ಅತೀ ಸ್ವಚ್ಚತೆಯ ಅಪಾಯ !

Kannada News

14-07-2017

ತಲೆಗೂದಲು ಉದುರುವಿಕೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚಾಗುತ್ತಿದೆ. ಗಂಡಸರು ಅಥವ ಹೆಂಗಸರು ಅನ್ನುವ ಬೇಧವಿಲ್ಲದೆ ಎಲ್ಲಾ ವಯಸ್ಸಿನವರೂ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಕನ್ನಡಿ ಮುಂದೆ ನಿಂತಾಗೆಲ್ಲಾ ಅದರ ಬಗ್ಗೆಯೇ ಚಿಂತಿಸುತ್ತಾ ತಲೆಕೆಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿವೆ. ಪಾಪ, ಕೆಲವರಿಗೆ ಅದು ವಂಶಪಾರಂಪರ್ಯವಾಗಿ ಬಂದಿದ್ದು, ತಂದೆ ಬೊಕ್ಕ ತಲೆಯವರಾಗಿದ್ದರೆ ಮಗನಿಗೂ ಅದೇ ರೀತಿ ಬಾಂಡ್ಲಿ ತಲೆ ಆಗುವ ಸಾಧ್ಯತೆಗಳೇ ಹೆಚ್ಚು. ಇದಲ್ಲದೆ, ಒತ್ತಡದ ಬದುಕು, ಪೌಷ್ಟಿಕಾಂಶಗಳಿಲ್ಲದ ಆಹಾರ ಕ್ರಮ, ಬರೀ ಜಂಕ್ ಫುಡ್ ತಿನ್ನುವುದು, ಮಿತಿ ಮೀರಿದ ಕಾಫಿ, ಟೀ, ಆಲ್ಕೊಹಾಲ್‌ ಸೇವನೆಯೂ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇಷ್ಟು ಮಾತ್ರವಲ್ಲದೆ, ಹಲವು ರೀತಿಯ ಕಾಯಿಲೆಗಳಿಗೆ  ಸಂಬಂಧಿಸಿದಂತೆ ಸೇವಿಸುವ ಔಷಧಿಗಳಿಂದಲೂ ಕೂದಲು ಉದುರಬಹುದು.

ಆದರೆ, ನಿಮಗೆ ಗೊತ್ತಿಲ್ಲದಂತೆಯೇ ನೀವೇ ಅನುಸರಿಸುತ್ತಿರುವ ಒಂದು ಅಭ್ಯಾಸವೂ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿರಬಹುದು.

ಸಾಮಾನ್ಯವಾಗಿ ಎಲ್ಲರೂ ಪ್ರತಿದಿನ ಸ್ನಾನ ಮಾಡಬೇಕು ಅನ್ನುವುದು ಸ್ವಚ್ಛತೆಯ ನಿಯಮ. ಅದರಲ್ಲೂ ಕೆಲವರಿಗಂತೂ, ಶಾಂಪೂ ಜಾಹಿರಾತಿನಲ್ಲಿ ಬರುವ ಸಿನಿಮಾ ತಾರೆಯರ ಹಾಗೆ, ಯಾವಾಗಲೂ ಫ್ರೆಶ್ ಆಗಿ ಕಾಣಬೇಕೆಂಬ ಆಸೆ. ಹೀಗಾಗಿ, ಇವರು ಪ್ರತಿದಿನವೂ ತಲೆಗೆ ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಹೀಗೆ ಪ್ರತಿದಿನವೂ ತಲೆಗೆ ಸ್ನಾನ ಮಾಡುವುದೂ ಕೂಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿರಬಹುದು. ತಲೆ ಮೇಲೆ ಪ್ರತಿ ದಿನ ಸುಡುಸುಡುವ ಬಿಸಿನೀರು ಹಾಕಿಕೊಂಡು ಸ್ನಾನ ಮಾಡುವುದರಿಂದ ನೆತ್ತಿಯ ಅಥವ ತಲೆಯ ಚರ್ಮದ ರಂದ್ರಗಳು ತೆರೆಯುತ್ತವೆ. ಅದೇ ವೇಳೆ, ಬಿಸಿ ನೀರು ಮತ್ತು ಶಾಂಪೂ ಪ್ರಯೋಗದಿಂದ ನೆತ್ತಿಯಲ್ಲಿ ಒಂದಿಷ್ಟೂ ಎಣ್ಣೆಯ ಅಂಶವೇ ಉಳಿಯುವುದಿಲ್ಲ. ತಲೆಯಲ್ಲಿ ಸಹಜವಾಗಿ ಉತ್ಪಾದನೆಯಾಗುವ ಈ ಎಣ್ಣೆಯ ಅಂಶ ಸಂಪೂರ್ಣವಾಗಿ ಹೋಗಿಬಿಡುವುದರಿಂದ, hair follicles ಅಂದರೆ ತಲೆಗೂದಲು ಬೆಳೆಯುವ ಕುಳಿಗಳು ಒರಟಾಗಿಬಿಡುತ್ತವೆ. ಇದು ತಲೆಗೂದಲನ್ನು ಶಕ್ತಿಹೀನವಾಗಿ ಮಾಡಿ, ಉದುರಿಹೋಗುವಂತೆ ಮಾಡುತ್ತದೆ. ಹೀಗಾಗಿ, ವಿನಾಕಾರಣ ನಿಮ್ಮ ತಲೆಗೂದಲು ಉದುರುತ್ತಿದೆಯೆಂದಾದರೆ ಅದಕ್ಕೆ ನಿಮ್ಮ ಈ ದಿನಂಪ್ರತಿ ತಲೆಸ್ನಾನವೂ ಕಾರಣವಿರಬಹುದು. ಹೀಗಾಗಿ, ತಜ್ಞರ ಪ್ರಕಾರ ಹೆಚ್ಚೆಂದರೆ, ಮೂರುದಿನಗಳಿಗೊಮ್ಮೆ ತಲೆಗೆ ಸ್ನಾನ ಮಾಡಬಹುದು. ಅದುಬಿಟ್ಟು ಫ್ರೆಶ್ ಆಗಿಕಾಣಬೇಕು ಎಂದಾಗಲಿ ಅಥವ ತಲೆ ಮೇಲೆ ನೀರು ಹಾಕಿಕೊಳ್ಳದಿದ್ದರೆ ನಮಗೆ ಸಮಾಧಾನವೇ ಆಗುವುದಿಲ್ಲ ಎಂದಾಗಲಿ, ಪ್ರತಿದಿನ ತಲೆಗೆ ಸ್ನಾನ ಮಾಡುತ್ತಿದ್ದರೆ ಕೂದಲು ಉದುರುವುದು ಗ್ಯಾರಂಟಿ. ಅದರಲ್ಲೂ ಎಂಥೆಂಥದ್ದೋ ಶಾಂಪೂಗಳು ಮತ್ತು ಸುಡುವ ನೀರು ನೆತ್ತಿಯ ಮೇಲೆ ಬಿದ್ದರೆ ಕೂದಲು ತಾನೆ ಎಲ್ಲಿ ಉಳಿಯುತ್ತದೆ. ಹೀಗಾಗಿ ಎಚ್ಚರ ವಹಿಸಿ, ಪ್ರತಿದಿನ ತಲೆ ಸ್ನಾನ ಮಾಡುವುದನ್ನು ಬಿಟ್ಟುಬಿಡಿ, ಬಿಸಿ ನೀರಿನ ಬದಲು ಬೆಚ್ಚನೆಯ ನೀರನ್ನು ಬಳಸಿ, ಶಾಂಪೂ ಬದಲು ಸಿಗೇಕಾಯಿ ಪುಡಿ ಬಳಸಿ, ಅದು ಕಣ್ಣಿಗೆ ಬಿದ್ದರೆ ಕಷ್ಟ ಎಂಬ ಭಯವೇ, ಕಡ್ಲೆ ಹಿಟ್ಟು ಬಳಸಿ,ಇದರ ಜೊತೆಗೆ ಇಡೀ ದಿನ ಚೆನ್ನಾಗಿ ನೀರು ಕುಡಿಯಿರಿ, ದಿನಕ್ಕೆ ಅರ್ಧಗಂಟೆಯಾದರೂ ವ್ಯಾಯಾಮ ಮಾಡಿ, ನಿಮ್ಮ ತಲೆಗೂದಲು ಉದುರುವಿಕೆ ಕಮ್ಮಿಯಾಗಬಹುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ