ರಾಮನಾಥ್ ಕೋವಿಂದ್ v/s ಮೀರಾ ಕುಮಾರ್

Kannada News

14-07-2017

ಇದೇ ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 20ರಂದು ಮತ ಎಣಿಕೆ ನಡೆಯಲಿದ್ದು, ಭಾರತದ ನೂತನ ರಾಷ್ಟ್ರಪತಿ ಯಾರು ಅನ್ನುವುದು ಅಂದು ಅಧಿಕೃತವಾಗಿ ನಿರ್ಧಾರವಾಗಲಿದೆ. ಆದರೆ, ಇಲ್ಲಿಯವರೆಗಿನ ಬೆಳವಣಿಗೆಗಳನ್ನು ನೋಡಿದಾಗ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಸೋಲಿಸಿ ನೂತನ ರಾಷ್ಟ್ರಪತಿ ಆಗುವುದರಲ್ಲಿ ಯಾವುದೇ ಅನುಮಾನ ಕಂಡುಬರುತ್ತಿಲ್ಲ. ಪ್ರಣಬ್ ಮುಖರ್ಜಿ ಅವರ ಅವಧಿ ಇದೇ ಜುಲೈ 24ರಂದು ಮುಗಿಯಲಿದ್ದು ಆನಂತರ, ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈಗಿನ  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಮುಗಿಯುವ 6 ತಿಂಗಳಿಗೂ ಮೊದಲೇ ಮುಂದಿನ ರಾಷ್ಟ್ರಪತಿ ಯಾರಾಗಬೇಕು ಅನ್ನುವ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಬಿಜೆಪಿ ಕಡೆಯಿಂದ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್ ಅವರ ಹೆಸರು ಕೇಳಿಬಂದಿದ್ದವು. ಜಾರ್ಖಂಡ್ ರಾಜ್ಯಪಾಲರಾಗಿರುವ ದ್ರೌಪದಿ ಮುರ್ಮು, ಮಹಾರಾಷ್ಟ್ರದ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರ ಹೆಸರುಗಳೂ ಕೇಳಿ ಬಂದಿದ್ದವು. ಕಾಂಗ್ರೆಸ್ ಮತ್ತು ಸಹವರ್ತಿ ಪಕ್ಷಗಳ ಕಡೆಯಿಂದ ಗೋಪಾಲ ಕೃಷ್ಣ ಗಾಂಧಿ, ಮೀರಾ ಕುಮಾರ್, ಶರದ್ ಯಾದವ್ ಹೆಸರುಗಳು ಕೇಳಿ ಬಂದಿದ್ದವು. ಇವಲ್ಲದೆ, ರಜನಿಕಾಂತ್, ಅಮಿತಾಭ್ ಬಚ್ಚನ್, ಮೆಟ್ರೊ ಮ್ಯಾನ್ ಎಂದು ಹೆಸರಾಗಿರುವ ಇ.ಶ್ರೀಧರನ್ ಅವರ ಹೆಸರೂ ಕೇಳಿ ಬಂದಿತ್ತು. ಶಿವಸೇನೆಯವರು ಬಿಜೆಪಿಯವರನ್ನು ಲೇವಡಿ ಮಾಡುವ ಸಲುವಾಗಿಯೋ ಏನೋ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್  ಹೆಸರು ಪ್ರಸ್ತಾಪಿಸಿದ್ದರು.

ಆದರೆ, ಯಾವುದೇ ವಿಚಾರವೇ  ಆಗಿರಲಿ, ಒಂದು ರಹಸ್ಯದಂತೆ ಕಾಪಾಡಿಕೊಂಡು ಬಂದು, ಕೊನೇ ಘಳಿಗೆಯಲ್ಲಿ ಎಲ್ಲರಿಗೂ ಆಶ್ಚರ್ಯ ತರುವಂಥ ಘೋಷಣೆ ಮಾಡುವುದನ್ನು ರೂಢಿಸಿಕೊಂಡಿರುವ ಮೋದಿ ಸರ್ಕಾರ,  ಬಿಹಾರದ ರಾಜ್ಯಪಾಲರಾಗಿದ್ದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆ ಅಭ್ಯರ್ಥಿಯಾಗಿ ಘೋಷಿಸಿದೆ. ಸರ್ವಸಮ್ಮತಿ ಅಭ್ಯರ್ಥಿ ಆಯ್ಕೆ ಸಾಧ್ಯ ಇಲ್ಲ ಎಂದು ಗೊತ್ತಾಗಿದ್ದರೂ ಕೂಡ, ಅಲ್ಲಿಯವರೆಗೂ ಸುಮ್ಮನಿದ್ದ ಕಾಂಗ್ರೆಸ್ ಮತ್ತು ಗೆಳೆಯರು, ಮೀರಾ ಕುಮಾರ್ ಅವರನ್ನು ತಮ್ಮ ಅಭ್ಯರ್ಥಿಯಾಗಿ ಘೋಷಣೆ ಮಾಡಿದರು. ಇದೀಗ ರಾಮನಾಥ್ ಕೋವಿಂದ್ ಮತ್ತು ಮೀರಾ ಕುಮಾರ್ ದೇಶದ ಅತ್ಯುನ್ನತ ಹುದ್ದೆಯಾಗಿರುವ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.   

ಈ ಸಂದರ್ಭದಲ್ಲಿ, ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ರಾಮ್ ನಾಥ್ ಕೋವಿಂದ್ ಮತ್ತು ಮೀರಾ ಕುಮಾರ್ ಅವರ ಹಿನ್ನೆಲೆ, ರಾಜಕೀಯ ಅನುಭವ, ಸಾಮರ್ಥ್ಯ ಮತ್ತು ಸಾಧನೆಗಳ ಬಗ್ಗೆ ಸ್ಪೆಷಲ್ ರಿಪೋರ್ಟರ್‌ನಿಂದ ಒಂದು ವಿಶೇಷ ವರದಿ.

ಬಿಜೆಪಿ ಮತ್ತು ಮಿತ್ರ ಪಕ್ಷಗಳ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಅವರು, ದಲಿತ ಸಮುದಾಯದ ಕೋಲಿ ಜನಾಂಗಕ್ಕೆ ಸೇರಿದವರು. ಕೋವಿಂದ್ ಹುಟ್ಟಿದ್ದು 1945ನೇ ಇಸವಿ ಅಕ್ಟೋಬರ್ ಒಂದರಂದು. ಕೋವಿಂದ್ ಅವರದ್ದು, ಉತ್ತರ ಪ್ರದೇಶದ ಕಾನ್‌ಪುರ್ ದೇಹಾತ್ ಜಿಲ್ಲೆಯ ಪರೌಂಖ್ ಗ್ರಾಮ. ತಂದೆ ಮೈಕುಲಾಲ್, ತಾಯಿ ಕಲಾವತಿ. ರೈತರಾಗಿದ್ದ ಮೈಕುಲಾಲ್ ಸಣ್ಣದೊಂದು ಕಿರಾಣಿ ಅಂಗಡಿಯನ್ನೂ ಇಟ್ಟುಕೊಂಡಿದ್ದರಂತೆ. ಅದರ ಜೊತೆಗೆ, ಅವರೊಬ್ಬ ನಾಟಿ ವೈದ್ಯರಾಗಿದ್ದು, ಹಳ್ಳಿಗರಿಗೆ ಉಚಿತವಾಗಿ ಔಷಧಿಗಳನ್ನು ಕೊಡುತ್ತಿದ್ದರಂತೆ. ಮೀರಾ ಕುಮಾರ್ ಅವರು ಜನಿಸಿದ್ದ 1945ನೇ ಇಸವಿ  ಮಾರ್ಚ್31 ರಂದು. ಬಿಹಾರದ ಅರ್ರಾ ಇವರ ಹುಟ್ಟೂರು. ಮೀರಾ ತಾಯಿ ಇಂದ್ರಾಣಿ ದೇವಿ, ತಂದೆ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಾಂಗ್ರೆಸ್ ಪಕ್ಷದ ದಲಿತ ಮುಖಂಡ ಬಾಬು ಜಗಜೀವನ್ ರಾಮ್. ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಹೋರಾಟ ನಡೆಸಿದ ಜಗಜೀವನ್ ರಾಮ್, ಕೇಂದ್ರ ಸಚಿವರಾಗಿ ಮತ್ತು ಭಾರತದ ಉಪಪ್ರಧಾನ ಮಂತ್ರಿಯಾಗಿಯೂ ಕೆಲಸ ಮಾಡಿದ್ದವರು.

ಮೀರಾ ಮತ್ತು ಕೋವಿಂದ್ ಅವರ ವಯಸ್ಸಿನಲ್ಲಿ ಅಷ್ಟೇನೂ ಅಂತರವಿಲ್ಲ, ಮೀರಾ ಅವರು ವಯಸ್ಸಿನಲ್ಲಿ ಕೋವಿಂದ್ ಅವರಿಗಿಂತ ಆರು ತಿಂಗಳು ದೊಡ್ಡವರಷ್ಟೇ. ಇದರ ಜೊತೆಗೆ, ರಾಮನಾಥ್ ಕೋವಿಂದ್ ಮತ್ತು ಮೀರಾ ಕುಮಾರ್ ಇಬ್ಬರೂ ದಲಿತ ವರ್ಗಕ್ಕೆ ಸೇರಿದವರೇ ಆಗಿದ್ದಾರೆ.  ಆದರೆ, ಇಬ್ಬರ ಹಿನ್ನೆಯಲ್ಲಿ ಅಜಗಜಾಂತರವಿದೆ. ಕೋವಿಂದ್,  ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರು, ಒಬ್ಬ ರೈತನ ಮಗ, ಸರಳ ಜೀವಿ. ಮೀರಾ ಅವರು ದಲಿತರಾಗಿದ್ದರೂ ಕೂಡ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದವರು.  ಮೀರಾ,  ಡೆಹ್ರಾಡೂನ್ನ ವೆಲ್‌ಹಾಮ್ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು, ನಂತರ ಜೈಪುರದ ಮಹಾರಾಣಿ ಗಾಯತ್ರಿದೇವಿ ಗರ್ಲ್ಸ್‌ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಣ ಮುಂದುವರಿಸಿದರು. ಬಳಿಕ, 1966ರಲ್ಲಿ ದೆಹಲಿಯ ಇಂದ್ರಪ್ರಸ್ಥ ಕಾಲೇಜಿನಿಂದ ಬಿ.ಎ ಮತ್ತು ಮಿರಾಂಡ ಹೌಸ್‌ ಕಾಲೇಜಿನಿಂದ ಎಂ.ಎ ಪದವಿ  ಗಳಿಸಿದರು. ಆನಂತರ, ಬೋಧ್‌ ಗಯಾದಲ್ಲಿರುವ ಮಗಧ್ ವಿವಿಯಿಂದ 1975ರಲ್ಲಿ ಕಾನೂನು ಪದವಿ ಪಡೆದರು.

ಇದೇ ವೇಳೆ, ರಾಮನಾಥ್ ಕೋವಿಂದ್ ಅವರು ಬಿ.ಕಾಂ, ಪದವಿ ಪಡೆದು,  ಕಾನ್ಪುರದ ಡಿಎವಿ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮುಗಿಸಿದರು. ಹೀಗಾಗಿ, ಮೀರಾ ಮತ್ತು ಕೋವಿಂದ್ ಅವರ ಶೈಕ್ಷಣಿಕ ಹಿನ್ನೆಲೆ ಒಂದೇ ಆಗಿದ್ದು, ಇಬ್ಬರೂ ವೃತ್ತಿಯಿಂದ ವಕೀಲರೇ ಆಗಿದ್ದಾರೆ. ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಒಳ್ಳೆಯ ಕ್ರೀಡಾಪಟುವಾಗಿದ್ದ ಮೀರಾ, ಕುದುರೆ ಸವಾರಿ ಮತ್ತು ರೈಫಲ್ ಶೂಟಿಂಗ್‌ ನಲ್ಲೂ ತರಬೇತಿ ಪಡೆದು, ಪದಕಗಳನ್ನೂ ಗೆದ್ದಿದ್ದರು. ಕಾನೂನು ಪದವಿ ಬಳಿಕ ಭಾರತೀಯ ವಿದೇಶಾಂಗ ಸೇವೆ ಸೇರಿದ ಮೀರಾ ಸ್ಪೇನ್, ಬ್ರಿಟನ್ ಮತ್ತು ಮೊರೀಶಿಯಸ್ ನ ರಾಯಭಾರ ಕಚೇರಿಗಳಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದರು.

ಇತ್ತ ಕೋವಿಂದ್ ಅವರು, ಎಲ್‌ಎಲ್‌ಬಿ ನಂತರ ದೆಹಲಿಗೆ ಬಂದರು. ಅಲ್ಲೇ ಉಳಿದುಕೊಂಡು ಐಎಎಸ್ ಪರೀಕ್ಷೆಗೆ ತಯಾರಿ ನಡೆಸಿದರು. ಆದರೆ, ಮೊದಲ ಎರಡು ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿಲ್ಲ, ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದರೂ, ಐಎಎಸ್ ಬದಲಿಗೆ  ಸಂಬಂಧಿತ ಸೇವೆಗೆ ಅವಕಾಶ ಸಿಕ್ಕಿತ್ತು. ಆ ಸೇವೆ ಸೇರಿಕೊಳ್ಳಲು ಮನಸ್ಸಾಗದ ಕೋವಿಂದ್, ವಕೀಲಿ ವೃತ್ತಿ ಆರಂಭಿಸಿದರು.

ಅದೇ ಸಂದರ್ಭದಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಆಪ್ತ ಸಹಾಯಕರಾಗಿಯೂ ಕೆಲಸ ಮಾಡಿದ್ದರು. 1977 ರಿಂದ 1979ರ ವರೆಗೆ ದೆಹಲಿ ಹೈಕೋರ್ಟಿನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿದ್ದ ಕೋವಿಂದ್, 1982ರಿಂದ 1984ರ ಅವಧಿಯಲ್ಲಿ ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕೆಲಸ ಮಾಡಿದ್ದರು. 1986ರಲ್ಲಿ ದಲಿತರು ಮತ್ತು ದಮನಿತ ವರ್ಗದವರಿಗೆ ಕಾನೂನು ನೆರವು ನೀಡುವ ಕೋಶದ ಪ್ರಧಾನ ಕಾರ್ಯದರ್ಶಿ ಆಗಿದ್ದರು, ದಲಿತರು ಮತ್ತು ಬಡವರ ಪರವಾಗಿ ಉಚಿತವಾಗಿ ವಾದ ಮಾಡಿದರು.

ಇದೇ ವೇಳೆ, 1984ರಲ್ಲಿ ತಮ್ಮ ಐಎಫ್‌ಎಸ್ ಹುದ್ದೆ ತ್ಯಜಿಸಿದ ಮೀರಾ ಕುಮಾರ್ ಬಿಜ್‌ನೂರ್‌ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದರು. ತಮ್ಮ ಎದುರಾಳಿಗಳಾಗಿದ್ದ ರಾಮ್ ವಿಲಾಸ್ ಪಾಸ್ವಾನ್, ಮಾಯಾವತಿಯಂಥ ದಲಿತ ಮುಖಂಡರನ್ನು ಸೋಲಿಸಿ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದರು.

ಈ ನಡುವೆ, ಸುಮಾರು 16 ವರ್ಷಗಳ ಕಾಲ ವಕೀಲಿ ವೃತ್ತಿ ನಡೆಸಿದ ಕೋವಿಂದ್ ಅವರು, ಎರಡು ಬಾರಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲುವು ದಕ್ಕಲಿಲ್ಲ.  ಆನಂತರ 1994ರಲ್ಲಿ, ಮೊದಲ ಬಾರಿಗೆ ಉತ್ತರ ಪ್ರದೇಶದಿಂದ ಬಿಜೆಪಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು, ಸಂಸತ್ತಿನ ವಿವಿಧ ಸಮಿತಿಗಳಲ್ಲಿ ಕೆಲಸ ಮಾಡಿದರು. 1997ರಲ್ಲಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯರಾದ ಕೋವಿಂದ್, 1999ರಿಂದ 2002ರ ವರೆಗೆ ಬಿಜೆಪಿ ಪರಿಶಿಷ್ಟ ಮೋರ್ಚಾದ ಅಧ್ಯಕ್ಷರಾಗಿ ಕೆಲಸ ಮಾಡಿದರು. 2000ದಿಂದ 2006ರವರೆಗೆ ಎರಡನೇ ಅವಧಿಗೆ ರಾಜ್ಯಸಭಾ ಸದಸ್ಯರಾದರು.

ಇತ್ತ ವಿದೇಶಾಂಗ ಸೇವೆ ಬಿಟ್ಟು ರಾಜಕಾರಣಕ್ಕೆ ಜಿಗಿದ ಮೀರಾ ಕುಮಾರ್, 1996ರಲ್ಲಿ ಎರಡನೇ ಬಾರಿ ಲೋಕಸಭೆಗೆ ಆಯ್ಕೆಯಾದರು, 1998ರಲ್ಲಿ ಮತ್ತೆ ದೆಹಲಿಯ ಕರೋಲ್‌ ಭಾಗ್‌ನಿಂದ ಸಂಸದರಾಗಿ ಆಯ್ಕೆಯಾದರು. ಆದರೆ, 1999ರ ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋದ ಮೀರಾ ಕುಮಾರ್, ಆ ಬಾರಿ ಸಂಸತ್ತಿಗೆ ಮರಳಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ 2000ದನೇ ಇಸವಿಯಲ್ಲಿ ಪಕ್ಷದ ಮೇಲೆ ಮುನಿಸಿಕೊಂಡು ಹೊರಬಿದ್ದಿದ್ದ ಮೀರಾ ಕುಮಾರ್, 2002ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗಿದ್ದರು. ಆದರೆ, 2004ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾದ ಮೀರಾ ಕುಮಾರ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆಯಾಗಿ ಕೆಲಸ ಮಾಡಿದರು. ಇದಾದ ಬಳಿಕ, 2009ರಲ್ಲಿ ಲೋಕಸಭೆಯ ಮೊಟ್ಟ ಮೊದಲ ಮಹಿಳಾ ಸ್ಪೀಕರ್ ಆಗಿ ಇತಿಹಾಸ ಸೃಷ್ಟಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ನಡುವೆಯೂ ಅತ್ಯುತ್ತಮ ಸಾಧನೆ ತೋರಿಸಿದ ಮೀರಾ ಕುಮಾರ್ ಸಾಸಾರಾಮ್  ಕ್ಷೇತ್ರದಲ್ಲಿ ಕೇವಲ 327 ಓಟುಗಳ ಅಂತರದಿಂದ ಪರಾಭವಗೊಂಡಿದ್ದರು.

ರಾಜ್ಯಸಭಾ ಸದಸ್ಯರಾಗಿದ್ದ ಕೋವಿಂದ್ ಅವರು, 2002ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಭಾಷಣ ಮಾಡಿದರು. ಥೈಲ್ಯಾಂಡ್, ನೇಪಾಳ, ಪಾಕಿಸ್ತಾನ, ಸಿಂಗಾಪುರ, ಜರ್ಮನಿ, ಸ್ವಿಟ್ಜರ್‌ ಲ್ಯಾಂಡ್, ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದರು. ತಾವು ರಾಜ್ಯಸಭಾ ಸದಸ್ಯರಾಗಿದ್ದ ಎರಡೂ ಅವಧಿಗಳಲ್ಲಿ ದಲಿತರ ಪರ ದನಿಯೆತ್ತುತ್ತಲೇ ಇದ್ದ ಕೋವಿಂದ್ ಅವರು, ಮೀಸಲಾತಿಯಿಂದ ಹಿಡಿದು ಸೆಟಲೈಟ್ ಟಿವಿ ಚಾನಲ್‌ ಗಳಿಂದ ದೇಶದ ಸಂಸ್ಕೃತಿ ಮೇಲಾಗುತ್ತಿರುವ ದಾಳಿಯವರೆಗೆ ಹಲವಾರು ವಿಚಾರಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಹೆಚ್ಚು ಆಪ್ತರು ಎಂದು ಹೇಳಲಾಗುವ ಕೋವಿಂದ್ ಅವರು, ತುಂಬಾ ಸರಳ ಜೀವಿ.

ಕೆಲವೇ ವರ್ಷಗಳ ಹಿಂದೆ, ನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷರಾಗಿದ್ದಾಗ ರಾಮನಾಥ್ ಕೋವಿಂದ್ ಅವರನ್ನು, ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ನೇಮಿಸಿದ್ದರು. ಆದರೆ, ಕೆಲವು ಪತ್ರಕರ್ತರು ಅದರಲ್ಲೂ ಇಂಗ್ಲಿಷ್ ಟಿವಿಗಳ ವರದಿಗಾರರು ಕೋವಿಂದ್ ಅವರ ಬಗ್ಗೆ ಒಂದು ರೀತಿಯ ತಾತ್ಸಾರ ತೋರಿಸುತ್ತಿದ್ದರಂತೆ. ಈ ರೀತಿಯ ವರ್ತನೆ, ಮಾಧ್ಯಮದಲ್ಲೂ ಇರಬಹುದಾದ ತಾರತಮ್ಯದ ಭಾವನೆಗೆ ಹಿಡಿದ ಕೈಗನ್ನಡಿ.

2015ರಲ್ಲಿ ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡ ರಾಮನಾಥ್ ಕೋವಿಂದ್, ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇವೆಲ್ಲವೂ ಈ ಇಬ್ಬರೂ ಮುಖಂಡರ ಹಿನ್ನೆಲೆ, ಶಿಕ್ಷಣ, ವೃತ್ತಿ ಮತ್ತು ರಾಜಕೀಯ ಸಾಧನೆಗಳ ವಿಚಾರ. ಇನ್ನು ವೈಯಕ್ತಿಕ ಬದುಕಿಗೆ ಬರುವುದಾದರೆ, ಮೀರಾ ಅವರ ಪತಿ ಸುಪ್ರೀಂಕೋರ್ಟ್ ವಕೀಲ ಮಂಜುಳ್ ಕುಮಾರ್. ಮೀರಾ ಅವರಿಗೆ ಪತ್ರಕರ್ತನಾಗಿರುವ ಮಗ ಅಂಶುಲ್ ಕುಮಾರ್ ಮತ್ತು ದೇವಾಂಗನಾ ಹಾಗೂ ಸ್ವಾತಿ ಎಂಬ ಹೆಣ್ಣು ಮಕ್ಕಳಿದ್ದಾರೆ. ತುಂಬಾ ಚೆನ್ನಾಗಿ ಸ್ಪಾನಿಷ್ ಮಾತನಾಡುವ ಮೀರಾ ಕುಮಾರ್, ನಸುನಗೆಯ ವಿನಯಶೀಲ ವ್ಯಕ್ತಿಯಾಗಿದ್ದರೂ, ಒಂದಿಷ್ಟು ಅಂತರ್ಮುಖಿಯೆಂದೂ ಹೇಳಲಾಗುತ್ತದೆ.  ಕಾಳೀದಾಸ ಇವರ ಮೆಚ್ಚಿನ ಕವಿಯಂತೆ, ಸೋನಿಯಾ ಗಾಂಧಿ ಮೀರಾ ಅವರ ಪ್ರೀತಿಯ ರಾಜಕಾರಣಿ.

ಮೀರಾ ಕುಮಾರ್ ಅವರು ಜಾತಿಯ ಬದಲು, ಸಿದ್ಧಾಂತದ ಆಧಾರದ ಮೇಲೆ ರಾಷ್ಟ್ರಪತಿ ಚುನಾವಣೆ ಸೆಣೆಸುತ್ತಿದ್ದೇನೆ ಎಂದು ಹೇಳಿದ್ದಾರೆ. ಪ್ರಜಾತಾಂತ್ರಿಕ ಮೌಲ್ಯಗಳು, ಸಾಮಾಜಿಕ ನ್ಯಾಯ, ಎಲ್ಲರ ಒಳಗೊಳ್ಳುವಿಕೆ ಹಾಗೂ ಮಾಧ್ಯಮ ಸ್ವಾತಂತ್ರ್ಯ ಮೀರಾ ಅವರ ತತ್ವಾದರ್ಶಗಳು. ‘ಭಾರತ ದೇಶದಲ್ಲಿ ಜಾತಿ ವಿನಾಶ ಆಗಬೇಕು’ ಅನ್ನುವುದು ಮೀರಾ ಕುಮಾರ್ ಅವರ ಕನಸು.

ಇತ್ತ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ಗೃಹಿಣಿ. ಇವರಿಗೆ ಪ್ರಶಾಂತ್ ಕುಮಾರ್ ಎಂಬ ಮಗ, ಸ್ವಾತಿ ಎಂಬ ಮಗಳಿದ್ದಾರೆ.  ಕಾಲೇಜು ದಿನಗಳಿಂದಲೂ ಆರೆಸ್ಸೆಸ್‌ ಅನುಯಾಯಿಯಾಗಿದ್ದ ಕೋವಿಂದ್, ಉತ್ತರ ಪ್ರದೇಶದ ದೇರಾಪುರದಲ್ಲಿದ್ದ ತಮ್ಮ ಪೂರ್ವೀಕರ ಮನೆಯನ್ನು ಆರೆಸ್ಸೆಸ್‌ಗೆ ದಾನ ಮಾಡಿದ್ದರು.

ರಾಮನಾಥ್ ಕೋವಿಂದ್ ಅವರ ಮೃದುವಾದ ನಡೆ ನುಡಿಗಳು, ಸ್ನೇಹಪರ ವ್ಯಕ್ತಿತ್ವ ಮತ್ತು ಸಂವಿಧಾನದ ಬಗೆಗಿನ ಆಳವಾದ ತಿಳುವಳಿಕೆ, ಅವರನ್ನು ದೇಶದ ರಾಷ್ಟ್ರಪತಿ ಹುದ್ದೆಗೆ ಅತ್ಯಂತ ಅರ್ಹ  ವ್ಯಕ್ತಿಯನ್ನಾಗಿಸುತ್ತದೆ. ಇದೇ ವೇಳೆ ವಿದೇಶಾಂಗ ಸೇವೆ ಅಧಿಕಾರಿಯಾಗಿ, ಸಂಸದೆಯಾಗಿ, ಸಚಿವೆಯಾಗಿ ಮತ್ತು ಲೋಕಸಭೆಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ ಅನುಭವ ಮೀರಾ ಕುಮಾರ್ ಅವರದ್ದು. ಇವೆಲ್ಲವೂ ಮೀರಾ ಕುಮಾರ್ ಅವರನ್ನು, ಭಾರತದ ರಾಷ್ಟ್ರಪತಿಯಾಗಿ, ರಾಜತಾಂತ್ರಿಕ ವ್ಯವಹಾರಗಳನ್ನು ನಿಭಾಯಿಸಲು ಮತ್ತು ಸಂವಿಧಾನದ ರಕ್ಷಕಳಾಗಿ ಕೆಲಸ ಮಾಡಲು ಅರ್ಹ ವ್ಯಕ್ತಿಯನ್ನಾಗಿಸುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಲ್ಲೋ ಒಂದೆರಡು ಬಾರಿ ಬಿಟ್ಟರೆ, ಭಾರತದ ರಾಷ್ಟ್ರಪತಿಯವರ ಕಚೇರಿ ಯಾವುದೇ ವಿವಾದಗಳಲ್ಲಿ ಸಿಲುಕಿಲ್ಲ. ಹೀಗಾಗಿ ರಾಮನಾಥ್ ಕೋವಿಂದ್ ಮತ್ತು ಮೀರಾ ಕುಮಾರ್ ಇವರಿಬ್ಬರಲ್ಲಿ ಯಾರೇ ಆರಿಸಿಬಂದರೂ ಕೂಡ, ಅವರು ರಾಷ್ಟ್ರಪತಿ ಸ್ಥಾನದ ಘನತೆ ಗೌರವಗಳನ್ನು ಎತ್ತಿ ಹಿಡಿಯುತ್ತಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ