ಪೊಲೀಸ್ ಅಧಿಕಾರಿಗಳ ಮುಸುಕಿನ ಗುದ್ದಾಟ !

Kannada News

13-07-2017

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಹಾಗೂ ಛಾಪಾಕಾಗದ ಹಗರಣದ ಪ್ರಮುಖ ಆರೋಪಿ ತೆಲಗಿಗೆ ವಿಶೇಷ ಅತಿಥ್ಯ ನೀಡಲಾಗುತ್ತಿದೆ ಎಂದು ಕಾರಾಗೃಹಗಳ ಡಿಐಜಿಪಿ, ಡಿ.ರೂಪಾ ಅವರ ಆರೋಪಗಳನ್ನು ತಳ್ಳಿಹಾಕಿರುವ ಎಚ್.ಎನ್.ಸತ್ಯನಾರಾಯಣರಾವ್ ಅವರು ವಿ.ಕೆ.ಶಶಿಕಲಾಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಆತಿಥ್ಯ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೂ ರೂಪ ನೀಡಿರುವ ವರದಿ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳು ಹಾಗೂ ಪೊಲೀಸ್ ಅಧಿಕಾರಿಗಳಲ್ಲಿನ ಮುಸುಕಿನ ಗುದ್ದಾಟವನ್ನು ಎತ್ತಿ ತೋರಿಸುತ್ತಿದೆ. ವಿ.ಕೆ.ಶಶಿಕಲಾ ಹಾಗೂ ತೆಲಗಿಗೆ ಲಂಚ ಪಡೆದು ವಿಶೇಷ ಅತಿಥ್ಯ ನೀಡುತ್ತಿರುವುದು ಹಾಗೂ ಅಲ್ಲಿನ ಗಾಂಜಾ ಮತ್ತಿತರ ಅಕ್ರಮ ನಡೆಯುತ್ತಿವೆ ಎನ್ನುವ ಅನುಮಾನಗಳನ್ನು ಪುಷ್ಠೀಕರಿಸಿವೆ.

ಜೈಲಿನಲ್ಲಿ ವಿ.ಕೆ.ಶಶಿಕಲಾ ಹಾಗೂ ತೆಲಗಿಗೆ ವಿಶೇಷ ಅತಿಥ್ಯ ನೀಡುತ್ತಿರುವ ವರದಿಯನ್ನು ರೂಪಾ ನೀಡಿದ್ದರೂ ಅದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಾಧಾರಗಳನ್ನು ಒದಗಿಸದಿರುವುದು ಶಂಕಾಸ್ಪದವಾಗಿದೆ. ಇತ್ತೀಚಿಗೆ ಮುಖ್ಯಮಂತ್ರಿಗಳು ನಡೆಸಿದ ಐಪಿಎಸ್ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳದಿರುವುದಕ್ಕೆ ಮೆಮೋ ನೀಡಿದ್ದರು. ಇದರಿಂದ ಆಕ್ರೋಶಗೊಂಡ ರೂಪ ಅವರು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ನಾರಾಯಣರಾವ್ ಅವರ ವಿರುದ್ದ ಆರೋಪಗಳ ವರದಿ ನೀಡಿ ಸೇಡು ತೀರಿಸಿಕೊಂಡಿದ್ದಾರೆ ಎನ್ನುವ ದೂರು ಕೇಳಿಬಂದರೂ ಜೈಲಿನಲ್ಲಿನ ಅಕ್ರಮಗಳ ಬಗ್ಗೆ ಅನುಮಾನವನ್ನು ಹೆಚ್ಚಿಸುವಂತೆ ಮಾಡಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯ ಐಪಿಎಸ್ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

ರೂಪಾ ಅವರು ಜೈಲಿನ ಅಕ್ರಮಗಳನ್ನು ಸಾಕ್ಷಾಧಾರಗಳ ಸಮೇತ ಪತ್ತೆಹಚ್ಚಿ ವರದಿ ನೀಡಿದ್ದರೆ ಅದನ್ನು ಒಪ್ಪಬಹುದಿತ್ತು ಅದನ್ನು ಬಿಟ್ಟು ಮಾದ್ಯಮಗಳಿಗೆ ವರದಿಯ ವಿವರಗಳನ್ನು ಹಂಚಿಕೊಂಡಿರುವುದು ಕೂಡ ಪ್ರಚಾರ ಪಡೆಯುವ ತಂತ್ರ ಎಂದು ಕೆಲ ಅಧಿಕಾರಿಗಳು ದೂರಿದ್ದಾರೆ. ಈ ನಡುವೆ ರೂಪ ಅವರು ಮಾಡಿರುವ ವರದಿ ನೀಡಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಎಚ್.ಎನ್.ಸತ್ಯನಾರಾಯಣರಾವ್ ಅವರು ವಿ.ಕೆ.ಶಶಿಕಲಾಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಆತಿಥ್ಯ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿ ವಿ.ಕೆ.ಶಶಿಕಲಾಗೆ ಜೈಲಿನಲ್ಲಿ ವಿಶೇಷ ಅತಿಥ್ಯ ನೀಡಲು ನಮಗೆ ಎಂಪಿ, ಎಂಎಲ್‍ಎಗಳಿಂದ ಒತ್ತಡ ಬಂದಿದ್ದು ನಿಜ, ಆದರೆ ತಾವು ಯಾವುದೇ ಒತ್ತಡಕ್ಕೂ ಮಣಿಯದೇ ಸಾಮಾನ್ಯ ಖೈದಿಗೆ ನೀಡುವ ಸೌಲಭ್ಯವನ್ನೇ ಶಶಿಕಲಾ ಅವರಿಗೂ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಕಾರಾಗೃಹಗಳ ಡಿಜಿಪಿಯಾದ ನಂತರ ಜೈಲುಗಳ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದೇನೆ, ಕೈದಿಗಳ ಸುಧಾರಣೆ ಮನಪರಿವರ್ತನೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ, ಅವುಗಳ ಪ್ರಚಾರ ಪಡೆಯಲು ರೂಪ ಯತ್ನಿಸಿದ್ದರು ಅದಕ್ಕೆ ನಾನು ಅವಕಾಶ ನೀಡಲಿಲ್ಲ ಎಂದಿದ್ದಾರೆ. ಜೈಲಿನಲ್ಲಿರುವ ಕೈದಿಗಳು ಗಾಂಜಾ ತರಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಇದೆ ಮೊದಲಲ್ಲ, ಹಲವು ಬಾರಿ ಇಂತಹ ಪ್ರಯತ್ನಗಳು ನಡೆದಿದ್ದು ಅಂತಹ ಪ್ರಯತ್ನವನ್ನು ವಿಫಲಗೊಳಿಸಿ ಕೃತ್ಯದಲ್ಲಿ ಭಾಗಿಯಾಗುವವರನ್ನು ಹಿಡಿದು ಕ್ರಮ ಕೈಗೊಂಡಿದ್ದೇವೆ ಇದು ನಿರಂತರವಾಗಿ ನಡೆಯುತ್ತಿರುವ ಕೃತ್ಯವಾಗಿದ್ದು ಇದರಲ್ಲಿ ಹೊಸದೇನಿದೆ ಎಂದು ಪ್ರಶ್ನಿಸಿದ್ದಾರೆ. ಕಾರಾಗೃಹಗಳ ಕಾನೂನುಗಳ ಬಗ್ಗೆ ಅಲ್ಲಿ ಜಾರಿಯಲ್ಲಿರುವ ನಿಯಮಗಳ ಬಗ್ಗೆ ಅರಿವಿಲ್ಲದ ರೂಪ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಅವರು ಮಾಡಿರುವ ಆರೋಪಗಳಿಗೆ ಯಾವುದಾರೂ ಸಾಕ್ಷಾಧಾರಗಳಿಲ್ಲ. ಶಶಕಲಾ ಅವರಿಂದಾಗಲಿ ಕೈದಿಯೊಬ್ಬ  ನಿಂದಾಗಲಿ ಒಂದು ಬಿಸ್ಕೆಟ್ ಸಹ ತಾವು ಪಡೆದಿಲ್ಲ, ರೂಪ ಅವರು ಇಲಾಖೆಯ ಮುಖ್ಯಸ್ಥನಾಗಿರುವ ನನಗಾಗಲಿ ಇಲ್ಲವೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗಾಗಲಿ ಸಲ್ಲಿಸಬೇಕಾಗಿತ್ತು. ಅದನ್ನು ಬಿಟ್ಟು ಟಿವಿ ಚಾನಲ್‍ಗಳಿಗೆ ನೀಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಕಾರಾಗೃಹ ಕಾನೂನುಗಳ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ ಎಂದು ಡಿಜಿಪಿ ಸತ್ಯನಾರಾಯಣರಾವ್ ಮಾಡಿರುವ ಆರೋಪವನ್ನು ಬಂಧೀಖಾನೆ ಡಿಐಜಿ ರೂಪಾ ತಳ್ಳಿಹಾಕಿದ್ದಾರೆ. ಪೊಲೀಸ್ ಇಲಾಖೆ ಸೇರಿ 17 ವರ್ಷವಾಗಿದೆ. ಇಷ್ಟು ವರ್ಷ ಸರ್ವಿಸ್ ಇರುವ ತನಗೆ ಕಾರಾಗೃಹದ ಕಾನೂನು ಗೊತ್ತಿಲ್ಲವಾ, ಐಪಿಎಸ್ ಅಧಿಕಾರಿಗಳನ್ನ ಯಾಕೆ ಪೋಸ್ಟಿಂಗ್ ಮಾಡುತ್ತಾರೆ ಎಂದು ರೂಪಾ ಪ್ರತಿಕ್ರಿಯಿಸಿದ್ದಾರೆ.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ದುರವಸ್ಥೆಗಳ ಬಗ್ಗೆ ಬಂಧೀಕಾನೆ ಡಿಐಜಿ ರೂಪಾ ನೀಡಿರುವ 4 ಪುಟಗಳ ವರದಿಯ ಬಗ್ಗೆಯೂ ಸ್ಪಷ್ಟನೆ ನೀಡಿರುವ ರೂಪಾ, "ನಾನು ಮೌಖಿಕವಾಗಿಯೂ ತಿಳಿಸಿದ್ದೇನೆ. ವರದಿಯು ಲಿಖಿತವಾಗಿದ್ದರೆ ದಾಖಲೆಯಾಗಿ ಉಳಿಯುತ್ತದಾದ್ದರಿಂದ ಲಿಖಿತ ರೂಪದಲ್ಲಿ ವರದಿ ಸಲ್ಲಿಸಿದ್ದೇನೆ," ಎಂದು ಹೇಳಿದ್ದಾರೆ. ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರೂಪಾ, ತನ್ನ ವರದಿಯಲ್ಲಿರುವ ಸತ್ಯಾಸತ್ಯತೆ ಪರಿಶೀಲಿಸಲು ಸತ್ಯಶೋಧನಾ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆಯಾಗಲಿ. ಯಾರು ಸತ್ಯ ಹೇಳುತ್ತಿದ್ದಾರೋ ತಿಳಿದುಬರುತ್ತದೆ. ತಾನು ಯಾವುದೇ ತನಿಖೆಗೂ ಸಿದ್ಧನಾಗಿದ್ದೇನೆ ಎಂದು ಸವಾಲೆಸೆದಿದ್ದಾರೆ. ಫೇಸ್‍ಬುಕ್'ನಲ್ಲಿ ಕಾರಾಗೃಹದ ಫೋಟೋಗಳನ್ನು ಪೋಸ್ಟ್ ಮಾಡಿ ಕಾನೂನು ಉಲ್ಲಂಘಿಸುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ರೂಪಾ, ಫೇಸ್‍ಬುಕ್ ನಲ್ಲಿ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಇಲಾಖೆಯ ರಹಸ್ಯಗಳನ್ನು ಹಂಚಿಕೊಂಡಿಲ್ಲ. ಫೇಸ್‍ಬುಕ್'ನಲ್ಲಿ ಯಾವುದನ್ನು ಬರೆಯಬೇಕೆಂಬ ಕಾನೂನು ಅರಿವು ನನಗಿದೆ ಎಂದು ಡಿಐಜಿ ರೂಪಾ ತಿಳಿಸಿದ್ದಾರೆ.

ಸಾಕ್ಷ್ಯಾಧಾರವಿಲ್ಲದೇ ಆರೋಪ ಮಾಡಲಾಗಿದೆ ಎಂಬ ಆಪಾದನೆಯನ್ನು ನಿರಾಕರಿಸಿದ ಅವರು, ವರದಿಯಲ್ಲಿ 9 ಅಂಶಗಳನ್ನು ಪ್ರಸ್ತಾಪಿಸಿದ್ದೇನೆ. ಅದರಲ್ಲಿ ಎಂಟರಲ್ಲಿ ಸಾಕ್ಷ್ಯಾಧಾರವನ್ನೂ ನೀಡಿದ್ದೇನೆ. ಇಲಾಖೆಯ ಬಗ್ಗೆ ಕೆಟ್ಟದಾಗಿ ಏನೂ ಹಾಕಿಲ್ಲ. ಆರ್.ಟಿ.ಐ  ಅರ್ಜಿ ಸಲ್ಲಿಸಿದಾಗ ಏನು ಕೊಡಬಹುದೋ ಆ ಮಾಹಿತಿಯನ್ನಷ್ಟೇ ವರದಿಯಲ್ಲಿ ಹಾಕಿದ್ದೀನಿ. ಯಾರು ಬೇಕಾದರೂ ಅದನ್ನು ನೋಡಬಹುದು ಎಂದು ಸ್ಪಷ್ಪಪಡಿಸಿದ್ದಾರೆ. ಈ ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿ ಅವರಿಗೂ ರೂಪಾ ಕಳುಹಿಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ