ಸಿನಿಮಾದಲ್ಲಿ ಸಿಎಂ ‘ಪಾತ್ರ’

Kannada News

15-07-2017

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಶೀಲ ನಿರ್ದೇಶಕಿ ಎಂದು ಗುರುತಿಸಲ್ಪಟ್ಟಿರುವ ಕವಿತಾ ಲಂಕೇಶ್, ಇದೀಗ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ, ಇದು ಹೊಸತನದಿಂದ ಕೂಡಿದ ಮಕ್ಕಳ ಚಿತ್ರ. ಈ ಚಿತ್ರದಲ್ಲಿ, ಕವಿತಾ ಅವರ ಮಗಳು ಇಶಾ ಮತ್ತು ಅವರ ಸೋದರ ಇಂದ್ರಜಿತ್ ಅವರ ಮಗ ಸಮರಜಿತ್ ಮುಖ್ಯ ಪಾತ್ರವಹಿಸುತ್ತಿದ್ದಾರೆ. ಈ ಬೆಳವಣಿಗೆಯಿಂದ, ದಿವಂಗತ ಪಿ.ಲಂಕೇಶ್ ಅವರ ಕುಟುಂಬದ ಮೂರನೇ ಪೀಳಿಗೆಯವರೂ ಕೂಡ ಸಿನಿಮಾ ಲೋಕಕ್ಕೆ ಕಾಲಿಟ್ಟಂತಾಯಿತು. ಆದರೆ, ಸುದ್ದಿ ಇಷ್ಟೇ ಅಲ್ಲ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ನಿರ್ಮಾಣವಾಗುತ್ತಿರುವ ‘ಸಮ್ಮರ್ ಹಾಲಿಡೇಸ್’ ಎಂಬ ಹೆಸರಿನ ಈ ಸಿನಿಮಾದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಆಕ್ಟ್ ಮಾಡುತ್ತಿದ್ದಾರೆ. ಹಾಗೆ ಮಾಡುವ ಮೂಲಕ, ಅಧಿಕಾರದಲ್ಲಿರುವಾಗಲೇ ಸಿನಿಮಾದಲ್ಲಿ ನಟಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ಸೃಷ್ಟಿಸಲಿದ್ದಾರೆ. ಇದು ರಾಷ್ಟ್ರಮಟ್ಟದಲ್ಲೂ ಸುದ್ದಿ ಆಗಿದೆ. ಆದರೆ, ಸಿದ್ದರಾಮಯ್ಯನವರು, ಒಂದು ಸಂದೇಶ ಕೊಡುವಂಥ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೂ ಕೂಡ ಮನಸಾರೆ ಒಪ್ಪಿಗೆ ಇಲ್ಲದಿದ್ದರೂ, ನಿರ್ದೇಶಕರ ಒತ್ತಾಯಕ್ಕೆ ಕಟ್ಟು ಬಿದ್ದು ಹೂಂ ಎಂದಿದ್ದಾರೆ ಎಂದು ತಿಳಿದು ಬಂದಿದೆ. ಅಂದಹಾಗೆ, ಸಿದ್ದರಾಮಯ್ಯನವರು ಸಿನಿಮಾದಲ್ಲಿ ಪಾತ್ರ ವಹಿಸುತ್ತಿರುವುದು ಇದೇ ಮೊದಲೇನೂ ಅಲ್ಲ. ಹಿಂದೆ, 1978ರಲ್ಲಿ ಕವಿತಾ ಅವರ ತಂದೆ ಪಿ.ಲಂಕೇಶ್ ನಿರ್ದೇಶಿಸಿದ್ದ ‘ಎಲ್ಲಿಂದಲೋ ಬಂದವರು’ ಸಿನಿಮಾದಲ್ಲೂ ಸಿದ್ದರಾಮಯ್ಯ ನವರು ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ