ಬೆಂಕಿ ಹಚ್ಚುವುದೇ ಬಿಜೆಪಿಯವರ ಕೆಲಸ..?

Kannada News

14-07-2017

ಮೈಸೂರು: ಬಿಜೆಪಿ ನಾಯಕರಿಗೆ ರಾಜಕೀಯ ಸಂಸ್ಕೃತಿ ಇಲ್ಲ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಿಜೆಪಿಯವರು ಹಚ್ಚಿದ ಬೆಂಕಿಯನ್ನು ಆರಿಸುವುದು ನಮ್ಮ ಕೆಲಸವಾಗಿದೆ ಎಂದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆಯೂ ಉತ್ತಮವಾಗಿದೆ. ಬಿಜೆಪಿಯವರು ಕತ್ತರಿಯಿಂದ ಕತ್ತರಿಸಿದ್ದನ್ನು ಸೂಜಿಯಿಂದ ಹೊಲಿಯುವುದು ನಮ್ಮ ಕೆಲಸವಾಗಿದೆ ಎಂದರು. ಬಿಜೆಪಿ ಯವರು ಏನಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಏನೇನೊ ಮಾಡುತ್ತಿದ್ದಾರೆ, ಆದರೆ ಬಿಜೆಪಿ ನಾಯಕರು ತಿಪ್ಪರಲಾಗ ಹಾಕಿದರು ಅಧಿಕಾರಕ್ಕೆ ಬರುವುದಿಲ್ಲ ಎಂದು ಹರಿಹಾಯ್ದರು. ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ನಾತನಾಡಿದ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹಿಳಾ ಕೈದಿ ಶಶಿಕಲಾಗೆ ರಾಜಾತಿಥ್ಯ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಪದೇ ಪದೇ ಮಾಧ್ಯಮಗಳ ಮುಂದೆ ಹೋಗಿ ಹೇಳಿಕೆ ನೀಡಿರುವ ಅಲ್ಲಿನ ಜೈಲು ಅಧಿಕಾರಿ ರೂಪಾಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಸ್ತೃತವಾದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಏನಾದರೂ ಸ್ಪಷ್ಟನೆ ಕೋರಿದರೆ ಮಾತ್ರ ಅದಕ್ಕೆ ಪ್ರತಿಕ್ರಿಯೆ ನೀಡುತ್ತೇವೆ, ತಮಿಳುನಾಡಿನಂತೆ ನಾವು ಖ್ಯಾತೆ ಮಾಡುವುದಿಲ್ಲ ಎಂದರು. ಈಗಾಗಲೇ ರಾಜ್ಯದ ಜಲಾಶಯಗಳಿಂದ 4 ರಿಂದ 5 ಟಿ.ಎಂ.ಸಿ ನೀರು ಬಿಟ್ಟಿದ್ದೇವೆ, ತಮಿಳುನಾಡಿಗೆ ೪-೫ ಟಿಎಂಸಿ ನೀರು ಹರಿಸಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀರು ಹರಿಸುವುದು ಅನಿವಾರ್ಯವಾಗಿತ್ತು ಎಂದು, ರಾಜ್ಯದಲ್ಲಿ ಈ ವಿರುದ್ಧ ಹೋರಾಟಗಳು ನಡೆಯುತ್ತಿದ್ದರೂ, ತಮಿಳುನಾಡಿಗೆ ‌ನೀರು ಹರಿಸಿದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ. ಸ್ವಲ್ಪವೂ ನೀರು ಬಿಡದೇ ಹೋದರೆ ವಿಚಾರಣೆ ವೇಳೆ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ