ಗಲಭೆ ಹತ್ತಿಕ್ಕುವಲ್ಲಿ ರಮಾನಾಥ ರೈ ವಿಫಲ..?

Kannada News

12-07-2017

ಮೈಸೂರು: ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಆರೋಪಿಸಿದ್ದಾರೆ. ಇದುವರೆಗೂ ಶಾಂತಿ ಸಭೆ ನಡೆಸದಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಗಲಭೆಯಲ್ಲಿ ಅವರಿವರ ಪಾತ್ರವಿದೆ ಎಂದು ಆರೋಪಿಸುವ ಬದಲು ತಪ್ಪಿತಸ್ಥರನ್ನು ಬಂಧಿಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ. ಬಿಜೆಪಿಯು ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ತನ್ನ ಕೆಲಸ ಮಾಡುತ್ತಿದೆ. ಬಿಜೆಪಿ ಎಂದೂ ಸಹ ಗಲಭೆಗೆ ಪ್ರಚೋದನೆ ನೀಡುತ್ತಿಲ್ಲ. ಹತ್ಯೆ ಪ್ರಕರಣಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅಗತ್ಯ ಬಿಜೆಪಿಗೆ ಇಲ್ಲ ಎಂದರು. ರಾಜ್ಯ ಸರ್ಕಾರವೇ ತಪ್ಪಿತಸ್ಥರ ರಕ್ಷಣೆಗೆ ಮುಂದಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ನೇತೃತ್ವದಲ್ಲಿ ಗಲಭೆ ನಿಯಂತ್ರಣಕ್ಕೆ ಸೂಚಿಸಿರುವ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನೇ ಕುಸಿಯುವಂತೆ ಮಾಡಿದೆ ಎಂದು ಟೀಕಿಸಿದರು. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮರೆ ಮಾಚುವ ಸಲುವಾಗಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು. ಮಂಗಳೂರು ಗಲಭೆ ಹತ್ತಿಕ್ಕುವಲ್ಲಿ ಅಲ್ಲಿನ ಉಸ್ತುವಾರಿ ಸಚಿವ ರಮಾನಾಥ ರೈ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಮಂಗಳೂರಿನಲ್ಲಿ ಗಲಭೆ ನಿಯಂತ್ರಣಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ನೇಮಕ, ಒಂದು ರೀತಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಯ ಹುದ್ದೆಗೆ ಮಾಡಿದ ಅವಮಾನ ಎಂದರು. ಕೆಂಪಯ್ಯನವರು ಗೃಹ‌ಇಲಾಖೆಗೆ ಸಲಹೆಗಾರರೋ ಅಥವಾ ರಾಜ್ಯ ಸರ್ಕಾರಕ್ಕೆ ಸಲಹೆಗಾರರೋ ಗೊತ್ತಿಲ್ಲ. ಕೆಂಪಯ್ಯರಂತಹ ವ್ಯಕ್ತಿಯ ಜೊತೆ ಡಿಐಜಿಯನ್ನು ಹೋಗು ಅಂತ ಹೇಳೋದು ಆ ಹುದ್ದೆಗೆ ಮಾಡಿದ ಅವಮಾನ. ಕೆಂಪಯ್ಯರವರು ಯಾವುದಕ್ಕೆ ಸಲಹೆ ನೀಡಬೇಕೋ ಅದಕ್ಕೆ ನೀಡಲಿ, ಇಂತಹ ಪ್ರಕರಣಗಳಲ್ಲಿ ಕೆಂಪಯ್ಯರ ಸಲಹೆ ಬೇಕಿಲ್ಲ ಎಂದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ