳಗಿಳಿಸಿ, ಭಾರತದ ತ್ರಿವರ್ಣ ಧ್ವಜ ಹಾರಿಸಲಾಯಿತು. ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ದೇಶದ ಮೊದಲ ಪ್ರಧಾನಿಯಾಗಿ ಭಾಷಣ ಮಾಡಿದ್ದೂ ಕೂಡ ಅದೇ ಸಂದರ್ಭದಲ್ಲೇ. ಈ ಭಾಷಣ The Tryst with Destiny address of Nehru ಎಂದೇ ಪ್ರಖ್ಯಾತವಾಗಿದೆ. ಇದಾದ ನಂತರ ಸಂಸತ್ತಿನಲ್ಲಿ, ಮತ್ತೆ ಮಧ್ಯರಾತ್ರಿ ಅಧಿವೇಶನ ನಡೆದಿದ್ದು 1972ರ ಆಗಸ್ಟ್ ಹದಿನಾಲ್ಕು ಮತ್ತು ಹದಿನೈದರ ಮಧ್ಯರಾತ್ರಿ. ಅದು, ಸ್ವತಂತ್ರ ಭಾರತದ ಬೆಳ್ಳಿಯ ಹಬ್ಬದ ಸಂದರ್ಭ. ಸರ್ವತಂತ್ರ ಸ್ವತಂತ್ರ ಭಾರತದ ಇಪ್ಪತ್ತೈದನೇ ವರ್ಷಾಚರಣೆ. ಆಗ ಶ್ರೀಮತಿ ಇಂದಿರಾ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದರು ಮತ್ತು ವಿ.ವಿ.ಗಿರಿ ಅವರು ರಾಷ್ಟ್ರಪತಿಯಾಗಿದ್ದರು.

ಇದಾದ ನಂತರ ಮೂರನೇ ಬಾರಿಗೆ 1992ರ ಆಗಸ್ಟ್‌ 8 ಮತ್ತು 9 ರ ಮಧ್ಯರಾತ್ರಿ ಮತ್ತೊಮ್ಮೆ ಸಂಸತ್ತಿನಲ್ಲಿ ಮಧ್ಯರಾತ್ರಿ ಅಧಿವೇಶನ ಆಯೋಜಿಸಲಾಗಿತ್ತು. ಅದು Quit India ಅಂದರೆ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಆಗ್ರಹಿಸಿ ನಡೆಸಿದ್ದ ಚಲೇಜಾವ್ ಚಳವಳಿಯ ಐವತ್ತನೇ ವರ್ಷಾಚರಣೆ ಆಗಿತ್ತು. 1942ರ ಆಗಸ್ಟ್ 8 ರಂದು ಆರಂಭಿಸಲಾಗಿದ್ದ ಈ ಚಳವಳಿಯಿಂದ ಬ್ರಿಟಿಷರು ಕಂಗೆಟ್ಟಿದ್ದರು, ಭಾರತವನ್ನು ಬಿಟ್ಟುಹೊರಡುವುದು ಅವರಿಗೆ ಅನಿವಾರ್ಯವಾಗಿತ್ತು. ಅಂತಹ ಮಹತ್ವದ ದಿನದ ಸ್ಮರಣೆ ಸಂದರ್ಭದಲ್ಲಿ ನಮ್ಮ ಸಂಸತ್ತಿನ ಮಧ್ಯರಾತ್ರಿ ಅಧಿವೇಶನ ನಡೆಸಲಾಗಿತ್ತು. ಆಗ ಶ್ರೀ ಶಂಕರ್ ದಯಾಳ್ ಶರ್ಮ ಅವರು ರಾಷ್ಟ್ರಪತಿಯಾಗಿದ್ದರೆ, ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದರು.

ಇದಾದ ಬಳಿಕ ಭಾರತಕ್ಕೆ ಬಿಡುಗಡೆ ದೊರೆತ ಐವತ್ತನೇ ವರ್ಷಾಚರಣೆಯ ಬಂಗಾರದ ಹಬ್ಬದ ಸಂದರ್ಭದಲ್ಲಿ, 1997ರ ಆಗಸ್ಟ್ ಹದಿನಾಲ್ಕು ಮತ್ತು ಹದಿನೈದರ ಮಧ್ಯರಾತ್ರಿ ಇದೇ ಸೆಂಟ್ರಲ್ ಹಾಲ್‌ ನಲ್ಲಿ ಅಧಿವೇಶನ ಆಯೋಜಿಸಲಾಗಿತ್ತು. ಆಗ, ಐ.ಕೆ.ಗುಜ್ರಾಲ್ ದೇಶದ ಪ್ರಧಾನಿಯಾಗಿದ್ದರು ಮತ್ತು ಕೆ.ಆರ್. ನಾರಾಯಣನ್ ಅವರು ರಾಷ್ಟ್ರಪತಿಯಾಗಿದ್ದರು.

ಇವೇ ಸಂಸತ್ತಿನ ಅಶೋಕ ಹಾಲ್‌ನಲ್ಲಿ ನಡೆದ ಮೊದಲ ನಾಲ್ಕು ಮಧ್ಯರಾತ್ರಿ ಅಧಿವೇಶನಗಳು. ಇವು ನಾಲ್ಕನ್ನೂ ಬಿಟ್ಟರೆ, ಕಳೆದ ವಾರ ಜಿಎಸ್‌ಟಿ ಜಾರಿ ಸಂದರ್ಭದಲ್ಲಿ ಮತ್ತೆ ಮಧ್ಯರಾತ್ರಿ ಅಧಿವೇಶನ ನಡೆಸಲಾಗಿದೆ. ಜಿಎಸ್‌ಟಿ ನೆಪದಲ್ಲಿ ಮೋದಿ ಸರ್ಕಾರದ ಮಧ್ಯರಾತ್ರಿ ಅಧಿವೇಶನ ಅನಗತ್ಯ ಎಂದು ದೂರಿದ್ದ ಕಾಂಗ್ರೆಸ್ ಪಕ್ಷ ಜಿಎಸ್‌ಟಿ ಅಧಿವೇಶನವನ್ನು ಬಹಿಷ್ಕರಿಸಿತ್ತು. ಎಡ ಪಕ್ಷಗಳೂ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಈ ಅಧಿವೇಶನದಿಂದ ದೂರವೇ ಉಳಿದಿದ್ದರು.

ಇದು ಸಂಸತ್ ಭವನದ ಸುಪ್ರಸಿದ್ಧ ಸೆಂಟ್ರಲ್ ಹಾಲ್‌ನಲ್ಲಿ ಈವರೆಗೆ ನಡೆದಿರುವ ಮಧ್ಯರಾತ್ರಿ ಅಧಿವೇಶನಗಳ ವೃತ್ತಾಂತ. ಮುಂದಕ್ಕೆ, 2022ನೇ ಇಸವಿಯಲ್ಲಿ ಭಾರತ ಸ್ವಾತಂತ್ರ್ಯ ಪಡೆದ 75ನೇ ವರ್ಷಾಚರಣೆ ಸಂದರ್ಭದ ಅಮೃತ ಮಹೋತ್ಸವದ ವೇಳೆ, ಮತ್ತೊಮ್ಮೆ ಸೆಂಟ್ರಲ್ ಹಾಲ್ ನಲ್ಲೇ ಮಧ್ಯರಾತ್ರಿ ಅಧಿವೇಶನ ಆಯೋಜನೆಯಾಗಬಹುದು. ಆ ಹೊತ್ತು, ದೇಶದ ಪ್ರಧಾನಿ ಯಾರಾಗಿರುತ್ತಾರೆ? ರಾಷ್ಟ್ರಪತಿ ಯಾರಾಗಿರುತ್ತಾರೆ? ನಮಗಂತೂ ಗೊತ್ತಿಲ್ಲ…ನೀವೇ ಸುಮ್ಮನೆ ಊಹೆ ಮಾಡಿ….ನೋಡೋಣ.

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ