ಸಿಎಂ ಗೆ ಪ್ರಹ್ಲಾದ್‍ ಜೋಶಿ ಸವಾಲ್ !

Kannada News

11-07-2017

ಬೆಂಗಳೂರು: ಭೂಗತ ಪಾತಕಿ ದಾವುದ್ ಇಬ್ರಾಹಿಂನ ಚಿಕ್ಕಪ್ಪನಂತೆ ವರ್ತಿಸದೆ ಮಂಗಳೂರು ಕೋಮುಗಲಭೆಯಲ್ಲಿ ಭಾಗಿಯಾದ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಸಂಸದ ಪ್ರಹ್ಲಾದ್‍ ಜೋಶಿ ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮುಸ್ಲಿಂರ ಓಲೈಕೆಗಾಗಿ ಘಟನೆಯಲ್ಲಿ ಭಾಗಿಯಾಗದವರ ಮೇಲೆ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿರುವುದು ನಿಮ್ಮ ನೈತಿಕ ದಿವಾಳಿತನಕ್ಕೆ ಹಿಡಿದ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿಗಳೇ ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಪ್ರತಿಯೊಬ್ಬರಿಗೂ ರಕ್ಷಣೆ ಕೊಡುವುದು ನಿಮ್ಮ ಜವಾಬ್ದಾರಿ. ಆದರೆ, ನಿಮ್ಮ ವರ್ತನೆಯನ್ನು ನೋಡಿದರೆ ಪಾತಕಿ ದಾವುದ್ ಇಬ್ರಾಹಿಂನ ಚಿಕ್ಕಪ್ಪನಂತೆ ನಡೆದುಕೊಳ್ಳುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. ನಿಮಗೆ ಕೇವಲ ಮುಸ್ಲೀಮರು ಮಾತ್ರ ಮತ ಹಾಕಿಲ್ಲ. ಹಿಂದುಗಳೂ ಸೇರಿದಂತೆ ಪ್ರತಿಯೊಬ್ಬರೂ ಮತ ಹಾಕಿದ್ದಾರೆ, ಎಂಬುದನ್ನು ಮರೆಯಬೇಡಿ. ಆರ್‍ಎಸ್‍ಎಸ್ ಕಾರ್ಯಕರ್ತ ಶರತ್‍ ಮಡಿವಾಳ ಕೊಲೆ ಪ್ರಕರಣದಲ್ಲಿ ಕೆಲ ಮುಸ್ಲಿಂ ಸಂಘಟನೆಗಳು ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಮೀನಾಮೇಷ ಎಣಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಘಟನೆಯಲ್ಲಿ ಹಿಂದುಗಳ ಮೇಲೆ ಕ್ರಮ ಕೈಗೊಳ್ಳುವಂತೆ ನೀವು ಹೇಳಿದ್ದೀರಿ. ಆದರೆ, ಇದೇ ಘಟನೆಯಲ್ಲಿ ಮುಸ್ಲಿಂರು ಭಾಗಿಯಾಗಿದ್ದರೆ ಅವರ ಮೇಲೆ ಕ್ರಮ ಜರುಗಿಸುವಂತೆ ಹೇಳಲು ನೀವು ತಡವರಿಸಿದಿರಿ. ಇಂತಹ ತಾರತಮ್ಯ ನೀತಿ ಬಿಟ್ಟು ನೀವು ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ ಎಂದು ಜೋಶಿ ಕಿವಿಮಾತು ಹೇಳಿದ್ದಾರೆ. ಕೋಮು ಗಲಭೆಯಲ್ಲಿ ಸತ್ತವನು ಹಿಂದುಳಿದ ವರ್ಗಕ್ಕೆ ಸೇರಿದವ. ಅವರಿಗೆ ನ್ಯಾಯ ಕೊಡಿಸುವ ಬದಲು ಮುಸ್ಲೀಮರ ಓಲೈಕೆ ಮಾಡುತ್ತಿದ್ದೀರಿ. ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್‍ ಭಟ್ ಬಂಧಿಸುವಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದೀರಿ. ಸಂಸದರಾದ ನಳೀನ್‍ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಸೇರಿದಂತೆ ಆರ್‍ಎಸ್‍ಎಸ್ ಮುಖಂಡರ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದೀರಿ. ನಿಮಗೆ ಧೈರ್ಯ ವಿದ್ದರೆ ಮುಸ್ಲಿಂ ಸಂಘಟನೆಗಳಾದ ಪಿಎಫ್‍ಐ, ಎಸ್‍ಡಿಪಿಐ ಹಾಗೂ ಕೆಎಫ್‍ಡಿ ಮೇಲೆ ನಿಷೇಧ ಹೇರಬೇಕು ಹಾಗೂ ಈ ಘಟನೆಯಲ್ಲಿ ಭಾಗಿಯಾದ ಮುಖಂಡರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಆದೇಶಿಸಿ ಎಂದು ಪ್ರಹ್ಲಾದ್‍ ಜೋಶಿ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

 

 


 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ