‘ಜಾಲ’ದೊಳು ಸಿಲುಕಿ ವಿಲವಿಲ…

Kannada News

14-07-2017

ಕಚೇರಿಯಲ್ಲೇ ಇರಲಿ, ಮನೆಯಲ್ಲೇ ಇರಲಿ ಅಥವ  ಪ್ರಯಾಣ ಮಾಡುತ್ತಿರಲಿ ಇಡೀದಿನ ಸ್ಮಾರ್ಟ್‌ಫೋನ್ ಕೈಯ್ಯಲ್ಲೇ ಇರುತ್ತದೆ. ಗಾಡಿ ಓಡಿಸುವಾಗಲೂ, ಊಟ ಮಾಡುವಾಗಲೂ ಕೈಯ್ಯಲ್ಲೇ ಇರುತ್ತದೆ. ಶೌಚಾಲಯ ಮತ್ತು ಸ್ನಾನದ ಮನೆಗೂ ಮೊಬೈಲ್ ಫೋನ್  ಹೋಗುತ್ತದೆ. ರಾತ್ರಿ, ಮಧ್ಯರಾತ್ರಿವರೆಗೂ ಕೈಯ್ಯಲ್ಲೇ  ಫೋನು, ಒಂದು ಹೊತ್ತಿನಲ್ಲಿ ಎದ್ದಾಗಲೂ ಮತ್ತೆ ಫೋನ್‌ನೊಳಕ್ಕೆ ಇಣುಕುವ ಚಟ. ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋ ನೋಡುವುದೇ ಮರೆತು ಹೋಗಿದ್ದು, ಫೋನ್ ನೋಡುವುದರಿಂದಲೇ ಅವರ ದಿನ ಆರಂಭವಾಗುತ್ತದೆ. ಮತ್ತೆ ಇಡೀ ದಿನ ಅದೇ ಪುನರಾವರ್ತನೆ. ಇದು ಇವತ್ತಿನ ನಾಗರಿಕ ಸಮಾಜದ ಒಂದು ಚಿತ್ರಣ. ಸ್ಮಾರ್ಟ್‌ ಫೋನ್ ಮತ್ತು ಅದರೊಳಗೆ ಬಿಚ್ಚಿಕೊಳ್ಳುವ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್, ವಾಟ್ಸ್ ಆಪ್ ಮುಂತಾದವುಗಳು ಆಧುನಿಕ ಮನುಷ್ಯನ ಬದುಕನ್ನೇ ನಿಯಂತ್ರಿಸುತ್ತಿವೆ.

ಇದರ ಫಲವಾಗಿ ಆಗುತ್ತಿರುವ ಅನಾಹುತಗಳು ಒಂದೆರಡಲ್ಲ. ಫೇಸ್ ಬುಕ್‌ನಲ್ಲಿ ಹೆಚ್ಚು ಲೈಕುಗಳು ಬರಲಿಲ್ಲ ಎಂದು ಬೇಸರ ಮಾಡಿಕೊಳ್ಳುವವರು, ಫೇಸ್‌ ಬುಕ್‌ ನಲ್ಲಿ ಅವರಿಗೆ, ನನಗಿಂತ ಹೆಚ್ಚು ಜನ ಫ್ರೆಂಡ್ಸ್ ಇದ್ದಾರೆ ಎಂದು ನೋವುಮಾಡಿಕೊಳ್ಳುವವರು, ಗೆಳೆಯನೋ ಗೆಳತಿಯೋ ಅನ್ ಫ್ರೆಂಡ್ ಮಾಡಿದರು ಎಂದು ಆತ್ಮಹತ್ಯೆಗೆ ಪ್ರಯತ್ನಿಸುವವರು ಹೆಚ್ಚಾಗುತ್ತಿದ್ದಾರೆ.

ಇದರ ಜೊತೆಗೆ, ಇವೇ ಸಾಮಾಜಿಕ ಜಾಲ ತಾಣಗಳ ಪ್ರಭಾವದಿಂದ ಏಕಾಗ್ರತೆಯ ಕೊರತೆ, ಅತಿಯಾದ ಕಾತುರ, ತಲ್ಲಣ, ಆತಂಕ ಮತ್ತು ಖಿನ್ನತೆಗೊಳಗಾಗಿ ನರಳುವವರ ಸಂಖ್ಯೆಯೂ ಹೆಚ್ಚಾಗಿದೆ.

ಇಂಥ ಒಂದು ಸನ್ನಿವೇಶದಲ್ಲಿ, ಈ ಸೋಷಿಯಲ್ ಮೀಡಿಯ ಅಥವ ಸಾಮಾಜಿಕ ಜಾಲತಾಣಗಳು ತಂದೊಡ್ಡುತ್ತಿರುವ ಅಪಾಯಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ನಿಮಗಾಗಿ ಒಂದು ಸ್ಪೆಷಲ್ ರಿಪೋರ್ಟ್‌

ಹಲವು ರೀತಿಯ ಜಾಲಗಳ ಬಗ್ಗೆ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಂಥ ಜನೋಪಯೋಗಿ ಜಾಲಗಳಲ್ಲಿ ದೂರಸಂಪರ್ಕ ಜಾಲ, ಹೆದ್ದಾರಿ ಜಾಲ, ರಕ್ತದಾನಿಗಳ ಜಾಲ ಇತ್ಯಾದಿಗಳು ಸೇರಿವೆ. ಹಾಗೆಯೇ ಅಪರಾಧಿಕ ಜಾಲಗಳಲ್ಲಿ ವೇಶ್ಯಾವಾಟಿಕೆ ಜಾಲ, ಕಳ್ಳಸಾಗಾಣಿಕೆ ಜಾಲ, ಖೋಟಾನೋಟು ಚಲಾವಣೆ ಜಾಲ ಇತ್ಯಾದಿ ಜಾಲಗಳು ಸೇರಿವೆ. ಇವೆಲ್ಲಾ ಜಾಲಗಳ ಜೊತೆಗೆ ಮತ್ತೂ ಕೆಲವು ಜಾಲಗಳಿವೆ, ಆ ಜಾಲಗಳಿಗೆ ತಾಣಗಳೂ ಇವೆ. ಹೌದು, ಅವೇ ಸಾಮಾಜಿಕ ಜಾಲತಾಣಗಳು.

ಹದಿಹರೆಯದವರು, ಯುವಜನಾಂಗ, ಮಧ್ಯವಯಸ್ಕರು ಮತ್ತು ಹಿರಿಯರೂ ಸೇರಿದಂತೆ, ಇವತ್ತಿನ ಜಗತ್ತಿನ ಬಹುತೇಕ ಎಲ್ಲಾ ವರ್ಗದ ಜನರನ್ನೂ, ಈ ಸಾಮಾಜಿಕ ಜಾಲತಾಣಗಳು ತಮ್ಮೊಳಗೆ ಸೇರಿಸಿಕೊಂಡಿವೆ. ಪ್ರತಿದಿನ ಮತ್ತು ಪ್ರತಿಕ್ಷಣ ತಮ್ಮ ಬಾಹುಗಳನ್ನು ವಿಸ್ತರಿಸುತ್ತಾ ಹೆಚ್ಚು ಹೆಚ್ಚು ಜನರನ್ನು ತಮ್ಮ ಜಾಲದೊಳಗೆ ಸೆಳೆಯುತ್ತಿವೆ. ಈ ಸೋಷಿಯಲ್ ಮೀಡಿಯ ಅಥವ ಸಾಮಾಜಿಕ ಜಾಲತಾಣ ಅನ್ನುವುದು ಒಂದು ವರ್ಚುಯಲ್ ವರ್ಲ್ಡ್, ಹಾಗಂದರೆ, ಒಂದು ಅವಾಸ್ತವ ಅಥವ ಮಿಥ್ಯಾ ಜಗತ್ತು. ಇಂಥ ಅವಾಸ್ತವ ಜಗತ್ತಿನಲ್ಲಿ ವಿಹರಿಸುತ್ತಾ, ನೈಜ ಬದುಕಿನಿಂದಲೇ ವಿಮುಖರಾಗುತ್ತಿರುವವರ ಸಂಖ್ಯೆ ವೇಗವಾಗಿ ಏರುತ್ತಿದೆ. ಕೆಲವರು ಎಷ್ಟರ ಮಟ್ಟಿಗೆ ಈ ಸಾಮಾಜಿಕ ಜಾಲ ತಾಣಗಳ ವ್ಯಸನಿಗಳಾಗಿದ್ದಾರೆ ಎಂದರೆ, ಊಟ ತಿಂಡಿ ಬಿಟ್ಟು, ರಾತ್ರಿಯೆಲ್ಲಾ ನಿದ್ದೆಗೆಟ್ಟು, ಫೇಸ್‌ ಬುಕ್ ನಲ್ಲೇ ಕಾಲ ಕಳೆಯುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿಹೀನರಾಗುವ ಇವರು ತಮ್ಮ ದೈನಂದಿನ ಚಟುವಟಿಕೆಗಳನ್ನೇ ಸರಿಯಾಗಿ ಮಾಡಲಾಗದ ಪರಿಸ್ಥಿತಿ ತಲುಪುತ್ತಾರೆ.

ಸದ್ಯಕ್ಕೆ ಎಲ್ಲಾ ಕಡೆ ಜನಪ್ರಿಯವಾಗಿ, ಬಹುತೇಕರ ಬದುಕಿನ ಒಂದು ಅಂಗವೇ ಆಗಿಬಿಟ್ಟಿರುವ ಹಲವು ಸಾಮಾಜಿಕ ಜಾಲತಾಣಗಳಿವೆ. ಅವುಗಳಲ್ಲಿ  ಫೇಸ್‌ ಬುಕ್, ಟ್ವಿಟ್ಟರ್, ವಾಟ್ಸ್‌ ಆಪ್, ಯೂ ಟ್ಯೂಬ್, ಇನ್ಸ್ಟಾಗ್ರಾಂಗಳು ತುಂಬಾ ಫೇಮಸ್ ಆಗಿವೆ. ಅವುಗಳ ಜೊತೆಗೆ ಹೈಕ್, ಟಂಬ್ಲರ್, ರೆಡ್ಡಿಟ್, ಲಿಂಕ್ಡ್ ಇನ್, ಸ್ನಾಪ್ ಚಾಟ್, ಫ್ಲಿಕರ್, ಪಿಂಟರೆಸ್ಟ್ ಇತ್ಯಾದಿಗಳೂ ಕೂಡ ಸಾಕಷ್ಟು ಹೆಸರುವಾಸಿಯಾಗಿವೆ.

ಇವತ್ತು ಬಹುತೇಕ ಎಲ್ಲರೂ ಸ್ಮಾರ್ಟ್ ಫೋನ್ ಬಳಕೆದಾರರೇ ಆಗಿದ್ದು, ಒಂದಕ್ಕಿಂತ ಹೆಚ್ಚು ಜಾಲತಾಣಗಳ ಸದಸ್ಯರಾಗಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ, ತಾನು ನಿದ್ದೆ ಮಾಡುವ ಸಮಯಕ್ಕಿಂತ ಹೆಚ್ಚು ಕಾಲವನ್ನು, ತನ್ನ ಫೋನ್ ಮತ್ತು ಕಂಪ್ಯೂಟರ್ ಜೊತೆಯಲ್ಲಿ ಕಳೆಯುತ್ತಾನೆ. ಈ ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ದುಷ್ಪರಿಣಾಮಗಳಿಗೆ ಮಿತಿಯೇ ಇಲ್ಲದಂತಾಗಿದ್ದು, ಬದುಕಿನ ಹಲವು ಆಯಾಮಗಳ ಮೇಲೆ ಪ್ರಭಾವ ಬೀರುತ್ತಿವೆ. 

ಬಹುತೇಕರು, ಪ್ರತಿದಿನ ಹತ್ತಾರು ಬಾರಿ ಫೇಸ್ ಬುಕ್ ಓಪನ್ ಮಾಡುತ್ತಾರೆ, ನೂರಾರು ಬಾರಿ ವಾಟ್ಸಾಪ್ ಸಂದೇಶ ನೋಡುತ್ತಾರೆ. ಇಡೀ ದಿನ, ಪದೇ ಪದೇ ತಾವೂ ಫೇಸ್ ಬುಕ್, ವಾಟ್ಸಾಪ್‌ಗಳಲ್ಲಿ ಏನನ್ನಾದರೂ ಹಾಕುವುದು ಬೇರೆಯವರೂ ಏನನ್ನಾದರೂ ಹಾಕಿದ್ದಾರಾ ಎಂದು ನೋಡುತ್ತಲೇ ಇರುವುದು ಮಾಡುತ್ತಾರೆ. ಬೇರೆಯವರ ಲೈಕ್ಸ್  ಮತ್ತು ಕಾಮೆಂಟುಗಳು ಅವರಿಗೆ ಖುಷಿ ತರುತ್ತವೆ, ಹೀಗಾಗಿ ಅವನ್ನು ನೋಡದೆ ಇರಲು ಆಗುವುದೇ ಇಲ್ಲ ಅನ್ನುವಂಥ ವ್ಯಸನಕ್ಕೆಶರಣಾಗಿರುತ್ತಾರೆ. ಈ ರೀತಿ ವರ್ತನೆ, ಭಾರತವೂ ಸೇರಿದಂತೆ ಜಗತ್ತಿನ ಕೋಟ್ಯಂತರ ಜನರಲ್ಲಿ ಹೆಚ್ಚಾಗಿದ್ದು, ಅದೇ ಒಂದು ಕಾಯಿಲೆಯಂತಾಗಿದೆ. ಮೊದಮೊದಲು ಈ ಫೇಸ್ ಬುಕ್ ಇತ್ಯಾದಿಗಳು, ಅವನ್ನು ಬಳಸದಿದ್ದರೆ ನಾವು ರಿಲ್ಯಾಕ್ಸ್ ಆಗುವುದಕ್ಕೇ ಆಗುವುದಿಲ್ಲವೇನೋ ಅನ್ನುವಂಥ ಭಾವನೆಯನ್ನು ಜನರಲ್ಲಿ ಹುಟ್ಟಿಸುತ್ತವೆ. ಆನಂತರದ ದಿನಗಳಲ್ಲಿ ಅವರ ನೆಮ್ಮದಿಯನ್ನೇ ಹಾಳುಮಾಡುತ್ತವೆ. ಮೊದಮೊದಲು ಏನೋ ಸುಖ ಅನ್ನಿಸುವ, ಸಂತೋಷ ತಂದುಕೊಡುವ ಜಾಲತಾಣಗಳು ಬರುಬರುತ್ತಾ ಜನರನ್ನು ದುಃಖಿಗಳನ್ನಾಗಿ ಮಾಡುತ್ತವೆ, ಅವರು ಚಡಪಡಿಸುವಂತೆ ಮಾಡುತ್ತವೆ.

ಸಾಮಾಜಿಕ ಜಾಲತಾಣಗಳು, ಜನರನ್ನು ಇತರರಿಗೆ ಹೋಲಿಕೆ ಮಾಡಿ ನೋಡಿಕೊಳ್ಳಲು ಪ್ರೇರೇಪಿಸುತ್ತವೆ.  ಫೇಸ್ ಬುಕ್ ನಲ್ಲಿ ಹಾಕುವ ಫೋಟೋಗಳು ಬೇರೆಯವರೆಲ್ಲರೂ ಮೋಜಿನಿಂದ, ಖುಷಿಯಿಂದ ಇರುವಂತೆ ತೋರಿಸುತ್ತವೆ.  ಇದು ಜನರಲ್ಲಿ fear of missing out, ಅಂದರೆ  ಬೇರೆಯವರೆಲ್ಲಾ ಅವರಿಗೆ ಬೇಕಾದದ್ದನ್ನು ತಿನ್ನುತ್ತಿದ್ದಾರೆ, ತಿರುಗುತ್ತಿದ್ದಾರೆ, ಅವರಿಗೆ ಬಾಯ್ ಫ್ರೆಂಡ್ ಇದ್ದಾರೆ, ಗರ್ಲ್ ಫ್ರೆಂಡ್ ಇದ್ದಾರೆ ಅವರು ಮಜಾಹೊಡೆಯುತ್ತಿದ್ದಾರೆ, ಎಂಜಾಯ್ ಮಾಡುತ್ತಿದ್ದಾರೆ, ಪಾರ್ಟಿಗಳಿಗೆ ಹೋಗುತ್ತಿದ್ದಾರೆ, ಸಿನಿಮಾಗೆ ಹೋಗುತ್ತಿದ್ದಾರೆ ಇನ್ನೂ ಏನೇನೋ ಮಾಡುತ್ತಿದ್ದಾರೆ, ಆದರೆ ನಾನು ಮಾತ್ರ ಇಲ್ಲಿ ಸುಮ್ಮನೆ ಇದ್ದೇನೆ, ನನ್ನಲ್ಲಿ ಬೈಕ್ ಇಲ್ಲ, ನನಗೆ ಗರ್ಲ್ ಫ್ರೆಂಡ್ ಇಲ್ಲ, ಟೂರ್ ಹೋಗಲು ಹಣವಿಲ್ಲ ಇತ್ಯಾದಿ ಭಾವನೆಗಳು ಬರುವಂತೆ ಮಾಡುತ್ತವೆ. ಹೀಗಾಗಿ, ಇವರಿಗೆ ತಮ್ಮ ಜೀವನದಲ್ಲಿ ಏನೇನಾಗುತ್ತಿದೆ ಅನ್ನುವುದಕ್ಕಿಂತಲೂ ಬೇರೆಯವರ ಜೀವನದಲ್ಲಿ ಏನೆಲ್ಲಾ ಆಗುತ್ತಿದೆ ಎಂಬ ಬಗ್ಗೆಯೇ ಹೆಚ್ಚು ಕುತೂಹಲ ಮತ್ತು ಅಸೂಯೆ ಉಂಟಾಗುತ್ತದೆ. ಇವರಿಗೆ, ಬೇರೆಯವರ ಜೀವನವೆಲ್ಲಾ ಹೂವಿನ ಹಾಸಿಗೆಯಂತೆ ಕಾಣಿಸುತ್ತದೆ, ತಮ್ಮ ಬದುಕು ಬರೀ ಸಂಕಷ್ಟದಿಂದ ಕೂಡಿದೆ ಅನ್ನಿಸಿಬಿಡುತ್ತದೆ. ಇಂತಹ ಋುಣಾತ್ಮಕವಾದ ಭಾವನೆಗಳನ್ನು ಹುಟ್ಟಿಸುವ ಸಾಮಾಜಿಕ ಜಾಲತಾಣಗಳು, ಜನರ ಆತ್ಮವಿಶ್ವಾಸವನ್ನೇ  ಕಡಿಮೆ ಮಾಡುತ್ತವೆ. ಇದರ ಜೊತೆಗೆ, ನೀವು ಬೇರೆಯವರಂತೆ ಬುದ್ಧಿವಂತರಲ್ಲ, ಯಶಸ್ವಿಗಳಲ್ಲ ಎಂಬ ಭಾವನೆ ಮೂಡಿಸಿ ಜನರನ್ನು ಖಿನ್ನರಾಗಿಸುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆಕರ್ಷಕ ಜಾಹೀರಾತುಗಳು, ಜನರ ಸ್ವನಿಯಂತ್ರಣವನ್ನೇ ಹಾಳುಗೆಡವುತ್ತವೆ. ಅವರಿಗೆ ಅಗತ್ಯವೇ ಇಲ್ಲದಿದ್ದರೂ ಹಲವಾರು ವಸ್ತುಗಳನ್ನು ಖರೀದಿಸುವಂತೆ ಪ್ರೇರೇಪಿಸಿ ಹಣ ಖರ್ಚು ಮಾಡಿಸುತ್ತವೆ. ಅದಕ್ಕಾಗಿ ಅವರನ್ನು ಸಾಲಗಾರನಾಗುವಂತೆ ಮತ್ತು  ಕಳ್ಳತನಕ್ಕೆ ಇಳಿಯುವಂತೆಯೂ ಮಾಡಬಹುದು. ಜಾಲತಾಣಗಳಲ್ಲಿ ಬರುವ ಆಹಾರದ ಚಿತ್ರಗಳು, ಜನರನ್ನು ಹೆಚ್ಚು ಹೆಚ್ಚು ತಿನ್ನುವಂತೆ ಪ್ರೇರೇಪಿಸಿ ಆರೋಗ್ಯ ಹಾಳುಮಾಡಬಹುದು.ಸಿಗರೇಟು ಸೇವನೆ, ಮದ್ಯಪಾನ, ಮಾದಕ ವಸ್ತು ಬಳಕೆ ಇಂಥವನ್ನು ಏನೋ ಒಂದು ರೀತಿಯ ಮೋಹಕ, ಆಕರ್ಷಕವೆಂಬಂತೆ ಬಿಂಬಿಸಿ ಅವುಗಳಿಗೆ ದಾಸರಾಗುವಂತೆ ಪ್ರೇರೇಪಿಸಬಹುದು.

ಫೇಸ್‌ ಬುಕ್ ಇತ್ಯಾದಿಗಳ ಮೂಲಕ ಸ್ನೇಹ ಬೆಳೆಸಿ, ಆನಂತರ Cyberbullying ಅಂದರೆ, ಬೆದರಿಕೆ ಹಾಕಿ, ಲೈಂಗಿಕ ಚಟುವಟಿಕೆಗೆ ಎಳೆಯುವ ಶಿಶುಕಾಮಿಗಳ ಜಾಲಕ್ಕೂ ಹದಿಹರೆಯದವರು ಸಿಲುಕಬಹುದು. ಜಾಲತಾಣಗಳು ಜನರು ಏಕಕಾಲದಲ್ಲಿ ಹಲವಾರು ಕೆಲಸಗಳಲ್ಲಿ ತೊಡಗುವಂತೆ ಮಾಡುತ್ತವೆ. ಸಾಮಾನ್ಯವಾಗಿ ನೀವು ಆಫೀಸಿನ ಕಂಪ್ಯೂಟರ್‌ ನಲ್ಲಿ ಕೆಲಸ ಮಾಡುವಾಗ ಎಷ್ಟು Tabಗಳನ್ನು ಓಪನ್ ಮಾಡಿಟ್ಟುಕೊಂಡಿರುತ್ತೀರಿ ಹೇಳಿ. ನಿಮ್ಮ ಕೆಲಸದ ಫೈಲ್ ಜೊತೆಗೆ, ಕನಿಷ್ಟ ಒಂದು ಕಡೆ ಫೇಸ್ ಬುಕ್ ಮತ್ತೊಂದು ಕಡೆ ವಾಟ್ಸ್ ಆಪ್  ಇದ್ದೇ ಇರುತ್ತದೆ ತಾನೆ? ಹೀಗೆ ಮಾಡುವುರಿಂದ ನಿಮ್ಮ ಮತ್ತು ನಿಮ್ಮ ಕಚೇರಿಯ ಉತ್ಪಾದಕತೆ ಕುಸಿಯುತ್ತದೆ. ನಿಮ್ಮ ಉದ್ಯೋಗದಾತರ ನಿರೀಕ್ಷೆಯಂತೆ ಕೆಲಸ ಮಾಡಲು ನೀವು ವಿಫಲರಾಗುತ್ತೀರಿ.

ಜಾಲತಾಣಗಳು ಜನರ ಖಾಸಗಿತನಕ್ಕೂ ಧಕ್ಕೆ ತರುತ್ತವೆ. ಏಕೆಂದರೆ ಅಲ್ಲಿ ಹಾಕುವ ನಿಮ್ಮ ಮಾಹಿತಿಗಳು ಸೇಫ್ ಅಲ್ಲ. ಫೇಸ್ ಬುಕ್ ಮತ್ತು ಟ್ವಿಟ್ಟರ್ ನಂಥ ಜಾಲ ತಾಣಗಳಲ್ಲಿ ಸಕ್ರಿಯರಾಗಿರುವ ಅನೇಕರಿಗೆ, ಅಲ್ಲಿನ ಪ್ರೈವೆಸಿ ಸೆಟ್ಟಿಂಗ್ಸ್ ಅಂದರೆ, ತಮ್ಮ ಮಾಹಿತಿ ಸುಭದ್ರಗೊಳಿಸುವ ಆಯ್ಕೆಗಳ ಬಗ್ಗೆಯೇ ಸರಿಯಾಗಿ ಗೊತ್ತಿಲ್ಲ. ಇದರಿಂದ, ಅವರ ಗುರುತಿನ ಕಳ್ಳನತನ, ಮಾಹಿತಿ ಕಳ್ಳತನ ಆಗಬಹುದು, ಅವರು ಸಮಸ್ಯೆಗೆ ಸಿಲುಕಬಹುದು. ಜಾಲತಾಣಗಳು ಮೇಲುನೋಟಕ್ಕೆ ಎಲ್ಲಾ ಜನರನ್ನೂ ಹತ್ತಿರ ತರುವಂತೆ ಕಂಡುಬರುತ್ತವೆ. ಆದರೆ, ವಾಸ್ತವದಲ್ಲಿ ಅವುಗಳು, ಒಂದು ರೀತಿಯ ಸಾಮಾಜಿಕ ಒಂಟಿತನ ಸೃಷ್ಟಿಸುತ್ತವೆ. ದಿನದಿಂದ ದಿನಕ್ಕೆ, ಸಾಮಾಜಿಕ ತಾಣಗಳಲ್ಲೇ ಹೆಚ್ಚು ಸಮಯ ಕಳೆಯುವಂಥವರು, ಮನೆಯವರ ಜೊತೆ ಬೆರೆಯುವುದೇ ಕಡಿಮೆ ಆಗುತ್ತದೆ. ಇದರಿಂದ, ಮಾನಸಿಕ, ಭಾವನಾತ್ಮಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ.  ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾಗಿ, ಒತ್ತಡ ಹೆಚ್ಚಾಗುತ್ತದೆ, ಜನರಲ್ಲಿ ಸಮಾಧಾನದ ಮನೋಭಾವವವೇ ಇಲ್ಲದಂತಾಗಿ ಸಣ್ಣಸಣ್ಣ ವಿಚಾರಕ್ಕೂ ಸಿಟ್ಟಿಗೇಳುತ್ತಾರೆ.

ಸಾಮಾಜಿಕ ತಾಣಗಳ ಮೂಲಕ ತುಂಬಾ ಖಾಸಗಿಯಾದ ಭಾವನೆ ಮತ್ತು ಸಂಬಂಧಗಳನ್ನು ಬಹಿರಂಗಗೊಳಿಸುವವರು, ನಿಜಜೀವನದಲ್ಲಿ ಭಾವನೆಗಳೇ ಇಲ್ಲದಂತೆ ವರ್ತಿಸುವುದೂ ಕಂಡುಬರುತ್ತಿದೆ. ಈ ರೀತಿಯ ಸುಳ್ಳು ಜಗತ್ತಿನ ಪ್ರಜೆಗಳೇ ಆಗಿಬಿಟ್ಟಿರುವಂಥವರು, ಸರಿಯಾಗಿ ಮಾತನಾಡುವುದನ್ನೇ ಮರೆತುಬಿಟ್ಟಿದ್ದಾರೆ. ಅವರ ದನಿಯೂ ಬದಲಾಗಿದೆ, ಅವರ ಮುಖದ ಭಾವನೆಗಳೇ ಅಸಹಜವಾಗಿ ಕಾಣುತ್ತವೆ, ಅಂಥವರ ಬಾಡಿ ಲಾಂಗ್ವೇಜ್ ಅಂದರೆ ದೇಹಭಾಷೆಯೂ ಬದಲಾಗಿಬಿಟ್ಟಿದೆ. ಇವರು, ಬೇರೆಯವರ ನಗು, ಸ್ಪರ್ಶ ಮತ್ತು ಎದುರಿಗಿರುವವರ ಮುಖದ ಮೇಲೆ ಮೂಡುವ ಭಾವನೆಗಳನ್ನೇ ಅರ್ಥಮಾಡಿಕೊಳ್ಳದಂಥ ಪರಿಸ್ಥಿತಿ ತಲುಪಿದ್ದಾರೆ.

ಸಾಮಾಜಿಕ ಜಾಲ ತಾಣಗಳು ಒಂದು ರೀತಿಯಲ್ಲಿ ಶಿಕ್ಷಣವನ್ನೂ ಹಾಳು ಮಾಡುತ್ತಿವೆ. ಫೇಸ್ ಬುಕ್ ಇತ್ಯಾದಿಗಳಲ್ಲಿನ ಭಾಷೆಯನ್ನು ಗಮನಿಸಿದ್ದೀರಾ, ಅಲ್ಲಿ ಒಬ್ಬರೂ ಪೂರ್ಣಪದ ಬಳಕೆ ಮಾಡುವುದಿಲ್ಲ, ಕೆಟ್ಟ ಇಂಗ್ಲಿಷ್  ಕೆಟ್ಟ ಸ್ಪೆಲ್ಲಿಂಗ್, ತಮ್ಮದೇ ಆದ ರೀತಿ ವಿಚಿತ್ರ ಮತ್ತು ತಲೆಸುತ್ತುಬರಿಸುವಂಥ ಶಾರ್ಟ್ ಫಾರಂಗಳು, ಚಿತ್ರಗಳ ಬಳಕೆ ಮಾಡುತ್ತಾರೆ.
ಒಮ್ಮೊಮ್ಮೆ, ಸಮಾಜದಲ್ಲಿನ ಅನ್ಯಾಯ ಅಕ್ರಮ ಬಯಲಿಗೆಳೆಯಲು ಸಹಕಾರಿಯಾಗಿ ಕೆಲಸಮಾಡುವ ಸಾಮಾಜಿಕ ಜಾಲ ತಾಣಗಳಲ್ಲಿ, ಇತ್ತೀಚೆಗೆ ಸುಳ್ಳು ಸುದ್ದಿ ಹಬ್ಬಿಸುವುದು, ಮತ್ತೊಬ್ಬರ ಗೌರವ ಹಾಳು ಮಾಡುವ ಬರಹ ಮತ್ತು ಚಿತ್ರ ಹಾಕುವುದು ಹೆಚ್ಚಾಗುತ್ತಿದೆ.  ದೇಶವಿರೋಧಿ ಮತ್ತು ಕೋಮುಭಾವನೆ ಕೆರಳಿಸುವ ಪ್ರಚೋದನಕಾರಿ  ಬರಹಗಳನ್ನು ಹಾಕುವುದು, ಹೆಸರಾಂತ ವ್ಯಕ್ತಿಗಳ ಭಾಷಣಗಳನ್ನು ತಿರುಚಿ ಹಾಕುವುದು ನಡೆಯುತ್ತಿದೆ. ಇದರ ಜೊತೆಗೆ, ತಾವೇ ಸೃಷ್ಟಿ ಮಾಡಿದ ನಕಲಿ ದೃಶ್ಯಾವಳಿಗಳನ್ನು ಹಾಕಿ, ಮತ್ತೊಬ್ಬರ ಮಾನಕಳೆಯಲು ಪ್ರಯತ್ನಿಸುವುದು, ಸಮಾಜದ ನೆಮ್ಮದಿ ಹಾಳುಮಾಡುವುದು, ಕಾನೂನು ಮತ್ತು  ಸುವ್ಯವಸ್ಥೆ ಹಾಳು ಮಾಡುವುದೂ ಕೂಡ ಆಗುತ್ತಿದೆ.

ಗಣ್ಯರ ಹೆಸರಿನಲ್ಲಿ, ಹೆಸರಾಂತ ನಟ ನಟಿಯರು ಮತ್ತು ರಾಜಕಾರಣಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಆರಂಭಿಸಿ, ಅವುಗಳಲ್ಲಿ ಮನಬಂದಂತೆ ವಿಚಾರಗಳನ್ನು ಹಾಕಿ, ಅವರಿಗೆ ಮುಜುಗರ ಉಂಟುಮಾಡುವುದು ಕೂಡ ನಡೆಯುತ್ತಿದೆ. ಒಟ್ಟಿನಲ್ಲಿ ನೈಜ ಬದುಕಿನಲ್ಲಿ ಮಾಡಲು ಆಗದ್ದನ್ನೆಲ್ಲಾ ಅವಾಸ್ತವಿಕ ಬದುಕಿನಲ್ಲಿ ಮಾಡುವುದಕ್ಕೆ ಹೊರಡುವವರು, ಸಹಜ ಬದುಕಿಗೆ ಬೇಕಾದ ಕೌಶಲ್ಯಗಳನ್ನೇ ಬೆಳೆಸಿಕೊಳ್ಳದೆ, ಅದಕ್ಕೆ ಸಮಾನಾಂತರವಾಗಿ, ಸುಳ್ಳುಬದುಕಿನಲ್ಲಿ ವಿಹರಿಸುವಂಥವರು ಹೆಚ್ಚಾಗುತ್ತಿದ್ದಾರೆ. ಇಲ್ಲಿಯವರೆಗೆ ಫೇಸ್ ಬುಕ್ ಖಾತೆಯಲ್ಲಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಕಂಡುಬರುತ್ತಿದ್ದರು, ಇತ್ತೀಚೆಗೆ, ಫೇಸ್ ಬುಕ್ ನಲ್ಲೇ ಲೈವ್ ಆಗಿ ಎಲ್ಲರಿಗೂ ನೇರ ಪ್ರಸಾರ ಮಾಡುತ್ತಾ ಆತ್ಮಹತ್ಯೆಗೆ ಶರಣಾಗುವವರೂ ಹೆಚ್ಚಾಗುತ್ತಿದ್ದಾರೆ.

ಇದೆಲ್ಲಾ ಎಂಥ ವಿಕೃತ ಮಟ್ಟ ತಲುಪಿದೆ ಎಂದರೆ, ಅತ್ಯಾಚಾರದ ದೃಶ್ಯಗಳನ್ನೇ ನೇರವಾಗಿ ಫೇಸ್ ಬುಕ್ ಮೂಲಕ ಪ್ರಸಾರ ಮಾಡುವಂಥ ದುಷ್ಕೃತ್ಯಗಳೂ ನಡೆಯುತ್ತಿವೆ. ಈ ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟಿದೆಯೆಂದರೆ, ವ್ಯಕ್ತಿಯೊಬ್ಬ ಸ್ವತಂತ್ರವಾಗಿ ಚಿಂತನೆ ಮಾಡುವ ಸಾಮರ್ಥ್ಯವನ್ನೇ ಇವು ಕಿತ್ತುಕೊಂಡು ಬಿಟ್ಟಿವೆ. ಜನರಲ್ಲಿನ ಸೃಜನಶೀಲತೆಯನ್ನೇ ಹಾಳುಗೆಡವುತ್ತಿವೆ. ಯಾವುದೇ ವಿಚಾರಕ್ಕೂ ತಮ್ಮ ಮೆದುಳನ್ನು ಬಳಸಿ ಯೋಚನೆ ಮಾಡುವ ಜನರೇ ಕಡಿಮೆಯಾಗುತ್ತಿದ್ದಾರೆ. ಎಲ್ಲದಕ್ಕೂ ಫೇಸ್ ಬುಕ್, ವಾಟ್ಸ್ ಆಪ್‌ಗಳ ಮೂಲಕ ಐಡಿಯಾ ಕೇಳುವುದು, ಸಲಹೆ ಕೇಳುವುದು ನಡೆಯುತ್ತಿದೆ.

ಮೂಲತಃ ಸಂಘಜೀವಿಯಾಗಿರುವ ಮನುಷ್ಯ, ತನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾನೆ. ಹಾಗಾಗಿ, ಈ ಸಾಮಾಜಿಕ ಸಂವಹನ ತಾಣಗಳನ್ನು ಬಳಸಿಕೊಳ್ಳುವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಅವುಗಳ ಅತಿ ಬಳಕೆಯಿಂದಲೇ, ಮತಿಗೆಟ್ಟು ಮಿತಿಮೀರಿ ವರ್ತಿಸುವವರ ಸಂಖ್ಯೆ ಹೆಚ್ಚಾಗಿರುವುದೇ ವಿಪರ್ಯಾಸ. ಇನ್ನಾದರೂ ನಮ್ಮ ಸಮಾಜ ಎಚ್ಚೆತ್ತುಕೊಳ್ಳಲಿ, ಈ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯಲಿ. ಜಾಲತಾಣಗಳ ಜಾಲದೊಳಗೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿರುವವರ ಸಮಸ್ಯೆಗಳಿಗೆ, ಶೀಘ್ರವೇ ಒಂದು ಪರಿಹಾರ ಸಿಗಲಿ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಜಾಲತಾಣಗಳ ದುರುಪಯೋಗ ಹೇಗೆ ತಡೆಗಟ್ಟಬೇಕು ಇನ್ನಷ್ಟು ಮಾಹಿತಿಗಳು ಇದ್ದರೆ ಚೆನ್ನಾಗಿತ್ತು
  • shantappa
  • teacher