ರೈತರ ಬೃಹತ್ ಜಾಗೃತಿ ಸಮಾವೇಶ !

Kannada News

11-07-2017 193

ಬೆಂಗಳೂರು: ಮಹದಾಯಿ ಕಳಸಾಬಂಡೂರಿ ಸಮಸ್ಯೆಗೆ ಪರಿಹಾರ ಹಾಗೂ ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಅಂತಿಮ ರೂಪುರೇಷೆ ಸಿದ್ಧಗೊಳಿಸಲು ಜುಲೈ16ರಂದು ನರಗುಂದದಲ್ಲಿ ರೈತರ ಬೃಹತ್ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಮಹದಾಯಿ ಕಳಸಾಬಂಡೂರಿ ಕುಡಿಯುವ ನೀರು ಮತ್ತು ಸಾಲಮನ್ನಾಕ್ಕೆ ಆಗ್ರಹಿಸಿ ನರಗುಂದದಲ್ಲಿ ಆರಂಭವಾದ ಧರಣಿ ಜುಲೈ. 16ಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಇಂತಹ ದೀರ್ಘಾವಧಿ ಹೋರಾಟವನ್ನು ನಡೆಸಿಕೊಂಡು ಬಂದಿದ್ದರೂ ಸರ್ಕಾರ ಮಾತ್ರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೆ ರೈತರಿಗೆ ದ್ರೋಹ ಬಗೆದಿದೆ. ಈ ನಿಟ್ಟಿನಲ್ಲಿ ಹೋರಾಟಕ್ಕೆ ಅಂತಿಮ ರೂಪುರೇಷೆ ಕೊಡುವ ನಿಟ್ಟಿನಲ್ಲಿ ಸಮಾವೇಶದ ಮೂಲಕ ಸರ್ಕಾರ ಹಾಗೂ ಇತರ ರಾಜಕೀಯ ಪಕ್ಷಗಳಿಗೆ ಗಂಭೀರ ಎಚ್ಚರಿಕೆ ನೀಡಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಸೊರಬ ಮಠದ ಸ್ವಾಮೀಜಿ ವೀರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಸೇನೆ ಎಲ್ಲಾ ಹಂತದ ಹೋರಾಟಗಳನ್ನು ಮಾಡಿದೆ. ಮುಂದುವರೆಯಲಿರುವ ಈ ಹೋರಾಟದ ಯಶಸ್ವಿಗೆ ಪಕ್ಷಭೇದ, ಜಾತಿಭೇದ ಬಿಟ್ಟು ರೈತರು ನಾವೆಲ್ಲರೂ ಒಂದೇ ಎನ್ನುವ ಮನೋಭಾವದೊಂದಿಗೆ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಮಧ್ಯ ಪ್ರವೇಶದಿಂದ ಈ ಸಮಸ್ಯೆ ಬಗೆಹರಿಸುವುದು ಸೂಕ್ತ. ಮಹದಾಯಿ ನ್ಯಾಯಾಧೀಕರಣ ರಾಜೀ ಸಂದಾನದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸ್ಪಷ್ಟ ನಿರ್ದೇಶನ ನೀಡಿದೆ. ರಾಜಿಯ ಮೂಲಕ ಸಮಸ್ಯೆ ಬಗೆಹರಿಕೊಳ್ಳುವ ನಿಲುವನ್ನು ರೈತರು ಸಹ ಹೊಂದಿದ್ದಾರೆ. ಆದರೆ, ಇತ್ಯರ್ಥಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಧೋರಣೆಯನ್ನು ಧಿಕ್ಕರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ರೂಪವನ್ನು ಎತ್ತಿಹಿಡಿಯಬೇಕಿದೆ ಎಂದ ಅವರು, ಸಮಸ್ಯೆ ಜಟಿಲಗೊಳ್ಳಲು ಕಾರಣವಾಗಿರುವ ಜನಪ್ರತಿನಿಧಿಗಳಿಗೆ ಸಮಾವೇಶದ ಮೂಲಕ ಎಚ್ಚರಿಕೆ ಗಂಟೆ ಬಾರಿಸಲಾಗುವುದು ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ