ಸಿಎಂ ತಕ್ಷಣ ಕ್ಷಮೆ ಯಾಚಿಸಬೇಕು..?

Kannada News

14-07-2017 275

ಮಂಡ್ಯ: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗಳ ಕುರಿತು, ಮಂಡ್ಯದಲ್ಲಿ ಸಿ.ಟಿ‌.ರವಿ ಮಾತನಾಡಿದ್ದಾರೆ. ಮಂಗಳೂರು ಗಲಭೆಯಲ್ಲಿ ಹತ್ಯೆಗೀಡಾದ ಶರತ್ ಪ್ರಕರಣದ ತನಿಖೆಯನ್ನು, ಹಾಲಿ ನ್ಯಾಯಾಧೀಶರಿಂದ ಮಾಡಿಸಲಿ ಎಂದು ಆಗ್ರಹಿಸಿದ್ದಾರೆ. ಇನ್ನು ಈ ಶರತ್ ಸಾವಿನ ಸುದ್ದಿ ಪ್ರಕಟಕ್ಕೆ ಸರ್ಕಾರ 24 ಗಂಟೆ ತಡ ಮಾಡಿದೆ. 7ನೇ ತಾರೀಖು ನಿಧನರಾದರೆ, 8 ನೇ ತಾರೀಖು ಪ್ರಕಟ ಮಾಡಿದ್ದಾರೆ. ಇದರಿಂದ ಅವರ ತಂದೆ ತಂದೆಯ ಆಸೆಗೆ ತಣ್ಣೀರು ಎರಚಿದಂತಾಗಿದೆ. ಅವರ ತಂದೆಗೆ ಅಂಗಾಂಗ ದಾನದ ಆಸೆ ಇತ್ತು, ಅದಕ್ಕೂ ಅವಕಾಶ ಕೊಡಲಿಲ್ಲ ಅಂತಿದ್ದಾರೆ. ಇದಕ್ಕೆಲ್ಲಾ ಕಾರಣ, ಕಾಂಗ್ರೆಸ್ ಸಮಾವೇಶಕ್ಕೆ ಅಡ್ಡಿಯಾಗುತ್ತೆ ಎಂದು ತಡವಾಗಿ ಪ್ರಕಟಿಸಿದ್ದಾರೆ, ಇದು ಅಮಾನವೀಯ ವರ್ತನೆ ಎಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪುತ್ರ ಶೋಕ ಏನೆಂದು ಗೊತ್ತಿದೆ, ಹೀಗಿದ್ದರೂ, ಈ ರೀತಿ ವರ್ತಿಸುತ್ತಾರೆಂದು ಭಾವಿಸಿರಲಿಲ್ಲ ಎಂದು ಟೀಕಿಸಿದ್ದಾರೆ. ಈ ಕುರಿತು, ಸಿಎಂ ತಕ್ಷಣ ಕ್ಷಮೆಯಾಚಿಸಬೇಕು ಎಂದ ಅವರು, ಶರತ್ ಹತ್ಯೆ ಮಾಡಿದವರನ್ನ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸೋ ಮೂಲಕ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಿಸಬೇಕು ಎಂದರು. ಅಲ್ಲದೇ ಶರತ್ ಕುಟುಂಬಕ್ಕೆ ತಕ್ಷಣ ಹತ್ತು ಲಕ್ಷ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಹಿರಿಯ ಐಪಿಎಸ್ ಅಧಿಕಾರಿ ರೂಪ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದ ಅವರು, ಶಶಿಕಲಾಗೆ ರಾಜೋಪಚಾರ, ಜೈಲಿನಲ್ಲಿನ ಅಕ್ರಮದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಿಎಂ, ಹಾಗು ಗೃಹ ಸಚಿವರ ಅರಿವಿಗೆ ಬಾರದೆ ಜೈಲಲ್ಲಿ ರಾಜೋಪಚಾರ ನಡೆಯಲ್ಲ. ಇದರ ಅರಿವು ಸಿಎಂ, ಹಿರಿಯ ಅಧಿಕಾರಿಗಳಿದೆ. ಈಗ ತನಿಖೆಯೆಂಬ ಕಣ್ಣೊರೆಸೋ ನಾಟಕ ವಾಡುತ್ತಿದ್ದಾರೆ ಎಂದು ಆರೋಪಿಸಿದರು. ಡಿವೈಎಸ್ಪಿ ಗಣಪತಿ ಕೇಸ್, ಸಿಎಂ ಹ್ಯೂಬ್ಲೊಟ್ ವಾಚ್ ಪ್ರಕರಣದಲ್ಲಿ ಸರ್ಕಾರ ಕ್ಲೀನ್ ಚಿಟ್ ಕೊಟ್ಟಿದೆ. ಈ ತನಿಖೆಯಲ್ಲೂ ಸತ್ಯ ಸಮಾಧಿ ಆಗಬಾರದು, ಹೀಗಾಗಿ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ, ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ, ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ಖಾಯಂ ಆಗಿದೆ. ಭ್ರಷ್ಟರ ರಕ್ಷಣೆ ಮಾಡುತ್ತಿರುವ ಸರ್ಕಾರ ಎಂದು ಕಟುಕಿದ್ದಾರೆ. ಈ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ನೆಲೆ, ಬೆಲೆ ಸಿಗುವ ನಂಬಿಕೆ ಇಲ್ಲ ಎಂದರು.

ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಗೆ ಸಿದ್ಧ ಎಂಬ ಸಿಎಂ ಸವಾಲನ್ನು ಸ್ವೀಕಾರ ಮಾಡ್ತೀವಿ, ನಾವೂ ದಾಖಲೆ ಸಹಿತ ಚರ್ಚೆಗೆ ಬರುತ್ತೇವೆ ನೀವು ಬನ್ನಿ, ಮಾಧ್ಯಮದವರು ನ್ಯಾಯಾಧೀಶರ ಪಾತ್ರ ನಿರ್ವಹಿಸಲಿ ಎಂದು ಆಹ್ವಾನಿಸಿದ್ದಾರೆ. ಯುಪಿಎ ಕೊಟ್ಟಿದ್ದಕ್ಕಿಂತ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ಪಟ್ಟು ಹೆಚ್ಚು ಅನುದಾನ ಕೊಟ್ಟಿದೆ. ಆದರೂ ಕೇಂದ್ರದ ವಿರುದ್ಧ ತಾರತಮ್ಯ ಆರೋಪ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇಲ್ಲಿವರೆಗೂ ಎಲ್ಲಾ ಮುಖ್ಯಮಂತ್ರಿಗಳೂ ಸೇರಿ ಮಾಡಿದ ಸಾಲವನ್ನ, ಇವರೊಬ್ಬರೆ ಮಾಡಿ ಸಾಧನೆ ಮಾಡಿದ್ದಾರೆ. ಸಾಲ ಮಾಡಿ ದಾಖಲೆ ಮಾಡಿದ ಸಿಎಂ ಸಿದ್ದರಾಮಯ್ಯ ಎಂದು ವ್ಯಂಗವಾಡಿದರು. ಕೇಂದ್ರದ ಯೋಜನೆಗಳನ್ನ ಹೆಸರು ಬದಲಿಸಿ ಅನುಷ್ಟಾನ ಮಾಡಿದ್ದಾರೆ. ನೀವೇ ದಿನಾಂಕ ನಿಗದಿ ಮಾಡಿ. ಬಿಜೆಪಿ ಪರವಾಗಿ ನಾನೇ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ. ಈ ಎಲ್ಲಾ ಸತ್ಯಗಳನ್ನು ಸಾರ್ವಜನಿಕರ ಮುಂದಿಡಬೇಕಿದೆ ಎಂದರು. ಕೆಂಪಯ್ಯ ಮೂಲಕ ಪೊಲೀಸ್ ಇಲಾಖೆಯ ಒಳ ವ್ಯವಹಾರವನ್ನು ಸಿಎಂ ನಿಯಂತ್ರಿಸುತ್ತಿದ್ದಾರೆ, ಕಾಂಗ್ರೆಸ್ ಹಿರಿಯ ನಾಯಕರ ವಿರೋಧದ ನಡುವೆಯೂ ಕೆಂಪಯ್ಯ ಮುಂದುವರೆದಿದ್ದಾರೆ ಎಂದು  ಕಾಂಗ್ರೆಸ್  ವಿರುದ್ಧ ವಾಗ್ದಾಳಿ ನಡೆಸಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ