ಬ್ಯಾಂಕ್ ದರೋಡೆಗೆ ಯತ್ನ !

Kannada News

13-07-2017

ಬೆಂಗಳೂರು: ಬ್ಯಾಂಕ್ ಕಿಟಕಿಯ ಸರಳುಗಳನ್ನ ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ, ಕಳ್ಳರು ದರೋಡೆಗೆ ಯತ್ನಿಸಿದ ಘಟನೆ ಬುಧವಾರ ತಡರಾತ್ರಿ ನಗರದ ಹೊರವಲಯದ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರಿನಲ್ಲಿ ನಡೆದಿದೆ. ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನಲ್ಲಿ ತಡರಾತ್ರಿ ಈ ಕೃತ್ಯ ನಡೆದಿದ್ದು, ಟಿ.ಬೇಗೂರು ಪೊಲೀಸ್ ಚೌಕಿ ಪಕ್ಕದಲ್ಲಿರುವ ಈ ಬ್ಯಾಂಕ್ ನಲ್ಲಿ ಸುಮಾರು ಐದಾರು ಮಂದಿ ಕಳ್ಳರು ಬಂದು ಕಳ್ಳತನಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಕಳ್ಳರು ಬ್ಯಾಂಕ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಮಾಡಿ, ಹಣವಿದ್ದ ಸ್ಟ್ರಾಂಗ್ ರೂಮ್ ಕಟ್ ಮಾಡಲು ಸಾಧ್ಯವಾಗದ ಕಾರಣ ಹಣ ದೋಚಲು ಆಗಲಿಲ್ಲ. ಸಿನಿಮೀಯ ರೀತಿಯಲ್ಲಿ ರೂಪರೇಶಗಳನ್ನ ಸಿದ್ದಪಡಿಸಿ ಬ್ಯಾಂಕ್ ಹಿಂಬದಿಯ ಕಿಟಕಿಯನ್ನ ಚೌಕಾರವಾಗಿ ಕಟ್ ಮಾಡಿ ದರೋಡೆಗೆ ಸಂಚು ಮಾಡಿದ್ದಾರೆ. ಈ ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟರ್, ಇನ್ನಿತರ ಸಲಕರಣೆಗಳನ್ನ ಕಳ್ಳರು ಹೊಸದಾಗಿ ಖರೀದಿಸಿರುವ ಬಗ್ಗೆ ಪೊಲೀಸರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಕಳ್ಳರು ಎಲ್ಲಾ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಬ್ಯಾಂಕ್ ದರೋಡೆಗೆ ಯತ್ನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ