ಸಿಎಂ ಕೂಡಲೇ ರಾಜೀನಾಮೆ ನೀಡಬೇಕು..?

Kannada News

12-07-2017

ಬೆಂಗಳೂರು: ಕರಾವಳಿ ಭಾಗದ ದಕ್ಷಿಣ ಕನ್ನಡದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ. ಸಂಘ ಪರಿವಾರದ ದೇಶ ಭಕ್ತರಾದ ರುದ್ರೇಶ್,ಶರತ್ ಮಡಿವಾಳ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಕೊಲೆ ಮಾಡಲಾಗಿದೆ. ಹಲವು ದೇಶಭಕ್ತರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಹಲವೆಡೆ ಕಾನೂನು ಸುವ್ಯವಸ್ಥೆ ಕುಸಿದು ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದು ಇದರ ಹೊಣೆಯನ್ನು ಹೊತ್ತು ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಶರತ್ ಮಡಿವಾಳ ಕೊಲೆಯಾಗಿ ವಾರ ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಲು ಬಿಡದೆ ಒಂದು ಕೋಮಿನ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ದೂರಿದರು. ಆರ್‍.ಎಸ್‍.ಎಸ್ ಮುಖಂಡ ಶರತ್ ಮಡಿವಾಳ ಸೇರಿದಂತೆ ಹಲವು ಸಂಘ ಪರಿವಾರದ ಮುಖಂಡರ ಕೊಲೆ, ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. ಮುಸ್ಲೀಮರನ್ನು ಓಲೈಸುವ ಕಾಂಗ್ರೆಸ್ ನ ವೋಟ್ ಬ್ಯಾಂಕ್ ನೀತಿಯಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿರಲಿಲ್ಲ. ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರ ಅವಕಾಶ ನೀಡಿತ್ತು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 50 ದಿನಗಳಿಂದ ನಿಷೇಧಾಜ್ಞೆ ಮುಂದುವರೆಯಲು ಅಲ್ಲಿನ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್ ಕಾರಣರಾಗಿದ್ದಾರೆ. ಅವರನ್ನು ಮೊದಲು ಸಂಪುಟದಿಂದ ವಜಾಗೊಳಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ತೊಲಗುವವರೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೆಲೆಸುವುದು ಸಾಧ್ಯವಿಲ್ಲ. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆ ಕಾಂಗ್ರೆಸ್ ಪ್ರೇರಿತವಾಗಿದೆ ಎಂದು ವಾಗ್ದಾಳಿ ನಡೆಸಿದರು. ಶಾಸಕರಾದ ವಿಜಯಕುಮಾರ್, ಎಸ್.ರಘು, ಮುಖಂಡರಾದ ಸದಾಶಿವ ಸೇರಿದಂತೆ ನಗರದ ಎಲ್ಲಾ ಪಾಲಿಕೆ ಸದಸ್ಯರು, ಮುಖಂಡರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ