ಹನಿಟ್ರಾಪ್ ಗ್ಯಾಂಗ್ ನ ಬಂಧನ !

Kannada News

13-07-2017

ಬೆಂಗಳೂರು: ಎಸ್ಕೇಪ್ ಚಿತ್ರದ ನಾಯಕನನ್ನು ಹನಿಟ್ರಾಪ್ ಮೂಲಕ ಅಪಹರಿಸಿ, ಹಲ್ಲೆ ಮಾಡಿ ಅಕ್ರಮ ಬಂಧನದಲ್ಲಿಟ್ಟು 15 ಸಾವಿರ ನಗದು, ಮೊಬೈಲ್,ಎಟಿಎಂ ಕಾರ್ಡ್ ಗಳನ್ನು ದೋಚಿದ್ದ, ಯುವತಿ ಸೇರಿ 8 ಮಂದಿ ಆರೋಪಿಗಳ ಗ್ಯಾಂಗ್‍ನ್ನು ಬಾಗಲಗುಂಟೆ ಪೊಲೀಸರು ಪತ್ತೆಹಚ್ಚಿದ್ದಾರೆ. ಮೈಸೂರಿನ ಎನ್‍. ಆರ್ ಮೊಹಲ್ಲಾದ ದಿವ್ಯಾ (19), ಕಾಮಾಕ್ಷಿಪಾಳ್ಯದ ತಿಲಕ್ ಆಲಿಯಾಸ್ ರೆಬೆನ್ (24), ಕಡಬಗೆರೆ ಕ್ರಾಸ್‍ ನ ಮಾಚೋಹಳ್ಳಿಯ ಲೋಕೇಶ್ (27), ಚಿಕ್ಕಸಂದ್ರದ ಮಂಜುನಾಥ್ (21), ಹೇರೊಹಳ್ಳಿಯ ಕಿರಣ್ ಕುಮಾರ್ ಆಲಿಯಾಸ್ ಕಿರಣ್ (24), ಪುನಿತ್ (22), ಮಯೂರನಗರದ ಮದನ್ (22), ಸುಮಂತ್ ಕುಮಾರ್ ಆಲಿಯಾಸ್ ಸುಮಂತ್ (22) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.

ನಂದಿನಿ ಬಡಾವಣೆ ನಿವಾಸಿಯಾದ, ನಟ ಭರತ್ ಅವರನ್ನು, ಆರೋಪಿ ದಿವ್ಯಾ ಪರಿಚಯ ಮಾಡಿಕೊಂಡಿದ್ದಳು. ಎರಡು ಮೂರು ಬಾರಿ ಭರತ್‍ನನ್ನು ಕರೆಸಿಕೊಂಡು ಅವರಿಂದ ಹಣ ಪಡೆದುಕೊಂಡು ಕಳುಹಿಸಿದ್ದಳು. ಕಳೆದ ಜು. 6 ರಂದು ಮಧ್ಯಾಹ್ನ ಮೊಬೈಲ್ ಕರೆ ಮಾಡಿ ಭರತ್‍ನನ್ನು ಬಾಗಲಗುಂಟೆ ಸಿಗ್ನಲ್ ಬಳಿಗೆ ದಿವ್ಯಾ ಕರೆಸಿಕೊಂಡಿದ್ದಳು. ಅಲ್ಲಿ ಕಾರಿನಲ್ಲಿ ಕಾಯುತ್ತಿದ್ದ ದಿವ್ಯಾ, ಇತರ ಐವರು ಆರೋಪಿಗಳೊಂದಿಗೆ ಭರತ್ ನನ್ನು ಕಾರಿನಲ್ಲಿ ಕೂರಿಸಿಕೊಂಡು 8ನೇ ಮೈಲಿ ಸಿಗ್ನಲ್ ಮೂಲಕ ಬೆನಕಾ ಲೇಔಟ್ ನ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿದ್ದ ಮೂವರು ಸೇರಿದಂತೆ ಎಲ್ಲಾ ಆರೋಪಿಗಳು ದಿವ್ಯಾಳ ಜತೆಗಿರುವ ಫೋಟೋಗಳನ್ನು ತೋರಿಸಿ, ಭರತ್ ಮೇಲೆ ಹಲ್ಲೆ ಮಾಡಿ 15 ಸಾವಿರ ನಗದು, 4 ಎಟಿಎಂ ಕಾರ್ಡ್, ಆಪಲ್ ಫೋನ್ ನನ್ನು ದೋಚಿದ್ದರು. ಈ ಸಂಬಂಧ ಭರತ್ ನೀಡಿದ ದೂರು ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸ್ ಇನ್ಸ್‍ ಪೆಕ್ಟರ್ ವಿರೂಪಾಕ್ಷಸ್ವಾಮಿ ಮೊಬೈಲ್ ಕರೆಗಳ ಮೂಲಕ ದಿವ್ಯಾಳನ್ನು ಸಂಪರ್ಕಿಸಿ, ಉಳಿದ ಗ್ಯಾಂಗನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ಹನಿಟ್ರಾಪ್ ನಡೆಸುತ್ತಿದ್ದ ಹಲವು ಕೃತ್ಯಗಳ ಮಾಹಿತಿ ಇದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ