ಕುಖ್ಯಾತ ರೌಡಿ ಪೊಲೀಸ್ ಬಲೆಗೆ !

Kannada News

13-07-2017

ಬೆಂಗಳೂರು: ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ಅಪ್ತಸಹಾಯಕನ ಅಪಹರಣಕ್ಕೆ ಯತ್ನಿಸಿದ್ದ ಪ್ರಮುಖ ಆರೋಪಿ, ಕುಖ್ಯಾತ ರೌಡಿ ಪ್ರಶಾಂತ್ ಅಲಿಯಾಸ್ ರಾಜ ಮೈಸೂರಿನಲ್ಲಿ ಸೆರೆಸಿಕ್ಕಿದ್ದಾನೆ. ಬಂಧಿತನಾಗಿದ್ದ ಆರೋಪಿಯು ಕೆಲವು ದಿನಗಳ ಹಿಂದೆ ಮೂತ್ರ ವಿಸರ್ಜನೆ ನೆಪ ಮಾಡಿ, ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಇದೀಗ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪ್ರಶಾಂತ್ ಮೈಸೂರಿನಲ್ಲಿ ಹೋಗುತ್ತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಸಾದಿಕ್ ಪಾಷ, ಪ್ರಶಾಂತ್ ಅವರನ್ನೊಳಗೊಂಡ ವಿಶೇಷ ತಂಡ ಆರೋಪಿಯನ್ನು ಬುಧವಾರ ಮಧ್ಯಾಹ್ನ ಮೈಸೂರಿನ ಚಾಮುಂಡಿ ರಸ್ತೆಯಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದೆ. ಪ್ರಶಾಂತ್‍ ನನ್ನು ರಾತ್ರಿಯೇ 43ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಪ್ರಕಾಶ್ ನಾಯಕ್ ಅವರ ಮುಂದೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.

ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಮಾರುತ್ ಹಳ್ಳಿಯ ಮಾರುತಿ ನಗರದ ರೌಡಿ ಪ್ರಶಾಂತ್ ಅಲಿಯಾಸ್ ರಾಜ(26)ಕೋಲಾರದಲ್ಲಿ ಅಡಗಿದ್ದ ಮಾಹಿತಿ ಆಧರಿಸಿ ಜು.8 ರಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಹೆಚ್‍ಎಎಲ್ ಪೊಲೀಸ್ ಇನ್ಸ್ ಪೆಕ್ಟರ್ ಸಾದಿಕ್‍ ಪಾಷ ಅವರ ನೇತೃತ್ವದ ವಿಶೇಷ ತಂಡ ಆತನನ್ನು ಬಂಧಿಸಿತ್ತು. ಅಲ್ಲಿಂದ ಆತನನ್ನು ನಗರಕ್ಕೆ ಕರೆತಂದು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಕರೆದೊಯ್ದು, ಕೆಲವು ದಿನಗಳ ಹಿಂದೆ ನಡೆದ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಈಶ್ವರಪ್ಪ ಅಪ್ತ ಸಹಾಯಕ ಅಪಹರಣ ಯತ್ನ ಪ್ರಕರಣದ ವಿಚಾರಣೆ ನಡೆಸಿದಾಗ ಆತ ಕೃತ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾನೆ.

ಅಲ್ಲಿಂದ ರಾತ್ರಿ 8.30ರ ವೇಳೆ ಹೆಚ್‍.ಎ.ಎಲ್ ಪೊಲೀಸ್ ಠಾಣೆಗೆ ಕರೆತರುತ್ತಿದ್ದಾಗ ಕೆ.ಆರ್.ಪುರಂ ನ ಐಟಿಐ ಗ್ರೌಂಡ್ ಬಳಿ ಮೂತ್ರ ವಿಸರ್ಜನೆಗೆ ಹೋಗುವ ನೆಪ ಮಾಡಿದ್ದಾನೆ, ಆತನನನ್ನು ಪೊಲೀಸ್ ವ್ಯಾನ್ ನಿಂದ ಇಳಿಸಿ, ಹಿಂದೆ ಇಬ್ಬರು ಪೇದೆಗಳನ್ನು ಕಳುಹಿಸಿದ್ದು ಅವರ ಕಣ್ತಪ್ಪಿಸಿ ಓಡಿದ್ದಾನೆ, ಆ ವೇಳೆ ಇನ್ಸ್ ಪೆಕ್ಟರ್ ಸಾದಿಕ್ ಅವರು ಹಿರಿಯ ಅಧಿಕಾರಿಗಳಿಗೆ ಮೊಬೈಲ್‍ನಲ್ಲಿ ಮಾಹಿತಿ ನೀಡುತ್ತಿದ್ದು, ಓಡಿ ಹೋಗುತ್ತಿದ್ದ ಪ್ರಶಾಂತ್‍ನನ್ನು ಮೂವರು ಬೆನ್ನಟ್ಟಿದರಾದರೂ ಕತ್ತಲಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತನ ಪತ್ತೆಗಾಗಿ ಡಿಸಿಪಿ ನಾರಾಯಣ್ ಅವರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಆತನಿಗಾಗಿ ಶೋಧ ನಡೆಸಲಾಗಿತ್ತು. ಪ್ರಶಾಂತ್ ತಪ್ಪಿಸಿಕೊಂಡ ಪ್ರಕರಣವನ್ನು ಸವಾಲಾಗಿ ಪರಿಗಣಿಸಿದ್ದು ಆತನನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದರು.

ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದ ಪ್ರಶಾಂತ್. ಕೊಲೆ,ಕೊಲೆಯತ್ನ,ಸುಲಿಗೆ,ಅಪಹರಣ,ದರೋಡೆ,ಕಳ್ಳತನ  ಸೇರಿದಂತೆ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಹೆಚ್‍.ಎ.ಎಲ್, ಮಾರುತ್‍ ಹಳ್ಳಿ, ಕೆ.ಆರ್.ಪುರಂ ,ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಬೇಕಾಗಿದ್ದನು, ಹೆಚ್‍.ಎ.ಎಲ್,  ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಆರೋಪಿ, ಪ್ರಶಾಂತ್ ನಗರ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದನು. ಇದೀಗ ಕುಖ್ಯಾತ ರೌಡಿ ಪ್ರಶಾಂತ್ ಅಲಿಯಾಸ್ ರಾಜ ಪೋಲೀಸರ ಬಲೆಗೆ ಬಿದ್ದಿದ್ದಾನೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ