ಮುಂದಿನ ಚುನಾವಣೆಯೇ ಕೊನೆ..?

Kannada News

15-07-2017

ಮೈಸೂರು: ಮುಂದಿನ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಬಹುದು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯು ಹೇಳಿದ್ದಾರೆ. ಹೀಗಾಗಿ ರಾಜಕೀಯ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲು ಬಯಸಿದ್ದೇನೆ ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೇ, ಹೈ ಕಮಾಂಡ್ ಅವರು ಎಲ್ಲಿ ಹೇಳ್ತಾರೊ ಅಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ನನ್ನ ಪುತ್ರ ಡಾ.ಯತೀಂದ್ರ ರಾಜಕೀಯ ಪ್ರವೇಶವನ್ನು ಕೂಡ ಹೈ ಕಮಾಂಡ್ ನಿರ್ಧಾರ ಮಾಡಲಿದೆ ಎಂದಿದ್ದಾರೆ. ಚಾಮುಂಡೇಶ್ವರಿ ಮತ್ತು ವರುಣ ಎರಡು ಕ್ಷೇತ್ರದ ಜನರು ನಮ್ಮಲ್ಲಿ ನಿಲ್ಲಿ ಎಂದು ಹೇಳುತ್ತಿದ್ದೂ, ಎರಡು ಕ್ಷೇತ್ರದ ಜನರಿಗೆ ನನ್ನ ಮೇಲೆ ಪ್ರೀತಿಯಿದೆ ಎಂದರು. ಇನ್ನು ಬಿಜೆಪಿಯ ಬಗ್ಗೆ ಕಿಡಿಕಾರಿದ ಸಿಎಂ, ಬಿಜೆಪಿಯವರು ಮಾತ್ರ ಹಿಂದೂಗಳಲ್ಲ, ನಾವು ಹಿಂದೂಗಳೇ, ನನ್ನ ಹೆಸರು ಕೂಡ ಸಿದ್ದ ರಾಮ ಅಂತಿದೆ. ಹೀಗಾಗಿ ನಾನು ಕೂಡ ಹಿಂದುವೇ ಆಗಿದ್ದೇನೆ ಎಂದು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯವರು ದಕ್ಷಿಣ ಕನ್ನಡದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಬೇರೆ ವಿಷಯ ಇಲ್ಲದ ಕಾರಣ ಇದನ್ನೇ ಮುಂದುವರೆಸುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯವರಿಗೆ ಇದೆಲ್ಲ ದೊಡ್ಡ ವಿಷಯವಾಗುತ್ತದೆ, ಬಿಜೆಪಿಯವರದ್ದು ಜಾಣಕುರುಡುತನ ಎಂದಿದ್ದಾರೆ. ರಾಜಕಾರಣಿಗಳು,ಮಾಧ್ಯಮಗಳು ಸುಮ್ಮನಿದ್ದರೆ ಎಲ್ಲ ಬೆಂಕಿಯು ಆರುತ್ತದೆ ಎಂದು ದಕ್ಷಿಣ ಕನ್ನಡ ಗಲಭೆಯ ವಿಚಾರವಾಗಿ ಮಾಧ್ಯಮಗಳ ಕಡೆಯೂ ಬೊಟ್ಟು ಮಾಡಿದ್ದಾರೆ. ಇನ್ನು ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಒಬ್ಬರೇ ಹಿಂದುವಲ್ಲ, ನಾನು ಕೂಡ ಹಿಂದು ಆಗಿದ್ದೇನೆ. ಬಿಜೆಪಿ ನಾಯಕರು ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯ ವಿಸ್ತಾರಕ್ ಕಾರ್ಯಕ್ರಮದ ಹೆಸರಿನಲ್ಲಿ ಹಿಂದುತ್ವವನ್ನು ವಿಸ್ತರಿಸುತ್ತಿದ್ದಾರೆಂದು ಹರಿಹಾಯ್ದರು. ಇದೇ ವೇಳೇ ಸಂಸದ ಪ್ರತಾಪ್ ಸಿಂಹ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸಂಸದರು ಹೇಳುವ ದಿನ ಕಾರ್ಯಕ್ರಮ ನಡೆಸಲು ಆಗುವುದಿಲ್ಲ, ಕೇಂದ್ರದ ಕಾರ್ಯಕ್ರಮಗಳಿಗೆ ನಮ್ಮನ್ನು ಕೇಳಿ ಉದ್ಘಾಟನೆ ಮಾಡುವುದಿಲ್ಲ. ಕೇಂದ್ರದ ಹಣ ಯಾರದ್ದು ? ಅದೆಲ್ಲವೂ, ಕೇಂದ್ರಕ್ಕೆ ಹೋಗುವ ರಾಜ್ಯದ ತೆರಿಗೆ ಹಣ. ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯದ ರೂಪದಲ್ಲಿ ವಾಪಸ್ ನೀಡಿದೆ ಅಷ್ಟೇ ಎಂದರು. ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಲೋಕಸಭಾ ಸದಸ್ಯರು ರಾಜ್ಯದ ಕಾರ್ಯಕ್ರಮಗಳಿಗೆ ಬಂದು ಸಹಕಾರ ನೀಡಬೇಕು. ಪ್ರಧಾನಿ ಮೋದಿ ಪ್ರಜಾಪ್ರಭುತ್ವದಲ್ಲಿ ಪರಸ್ಪರ ಸಹಕಾರ ನೀಡಿ ಎಂದಿದ್ದಾರೆ. ನೀವು ಯಾಕೆ ಕ್ಯಾತೆ ತೆಗೆಯುತ್ತಿದ್ದಿರಾ? ಎಂದರು.


ಸಂಬಂಧಿತ ಟ್ಯಾಗ್ಗಳು

ಮೈಸೂರು ಮುಂದಿನ ಚುನಾವಣೆಯೇ ಕೊನೆ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ